Deuteronomy - Chapter 7
Holy Bible

1 : “ನೀವು ಸ್ವಾಧೀನಮಾಡಿಸಿಕೊಳ್ಳುವುದಕ್ಕೆ ಹೋಗುವ ನಾಡಿಗೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸೇರಿಸಿ, ಸಂಖ್ಯೆಯಲ್ಲೂ ಶಕ್ತಿಯಲ್ಲೂ ನಿಮ್ಮನ್ನು ವಿೂರುವ ಜನಾಂಗಗಳನ್ನು ಅಲ್ಲಿಂದ ನಿಮ್ಮ ಮುಂದೆಯೆ ಹೊರಡಿಸುವರು.
2 : ಅಂಥ ಏಳು ಜನಾಂಗಗಳು ಯಾವುವೆಂದರೆ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಹಾಗು ಯೆಬೂಸಿಯರು. ಅವರನ್ನು ನೀವು ಸೋಲಿಸಿ ವಿನಾಶ ಶಾಪಗ್ರಸ್ತರನ್ನಾಗಿಸಬೇಕು. ಅವರ ಸಂಗಡ ಒಪ್ಪಂದ ಮಾಡಿಕೊಳ್ಳಬಾರದು, ಅವರನ್ನು ಕನಿಕರಿಸಬಾರದು.
3 : ಅವರೊಡನೆ ಬೀಗತನ ಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂಬಾರದು, ಅವರಿಂದ ತರಲೂಬಾರದು.
4 : ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಸರ್ವೇಶ್ವರನಿಂದ ವಿಮುಖಗೊಳಿಸಿ ಇತರ ದೇವರುಗಳನ್ನು ಪೂಜಿಸುವಂತೆ ಮಾಡಬಹುದು. ಆಗ ಸರ್ವೇಶ್ವರ ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವರು.
5 : ಆದುದರಿಂದ ನೀವು ಹೀಗೆ ಮಾಡಬೇಕು: ಅವರ ಯಜ್ಞ ವೇದಿಗಳನ್ನು ಕೆಡವಬೇಕು, ಅವರ ಪವಿತ್ರಶಿಲೆಗಳನ್ನು ಒಡೆಯಬೇಕು, ಅಶೇರವೆಂಬ ವಿಗ್ರಹ ಸ್ತಂಭಗಳನ್ನು ಬಡಿದು ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
6 : ಏಕೆಂದರೆ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ವಿೂಸಲಾದ ಜನರು; ಜಗದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನರಾಗಲು ಅವರು ಆಯ್ದುಕೊಂಡಿದ್ದಾರೆ.
7 : ನೀವು ಸಂಖ್ಯೆಯಲ್ಲಿ ಜನಾಂಗಗಳಿಗೆಲ್ಲಾ ಹೆಚ್ಚುಮಂದಿ ಎಂದು ಪ್ರೀತಿಸಿ, ಆಯ್ದುಕೊಳ್ಳಲಿಲ್ಲ; ನಿಜವಾಗಿಯೂ ನೀವು ಎಲ್ಲಾ ಜನಾಂಗಗಳಿಗಿಂತ ಅಲ್ಪಸಂಖ್ಯಾತರು.
8 : ಆದರೂ ಸರ್ವೇಶ್ವರ ನಿಮ್ಮನ್ನು ಪ್ರೀತಿಸಿ, ತಾವು ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸ ಬೇಕೆಂದು, ಈಜಿಪ್ಟಿನ ರಾಜ ಫರೋಹನ ಕೈಕೆಳಗೆ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ತಮ್ಮ ಭುಜಬಲ ಪ್ರಯೋಗಿಸಿ, ಆ ದೇಶದಿಂದ ಬರಮಾಡಿದ್ದಾರೆ.
9 : ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೊಬ್ಬರೇ ದೇವರೆಂದು ತಿಳಿದುಕೊಳ್ಳಬೇಕು. ಅವರೇ ನಂಬಿಕಸ್ತರಾದ ದೇವರು; ತಮ್ಮನ್ನು ಪ್ರೀತಿಸಿ ತಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ತಾವು ಮಾಡಿದ ವಾಗ್ದಾನವನ್ನು ನೆರವೇರಿಸಿ, ತಮ್ಮ ಅಚಲಪ್ರೀತಿಯನ್ನು ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ತೋರಿಸುವರು.
