Deuteronomy - Chapter 8
Holy Bible

1 : “ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಅನುಸರಿಸಿದರೆ ನೀವು ಬಾಳಿ ಅಭಿವೃದ್ಧಿಯಾಗುವಿರಿ. ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣ ರೂಪವಾಗಿ ಕೊಟ್ಟ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.
2 : “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದ್ದನ್ನು ಹಾಗು ನೀವು ಅವರ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದು ಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ.
3 : ಮಾನವರು ಆಹಾರ ಮಾತ್ರದಿಂದಲ್ಲ, ಸರ್ವೇಶ್ವರ ಆಡುವ ಪ್ರತಿಯೊಂದು ನುಡಿಯಿಂದಲೂ ಜೀವಿಸುತ್ತಾರೆಂಬುದು ನಿಮಗೆ ತಿಳಿಯುವಂತೆ ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿದರು. ಹಸಿವೆಯಿಂದ ಬಳಲಿಸಿದರು. ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು.
4 : ಈ ನಲವತ್ತು ವರ್ಷ ನಿಮ್ಮ ಮೈಮೇಲಿದ್ದ ಉಡುಪು ಹರಿದು ಹೋಗಲಿಲ್ಲ; ನಿಮ್ಮ ಕಾಲುಗಳು ಊದು ಹೋಗಲಿಲ್ಲ.
5 : ಒಬ್ಬ ತಂದೆ ತನ್ನ ಮಗನನ್ನು ಹೇಗೊ ಹಾಗೆಯೇ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಶಿಕ್ಷಿಸುತ್ತಾ ಬಂದರೆಂಬುದನ್ನು ನೀವು ಆಲೋಚಿಸಿ ನೋಡಬೇಕು.
6 : ಅವರ ಆಜ್ಞೆಗಳನ್ನು ಅನುಸರಿಸುತ್ತಾ ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.
7 : “ನಿಮ್ಮ ದೇವರಾದ ಸರ್ವೇಶ್ವರ ಉತ್ತಮವಾದ ನಾಡಿಗೆ ನಿಮ್ಮನ್ನು ಸೇರಿಸುತ್ತಾರೆ. ಆ ನಾಡಿನ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತಿರುತ್ತದೆ; ತಗ್ಗುಗಳಲ್ಲಾಗಲಿ, ಗುಡ್ಡಗಳಲ್ಲಿ ಆಗಲಿ, ಎಲ್ಲಾ ಕಡೆಯು ಬಾವಿಗಳಿಂದಲೂ ಬುಗ್ಗೆಗಳಿಂದಲೂ ನೀರು ಉಕ್ಕುತ್ತಿರುತ್ತದೆ.
8 : ಆ ನಾಡಿನಲ್ಲಿ ಗೋದಿ, ಜವೆಗೋದಿ, ದ್ರಾಕ್ಷಿ, ಅಂಜೂರ, ದಾಳಿಂಬೆ ಇವುಗಳು ಬೆಳೆಯುತ್ತವೆ; ಎಣ್ಣೆಮರಗಳು ಹಾಗು ಜೇನುತುಪ್ಪ ಸಿಕ್ಕುತ್ತವೆ.
9 : ಅಲ್ಲಿ ನೀವು ದುರ್ಭಿಕ್ಷವನ್ನೇ ಕಾಣದೆ, ಸಮೃದ್ಧಿ ಆಗಿ ಉಂಡು, ಯಾವಕೊರತೆಯೂ ಇಲ್ಲದೆ ಇರುವಿರಿ. ಆ ನಾಡಿನಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ. ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳಿವೆ.
10 : ನೀವು ಹೊಟ್ಟೆತುಂಬ ಉಂಡು ಸುಖದಿಂದಿರುವಾಗ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂಥ ಉತ್ತಮ ನಾಡನ್ನು ಕೊಟ್ಟದ್ದಕ್ಕಾಗಿ ಅವರನ್ನು ಸ್ತುತಿಸಬೇಕು.
11 : ಸರ್ವೇಶ್ವರನನ್ನೇ ಮರೆತುಬಿಡಬೇಡಿ “ಎಚ್ಚರಿಕೆ, ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞಾವಿಧಿ ನಿರ್ಣಯಗಳನ್ನು ಕೈಕೊಳ್ಳದವರೂ ಅವರನ್ನು ಮರೆತುಬಿಡುವವರೂ ಆಗಬೇಡಿ.
12 : ನೀವು ಹೊಟ್ಟೆ ತುಂಬ ಉಂಡು, ಸುಖವಾಗಿದ್ದು, ಒಳ್ಳೊಳ್ಳೆ ಮನೆಗಳನ್ನು ಕಟ್ಟಿಸಿಕೊಂಡು, ಅವುಗಳಲ್ಲಿ ವಾಸವಾಗಿರುವ ಕಾಲದಲ್ಲಿ,
13 : ನಿಮ್ಮ ದನಕರುಗಳು, ಆಡುಕುರಿಗಳು, ಬೆಳ್ಳಿಬಂಗಾರ ಹಾಗು ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ,
14 : ನೀವು ಗರ್ವಗೊಂಡು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟೀರಿ!
15 : ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದನಂತರ ನಿಮಗೆ ಒಳಿತನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದರು. ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾಮರುಭೂಮಿಯನ್ನೂ ನೀರು ಬತ್ತಿಹೋಗಿದ್ದ ಭೂಮಿಗಳನ್ನೂ ದಾಟಿಸಿದರು;
16 : ಗಟ್ಟಿಯಾದ ಬಂಡೆಯೊಳಗಿಂದ ನೀರನ್ನು ಹೊರಡಿಸಿಕೊಟ್ಟರು. ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದರು. ಅಂಥವರನ್ನು ಮರೆತು ಮನಸ್ಸಿನಲ್ಲೇ
17 : ‘ ಈ ಭಾಗ್ಯ ನಮ್ಮ ಸಾಮಥ್ರ್ಯ ಸಾಹಸಗಳಿಂದಲೇ ನಮಗೆ ಲಭಿಸಿತು’ ಎಂದುಕೊಂಡೀರಿ ಎಚ್ಚರಿಕೆ!
18 : ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ಈಗ ನಿಮಗೆ ಮನಮುಟ್ಟುವ ರೀತಿಯಲ್ಲಿ ನೆರವೇರಿಸಿದ್ದಾರೆ. ನಿಮಗೆ ಇಷ್ಟು ಭಾಗ್ಯವನ್ನು ಸಂಪಾದಿಸುವ ಸಾಮಥ್ರ್ಯವನ್ನು ಕೊಟ್ಟಿದ್ದಾರೆ ಎಂಬುದನ್ನು ಜ್ಞಾಪಕಮಾಡಿಕೊಳ್ಳಿ.
19 : ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತು, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿದರೆ ನೀವು ತಪ್ಪದೆ ನಾಶವಾಗಿ ಹೋಗುವಿರೆಂದು ನಿಮ್ಮನ್ನು ಈಗ ಖಂಡಿತವಾಗಿ ಎಚ್ಚರಿಸುತ್ತೇನೆ.
20 : ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳದೆಹೋದರೆ, ಅವರಿಂದ ನಿಮ್ಮ ಮುಂದೆಯೇ ನಾಶವಾಗಿ ಹೋಗುವ ಅನ್ಯಜನಾಂಗಗಳಂತೆ ನೀವೂ ನಾಶವಾಗಿ ಹೋಗುವಿರಿ.

Holydivine