Deuteronomy - Chapter 29
Holy Bible

1 : ಸರ್ವೇಶ್ವರಸ್ವಾಮಿ ಹೋರೇಬಿನಲ್ಲಿ ಇಸ್ರಯೇಲರೊಡನೆ ಮಾಡಿದ ಒಡಂಬಡಿಕೆ ಅಲ್ಲದೆ ಅವರು ಮೋವಾಬ್‍ನಾಡಿನಲ್ಲಿ ಅವರೊಡನೆ ಮಾಡಬೇಕೆಂದು ಮೋಶೆಗೆ ಆಜ್ಞಾಪಿಸಿದ ಒಡಂಬಡಿಕೆಯ ವಚನಗಳು ಇವು:
2 : ಮೋಶೆ ಇಸ್ರಯೇಲರೆಲ್ಲರನ್ನು ಕರೆದು ಹೀಗೆಂದನು, “ಸರ್ವೇಶ್ವರ ಈಜಿಪ್ಟ್ ದೇಶದಲ್ಲಿ ನಿಮ್ಮ ಕಣ್ಣ ಮುಂದೆ ಫರೋಹನಿಗೂ ಅವನ ಪರಿವಾರದವರಿಗೂ
3 : ಅವನ ಇಡೀ ನಾಡಿಗೂ ಮಾಡಿದವುಗಳನ್ನೆಲ್ಲಾ ನೀವು ನೋಡಿದ್ದೀರಿ. ಮಹಾಪರಿಶೋಧನೆ, ಪವಾಡ, ಮಹತ್ಕಾರ್ಯ ಇವುಗಳನ್ನು ಕಣ್ಣಾರೆ ನೋಡಿದ್ದೀರಿ.
4 : ಆದರೂ ಗ್ರಹಿಸುವ ಬುದ್ಧಿ, ನೋಡುವ ಕಣ್ಣು, ಕೇಳುವ ಕಿವಿ ಇವುಗಳನ್ನು ಸರ್ವೇಶ್ವರ ಇಂದಿನವರೆಗೂ ಅಯ್ಯೋ ನಿಮಗೆ ಅನುಗ್ರಹಿಸಲಿಲ್ಲ!
5 : ನಲವತ್ತು ವರ್ಷ ನಾನು ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದಿದ್ದೇನೆ. ನಿಮ್ಮ ಮೈಮೇಲಿದ್ದ ಉಡುಪಾಗಲಿ, ಕಾಲಲ್ಲಿದ್ದ ಕೆರವಾಗಲಿ ಸವೆದು ಹೋಗಲಿಲ್ಲ.
6 : ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸವನ್ನಾಗಲಿ ಯಾವ ಮದ್ಯವನ್ನಾಗಲಿ ಕುಡಿಯಲೇ ಇಲ್ಲ. ಸರ್ವೇಶ್ವರನೇ ನಿಮ್ಮ ದೇವರು ಎಂಬುದು ನಿಮಗೆ ತಿಳಿಯಬೇಕೆಂಬ ಉದ್ದೇಶದಿಂದ ಹೀಗಾಯಿತು.
7 : ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸ ಸೀಹೋನನೂ ಬಾಷಾನಿನ ಅರಸ ಓಗನೂ ನಮ್ಮೊಡನೆ ಯುದ್ಧಮಾಡುವುದಕ್ಕೆ ಬಂದರು.
8 : ನಾವು ಅವರನ್ನು ಸೋಲಿಸಿ ಅವರ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಕುಲದವರಲ್ಲಿ ಅರ್ಧಜನರಿಗೂ ಸೊತ್ತಾಗಿ ಕೊಟ್ಟೆವಷ್ಟೆ.
9 : ಈ ಸಂಗತಿಗಳನ್ನೆಲ್ಲಾ ನೀವು ಜ್ಞಾಪಕಮಾಡಿಕೊಂಡು ಈ ಒಡಂಬಡಿಕೆಯ ವಾಕ್ಯಗಳನ್ನು ಅನುಸರಿಸಿ ನಡೆಯಬೇಕು; ಆಗ ನೀವು ನಡೆಸುವ ಕೆಲಸಕಾರ್ಯಗಳಲ್ಲಿ ಜಾಣರಾಗಿ ಅಭಿವೃದ್ಧಿ ಹೊಂದುವಿರಿ.
