Deuteronomy - Chapter 33
Holy Bible

1 : ದೇವಪುರುಷನಾದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ಇಸ್ರಯೇಲರನ್ನು ಕುರಿತು ಹೇಳಿದ ಆಶೀರ್ವಚನಗಳಿವು:
2 : ಸರ್ವೇಶ್ವರ ಸೀನಾಯ್ ಬೆಟ್ಟದಿಂದ ಬಂದರು, ಸೇಯಿರ್ ಎಂಬ ಸೀಮೆಯೊಳಗಿಂದ ಉದಯಿಸಿದರು, ಪಾರಾನ್ ಎಂಬ ಪರ್ವತದಿಂದ ಪ್ರಜ್ವಲಿಸಿದರು, ಲಕ್ಷಾಂತರ ಸಂತರ ಮಧ್ಯೆಯಿಂದ ದಯಮಾಡಿದರು, ಅಗ್ನಿಸದೃಶವಾದ ಧರ್ಮಶಾಸ್ತ್ರ ಅವರ ಬಲಪಾಶ್ರ್ವದಲ್ಲಿತ್ತು.
3 : ಹೌದು, ಆತ ಪ್ರೀತಿಸುತ್ತಾನೆ ತನ್ನ ಪ್ರಜೆಯನು, ಆಶ್ರಯ ನೀಡುತ್ತಾನೆ ತನ್ನ ಭಕ್ತರೆಲ್ಲರಿಗು. ಎಂದೇ ಆತನ ಆಜ್ಞೆಗಳಿಗೆ ತಲೆಬಾಗುವೆವು. ಆತನ ಪಾದಚರಣದಲೆ ಕುಳಿತಿರುವೆವು.
4 : ಯಕೋಬ ಸಂತತಿಯಾದ ನಮಗೆ ಇತ್ತನು ಮೋಶೆ ಧರ್ಮಶಾಸ್ತ್ರವನ್ನು ಸೊತ್ತಾಗಿ.
5 : ಇಸ್ರಯೇಲರ ಕುಲಗಳು ಒಂದಾದಾಗ ಜನನಾಯಕರು ಒಟ್ಟಾಗಿ ಕೂಡಿದಾಗ ಯೆಶುರೂನಿನಲಿ ಸರ್ವೇಶ್ವರನೇ ಅರಸನಾದ.
6 : ರೂಬೇನ್‍ಕುಲ ಕುರಿತು ಮೋಶೆ ನುಡಿದದ್ದು: “ರೂಬೇನ್ ಅಳಿಯದೆ ಉಳಿಯಲಿ ಅವನ ಮಕ್ಕಳು ಅಸಂಖ್ಯಾತರಾಗದಿರಲಿ.”
7 : ಯೆಹೂದ ಕುಲ ಕುರಿತು ಮೋಶೆ ಹೇಳಿದ್ದು : “ಸರ್ವೇಶ್ವರಾ, ಯೆಹೂದನ ಮೊರೆಯನ್ನಾಲಿಸು ಬಂಧುಗಳೊಡನೆ ಅವನನ್ನು ಮರಳಿ ಸೇರಿಸು ತನ್ನ ಹಕ್ಕುಬಾಧ್ಯತೆಗಳನ್ನು ಕಾದಿರಿಸಿಕೊಳ್ಳಲು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸು.”
8 : ಲೇವಿಯ ಕುಲ ಕುರಿತು ಮೋಶೆ ನುಡಿದದ್ದು: “ಸರ್ವೇಶ್ವರಾ, ನೀಡಿವನಿಗೆ ನಿನ್ನ ವಿಧಿ ತಿಳಿಸುವ ಊರಿಮ್, ನಿನ್ನ ಭಕ್ತನಾದ ಇವನ ವಶದಲ್ಲಿರಲಿ ಆ ತಮ್ಮೀಮ್. ನೀನಿವನನ್ನು ಪರೀಕ್ಷಿಸಿದೆ ಮಸ್ಸದಲ್ಲಿ ವಿವಾದಿಸಿದೆ ಜಲ ಹೊರಹೊಮ್ಮಿದ ಮೆರೀಬದಲ್ಲಿ.
