Deuteronomy - Chapter 32
Holy Bible

1 : ಆಕಾಶಮಂಡಲವೇ, ಕೇಳು ನಾ ಹೇಳುವುದನು ಭೂಮಂಡಲವೇ, ಆಲಿಸು ನನ್ನ ಮಾತುಗಳನು.
2 : ನನ್ನ ಉಪದೇಶ ಹಸಿಹುಲ್ಲಿನ ಮೇಲೆ ಮೆಲ್ಲನೆ ಸುರಿವ ತುಂತುರುಗಳಂತೆ ನನ್ನ ಬೋಧೆ ಕಾಯಿಪಲ್ಯಗಳ ಮೇಲೆ ಮಂಜಿನಂತೆ ಬೀಳುವ ಹದಮಳೆಯಂತೆ.
3 : ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು ಕೊಂಡಾಡಿ ನೀವು ಆ ದೇವನ ಮಹಾಮಹಿಮೆಯನು.
4 : “ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”
5 : ಅವರಾದರೋ ದ್ರೋಹಿಗಳು, ಮಕ್ಕಳೆನಿಸಿಕೊಳ್ಳಲು ಅಯೋಗ್ಯರು ವಕ್ರಬುದ್ಧಿಯುಳ್ಳವರು, ಮೂರ್ಖಜಾತಿಯವರು.
6 : ದುರಾಚಾರಿಗಳೇ, ಅವಿವೇಕಿಗಳೇ, ಸರ್ವೇಶ್ವರನ ಬಗ್ಗೆ ಹೀಗೆ ವರ್ತಿಸಬಹುದೇ? ಆತ ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೆ? ನಿಮ್ಮನ್ನೊಂದು ರಾಷ್ಟ್ರವಾಗಿ ಸ್ಥಾಪಿಸಿದವನಲ್ಲವೆ?
7 : ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.
8 : ಪರಾತ್ಮರ ದೇವರು ಜನಾಂಗಗಳನು ಬೇರೆಬೇರೆ ಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರರ ಸಂಖ್ಯಾನುಸಾರ ಪ್ರದೇಶಗಳನು ಗೊತ್ತುಮಾಡಿದಾಗ.
9 : ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು ಆ ಯಕೋಬ ವಂಶಜರು ಆತನಿಗೆ.
10 : ಬರಿದಾದ ಭೀಕರ ಮರುಭೂಮಿಯಲಿ ಅವರನು ಕಂಡು ಕಣ್ಣಗುಡ್ಡೆಯಂತೆ ಕಾಪಾಡಿದ ಪ್ರೀತಿಯಿಂದವರನು ಅಪ್ಪಿಕೊಂಡು.
11 : ಗೂಡಿನಿಂದ ಮರಿಗಳನು ಹೊರಡಿಸಿದಾ ಗರುಡಪಕ್ಷಿ ಹಾರಾಡಿ ಅವು ಬೀಳದಂತೆ ಕಾಯುತ್ತದೆ ರೆಕ್ಕೆಗಳನು ಚಾಚಿ. ಅಂತೆಯೆ ಸರ್ವೇಶ್ವರ ಕಾಪಾಡಿದ ಇಸ್ರಯೇಲರನು ಕೈಚಾಚಿ.
12 : ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.
13 : ಹತ್ತಿಸಿದವರನು ಎತ್ತರದ ಪ್ರದೇಶಗಳಿಗೆ ಇತ್ತನವರಿಗೆ ಅಲ್ಲಿಯೆ ಬೆಳೆದ ಪೈರುಫಸಲನೆ. ಗಿಟ್ಟಿತವರಿಗೆ ಗುಡ್ಡದ ಜೇನು, ಗಿರಿಯ ಎಣ್ಣೆಯು.
14 : ಆಹಾರಕ್ಕಿತ್ತು ಆಕಳಿನ ಮೊಸರೋಗರ ಆಡುಕುರಿಗಳ ಕ್ಷೀರ ಬಾಷಾನಿನ ಪುಷ್ಟಪಶು, ಹೋತ, ಕೊಬ್ಬಿದ ಕುರಿಟಗರಿನ ಮಾಂಸ, ಉತ್ತಮವಾದ ಗೋಧೂಮ; ಪಾನಕ್ಕಿತ್ತು ರಕ್ತಗೆಂಪಾದ ದ್ರಾಕ್ಷಾರಸ
15 : “ತೃಪ್ತಿಯಾಗಿ ತಿಂದನು ಯಕೋಬನು, ಕೊಬ್ಬಿಹೋದನು ಆ ಯೆಶೂರನು; ತೊರೆದುಬಿಟ್ಟನು ತನ್ನ ಪೊರೆಬಂಡೆಯನು ಮರೆತುಬಿಟ್ಟನು ತನ್ನ ಸೃಷ್ಟಿಕರ್ತನನು.