10 : ತಮ್ಮನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವರು. ಇದನ್ನು ನೀವು ತಿಳಿದುಕೊಳ್ಳಬೇಕು. ಹಗೆಯವರ ವಿಷಯದಲ್ಲಿ ಅವರು ತಡಮಾಡದೆ ಆಗಲೇ ಮುಯ್ಯಿತೀರಿಸುವರು.
11 : ಆದಕಾರಣ ನಾನು ಈ ದಿನ ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸಿ ನಡೆಯಬೇಕು.
12 : “ಈ ವಿಧಿಗಳನ್ನು ನೀವು ಲಕ್ಷ್ಯವಿಟ್ಟು ಅನುಸರಿಸಿದರೆ, ಅದಕ್ಕೆ ಪ್ರತಿಯಾಗಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣ ಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನೆರವೇರಿಸುವರು, ನಿಮಗೆ ಕೃಪೆತೋರುವರು,
13 : ನಿಮ್ಮನ್ನು ಅಚಲವಾಗಿ ಪ್ರೀತಿಸಿ, ಅಭಿವೃದ್ಧಿಗೊಳಿಸುವರು. ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ನಾಡಿನಲ್ಲಿ ನಿಮ್ಮ ಸಂತಾನವನ್ನು, ವ್ಯವಸಾಯವನ್ನು, ದವಸಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು ಹಾಗು ದನಕುರಿಗಳ ಮಂದೆಯನ್ನು ವೃದ್ಧಿಗೊಳಿಸುವರು.
14 : ನೀವು ಎಲ್ಲ ಜನಗಳಿಗಿಂತ ಹೆಚ್ಚಾಗುವಿರಿ, ದೇವರ ಅನುಗ್ರಹವನ್ನು ಹೊಂದುವಿರಿ. ನಿಮ್ಮಲ್ಲಿ ಸ್ತ್ರೀಪುರುಷರಲ್ಲಾಗಲಿ, ಹೆಣ್ಣುಗಂಡು ಪಶುಪ್ರಾಣಿಗಳಲ್ಲಾಗಲಿ, ಬಂಜೆತನ ಎಂಬುದು ಇರುವುದಿಲ್ಲ.
15 : ನಿಮಗೆ ಯಾವ ವ್ಯಾಧಿಯೂ ತಗಲದಂತೆ ಸರ್ವೇಶ್ವರ ನೋಡಿಕೊಳ್ಳುವರು. ನೀವೇ ಅನುಭವದಿಂದ ಅರಿತಿರುವಂತೆ ಈಜಿಪ್ಟ್ ದೇಶದಲ್ಲಿ ಪ್ರಬಲ ಆಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸಲಿಲ್ಲ; ಅವುಗಳನ್ನು ನಿಮ್ಮ ದ್ವೇಷಿಗಳ ಮೇಲೆ ಮಾತ್ರ ಬರಮಾಡುವರು.
16 : ನಿಮ್ಮ ದೇವರಾದ ಸರ್ವೇಶ್ವರಾ, ನಿಮ್ಮಿಂದ ಪರಾಜಯಪಡಿಸುವ ಜನರುಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮಗೆ ಉರುಲಾಗುವುವು.
17 : ‘ಆ ಜನರು ನಮಗಿಂತ ಹೆಚ್ಚುಮಂದಿ ಇದ್ದಾರೆ; ಅವರನ್ನು ಹೊರದೂಡಲು ನಮ್ಮಿಂದ ಹೇಗಾದೀತು?’ ಎಂದುಕೊಳ್ಳುತ್ತೀರೋ?
18 : ಅವರಿಗೆ ಹೆದರಬೇಡಿ. ನಿಮ್ಮ ದೇವರಾದ ಸರ್ವೇಶ್ವರ ಫರೋಹನಿಗೂ ಈಜಿಪ್ಟರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿ.
