Deuteronomy - Chapter 21
Holy Bible

1 : “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿನಲ್ಲಿ ಹತನಾದ ಒಬ್ಬ ವ್ಯಕ್ತಿಯ ಶವವು ಅಡವಿಯಲ್ಲಿ ಬಿದ್ದಿರುವುದನ್ನು ನೀವು ಕಂಡಾಗ ಮತ್ತು ಅವನನ್ನು ಕೊಂದವನು ಯಾರೆಂಬುದು ತಿಳಿಯದೆಹೋದರೆ
2 : ನಿಮ್ಮ ಹಿರಿಯರೂ ನ್ಯಾಯಾಧಿಪತಿಗಳೂ ಬಂದು ಹತನಾದವನ ಶವದ ಸುತ್ತಲಿರುವ ಊರುಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳಲು ಅಳತೆಮಾಡಬೇಕು.
3 : ಯಾವ ಊರು ಹತ್ತಿರವಾಗಿದೆಯೋ ಆ ಊರಿನ ಹಿರಿಯರು ಇನ್ನೂ ನೊಗಕ್ಕೆ ಕಟ್ಟದ ಹಾಗು ಯಾವ ಕೆಲಸವನ್ನೂ ಮಾಡದ ಒಂದು ಕಡಸನ್ನು ತೆಗೆದುಕೊಳ್ಳಬೇಕು;
4 : ಎಂದಿಗೂ ವ್ಯವಸಾಯವಿಲ್ಲದಂಥ ನೀರು ಯಾವಾಗಲೂ ಹರಿಯುವಂಥ ತಗ್ಗಿಗೆ ಹೋಗಿ ಅಲ್ಲಿ ಅದರ ಕುತ್ತಿಗೆಯನ್ನು ಮುರಿದುಕೊಲ್ಲಬೇಕು.
5 : ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರ ಇರಬೇಕು. ನಿಮ್ಮ ದೇವರಾದ ಸರ್ವೇಶ್ವರ ಅವರನ್ನೇ ತಮ್ಮ ಸಾನ್ನಿಧ್ಯ ಸೇವೆಯನ್ನು ಮಾಡುವುದಕ್ಕೆ ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೆ ಆರಿಸಿಕೊಂಡಿದ್ದಾರಲ್ಲವೆ? ಸಂದೇಹಕರವಾದ ಎಲ್ಲ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸ ಬೇಕು.
6 : ಹತನಾದವನ ಶವಕ್ಕೆ ಹತ್ತಿರವಿರುವ ಗ್ರಾಮದ ಹಿರಿಯರು, ಆ ತಗ್ಗಿನಲ್ಲಿ ಕುತ್ತಿಗೆ ಮುರಿದ ಆ ಕಡಸಿನ ಮೇಲೆ ಕೈಗಳನ್ನು ತೊಳೆದುಕೊಳ್ಳಬೇಕು.
7 : ಹಾಗೆ ಮಾಡುವಾಗ, ‘ನಮ್ಮ ಕೈಗಳು ಈ ಹತ್ಯವನ್ನು ಮಾಡಲಿಲ್ಲ; ನಮ್ಮ ಕಣ್ಣುಗಳು ನೋಡಲಿಲ್ಲ;
8 : ಸರ್ವೇಶ್ವರಾ, ನೀವು ಬಿಡುಗಡೆ ಮಾಡಿದ ನಿಮ್ಮ ಜನರನ್ನು ಕ್ಷಮಿಸಬೇಕು; ಅನ್ಯಾಯ ಆದ ನರಹತ್ಯ ದೋಷಫಲವು ನಿಮ್ಮ ಜನರಾದ ಇಸ್ರಯೇಲರಿಗೆ ತಗಲದಿರಲಿ’ ಎಂದು ಹೇಳಬೇಕು.
9 : ಆಗ ಆ ರಕ್ತಾಪರಾಧಕ್ಕೆ ಕ್ಷಮೆ ದೊರಕುವುದು. ಹೀಗೆ ಸರ್ವೇಶ್ವರನ ದೃಷ್ಟಿಯಲ್ಲಿ ಸರಿಯಾದುದನ್ನು ಮಾಡುವುದರಿಂದ ನೀವೇ ಅನ್ಯಾಯವಾದ ನರಹತ್ಯ ದೋಷವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕುವಿರಿ.
10 : “ನೀವು ಶತ್ರುಗಳ ವಿರುದ್ಧ ಯುದ್ಧಮಾಡಿ ನಿಮ್ಮ ದೇವರಾದ ಸರ್ವೇಶ್ವರನ ಅನುಗ್ರಹದಿಂದ ಅವರನ್ನು ಸೋಲಿಸಿದಿರಿ ಎಂದು ಇಟ್ಟುಕೊಳ್ಳೋಣ.
11 : ಆಗ ಹಿಡಿದ ಸೆರೆಯವರಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ನಿಮ್ಮಲ್ಲಿ ಯಾರಾದರು ಕಂಡು ಮೋಹಿಸಿ ಮದುವೆಮಾಡಿಕೊಳ್ಳಬೇಕೆಂದು ಅಪೇಕ್ಷಿಸಿದರೆ, ಅವಳನ್ನು ಮನೆಗೆ ಕರೆದುಕೊಂಡು ಬರಲಿ;
12 : ತರುವಾಯ ಅವಳು ತಲೆ ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ತೆಗೆದುಕೊಂಡು, ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು
13 : ಅವನ ಮನೆಯಲ್ಲಿ ಒಂದು ತಿಂಗಳವರೆಗೆ ತನ್ನ ತಾಯಿತಂದೆಗಳ ವಿಯೋಗದ ನಿಮಿತ್ತ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.