16 : ರೇಗಿಸಿದರಾತನನು ಅನ್ಯದೇವರುಗಳನು ಪೂಜಿಸುತ ಸಿಟ್ಟಿಗೇರಿಸಿದರು ನಿಷಿದ್ಧಾಚಾರಗಳನು ನಡೆಸುತ
17 : ಬಲಿಯನರ್ಪಿಸಿದರು ನೂತನಾ ದೇವತೆಗಳಿಗೆ, ದೇವರಲ್ಲದಾ ಅಸುರರಿಗೆ, ಪಿತೃಗಳು ಭಜಿಸದಾ, ತಮಗೇ ತಿಳಿಯದಾ ಹೊಸ ದೇವತೆಗಳಿಗೆ.
18 : ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು ಸ್ಮರಿಸಲಿಲ್ಲ ನೀವು ಹೆತ್ತತಾಯಂತಿದ್ದಾ ದೇವರನು.
19 : ಇದ ಕಂಡು ಸರ್ವೇಶ್ವರ ಬೇಸರಗೊಂಡ ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ.
20 : ಎಂದೇ ಇಂತೆಂದುಕೊಂಡನು: ಇವರಿಗೆ ವಿಮುಖನಾಗುವೆನು, ಇವರಿಗೊದಗಲಿರುವ ಗತಿಯನು ನೋಡುವೆನು. ಸತ್ಯವರಿತೂ ಅನುಸರಿಸದೆ ಹೋದರು ಈ ವಿದ್ರೋಹ ಮಕ್ಕಳಂತವರು.
21 : ‘ರೇಗಿಸಿದರೆನ್ನನು ದೇವರಲ್ಲದವುಗಳ ಮೂಲಕ, ಸಿಟ್ಟೇರಿಸಿದರು ಅಚೇತ ವಿಗ್ರಹಗಳ ಮೂಲಕ. ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ, ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದಾ ಜನರ ಮುಖಾಂತರ.
22 : ‘ಉರಿದೇಳುತ್ತಿದೆ ಕೆಳಲೋಕದ ತನಕ ಎನ್ನ ಕೋಪಾಗ್ನಿ ದಹಿಸಿಬಿಡುವುದದು ಭೂಮಿಯನು ಬೆಳೆಸಹಿತವಾಗಿ ಭಸ್ಮಮಾಡುವುದದು ಬೆಟ್ಟಗಳನು ಬುಡಸಮೇತವಾಗಿ.
23 : ‘ಉಪದ್ರವಗಳನು ಬರಮಾಡುವೆನು ಒಂದರ ಮೇಲೊಂದಾಗಿ ಬಿಲ್ಲುಬಾಣಗಳನು ಪ್ರಯೋಗಿಸುವೆನು ಅವರಿಗೆ ವಿರುದ್ದವಾಗಿ.
24 : ಕ್ಷಯಿಸಿಹೋಗುವರವರು ಕ್ಷಾಮಡಾಮರದಿಂದ ಸಾಯುವರು ಶಾಪದಿಂದ, ಅಂಟುರೋಗಗಳಿಂದ, ನಾ ಕಳುಹಿಸುವ ಕಾಡುಮೃಗ, ವಿಷಸರ್ಪಗಳಿಂದ.
25 : ಹೊರಗೆ ಕತ್ತಿ, ಒಳಗೆ ಭಯಭೀತಿ ಇವರಲ್ಲಿರುವುವು. ಯುವಕ ಯುವತಿಯರು, ಮಕ್ಕಳು ಮುದುಕರು ಕತ್ತಿಕಠಾರಿಗಳಿಗೆ ತುತ್ತಾಗುವರು ಇವರೆಲ್ಲರು.
26 : ನಾಶ ಮಾಡುತ್ತಿದ್ದೆ ನಾನವರನು ಸಂಪೂರ್ಣವಾಗಿ ಅವರಿಲ್ಲದಂತೆ ಮಡುತ್ತಿದ್ದೆ ಯಾರೊಬ್ಬರ ನೆನಪಿನಲಿ.
27 : ಆದರೆ ತಪ್ಪು ತಿಳಿಯುತ್ತಿದ್ದರು ಅವರ ವಿರೋಧಿಗಳು: ‘ಇದಾಯಿತು ನಮ್ಮ ಶಕ್ತಿಯಿಂದ, ಸರ್ವೇಶ್ವರನಿಂದಲ್ಲ’ವೆಂದುಕೊಂಡು ಈ ಕಾರಣ ಹಿಂತೆಗೆದುಕೊಂಡೆನು ನನ್ನ ನಿಗದಿನಿರ್ಣಯವನು.
28 : “ಆಲೋಚನೆಯಿಲ್ಲದ ಜನರಿವರು ಸ್ವಲ್ಪವಾದರೂ ವಿವೇಕವಿಲ್ಲದವರು.
