Deuteronomy - Chapter 13
Holy Bible

1 : “ನಿಮ್ಮ ಮಧ್ಯೆ ಯಾವ ಪ್ರವಾದಿಯೆ ಆಗಲಿ, ಕನಸುಗಾರನೇ ಆಗಲಿ, ಎದ್ದುಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆಮಾಡಿ
2 : ‘ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ’ ಎಂದು ಬೋಧಿಸಬಹುದು; ಆ ಬೋಧನೆಯನ್ನು ರುಜುವಾತುಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಬಹುದು.
3 : ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರನನ್ನು ನೀವು ಪೂರ್ಣ ಹೃದಯದಿಂದ, ಪೂರ್ಣಮನಸ್ಸಿನಿಂದ ಪ್ರೀತಿಸುತ್ತೀರೊ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ.
4 : ಸರ್ವೇಶ್ವರ ಹೇಳುವ ಮಾರ್ಗದಲ್ಲೇ ನೀವು ನಡೆದು, ಅವರಲ್ಲಿಯೇ ಭಯಭಕ್ತಿ ಉಳ್ಳವರಾಗಿ, ಅವರ ಆಜ್ಞೆಗಳನ್ನೇ ಅನುಸರಿಸಿ, ಅವರಿಗೇ ವಿಧೇಯರಾಗಿ, ಅವರ ಸೇವೆ ಮಾಡುತ್ತಾ ಅವರನ್ನೇ ಹೊಂದಿಕೊಂಡಿರಬೇಕು.
5 : ಆ ಪ್ರವಾದಿಗೆ ಅಥವಾ ಆ ಕನಸುಗಾರನಿಗೆ ಮರಣಶಿಕ್ಷೆಯಾಗಬೇಕು. ಗುಲಾಮಗಿರಿಯಲ್ಲಿ ಇದ್ದ ನಿಮ್ಮನ್ನು ಬಿಡುಗಡೆಮಾಡಿ ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಸರ್ವೇಶ್ವರನಿಗೆ ವಿರೋಧವಾಗಿ ಅವನು ದ್ರೋಹದ ಮಾತುಗಳನ್ನಾಡಿ ನಿಮ್ಮ ದೇವರಾದ ಸರ್ವೇಶ್ವರ ಹೇಳಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸಬೇಕು ಎಂದಿದ್ದರೆ, ಅಂಥವನನ್ನು ಕೊಲ್ಲಿಸಿ, ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೊಡೆದುಹಾಕಬೇಕು.
6 : “ಒಡಹುಟ್ಟಿದ ಅಣ್ಣತಮ್ಮಂದಿರಾಗಲಿ, ಮಗನಾಗಲಿ, ಮಗಳಾಗಲಿ, ಪ್ರಾಣಪ್ರಿಯಳಾದ ಹೆಂಡತಿಯಾಗಲಿ, ಆಪ್ತಮಿತ್ರನಾಗಲಿ, ನಿಮಗೆ ಅಥವಾ ನಿಮ್ಮ ಪಿತೃಗಳಿಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚಿಸಬಹುದು. ‘ಆ ದೇವರುಗಳನ್ನು ಪೂಜಿಸೋಣ ಬನ್ನಿ’ ಎಂದು ಒಳ ಒಳಗೇ ನಿಮಗೆ ಬೋಧಿಸಬಹುದು.
7 : ಆ ದೇವರುಗಳು ಹತ್ತಿರವಿರುವ ಜನಾಂಗಗಳ ದೇವರಗಳಾಗಿದ್ದರೂ ದೂರವಾದವರ ದೇವರುಗಳಾಗಿದ್ದರೂ ಭೂಲೋಕದ ಯಾವ ಭಾಗದವರ ದೇವರುಗಳಾಗಿದ್ದರೂ
8 : ನೀವು ಸಮ್ಮತಿಸಲೂ ಬಾರದು; ಕಿವಿಗೊಡಲೂಬಾರದು. ಅಂಥವನನ್ನು ಕನಿಕರಿಸಕೂಡದು, ತಪ್ಪಿಸಕೂಡದು, ಬಚ್ಚಿಡಕೂಡದು; ಬದಲಿಗೆ ಕೊಲ್ಲಿಸಲೇ ಬೇಕು.
9 : ಆ ಶಿಕ್ಷೆಯನ್ನು ನಡೆಸುವಾಗ ತಪ್ಪು ಕಂಡವನೇ ಮೊದಲು ಕಲ್ಲೆಸೆಯಬೇಕು; ತರುವಾಯ ಜನರೆಲ್ಲರೂ ಎಸೆಯಲಿ.