9 : ನಿನ್ನ ಆಜ್ಞೆಗಳನ್ನು ಕೈಗೊಳ್ಳಲೆಂದು ನಿನ್ನ ಒಡಂಬಡಿಕೆಯನು ಕಾದಿರಿಸಲೆಂದು ‘ತಂದೆತಾಯಿಗಳ ಪರಿಚಯವಿಲ್ಲ ಅಣ್ಣತಮ್ಮಂದಿರ ಅರಿವಿಲ್ಲ ಸ್ವಂತ ಮಕ್ಕಳ ಗುರುತಿಲ್ಲ’ ಎಂದನಿವನು.
10 : ತಿಳಿಸುವನಿವನು ನಿನ್ನ ನಿರ್ಣಯವನು ಯಕೋಬನಿಗೆ ಕಲಿಸುವನು ನಿನ್ನ ಧರ್ಮಶಾಸ್ತ್ರವನು ಇಸ್ರಯೇಲನಿಗೆ. ಧೂಪಾರತಿ ಎತ್ತುವನು ನಿನ್ನ ಸನ್ನಿಧಿಯಲಿ ದಹನಬಲಿ ಸಮರ್ಪಿಸುವನು ನಿನ್ನ ಬಲಿಪೀಠದಲಿ.
11 : ಸರ್ವೇಶ್ವರಾ, ವೃದ್ಧಿಪಡಿಸು ಇವನ ಆಸ್ತಿಯನು ಸಮರ್ಪಕವಾಗಿರಲಿ ನಿನಗೆ ಇವನ ಸೇವೆಯು ಇವನ ಶತ್ರುಗಳ ನಡುವನ್ನು ಮುರಿ ಮರಳಿ ಏಳದಂತೆ ಮಾಡು ಇವನ ವೈರಿ.”
12 : ಬೆನ್ಯಾವಿೂನ್ ಕುಲ ಕುರಿತು ಮೋಶೆ ನುಡಿದದ್ದು: “ಸರ್ವೇಶ್ವರನಿಗೆ ಪ್ರಿಯನಾದ ಇವನು ನಿರ್ಭಯವಾಗಿ ವಾಸಮಾಡುವನು. ಇವನನ್ನಾತ ತಬ್ಬಿರುವನು ದಿನವಿಡೀ ತನ್ನ ತೋಳತೆಕ್ಕೆಯಲಿ.”
13 : ಜೋಸೆಪ್ ಕುಲ ಕುರಿತು ಮೋಶೆ ನುಡಿದದ್ದು: “ಇವನ ಪ್ರಾಂತ್ಯ ಆಶೀರ್ವದಿತವಾಗಲಿ ಸರ್ವೇಶ್ವರನಿಂದ ಮೇಲಣ ಆಕಾಶದ ಮಂಜಿನಿಂದ ಕೆಳಗಿನ ಸಾಗರದ ಒರೆತಗಳಿಂದ;
14 : ಸೂರ್ಯನಿಂದ ಫಲಿಸುವ ಪಸಲುಗಳಿಂದ ತಿಂಗಳು ತಿಂಗಳು ಆಗುವ ಬೆಳೆಗಳಿಂದ;
15 : ಪುರಾತನ ಬೆಟ್ಟಗಳಿಂದ ಒದಗುವ ಉತ್ಪನ್ನಗಳಿಂದ ಶಾಶ್ವತ ಪರ್ವತಗಳಿಂದ ಸಿಗುವ ಒಳಿತುಗಳಿಂದ.
16 : ಸೋದರರಿಗೆ ಸಾಮ್ರಾಟನಾದ ಜೋಸೆಫನ ಪಾಲಿಗೆ ಬರಲಿ ಇವನ ಕುಲದ ಮೇಲೆ ನೆಲಸಲಿ ನೆಲಬೆಳೆಸುವ ಫಲಗಳಲಿ ಶ್ರೇಷ್ಟವಾದುದೆಲ್ಲವು ಮುಳ್ಳುಪೊದೆಯಲಿ ಕಾಣಿಸಿಕೊಂಡಾತನ ದಯೆಯು!