29 : ಜ್ಞಾನವಿದ್ದಿದ್ದರೆ ಗ್ರಹಿಸುತ್ತಿದ್ದರು ಈ ಸಂಗತಿಗಳನು ತಿಳಿಯುತ್ತಿದ್ದರು, ಅಂತ್ಯದೊಳು ತಮಗಾಗುವ ದುರವಸ್ಥೆಯನು.
30 : ಒಬ್ಬನಿಂದ ಸಾವಿರ ಮಂದಿ ಸೋತುಹೋದುದು, ಒಬ್ಬರಿಗಂಜಿ ಹತ್ತುಸಾವಿರ ಓಡಿಹೋದುದು, ಅವರ ಪೊರೆಬಂಡೆಯಾತ ಅವರನು ವೈರಿಗೊಪ್ಪಿಸಿದ್ದರಿಂದಲ್ಲವೆ? ಅವರ ಸರ್ವೇಶ್ವರನು ಅವರನು ಕೈಬಿಟ್ಟುದರಿಂದಲ್ಲವೆ?
31 : ‘ನಮ್ಮಾಶ್ರಯ ದುರ್ಗ ಅವರ ಆಶ್ರಯದುರ್ಗದಂತಲ್ಲ’ ಎಂದು ಅವರ ಶತ್ರುಗಳೇ ಒಪ್ಪಿಕೊಳ್ಳುತ್ತಾರಲ್ಲವೇ?
32 : ಅವರೋ ಸೊದೋಮ್ಯರೆಂಬ ದ್ರಾಕ್ಷಾಲತೆ ಅವರೋ ಗೊಮೋರ್ಯರೆಂಬ ತೋಟದಬೆಳೆ.
33 : ಅವುಗಳ ಹಣ್ಣಿನ ಗೊಂಚಲು ವಿಷ ಅವುಗಳ ರಸ ಮರಣಕರ ಸರ್ಪವಿಷ.
34 : “ಇಸ್ರಯೇಲನನು ಇಟ್ಟಿದ್ದೇನೆ ಮುದ್ರೆಹಾಕಿ ಉಗ್ರಾಣದೊಳು ಇಟ್ಟಿದ್ದೇನೆ ಭದ್ರವಾಗಿ.
35 : ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸವಿೂಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ದವಾದ ದುರ್ಗತಿಕಾಲ!
36 : ಸ್ವತಂತ್ರರು, ಪರತಂತ್ರರು ನಿರಾಶ್ರಯರಾದಾಗ ಅವರೆಲ್ಲರು ನಿಶ್ಯೇಷರಾದವರು ಎಂದು ತಿಳಿದುಬಂದಾಗ ದೊರಕಿಸುವನು ಸರ್ವೇಶ್ವರನು ನ್ಯಾಯವನು ತನ್ನ ಪ್ರಜೆಗೆ ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ.
37 : ಆಗ ನುಡಿವನು ಸ್ವಾಮಿ ಸರ್ವೇಶ್ವರ ಇಂತೆಂದು: ಎಲ್ಲಿಗೆಹೋದರು ಅವರು ಪೂಜಿಸುತ್ತಿದ್ದ ದೇವರುಗಳು? ಎಲ್ಲಿರುವನು ಅವರು ಆಶ್ರಯಿಸಿಕೊಂಡಿದ್ದ ದುರ್ಗವಾದವನು
38 : ಅವರು ಬಲಿಕೊಟ್ಟ ಕೊಬ್ಬು ಮಾಂಸವನು ತಿಂದವರೆಲ್ಲಿ? ಸಮರ್ಪಿಸಿದ ಪಾನಗಳನು ಕುಡಿದ ದೇವತೆಗಳೆಲ್ಲಿ? ಅವರೇ ನಿಮಗೆ ನೆರವಾಗಲಿ, ನಿಮ್ಮನೀಗ ಕಾಯಲಿ!
39 : “ಇರುವಾತನು ನಾನೇ, ನಾನೊಬ್ಬನೇ ಬದುಕಿಸುವವನು, ಕೊಲ್ಲುವವನು ನಾನೇ, ಗಾಯಗೊಳಿಸುವವನು, ವಾಸಿಮಾಡುವವನು ನಾನೇ. ಇಂದಾದರು ತಿಳಿಯಿರಿ: ನನ್ನ ವಿನಾ ದೇವರಿಲ್ಲ ನನ್ನ ಕೈಯಿಂದ ತಪ್ಪಿಸಬಲ್ಲ ಶಕ್ತನಾರೂ ಇಲ್ಲ.
