Deuteronomy - Chapter 30
Holy Bible

1 : “ನಾನು ನಿಮ್ಮ ಮುಂದೆ ಇಟ್ಟಿರುವ ಆಶೀರ್ವಾದ ಹಾಗು ಶಾಪ ನಿಮ್ಮ ಅನುಭವಕ್ಕೆ ಬರುವುವು; ಆಗ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಚದರಿಸಿರುವ ದೇಶಗಳಲ್ಲಿ ನೀವು ಇವುಗಳನ್ನು ನೆನಪಿಗೆ ತಂದುಕೊಳ್ಳಬೇಕು.
2 : ನಿಮ್ಮ ಮಕ್ಕಳು ಸಹಿತವಾಗಿ ನಿಮ್ಮ ದೇವರಾದ ಸರ್ವೇಶ್ವರನ ಆಶ್ರಯಕ್ಕೆ ಮರಳಿ ಬಂದು ನಾನು ಈಗ ನಿಮಗೆ ಬೋಧಿಸುವ ಅವರ ಮಾತುಗಳಿಗೆ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ವಿಧೇಯರಾಗಬೇಕು;
3 : ಆಗ, ನಿಮ್ಮ ದೇವರಾದ ಸರ್ವೇಶ್ವರ ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ, ನಿಮ್ಮನ್ನು ಕನಿಕರಿಸಿ, ನಿಮ್ಮನ್ನು ಚದರಿಸಿದ ಎಲ್ಲ ದೇಶಗಳಿಂದ ಮತ್ತೆ ಕೂಡಿಸುವರು.
4 : ನಿಮ್ಮಲ್ಲಿ ಯಾರಾದರು ಭೂಲೋಕದ ಕಟ್ಟಕಡೆಯವರೆಗೆ ಒಯ್ಯಲ್ಪಟ್ಟಿದ್ದರೂ ಅಲ್ಲಿಂದ ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ಕರೆದುತರುವರು
5 : ನಿಮ್ಮ ಪಿತೃಗಳಿಗೆ ಸ್ವಂತವಾಗಿದ್ದ ನಾಡಿನಲ್ಲಿ ಸೇರಿಸುವರು. ಅದು ನಿಮಗೂ ಸ್ವದೇಶವಾಗುವಂತೆ ಮಾಡಿ ನಿಮಗೆ ಒಳಿತನ್ನುಂಟುಮಾಡುವರು; ಪಿತೃಗಳಿಗಿಂತಲೂ ಅಧಿಕವಾಗಿ ನಿಮ್ಮನ್ನು ಹೆಚ್ಚಿಸುವರು.
6 : ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮತ್ತು ನಿಮ್ಮ ಸಂತತಿಯವರ ಅಂತರಂಗಕ್ಕೇ ಸುನ್ನತಿ ಮಾಡುವರು. ಆಗ ನೀವು ಅವರನ್ನು ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಪ್ರೀತಿಸಿ ಬದುಕಿಬಾಳುವಿರಿ.
7 : ನಿಮ್ಮ ದೇವರಾದ ಸರ್ವೇಶ್ವರ ಆ ಶಾಪಗಳನ್ನೆಲ್ಲಾ ನಿಮ್ಮನ್ನು ದ್ವೇಷಿಸಿ, ಹಿಂಸಿಸಿದ ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವರು.
8 : ನೀವಾದರೋ ಸರ್ವೇಶ್ವರನ ಮಾತಿಗೆ ಪುನಃ ವಿಧೇಯರಾಗಿ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞೆಗಳಂತೆ ನಡೆಯುವಿರಿ;
9 : ಮತ್ತು ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಂತಾನ, ಪಶು ಹಾಗು ವ್ಯವಸಾಯಗಳನ್ನು ಹೆಚ್ಚಿಸಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಹೆಚ್ಚಿಸಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಪಡಿಸಿ, ನಿಮಗೆ ಒಳಿತನ್ನುಂಟುಮಾಡುವರು.
10 : ನೀವು ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ವಿಧೇಯರಾಗಿ ಈ ಧರ್ಮಶಾಸ್ತ್ರದ ಆಜ್ಞಾವಿಧಿಗಳನ್ನು ಅನುಸರಿಸಿ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಅವರ ಕಡೆಗೆ ತಿರುಗಿಕೊಳ್ಳುವಿರಿ. ಅವರು ನಿಮ್ಮ ಪಿತೃಗಳ ವಿಷಯದಲ್ಲಿ ಸಂತೋಷಪಟ್ಟ ಹಾಗೆಯೇ ನಿಮ್ಮ ವಿಷಯದಲ್ಲೂ ಮತ್ತೆ ಸಂತೋಷಪಟ್ಟು ನಿಮಗೆ ಒಳಿತನ್ನುಂಟುಮಾಡುವರು.
11 : “ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶ ನಿಮಗೆ ಗ್ರಹಿಸುವುದಕ್ಕೆ ಕಷ್ಟ ಆದುದಲ್ಲ, ಸಾಧಿಸುವುದಕ್ಕೆ ಅಸಾಧ್ಯವಾದದ್ದೂ ಅಲ್ಲ.
12 : ಇದು ಮೇಲಣ ಲೋಕದಲ್ಲಿರುವ ಮಾತಲ್ಲ. ‘ನಮಗಾಗಿ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು’ ಎಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ.
13 : ಇದು ಸಮುದ್ರದ ಆಚೆ ಇರುವ ಮಾತಲ್ಲ; ‘ನಮಗಾಗಿ ಸಮುದ್ರವನ್ನು ದಾಟಿ ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು’ ಎಂದುಕೊಳ್ಳುವುದಕ್ಕೆ ಆಸ್ಪದವೇನೂ ಇಲ್ಲ.
14 : ಅನುಸರಿಸುವುದಕ್ಕೆ ಸಾಧ್ಯವಾಗುವಂತೆ ಈ ವಾಕ್ಯ ನಿಮಗೆ ಸಮೀಪದಲ್ಲಿ ಇದೆ; ಇದು ನಿಮ್ಮ ಬಾಯಲ್ಲೇ ಇದೆ; ಹೃದಯದಲ್ಲೇ ಇದೆ.
15 : ಎರಡು ಹಾದಿಗಳು “ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ.
16 : ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು.
17 : ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ,
18 : ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ.
19 : ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ;
20 : ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿರಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ.”

Holydivine