Deuteronomy - Chapter 19
Holy Bible

1 : “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡಿನಲ್ಲಿರುವ ಜನಾಂಗಗಳನ್ನು ಅಲ್ಲಿಂದ ತೆಗೆದುಹಾಕಿಬಿಡುವರು. ತರುವಾಯ ನೀವು ಆ ನಾಡನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಿರಿ.
2 : ಅವರ ಗ್ರಾಮಗಳಲ್ಲೂ ಮನೆಗಳಲ್ಲೂ ವಾಸವಾಗಿರುವಾಗ ಆ ನಿಮ್ಮ ನಾಡಿನ ಮಧ್ಯೆ ನೀವು ಮೂರು ಆಶ್ರಯನಗರಗಳನ್ನು ಗೊತ್ತುಮಾಡಬೇಕು.
3 : ನರಹತ್ಯೆಮಾಡಿದವರು ಆ ಪಟ್ಟಣಗಳಿಗೆ ಓಡಿ ಹೋಗುವುದಕ್ಕೆ ಅನುಕೂಲವಾಗುವಂತೆ ನೀವು ಅವುಗಳ ದಾರಿಗಳನ್ನು ಸರಿಪಡಿಸಬೇಕು. ಮತ್ತು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ಆ ನಾಡನ್ನು ಮೂರು ಭಾಗ ಮಾಡಬೇಕು.
4 : “ಆ ಆಶ್ರಯನಗರಗಳ ವಿವರ ಹೀಗಿದೆ: ಯಾವನಾದರು ದ್ವೇಷವಿಲ್ಲದೆ, ಕೈತಪ್ಪಿ, ಮತ್ತೊಬ್ಬನನ್ನು ಕೊಂದರೆ, ಅವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು.
5 : ಉದಾಹರಣೆಗೆ, ಒಬ್ಬ ವ್ಯಕ್ತಿ ಕಟ್ಟಿಗೆಯನ್ನು ಕಡಿಯಲು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋದನೆಂದು ಇಟ್ಟುಕೊಳ್ಳೋಣ. ಅಲ್ಲಿ ಒಂದು ಮರವನ್ನು ಕೊಡಲಿಯಿಂದ ಹೊಡೆಯುತ್ತಿರುವಾಗ ಕೊಡಲಿ ಕಾವಿನಿಂದ ಜಾರಿ ಆ ಮತ್ತೊಬ್ಬನಿಗೆ ತಗಲಿ ಅವನು ಸತ್ತರೆ, ಹೊಡೆದವನು ಆ ನಗರಗಳಲ್ಲಿ ಒಂದಕ್ಕೆ ಓಡಿ ಹೋಗಿ ಬದುಕಿಕೊಳ್ಳಬಹುದು.
6 : ಸತ್ತವನಲ್ಲಿ ಅವನಿಗೆ ಮೊದಲಿನಿಂದಲೂ ದ್ವೇಷವಿರಲಿಲ್ಲ; ಆದುದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲ; ಆದರೂ ಹತ್ಯ ಮಾಡಿದವನಿಗೆ ಮುಯ್ಯಿ ತೀರಿಸುವ ಹಂಗುಳ್ಳ ಸವಿೂಪಬಂಧು ಕೋಪದಿಂದ ಕೆಂಡ ಕಾರುತ್ತಾ ಅವನನ್ನು ಹಿಂದಟ್ಟ ಬಹುದು. ಮಾರ್ಗ ಮಧ್ಯದಲ್ಲೇ ಅವನನ್ನು ಹಿಡಿದು ಕೊಂದುಹಾಕಬಹುದು.
7 : ಈ ಕಾರಣದಿಂದಲೇ ನೀವು ಆ ಮೂರು ಆಶ್ರಯನಗರಗಳನ್ನು ಗೊತ್ತುಮಾಡಬೇಕೆಂದು ಆಜ್ಞಾಪಿಸಿ ಇದ್ದೇನೆ.
8 : “ನಾನು ಈಗ ನಿಮಗೆ ಬೋಧಿಸುವ ಈ ಇಡೀ ಧರ್ಮೋಪದೇಶವನ್ನು ನೀವು ಅನುಸರಿಸಬೇಕು. ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರು ಹೇಳುವ ಮಾರ್ಗದಲ್ಲೇ ಯಾವಾಗಲು ನಡೆಯಬೇಕು.
9 : ಆಗ ಅವರು ನಿಮ್ಮ ಪಿತೃಗಳಿಗೆ ವಾಗ್ದಾನಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿ, ನಿಮ್ಮ ಪಿತೃಗಳಿಗೆ ಸೂಚಿಸಿದ ಪ್ರದೇಶವನ್ನೆಲ್ಲಾ ಕೊಡುವರು. ಆಗ ಈ ಮೂರು ನಗರಗಳಲ್ಲದೆ ಇನ್ನೂ ಮೂರು ನಗರಗಳನ್ನು ಗೊತ್ತುಮಾಡಬೇಕು.