40 : ಆಕಾಶದತ್ತ ಕೈಯೆತ್ತಿ ಪ್ರಮಾಣಮಾಡುವೆ, ಚಿರಂಜೀವಿಯಾದೆನ್ನ ಮೇಲೆ ಆಣೆಯಿಟ್ಟು ಹೇಳುವೆ:
41 : ಥಳಥಳಿಸುವ ಕತ್ತಿಯನು ಹದಮಾಡಿ ನ್ಯಾಯಸ್ಥಾಪಿಸುವೆನು ಮುನ್ನುಗ್ಗಿ. ಮುಯ್ಯಿ ತೀರಿಸುವೆನು ನನ್ನ ಶತ್ರುಗಳಿಗೆ ಪ್ರತಿದಂಡಿಸುವೆನು ನನ್ನ ದ್ವೇಷಿಸಿದವಗೆ.
42 : ಮತ್ತವಾಗುವುವು ನನ್ನ ಬಾಣಗಳು ರಕ್ತಕುಡಿದು; ನನ್ನ ಕತ್ತಿಯು ತಿನ್ನುವುದು ಸತ್ತವರ, ಖೈದಿಗಳ ರಕ್ತಮಾಂಸವನು; ಚೆಂಡಾಡುವುವು ಶತ್ರುವೀರರ ತಲೆಬುರುಡೆಗಳು.
43 : “ಜನಾಂಗಗಳೇ ಕೊಂಡಾಡಿರಿ ದೇವಜನರೊಡನೆ ! ತನ್ನ ಭಕ್ತಾದಿಗಳ ರಕ್ತಚೆಲ್ಲಿದಾ ಶತ್ರುಗಳಿಗೆ ದಂಡಿಸಿ ಮುಯ್ಯಿತೀರಿಸುವವನು ಸರ್ವೇಶ್ವರನೇ. ತನ್ನ ಜನರಾ ನಾಡಿಗೆ ದೋಷಪರಿಹಾರಮಾಡುವವನು ಆತನೇ”.
44 : ಜನರಿಗೆ ಕೇಳಿಸುವಂತೆ ಹೇಳಿದರು ಈ ಗೀತವಚನಗಳನು ಮೋಶೆಯು ಮತ್ತು ನೂನನ ಮಗನಾದ ಯೆಹೋಶುವನು.
45 : ಮೋಶೆ ಈ ಮಾತುಗಳನ್ನೆಲ್ಲ ಇಸ್ರಯೇಲರಿಗೆ ಹೇಳಿ ಮುಗಿಸಿದನಂತರ ಅವರಿಗೆ,
46 : “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಿರಿ; ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.
47 : ಇದು ನಿರರ್ಥಕವೆಂದು ಭಾವಿಸಬೇಡಿ; ಇದರಿಂದ ನೀವು ಬಾಳುವಿರಿ; ನೀವು ಜೋರ್ಡನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ಇದನ್ನು ಅನುಸರಿಸುವುದರಿಂದಲೇ ಬಹುಕಾಲ ಇರುವಿರಿ,” ಎಂದು ಹೇಳಿದನು.
48 : ಆ ದಿನದಲ್ಲೇ ಸರ್ವೇಶ್ವರ ಮೋಶೆಗೆ, “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ,
49 : ಮೋವಾಬ್ಯರ ದೇಶದಲ್ಲಿ ಜೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ ನಾನು ಇಸ್ರಯೇಲರಿಗೆ ಸ್ವದೇಶವಾಗಲೆಂದು ಕೊಡುವ ಕಾನಾನ್ ನಾಡನ್ನು ನೋಡು.
50 : ಅನಂತರ, ನಿನ್ನ ಅಣ್ಣನಾದ ಆರೋನನು ಹೇಗೆ ಹೋರೆಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳಲ್ಲಿಗೆ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪಿತೃಗಳಲ್ಲಿಗೆ ಸೇರಬೇಕು.
51 : ನೀವಿಬ್ಬರೂ ಚಿನ್ ಮರುಭೂಮಿಯಲ್ಲಿನ ಮೆರೀಬಾ ಕಾದೇಶಿನಲ್ಲಿ, ನೀರು ಹೊರಟು ಬಂದ ಸ್ಥಳದ ಬಳಿಯಲ್ಲಿ, ಇಸ್ರಯೇಲರ ಮಧ್ಯೆ ನನಗೆ ವಿರೋಧವಾಗಿ ದ್ರೋಹಮಾಡಿದಿರಿ; ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆ ಹೋದಿರಿ. ಆದುದರಿಂದಲೇ ಹೀಗೆ ಆಗಬೇಕು.
52 : ನಾನು ಇಸ್ರಯೇಲರಿಗೆ ಕೊಡುವ ನಾಡನ್ನು ನೀನು ದೂರದಿಂದ ನೋಡಬಹುದೇ ಹೊರತು, ಅದರಲ್ಲಿ ಪ್ರವೇಶಿಸಕೂಡದು,” ಎಂದು ಆಜ್ಞಾಪಿಸಿದರು.

Holydivine