Deuteronomy - Chapter 10
Holy Bible

1 : “ಆ ಕಾಲದಲ್ಲಿ ಸರ್ವೇಶ್ವರ ನನಗೆ, ‘ನೀನು ಮೊದಲಿನ ಕಲ್ಲಿನ ಹಲಗೆಗಳಂತೆ ಬೇರೆ ಎರಡು ಹಲಗೆಗಳನ್ನು ಸಿದ್ಧಪಡಿಸಿಕೊಂಡು ಬೆಟ್ಟವನ್ನು ಹತ್ತಿ ನನ್ನ ಬಳಿಗೆ ಬಾ; ಮತ್ತು ಒಂದು ಮರದ ಮಂಜೂಷವನ್ನು ಮಾಡಿಸಿಕೊಳ್ಳಬೇಕು.
2 : ನೀನು ಒಡೆದುಬಿಟ್ಟ ಆ ಮೊದಲಿನ ಹಲಗೆಗಳಲ್ಲಿ ಬರೆದಿದ್ದ ಮಾತುಗಳನ್ನು ನಾನು ಈ ಹಲಗೆಗಳ ಮೇಲೆ ಬರೆಯುವೆನು. ತರುವಾಯ ನೀನು ಅವುಗಳನ್ನು ಆ ಮಂಜೂಷದಲ್ಲಿಡಬೇಕು’ ಎಂದು ಆಜ್ಞಾಪಿಸಿದರು.
3 : ಆದಕಾರಣ, ನಾನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿ, ಮೊದಲಿನ ಕಲ್ಲಿನ ಹಲಗೆಗಳಂತೆ ಬೇರೆ ಎರಡು ಹಲಗೆಗಳನ್ನು ಸಿದ್ಧಪಡಿಸಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು, ಬೆಟ್ಟವನ್ನು ಹತ್ತಿದೆ.
4 : ಸರ್ವೇಶ್ವರ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ, ನೀವು ಸಭೆಕೂಡಿದ ದಿನದಲ್ಲಿ, ನಿಮಗೆ ಹೇಳಿದ ಮಾತುಗಳನ್ನು ಅಂದರೆ, ಆ ಹತ್ತು ಆಜ್ಞೆಗಳನ್ನು ಅವರು ಮೊದಲಿನಂತೆಯೇ ಆ ಹಲಗೆಗಳ ಮೇಲೆ ಬರೆದರು.
5 : ಸರ್ವೇಶ್ವರ ಹಲಗೆಗಳನ್ನು ನನ್ನ ವಶಕ್ಕೆ ಕೊಟ್ಟನಂತರ ನಾನು ಬೆಟ್ಟದಿಂದ ಇಳಿದುಬಂದೆ; ನನ್ನಿಂದ ಸಿದ್ಧ ಆಗಿದ್ದ ಮಂಜೂಷದಲ್ಲಿ ಅವರ ಅಪ್ಪಣೆಯ ಮೇರೆಗೆ ಅವುಗಳನ್ನು ಇಟ್ಟೆ; ಅವು ಇಂದಿನವರೆಗೂ ಅದರಲ್ಲೇ ಇವೆ.
6 : (ಇಸ್ರಯೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣಮಾಡಿ ಮೋಸೇರಕ್ಕೆ ಬಂದರು. ಅಲ್ಲಿ ಆರೋನನು ಸಾಯಲಾಗಿ ಅವನನ್ನು ಸಮಾಧಿಮಾಡಿದರು. ಅವನ ಮಗ ಎಲ್ಲಾಜಾರನು ಅವನಿಗೆ ಬದಲಾಗಿ ಮಹಾಯಾಜಕನಾದನು.
7 : ಅಲ್ಲಿಂದ ಅವರು ಗುದ್ಗೋದಕ್ಕೂ ಗುದ್ಗೋದದಿಂದ ನೀರಿನ ಹಳ್ಳಗಳುಳ್ಳ ಯೊಟ್ಬಾತಕ್ಕೂ ಪ್ರಯಾಣಮಾಡಿದರು.)
8 : “ಆ ಕಾಲದಲ್ಲಿ ಸರ್ವೇಶ್ವರ ಲೇವಿಕುಲದವರನ್ನು ಪ್ರತ್ಯೇಕಿಸಿ ತಮ್ಮ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕು, ತಮ್ಮ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕು ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕು ಅವರನ್ನು ನೇಮಿಸಿದರು. ಅವರು ಇಂದಿನವರೆಗೂ ಆ ಕೆಲಸವನ್ನು ನಡೆಸುತ್ತಾರೆ.
9 : ಆದುದರಿಂದ ಮಿಕ್ಕ ಇಸ್ರಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ವಾಸ್ತ್ಯ ದೊರಕಲಿಲ್ಲ. ನಿಮ್ಮ ದೇವರಾದ ಸರ್ವೇಶ್ವರ ಅವರಿಗೆ ಹೇಳಿದಂತೆ ಸರ್ವೇಶ್ವರಸ್ವಾಮಿಯೇ ಅವರ ಸೊತ್ತು.
10 : “ನಾನು ಮುಂಚಿನಂತೆ ಹಗಲಿರುಳು ನಲವತ್ತು ದಿನವೂ ಬೆಟ್ಟದ ಮೇಲೆ ಇದ್ದೆ. ಸರ್ವೇಶ್ವರ ಆ ಕಾಲದಲ್ಲೂ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡಬೇಕೆಂಬ ಆಲೋಚನೆಯನ್ನು ಬಿಟ್ಟುಬಿಟ್ಟರು.
11 : ತರುವಾಯ ಸರ್ವೇಶ್ವರ ನನಗೆ, ‘ನೀನು ಈ ಜನರ ಮುಂದುಗಡೆ ಹೊರಡು; ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ನಾಡನ್ನು ಇವರು ಸೇರಿ ಸ್ವಾಧೀನ ಮಾಡಿಕೊಳ್ಳಲಿ,’ ಎಂದು ಆಜ್ಞಾಪಿಸಿದರು.
12 : “ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡಬೇಕು;
13 : ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು. ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ.
14 : ಇಗೋ ಕೇಳಿ: ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ.
15 : ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು.
16 : ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿ.
17 : ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು. ಸರ್ವೇಶ್ವರಾಧಿ ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರವೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ, ಲಂಚ ತೆಗೆದುಕೊಳ್ಳುವವರಲ್ಲ.
18 : ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯದೊರಕಿಸುತ್ತಾರೆ; ಪರದೇಶಿಗಳಾದವರಿಗೆ ಪ್ರೀತಿಯಿಂದ ಅನ್ನವಸ್ತ್ರಗಳನ್ನು ನೀಡುತ್ತಾರೆ.
19 : ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ.
20 : ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆ ಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು.
21 : ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅವರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ.
22 : ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ, ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗುವಂತೆ ಮಾಡಿದ್ದಾರೆ.

Holydivine