10 : “ಇಸ್ರಯೇಲ ಜನರೇ, ನಿಮ್ಮ ಮುಖ್ಯಸ್ಥರು,
11 : ಗೋತ್ರದವರು, ಹಿರಿಯರು, ಅಧಿಕಾರಿಗಳು, ಹೆಂಗಸರು, ಮಕ್ಕಳು ನಿಮ್ಮ ಪಾಳೆಯದಲ್ಲಿ ಇರುವ ಅನ್ಯರಾದ ಕಟ್ಟಿಗೆಯವರು, ನೀರಿನವರು ಮುಂತಾದ ಆಳುಗಳು,
12 : ನೀವೆಲ್ಲರೂ ಈ ದಿನ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತಿರುವುದಕ್ಕೆ ಕಾರಣವೇನೆಂದರೆ -
13 : ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಹೇಳಿದಂತೆ ಹಾಗು ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ವಾಗ್ದಾನಮಾಡಿದಂತೆ ನಿಮ್ಮನ್ನು ತಮಗೆ ಸ್ವಕೀಯಜನರನ್ನಾಗಿಯೂ ತಮ್ಮನ್ನು ನಿಮಗೆ ದೇವರನ್ನಾಗಿಯೂ ಸ್ಥಾಪಿಸಿಕೊಳ್ಳುವುದಕ್ಕಾಗಿ ಈಗ ನಿಮ್ಮೊಡನೆ ಪ್ರಮಾಣ ಪೂರ್ವಕವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದಿದ್ದಾರೆ; ನೀವು ಅದಕ್ಕೆ ಸೇರಲು ಕೂಡಿಬಂದಿದ್ದೀರಿ.
14 : “ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಿದ್ಧರಾಗಿ ನಿಂತಿರುವ ನಮ್ಮೊಡನೆ ಮಾತ್ರವಲ್ಲದೆ,
15 : ಮುಂದೆ ಹುಟ್ಟುವ ನಮ್ಮ ಸಂತತಿಯವರೊಡನೆಯೂ ಪ್ರಮಾಣಪೂರ್ವಕವಾದ ಈ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದಿದ್ದಾರೆ.
16 : ನಾವು ಈಜಿಪ್ಟ್ ದೇಶದಲ್ಲಿ ವಾಸಮಾಡಿದ್ದು, ಅನೇಕ ಜನಾಂಗಗಳ ಪ್ರದೇಶಗಳನ್ನು ದಾಟಿ ಬಂದದ್ದು ನಿಮಗೆ ತಿಳಿದೇ ಇದೆ.
17 : ಆ ಜನಾಂಗಗಳಲ್ಲಿ ನಡೆಯುವ ಹೇಯಾಚಾರಗಳನ್ನೂ ಅವರು ಮರ, ಕಲ್ಲು, ಬೆಳ್ಳಿ, ಬಂಗಾರಗಳಿಂದ ಮಾಡಿಕೊಂಡು ಪೂಜಿಸುವ ಬೊಂಬೆಗಳನ್ನೂ ನೀವು ಖಂಡಿತವಾಗಿ ನೋಡಿದ್ದೀರಿ.
18 : “ಎಚ್ಚರಿಕೆಯಿಂದಿರಿ ! ನಮ್ಮ ದೇವರಾದ ಸರ್ವೇಶ್ವರನನ್ನು ಬಿಟ್ಟು, ಆ ಜನಾಂಗಗಳ ದೇವರುಗಳನ್ನು ಅವಲಂಬಿಸುವ ಯಾವ ಕುಲವಾಗಲಿ, ಕುಟುಂಬವಾಗಲಿ, ಸ್ತ್ರೀಪುರುಷರಾಗಲಿ ನಿಮ್ಮಲ್ಲಿ ಇರಲೇಬಾರದು; ನಿಮ್ಮಲ್ಲಿ ಯಾವ ವಿಫಲತೆಯ ಬೇರೂ ಇರಬಾರದು.
19 : ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರು ತನ್ನೊಳಗೆ, ‘ನಾನು ಹಟಹಿಡಿದು ಅವಿಧೇಯನಾದರೂ ನನಗೆ ಕ್ಷೇಮವಾಗಿಯೇ ಇರುವುದು’ ಎಂದುಕೊಂಡು ಹಿಗ್ಗಬಾರದು. ಹಾಗೆ ಮಾಡುವವನು ದೋಷಿಗಳಿಗೂ ನಿರ್ದೋಷಿಗಳಿಗೂ ನಾಶವನ್ನುಂಟು ಮಾಡುವನು.
20 : ಸರ್ವೇಶ್ವರ ಅಂಥವನನ್ನು ಎಂದಿಗೂ ಕ್ಷಮಿಸರು; ಬದಲಿಗೆ ಅವನ ಮೇಲೆ ಸಿಟ್ಟುಗೊಂಡು, ತಮ್ಮ ಗೌರವವನ್ನು ಕಾಪಾಡಿಕೊಳ್ಳುವವರಾಗಿ, ಈ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪೋಕ್ತಿಗಳಿಗೂ ಅವನನ್ನು ಗುರಿಪಡಿಸುವರು. ಅವನ ಹೆಸರನ್ನು ಭೂಮಿಯ ಮೇಲೆ ಇಲ್ಲದಂತೆ ಮಾಡುವರು.
