Deuteronomy - Chapter 22
Holy Bible

1 : “ಸ್ವದೇಶದವನ ಎತ್ತಾಗಲಿ, ಕುರಿ ಆಗಲಿ ದಾರಿತಪ್ಪಿಹೋಗಿರುವುದನ್ನು ನೀವು ಕಂಡರೆ, ಕಾಣದವರಂತೆ ಅದನ್ನು ಬಿಟ್ಟು ಹೋಗಬಾರದು; ಅವನ ಬಳಿಗೆ ಅಟ್ಟಿಕೊಂಡು ಹೋಗಿ ಕೊಡಲೇಬೇಕು.
2 : ಅವನು ನಿಮಗೆ ದೂರ ಆಗಿದ್ದರೆ, ಇಲ್ಲವೆ ಅವನು ಯಾರು ಎಂದು ನಿಮಗೆ ತಿಳಿಯದೆಹೋದರೆ, ಆ ಪ್ರಾಣಿಯನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು; ಅವನು ಅದನ್ನು ಹುಡುಕುತ್ತಾ ಬಂದಾಗ, ನೀವು ಅದನ್ನು ಅವನಿಗೆ ಮರಳಿಕೊಡಬೇಕು.
3 : ಅವನ ಕತ್ತೆಯಾಗಲಿ, ಬಟ್ಟೆಯಾಗಲಿ, ಅವನು ಕಳೆದುಕೊಂಡ ಯಾವ ವಸ್ತುವೇ ಆಗಲಿ ನಿಮಗೆ ಸಿಕ್ಕಿದರೆ ಹಾಗೆಯೇ ಮಾಡಬೇಕು; ಕಾಣದವರಂತೆ ಇರಲೇಬಾರದು.
4 : “ಸ್ವದೇಶದವನ ಕತ್ತೆಯಾಗಲಿ, ಎತ್ತಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಕಾಣದವರಂತೆ ಹೋಗದೆ, ಅದನ್ನು ಎಬ್ಬಿಸಲು ಅವನಿಗೆ ಸಹಾಯಮಾಡಬೇಕು.
5 : “ಹೆಂಗಸರು ಗಂಡಸರಂತೆ, ಗಂಡಸರು ಹೆಂಗಸರಂತೆ ಬಟ್ಟೆ ಹಾಕಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯರು.
6 : “ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ನೆಲದ ಮೇಲಾಗಲಿ ಒಂದು ಹಕ್ಕಿಯ ಗೂಡನ್ನು ಕಂಡು ಅದರೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು ಅವುಗಳ ಮೇಲೆ ತಾಯಿ ಹೊದಗಿರುವುದನ್ನು ನೋಡಿದರೆ, ಮರಿಗಳನ್ನಾಗಲಿ ತಾಯಿಯನ್ನಾಗಲಿ ಹಿಡಿದುಕೊಳ್ಳಬಾರದು.
7 : ನೀವು ಹೀಗೆ ನಡೆದುಕೊಂಡರೆ, ನಿಮಗೆ ಶ್ರೇಯಸ್ಸುಂಟಾಗುವುದು, ಮತ್ತು ಬಹುಕಾಲ ಬಾಳುವಿರಿ.
8 : “ನೀವು ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ನಿಮ್ಮ ಮನೆಯ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಕೈಗೋಡೆಯನ್ನು ಕಟ್ಟಿಸಬೇಕು. ಇಲ್ಲದಿದ್ದರೆ ಒಬ್ಬನು ಆ ಮಾಳಿಗೆಯಿಂದ ಬಿದ್ದು, ಅವನ ಜೀವಹತ್ಯದೋಷ ನಿಮ್ಮ ಮನೆಯ ಮೇಲೆ ಬರುವುದು.
9 : “ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬಿತ್ತನೆ ಮಾಡಬಾರದು; ಹಾಗೆ ಮಾಡಿದರೆ ಆ ಬೆಳೆಗೂ ಮತ್ತು ದ್ರಾಕ್ಷಿಬೆಳೆಗೂ ಹೀಗೆ ಆ ತೋಟದ ಬೆಳೆಗೂ ಗತಿಕೇಡಾಗುವುದು.