14 : ತರುವಾಯ ಅವಳು ಅವನಿಗೆ ಇಷ್ಟವಾಗದೆ ಹೋದರೆ ಅವನು ಅವಳನ್ನು ಅವಳು ಆಶಿಸುವಲ್ಲಿಗೆ ಕಳುಹಿಸಿಬಿಡಬೇಕು. ಅವಳನ್ನು ಕೂಡಿದ್ದರಿಂದ ಹಣಕ್ಕೆ ಮಾರಲೂಬಾರದು, ಊಳಿಗದವಳಂತೆ ನಡೆಸಲೂಬಾರದು.
15 : “ಒಬ್ಬನಿಗೆ ಇಬ್ಬರು ಹೆಂಡತಿಯರಿದ್ದು ಅವರಲ್ಲಿ ಒಬ್ಬಳನ್ನು ಪ್ರೀತಿಸಿ ಮತ್ತೊಬ್ಬಳನ್ನು ತಿರಸ್ಕರಿಸುವ ಸಂದರ್ಭದಲ್ಲಿ ಅವರಿಬ್ಬರೂ ಅವನಿಂದ ಮಕ್ಕಳನ್ನು ಪಡೆದಿದ್ದರೆ, ಚೊಚ್ಚಲು ಮಗನು ತಿರಸ್ಕರಿಸಲ್ಪಟ್ಟವಳಲ್ಲಿಯೇ ಹುಟ್ಟಿದ್ದರೂ,
16 : ತಂದೆ ತನ್ನ ಆಸ್ತಿಯನ್ನು ಮಕ್ಕಳಿಗೆ ಸೊತ್ತಾಗಿ ಕೊಡುವಾಗ ಆ ತಿರಸ್ಕರಿಸಲ್ಪಟ್ಟವಳ ಮಗನನ್ನು ತಳ್ಳಿಬಿಟ್ಟು, ಪ್ರೀತಿಯ ಹೆಂಡತಿಯ ಮಗನನ್ನೇ ಚೊಚ್ಚಲವನೆಂದು ಭಾವಿಸಕೂಡದು.
17 : ತಿರಸ್ಕರಿಸಲ್ಪಟ್ಟವಳ ಮಗನೇ ಚೊಚ್ಚಲವನೆಂದು ಒಪ್ಪಿ, ಅವನಿಗೆ ಎರಡು ಭಾಗಗಳನ್ನು ಕೊಡಬೇಕು. ಅವನೇ ತಂದೆಯ ಪ್ರಥಮಫಲ, ಅವನೇ ಚೊಚ್ಚಲುತನದ ಹಕ್ಕಿಗೆ ಬಾಧ್ಯಸ್ತ.
18 : “ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ, ಶಿಕ್ಷಿಸಿದ್ದರೂ ಮೊಂಡನೂ ಅವಿಧೇಯನೂ ಆಗಿ, ಅವರ ಮಾತನ್ನು ಕೇಳದೆ ಹೋದರೆ,
19 : ತಂದೆತಾಯಿಗಳು ಅವನನ್ನು ಹಿಡಿದು ಊರಬಾಗಿಲಿಗೆ ಹಿರಿಯರ ಮುಂದೆ ತರಬೇಕು.
20 : ಅಲ್ಲಿ ಅವರಿಗೆ, ‘ಈ ನಮ್ಮ ಮಗ ನಮ್ಮ ಮಾತನ್ನು ಕೇಳುವುದೇ ಇಲ್ಲ, ಆಜ್ಞೆಗೆ ಒಳಗಾಗುವುದಿಲ್ಲ; ಇವನು ಮೊಂಡ, ಕುಡುಕ, ತುಂಟ’ ಎಂದು ಸಾಕ್ಷಿ ಹೇಳಬೇಕು.
21 : ಆಗ ಊರಿನವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದು ಹಾಕಿಬಿಡಬೇಕು. ಇಸ್ರಯೇಲರೆಲ್ಲರು ಕೇಳಿ ಭಯ ಪಡುವರು.
22 : “ಮರಣಶಿಕ್ಷೆಗೆ ಪಾತ್ರನಾದ ಅಪರಾಧಿಯನ್ನು ಗಲ್ಲುಮರಕ್ಕೇರಿಸಿದ ಮೇಲೆ ಅವನ ಶವವನ್ನು ನೀವು ರಾತ್ರಿಯೆಲ್ಲಾ ಆ ಮರದ ಮೇಲೆ ಇರಿಸಬಾರದು; ಅದನ್ನು ಅದೇ ದಿನ ನೆಲದಲ್ಲಿ ಹೂಣಬೇಕು. ಏಕೆಂದರೆ ಮರಕ್ಕೆ ತೂಗಹಾಕಲಾದವನು ದೇವರ ಶಾಪವನ್ನು ಹೊಂದಿದವನು. ಹೀಗೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡನ್ನು ನೀವೇ ಅಪವಿತ್ರ ಗೊಳಿಸಬಾರದು.

Holydivine