21 : ಈ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಬಂಧನೆಯನ್ನು ವಿೂರುವವರಿಗೆ ಉಂಟಾಗುವ ಶಾಪಗಳು ಅವನಲ್ಲಿ ನೆರವೇರಲೆಂದು ಸರ್ವೇಶ್ವರ ಅವನನ್ನು ಇಸ್ರಯೇಲರ ಎಲ್ಲ ಕುಲಗಳಿಂದ ಪ್ರತ್ಯೇಕಿಸಿ, ದಂಡಿಸುವರು.
22 : “ಮುಂದೆ ಹುಟ್ಟುವ ನಿಮ್ಮ ಸಂತತಿಯವರೂ ದೇಶಾಂತರಗಳಿಂದ ಬರುವ ಅನ್ಯರೂ ನಿಮ್ಮ ನಾಡಿಗೆ ಸರ್ವೇಶ್ವರ ಉಂಟುಮಾಡಿದ ರೋಗೋಪದ್ರವಗಳನ್ನು ಕಂಡು ಆಶ್ಚರ್ಯ ಪಡುವರು.
23 : ಎಲ್ಲ ಜನಾಂಗಗಳವರೂ ನಿಮ್ಮ ಆ ನಾಡು ಯಾವ ವ್ಯವಸಾಯವೂ ಇಲ್ಲದೆ, ಹುಲ್ಲಾದರೂ ಬೆಳೆಯದೆ, ಹಾಳುಬಿದ್ದಿರುವುದನ್ನು ನೋಡುವರು. ಸರ್ವೇಶ್ವರ ಮಹಾಕೋಪದಿಂದ ಕೆಡವಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯೀಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟುಹೋಗಿರುವುದನ್ನೂ ಎಲ್ಲ ಕಡೆಗಳಲ್ಲೂ ಗಂಧಕ ಉಪ್ಪುಗಳಿಂದ ತುಂಬಿರುವುದನ್ನೂ ನೋಡುವರು.
24 : ಸರ್ವೇಶ್ವರ ಈ ನಾಡಿಗೆ ಹೀಗೆ ಮಾಡಿದ್ದೇಕೆ? ಇಂಥ ಕೋಪಾಗ್ನಿಗೆ ಕಾರಣ ಏನಿರಬಹುದು?’ ಎಂದು ವಿಚಾರಿಸುವರು.
25 : ಅದಕ್ಕೆ ಜನರು, ‘ಈ ನಾಡಿನವರ ಪಿತೃಗಳ ದೇವರಾದ ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಬಿಡಿಸಿ ಅವರೊಡನೆ ಮಾಡಿದ ಒಡಂಬಡಿಕೆಯನ್ನು ಅವರು ಉಲ್ಲಂಘಿಸಿದರು.
26 : ತಮಗೆ ನೇಮಕವಾಗದಿದ್ದ ಹಾಗು ಗೊತ್ತಿಲ್ಲದಿದ್ದ ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದರು.
27 : ಆದುದರಿಂದ ಸರ್ವೇಶ್ವರ ಅವರ ನಾಡಿನ ಮೇಲೆ ಕೋಪಗೊಂಡು ಈ ಗ್ರಂಥದಲ್ಲಿ ಬರೆದಿರುವ ಶಾಪಗಳನ್ನು ಅವರ ಮೇಲೆ ಬರಮಾಡಿದ್ದಾರೆ;
28 : ಮಹಾ ಕೋಪೋದ್ರೇಕದಿಂದ ಆ ಜನರನ್ನು ನಾಡಿನಿಂದ ಕಿತ್ತುಹಾಕಿ ಈಗ ಅನುಭವಕ್ಕೆ ಬಂದಿರುವಂತೆ ದೇಶಾಂತರ ಅಟ್ಟಿಬಿಟ್ಟಿ ಇದ್ದಾರೆ’ ಎಂದು ಉತ್ತರಕೊಡುವರು.
29 : “ರಹಸ್ಯವಾದವುಗಳು ನಮ್ಮ ದೇವರಾದ ಸರ್ವೇಶ್ವರನಿಗೆ ಸೇರಿದವು. ಆದರೆ ಅವರಿಂದ ಪ್ರಕಟವಾದವುಗಳು ಸದಾ ನಮ್ಮ ಮತ್ತು ನಮ್ಮ ಸಂತತಿಯವರ ಪಾಲಾಗಿರುವುವು; ಆದುದರಿಂದ ನಾವು ಈ ಧರ್ಮಶಾಸ್ತ್ರನಿಯಮಗಳನ್ನು ಅನುಸರಿಸಿ ನಡೆಯಬೇಕಾದ ಹಂಗಿನಲ್ಲಿದ್ದೇವೆ.

Holydivine