Deuteronomy - Chapter 23
Holy Bible

1 : “ಬೀಜಹೊಡಿಸಿಕೊಂಡಾಗಲಿ, ಜನನ ಇಂದ್ರಿಯ ಕತ್ತರಿಸಿಕೊಂಡಾಗಲಿ ನಪುಂಸಕರಾದವರು ಸರ್ವೇಶ್ವರನ ಸಭೆಯಲ್ಲಿ ಸೇರಬಾರದು.
2 : ಅಗಮ್ಯಾಗಮನದಿಂದುಂಟಾದ ಸಂತತಿಯವರು ಹತ್ತನೆಯ ತಲೆಯವರಾದರೂ ಸರ್ವೇಶ್ವರನ ಸಭೆಗೆ ಸೇರಬಾರದು.
3 : “ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಸರ್ವೇಶ್ವರನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಸರ್ವೇಶ್ವರನ ಸಭೆಗೆ ಸೇರಬಾರದು.
4 : ಏಕೆಂದರೆ ನೀವು ಈಜಿಪ್ಟ್ ದೇಶದಿಂದ ಬಂದಾಗ ಅವರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರೂರಿನಿಂದ ಅವನನ್ನು ಕರೆಸಿದರು.
5 : ಆದರೂ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ, ಅವನಿಂದ ಶಾಪವನ್ನು ನುಡಿಸದೆ, ಆಶೀರ್ವಾದವನ್ನೇ ಹೇಳಿಸಿದರು.
6 : ನಿಮ್ಮ ಜೀವಮಾನಕಾಲವನ್ನೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇಬಾರದು.
7 : “ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ನಿಮ್ಮ ಬಂಧು ಜನಗಳು. ಈಜಿಪ್ಟರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲವೆ?
8 : ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಸರ್ವೇಶ್ವರನ ಸಭೆಗೆ ಸೇರಬಹುದು.
9 : “ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುಚಿಯೂ ಆಗದಂತೆ ಎಚ್ಚರಿಕೆಯಿಂದಿರಬೇಕು.
10 : ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರು ಅಶುದ್ಧನಾದರೆ ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು.
11 : ಅವನು ಸಂಜೆವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಳುಗಿದ ಮೇಲೆ ಪಾಳೆಯದೊಳಗೆ ಬರಬಹುದು.
12 : “ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು.
13 : ಯುದ್ಧದ ಸಾಮಾನುಗಳಲ್ಲದೆ ಸಲಕೆ ನಿಮ್ಮ ಬಳಿಯಲ್ಲೇ ಇರಬೇಕು; ನೀವು ಬಹಿರ್ದಿಶೆಗೆ ಹೋದಾಗ ಆ ಸಲಕೆಯಿಂದ ಅಗಿದು ಕಲ್ಮಷವನ್ನು ಮುಚ್ಚಿಬಿಡಬೇಕು.
14 : ನಿಮ್ಮ ದೇವರಾದ ಸರ್ವೇಶ್ವರಾ ನಿಮ್ಮನ್ನು ಕಾಪಾಡಲು, ಶತ್ರುಗಳನ್ನು ನಿಮ್ಮ ಕೈವಶಮಾಡಲು ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾರೆ; ನಿಮ್ಮಲ್ಲಿ ಅಶುಚಿಯೇನಾದರೂ ಕಂಡು ಬಂದರೆ ಅವರು ನಿಮ್ಮನ್ನು ಬಿಟ್ಟುಹೋಗದಂತೆ ಪಾಳೆಯವು ನಿರ್ಮಲವಾಗಿರಬೇಕು.
15 : “ತಪ್ಪಿಸಿಕೊಂಡ ಒಬ್ಬ ಗುಲಾಮನು ನಿಮ್ಮಲ್ಲಿ ಇರುವುದಕ್ಕೆ ಬಂದರೆ ಅವನನ್ನು ಅವನ ದಣಿಗೆ ಮತ್ತೆ ವಶಪಡಿಸಬಾರದು.
16 : ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ಅವನನ್ನು ನೀವು ಶೋಷಣೆಗೆ ಗುರಿಪಡಿಸಬಾರದು.
17 : “ಇಸ್ರಯೇಲರಲ್ಲಿ ಯಾವ ಸ್ತ್ರೀಯೂ ಗುಡಿವೇಶ್ಯೆಯಾಗಬಾರದು; ಅಂತೆಯೇ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು.
18 : ಸೂಳೆತನದಿಂದಾಗಲಿ ಜಾರತ್ವದಿಂದಾಗಲಿ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಸರ್ವೇಶ್ವರನ ಮಂದಿರದೊಳಗೆ ತರಲೇಬಾರದು; ಈ ಎರಡೂ ಅವರಿಗೆ ಅಸಹ್ಯವಾದುವು.
19 : “ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ, ಬೇರೆ ಯಾವುದನ್ನೇ ಆಗಲಿ
20 : ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಕೈಗೂಡಿಸಿ ಅಭಿವೃದ್ಧಿ ಪಡಿಸುವರು.
21 : “ನಿಮ್ಮ ದೇವರಾದ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಅವರು ತಪ್ಪದೆ ಅದನ್ನು ವಿಚಾರಿಸುವರು; ತೀರಿಸದೆ ಹೋಗುವುದು ಪಾಪ.
22 : ನೀವು ಹರಕೆಮಾಡದಿದ್ದರೆ ದೋಷವೇನೂ ಇಲ್ಲ.
23 : ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಸರ್ವೇಶ್ವರನಿಗೆ ಬಾಯಿಂದ ಹರಕೆಮಾಡಿ ಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು.
24 : “ಮತ್ತೊಬ್ಬನ ದ್ರಾಕ್ಷಿತೋಟದಲ್ಲಿ ನೀವು ಹಾದುಹೋಗುವಾಗ ಇಷ್ಟಾನುಸಾರ ಹಣ್ಣುಗಳನ್ನು ತಿನ್ನಬಹುದು. ಆದರೆ ಬುಟ್ಟಿಯಲ್ಲಿ ಹಾಕಿಕೊಂಡು ಹೋಗಬಾರದು.
25 : ಮತ್ತೊಬ್ಬನ ಬೆಳೆಯ ನಡುವೆ ಹಾದುಹೋಗುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದು; ಆದರೆ ಆ ಬೆಳೆಗೆ ಕುಡುಗೋಲು ಹಾಕಬಾರದು.

Holydivine