19 : ಆಗ ನೀವೇ ಕಣ್ಣಾರೆ ನೋಡಿದಂತೆ ಸರ್ವೇಶ್ವರ ವಿಶೇಷ ಪರಿಶೋಧನೆ, ಪವಾಡ, ಮಹತ್ಕಾರ್ಯ, ಭುಜಪರಾಕ್ರಮ, ಶಿಕ್ಷೆ ಇವುಗಳನ್ನು ಪ್ರಯೋಗಿಸಿ ನಿಮ್ಮನ್ನು ಬಿಡುಗಡೆಮಾಡಿದರಲ್ಲವೆ? ನೀವು ಹೆದರಿಕೊಳ್ಳುವ ಆ ಎಲ್ಲ ಜನಾಂಗಗಳಿಗೂ ಅವರು ಹಾಗೆಯೇ ಮಾಡುವರು.
20 : ಅದು ಮಾತ್ರವಲ್ಲದೆ, ನಿಮ್ಮ ದೇವರಾದ ಸರ್ವೇಶ್ವರ ಕಣಜದ ಹುಳುಗಳನ್ನು ಅವರ ನಡುವೆ ಕಳುಹಿಸುವರು; ಮರೆ ಆಗಿ ಉಳಿದುಕೊಂಡವರು ಆ ಹುಳುಗಳಿಂದ ನಾಶವಾಗಿ ನಿಮಗೆ ಕಾಣದೆಹೋಗುವರು.
21 : ನೀವು ಆ ಜನರಿಗೆ ಹೆದರಿಕೊಳ್ಳಬೇಡಿ.
22 : ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮಧ್ಯೆ ಇದ್ದಾರೆ. ಅವರು ಭಯಭಕ್ತಿಗೆ ಪಾತ್ರರಾದ ಮಹಾದೇವರು. ನಿಮ್ಮ ದೇವರಾದ ಸರ್ವೇಶ್ವರ ಆ ಜನಾಂಗಗಳನ್ನು ನಿಮ್ಮ ಮುಂದೆಯೇ ಸ್ವಲ್ಪಸ್ವಲ್ಪವಾಗಿ ಹೊರಡಿಸುವರು. ನೀವು ಬಹು ಶೀಘ್ರವಾಗಿ ಅವರನ್ನು ನಿರ್ಮೂಲ ಮಾಡಕೂಡದು; ಮಾಡಿದರೆ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಯನ್ನುಂಟುಮಾಡುವುವು.
23 : ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮಿಂದ ಸೋಲಿಸಿ, ಬಹಳವಾಗಿ ಗಲಿಬಿಲಿ ಉಂಟುಮಾಡಿ ಕಡೆಗೆ ಅವರನ್ನು ಇಲ್ಲದಂತೆ ಮಾಡುವರು.
24 : ಈ ಜನರ ಅರಸುಗಳು ನಿಮ್ಮ ಕೈಗೆಸಿಕ್ಕುವಂತೆ ಮಾಡುವರು. ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲರು; ಎಲ್ಲರನ್ನು ನೀವು ನಾಶಮಾಡುವಿರಿ.
25 : “ಆ ಜನರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟು ಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿ ಬಂಗಾರವನ್ನು ನೀವು ಬಯಸಬಾರದು. ಅದನ್ನು ತೆಗೆದುಕೊಂಡರೆ ಅದೇ ನಿಮಗೆ ಉರುಲಾಗುವುದು. ಅದು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯವಾದುದು; ಅವರಿಂದ ಶಾಪಗ್ರಸ್ಥವಾದುದು.
26 : ನೀವು ಅಂಥ ವಸ್ತುವನ್ನು ಮನೆಯೊಳಕ್ಕೆ ತಂದು ಅದರಂತೆಯೇ ನಾಶಕ್ಕೆ ಗುರಿಯಾಗಬಾರದು. ಅದು ಶಾಪಗ್ರಸ್ಥವಾದ್ದರಿಂದ ಅಸಹ್ಯಪಟ್ಟು ಅದನ್ನು ಮುಟ್ಟಲೂಕೂಡದು.

Holydivine