17 : ಜೋಸೆಫನದು ಜೇಷ್ಠಸಂತತಿಯು ಗೂಳಿಯ ಗಾಂಭೀರ್ಯವೂ ಅವನ ಕೊಂಬುಗಳು, ಕಾಡುಕೋಣದ ಕೊಂಬುಗಳು ಅವುಗಳಿಂದ ಇರಿದು ಓಡಿಸಬಲ್ಲನು ಜಗದ ಜನಾಂಗಗಳನು ಇವನಂಥವರು ಎಫ್ರಯಿಮ್ ಕುಲದ ಕೋಟ್ಯಾಂತರ ಜನರು ಇವನಂಥವರು ಮನಸ್ಸೆಕುಲದ ಲಕ್ಷಾಂತರ ಮಂದಿಗಳು.”
18 : ಜೆಬುಲೂನ್ ಮತ್ತು ಇಸ್ಸಾಕಾರ ಕುಲ ಕುರಿತು ಮೋಶೆ ನುಡಿದದ್ದು: “ಜೆಬುಲೂನೇ, ಸಂತೋಷವಾಗಿರು ನಿನ್ನ ಪಯಣಗಳಲ್ಲಿ ಇಸ್ಸಾಕಾರನೇ, ಆನಂದವಾಗಿರು ನಿನ್ನ ಪಾಳೆಯಗಳಲ್ಲಿ.
19 : ಇವರು ಕರೆದುತರುವರು ಅನ್ಯಜನಗಳನು ಮಲೆನಾಡಿಗೆ ಅರ್ಪಿಸತರುವರು ನ್ಯಾಯಯುತವಾದ ಬಲಿಗಳನು ಅಲ್ಲಿಗೆ. ಸವಿವರು ಕಡಲ ಸಿರಿಯನು ನೆಲದಲ್ಲಡಗಿರುವ ಸಂಪದವನು.”
20 : ಗಾದ್‍ಕುಲ ಕುರಿತು ಮೋಶೆ ನುಡಿದದ್ದು: “ಗಾದ್ಯರ ಪ್ರಾಂತ್ಯವನು ವಿಸ್ತರಿಸಿದ ಸರ್ವೇಶ್ವರನಿಗೆ ಸ್ತೋತ್ರವು! ಸಿಂಹದಂತೆ ಹೊಂಚುಹಾಕಿ ಮುರಿವನು ಗಾದನು ಶತ್ರುಗಳ ಭುಜವನು, ಶಿರವನು.
21 : ತನಗೆಂದು ತೆಗೆದುಕೊಂಡನು ನಾಡಿನ ಮೊದಲಭಾಗವನು ದೊರಕಿತಲ್ಲಿ ಅವನಿಗೆ ಮುಖ್ಯಸ್ಥನಿಗಾಗುವ ಸ್ವಾಸ್ತ್ಯವು. ಜನಾದಿಪತಿಗಳ ಜೊತೆಬಂದು ನೆರವೇರಿಸಿದನು ಸರ್ವೇಶ್ವರನ ಆಣತಿಯನು; ಇಸ್ರಯೇಲನೊಡನೆ ಸ್ಥಾಪಿಸಿದನು ಸರ್ವೇಶ್ವರನ ನ್ಯಾಯನೀತಿಯನು.”
22 : ದಾನ್‍ಕುಲ ಕುರಿತು ಮೋಶೆ ನುಡಿದದ್ದು: “ದಾನನು ಬಾಷಾನ್ ದೇಶದಿಂದ ಧಾವಿಸಿಬಂದ ಯುವಸಿಂಹನು!”