10 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿನಲ್ಲಿ ನಿರಪರಾಧಿಗೆ ಮರಣ ಶಿಕ್ಷೆಯಾಗಬಾರದು; ಅಂಥವನಿಗೆ ಮರಣಶಿಕ್ಷೆ ಆದರೆ ಆ ರಕ್ತದೋಷ ನಿಮ್ಮದಾಗಿಯೇ ಇರುವುದು.
11 : “ಆದರೆ ಒಬ್ಬನು ಇನ್ನೊಬ್ಬನಲ್ಲಿ ದ್ವೇಷವನ್ನೇ ಸಾಧಿಸಿ, ಸಮಯನೋಡಿ ಅವನ ಮೇಲೆ ಬಿದ್ದು, ಅವನನ್ನು ಹೊಡೆದು ಕೊಂದು ತರುವಾಯ ಈ ನಗರಗಳಲ್ಲೊಂದಕ್ಕೆ ಓಡಿಹೋಗಬಹುದು. ಆಗ
12 : ಆ ಊರಿನ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ ಅವನಿಗೆ ಮರಣ ಶಿಕ್ಷೆಯಾಗುವಂತೆ ಮುಯ್ಯಿತೀರಿಸುವ ಹಂಗುಳ್ಳವನ ಕೈಗೆ ಕೊಡಬೇಕು.
13 : ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಯೇಲರಲ್ಲಿ ಉಳಿಯದಂತೆ ಮಾಡಬೇಕು.
14 : “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿನಲ್ಲಿ ನಿಮ್ಮ ಪಾಲಿಗೆ ಬಂದ ಸೊತ್ತಿನಲ್ಲಿ ನೆರೆಯವನ ಭೂಮಿಯ ಪೂರ್ವಕಾಲದ ಗಡಿಕಲ್ಲನ್ನು ಒತ್ತರಿಸಬಾರದು.
15 : “ಯಾವ ದೋಷದ ಅಥವಾ ಅಪರಾಧದ ವಿಷಯದಲ್ಲೂ ಒಬ್ಬನೇ ಒಬ್ಬನ ಸಾಕ್ಷಿಯನ್ನು ನೀವು ಅಂಗೀಕರಿಸಬಾರದು. ನಡೆದ ಘಟನೆ ರುಜುವಾತಾಗಲು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳು ಬೇಕು.
16 : “ಯಾವನಾದರು ನ್ಯಾಯವಿರುದ್ಧವಾಗಿ ಬಂದು ಮತ್ತೊಬ್ಬನನ್ನು ಅಪರಾಧಿ ಎಂದು ಸಾಕ್ಷಿ ಹೇಳಿದರೆ,
17 : ವ್ಯಾಜ್ಯವಾಡುವ ಆ ಇಬ್ಬರೂ ಸರ್ವೇಶ್ವರನ ಸನ್ನಿಧಿಯಲ್ಲಿ, ಯಾಜಕರ ಮುಂದೆ ಹಾಗು ಆಗ ಇರುವ ನ್ಯಾಯಾಧಿಪತಿಗಳ ಮುಂದೆ ನಿಲ್ಲಬೇಕು.
18 : ನ್ಯಾಯಾಧಿಪತಿಗಳು ಚೆನ್ನಾಗಿ ವಿಚಾರಣೆ ಮಾಡಿದ ಮೇಲೆ ಆ ವ್ಯಕ್ತಿಯ ಸಾಕ್ಷಿ ಸುಳ್ಳೆಂದು ತೋರಿಬಂದರೆ,
19 : ಅವನು ಆ ಮತ್ತೊಬ್ಬನಿಗೆ ಮಾಡಿಸಬೇಕೆಂದಿದ್ದ ಶಿಕ್ಷೆಯನ್ನು ಅವನಿಗೇ ವಿಧಿಸಬೇಕು. ಹೀಗೆ, ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದು ಹಾಕಬೇಕು.
20 : ಉಳಿದವರು ಆ ಸಂಗತಿಯನ್ನು ಕೇಳಿ ಭಯಪಟ್ಟು, ಇನ್ನು ಮುಂದೆ ಇಂಥ ದುಷ್ಕøತ್ಯವನ್ನು ನಡೆಸರು.
21 : ನೀವು ಅಂಥವರನ್ನು ಕನಿಕರಿಸಬಾರದು; ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು, ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು, ಕೈಗೆ ಪ್ರತಿಯಾಗಿ ಕೈಯನ್ನು, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಗೆ ತೆಗೆದು ಬಿಡಬೇಕು.

Holydivine