10 : ಗುಲಾಮ ಗಿರಿಯಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಸರ್ವೇಶ್ವರನ ಆಶ್ರಯದಿಂದ ಅವನು ನಿಮ್ಮನ್ನು ತಪ್ಪಿಸಬೇಕೆಂದು ಇದ್ದುದರಿಂದ ಅಂಥವನನ್ನು ಕಲ್ಲು ಎಸೆದು ಕೊಲ್ಲಲೇಬೇಕು.
11 ಇದನ್ನು ಇಸ್ರಯೇಲರೆಲ್ಲರು ಕೇಳಿ, ಭಯಪಟ್ಟು, ಅಂಥ ದುಷ್ಕಾರ್ಯವನ್ನು ಮುಂದೆ ಮಾಡರು.
12 : “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ನಿವಾಸಕ್ಕಾಗಿ ಕೊಡುವ ಯಾವುದಾದರೂ ಒಂದು ಊರಿನ ವಿಷಯವನ್ನು ತೆಗೆದುಕೊಳ್ಳೋಣ.
13 : ಅಲ್ಲಿ ವಾಸವಾಗಿರುವ ಇಸ್ರಯೇಲರಲ್ಲಿ ಕೆಲವು ಮಂದಿ ದುಷ್ಟರು, ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತಮ್ಮ ಊರಿನವರಿಗೆ ಸೂಚಿಸಬಹುದು. ‘ಆ ದೇವರುಗಳನ್ನು ಪೂಜಿಸೋಣ ಬನ್ನಿ’ ಎಂದು ಹೇಳಿ ಅವರನ್ನು ಸನ್ಮಾರ್ಗದಿಂದ ತಪ್ಪಿಸಬಹುದು.
14 : ಆ ಸುದ್ದಿಯನ್ನು ನೀವು ಕೇಳಿದರೆ, ಆ ಸಂಗತಿಯನ್ನು ಚೆನ್ನಾಗಿ ವಿಚಾರಿಸಿ ತಿಳಿದುಕೊಳ್ಳಬೇಕು. ಅಂಥ ಅಸಹ್ಯಕಾರ್ಯ ಇಸ್ರಯೇಲರಲ್ಲಿ ನಡೆದದ್ದು ನಿಜವೆಂದು ತಿಳಿದುಬಂದರೆ,
15 : ಆ ಊರನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅದರಲ್ಲಿ ಇರುವ ಎಲ್ಲ ಜನರನ್ನೂ ಜಾನುವಾರುಗಳನ್ನೂ ಕತ್ತಿಯಿಂದ ಸಂಹರಿಸಿಬಿಡಬೇಕು.
16 : ಅದರಲ್ಲಿ ಇರುವ ಎಲ್ಲ ಸಾಮಗ್ರಿಗಳನ್ನು ಗ್ರಾಮಮಧ್ಯದಲ್ಲಿ ಕೂಡಿಸಿ, ಊರನ್ನೂ, ಅದರಲ್ಲಿರುವ ಎಲ್ಲ ಸಾಮಾನುಗಳನ್ನೂ ನಿಮ್ಮ ದೇವರಾದ ಸರ್ವೇಶ್ವರನಿಗೆ ನಿಶ್ಯೇಷವಾಗಿ ಸುಟ್ಟುಬಿಡಬೇಕು. ಅದು ಪುನಃ ಯಾವಾಗಲೂ ಹಾಳುದಿಬ್ಬವಾಗಿರಬೇಕು. ಅದನ್ನು ಪುನಃ ಕಟ್ಟಬಾರದು.
17 : ಆ ಶಾಪಗ್ರಸ್ತ ವಸ್ತುಗಳಲ್ಲಿ ನೀವು ಸ್ವಲ್ಪವನ್ನಾದರೂ ತೆಗೆದುಕೊಳ್ಳಬಾರದು.
18 : ನೀವು ಹೀಗೆ ನಡೆದು, ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಅವರ ಎಲ್ಲ ಆಜ್ಞೆಗಳನ್ನು ಕೈಗೊಂಡು ಅವರ ದೃಷ್ಟಿಗೆ ಸರಿಯಾದದ್ದನ್ನು ಮಾಡಿದರೆ, ಅವರು ರೋಷಾಗ್ನಿಯನ್ನು ತಡೆದು, ನಿಮಗೆ ದಯೆಯನ್ನು ತೋರಿಸಿ, ನಿಮ್ಮನ್ನು ಕರುಣಿಸುವರು; ತಾವು ನಿಮ್ಮ ಪಿತೃಗಳಿಗೆ ವಾಗ್ದಾನಮಾಡಿದಂತೆ ನಿಮ್ಮ ಸಂತತಿಯನ್ನು ಅಭಿವೃದ್ಧಿಗೊಳಿಸುವರು.

Holydivine