23 : ನಫ್ತಾಲಿ ಕುಲ ಕುರಿತು ಮೋಶೆ ನುಡಿದದ್ದು: “ಎಲೈ ನಫ್ತಾಲಿ, ಸರ್ವೇಶ್ವರನ ದಯೆಹೊಂದಿ ನೀ ತೃಪ್ತನಾದೆ ಆತನ ಆಶೀರ್ವಾದದಿಂದ ಸಮೃದ್ಧಿಯುಂಟು ನಿನಗೆ ಸಮುದ್ರದ ದಕ್ಷಿಣಪ್ರದೇಶ ಸೊತ್ತಾಗಲಿ ನಿನಗೆ.”
24 : ಆಶೇರ್‍ಕುಲ ಕುರಿತು ಮೋಶೆ ನುಡಿದದ್ದು: “ಕುಲೋತ್ತಮನಾದ ಆಶೇರನು ಭಾಗ್ಯಹೊಂದಲಿ ಎಲ್ಲದರಲಿ ಸೋದರರಲ್ಲಿ ಶ್ರೇಷ್ಠತೆಯನು ಪಡೆಯಲಿ ಎಣ್ಣೆಯಲಿ ಪಾದಸ್ನಾನ ಮಾಡುವಂತಾಗಲಿ
25 : ನನ್ನ ಕೋಟೆಯ ಬಾಗಿಲು ಕಬ್ಬಿಣದವು ಅವುಗಳ ಅಗುಳಿಗಳು ಕಂಚಿನವು ನೀನಿರುವಷ್ಟುಕಾಲ ನಿನಗಿರುವುದು ಬಲವು.”
26 : ಇಸ್ರಯೆಲಿನ ಜನರೇ, ನಿಮ್ಮ ದೇವರಿಗೆ ಸಮಾನನಾರೂ ಇಲ್ಲ. ಆತ ಬರುವನು ಆಕಾಶವನ್ನೇರಿ, ಮೇಘರೂಢನಾಗಿ ಮಹಾಗಾಂಭೀರ್ಯದಿಂದ ಬರುವನು ನಿಮ್ಮ ನೆರವಿಗಾಗಿ.
27 : ಆದಿಯಿಂದ ದೇವರೇ ನಿಮಗೆ ಶ್ರೀನಿವಾಸ ಆತನ ಹಸ್ತವೇ ನಿಮಗೆ ನಿತ್ಯಾಧಾರ ! ಶತ್ರುಗಳನು ಹೊರಡಿಸುವನು ನಿಮ್ಮ ಬಳಿಯಿಂದ ಅವರನು ಸಂಹರಿಸಲು ಆಜ್ಞಾಪಿಸಿಹನು ಆತ.
28 : ವಾಸಿಸಿರಿ ಇಸ್ರಯೇಲರೇ, ನಿರ್ಭಯರಾಗಿ ಯಕೋಬನ ಸಂತತಿಯೇ, ಸುರಕ್ಷಿತವಾಗಿ ಆಗಸದಿಂದ ಮಳೆಸುರಿಯುವ ನಾಡಿನಲ್ಲಿ ಧಾನ್ಯ, ದ್ರಾಕ್ಷಾರಸ ಸಮೃದ್ಧಿಯಾಗಿರುವಲ್ಲಿ !
29 : ಇಸ್ರಯೇಲ್, ನೀನು ಎಷ್ಟೋ ಧನ್ಯ ! ಯಾರಿಗಿದೆ ನಿನಗಿರುವಂತೆ ಭಾಗ್ಯ ! ಜಯಗಳಿಸಿರುವೆ ಸರ್ವೇಶ್ವರನ ಅನುಗ್ರಹದಿಂದ. ಆತನೇ ನಿನ್ನ ಕಾಪಾಡುವ ಗುರಾಣಿ, ನಿನ್ನ ಗೌರವವನ್ನು ಕಾಯುವ ಕತ್ತಿ. ಎಂದೇ ಮುದುರಿಕೊಳ್ಳುವರು ಶತ್ರುಗಳು ನಿನ್ನ ಮುಂದೆ ಜಯಶೀಲನಾಗಿ ನೀ ಮೆರೆವೆ ಅವರ ಮಲೆನಾಡಿನಲ್ಲೆ.

Holydivine