10 : ಎತ್ತನ್ನೂ ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಬಾರದು.
11 : ನಾರು ಮತ್ತು ಉಣ್ಣೆ ಎರಡೂ ಕೂಡಿಸುವ ಬಟ್ಟೆಯನ್ನು ಹಾಕಿಕೊಳ್ಳಬಾರದು.
12 : “ನೀವು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕು.
13 : “ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ
14 : ಅವಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ‘ನಾನು ಇವಳನ್ನು ಮದುವೆಮಾಡಿಕೊಂಡೆ; ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು’ ಎಂದು ಹೇಳಿ
15 : ಅವಳ ಮೇಲೆ ಆಪಾದನೆ ತರಬಹುದು. ಅವಳ ತಾಯಿತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು ಎಂಬುದಕ್ಕೆ ಆಧಾರವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
16 : ತಂದೆ ಅವರಿಗೆ, ‘ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿ ಕೊಟ್ಟೆ; ಆಮೇಲೆ ಇವನು ಅವಳನ್ನು ದ್ವೇಷಿಸಿ
17 : ಪರಪುರುಷ ಸಂಪರ್ಕಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳನ್ನು ಅವಮಾನಪಡಿಸುತ್ತಾನೆ. ಇಗೋ, ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುದಕ್ಕೆ ಇದೇ ಪ್ರಮಾಣ’ ಎಂದು ಹೇಳಿ ಅವಳ ಹಚ್ಚಡವನ್ನು ಹಿರಿಯರ ಮುಂದೆ ಇಡಬೇಕು.
18 : ಇಸ್ರಯೇಲಳಾದ ಮಹಿಳೆಯ ಬಗ್ಗೆ ಆ ವ್ಯಕ್ತಿ ನಿರಾಧಾರವಾದ ತಪ್ಪು ಹೊರಿಸಿದ್ದರಿಂದ
19 : ಆ ಊರಿನ ಹಿರಿಯರು ಅವನನ್ನು ಹಿಡಿಸಿ, ಹೊಡಿಸಿ, ನೂರು ಬೆಳ್ಳಿ ನಾಣ್ಯದ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು; ಮತ್ತು ಅವನು ಆ ಮಹಿಳೆಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರ ಇರುವುದಿಲ್ಲ.
20 : “ಆದರೆ ಆ ಮಹಿಳೆ ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳೇ ಎಂದು ತಿಳಿದು ಬಂದರೆ
21 : ಅವಳು ತಂದೆಯ ಮನೆಯಲ್ಲೇ ಸೂಳೆತನಮಾಡಿ ಇಸ್ರಯೇಲರಲ್ಲಿ ದುರಾಚಾರವನ್ನು ನಡೆಸಿದ್ದರಿಂದ ಅವಳನ್ನು ತಂದೆಯ ಮನೆಯ ಬಾಗಿಲಿಗೆ ಬರಮಾಡಬೇಕು; ಊರಿನವರೆಲ್ಲರು ಕಲ್ಲೆಸೆದು ಅವಳನ್ನು ಕೊಲ್ಲಬೇಕು. ಹೀಗೆ ಇಂಥ ಕೇಡನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.
22 : “ಒಬ್ಬನು ಪರನ ಹೆಂಡತಿಯೊಡನೆ ವ್ಯಭಿಚಾರ ಮಾಡಿ ಸಿಕ್ಕಿಬಿದ್ದರೆ ಆ ಸ್ತ್ರೀಪುರುಷ ಇಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಇಂಥ ಕೇಡನ್ನು ಇಸ್ರಯೇಲರಿಂದ ತೆಗೆದು ಹಾಕಬೇಕು.
23 : “ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರು, ಊರೊಳಗೆ ಮರುಳುಗೊಳಿಸಿ, ಸಂಗಮಿಸಿದರೆ,
24 : ನೀವು ಅವರಿಬ್ಬರನ್ನೂ ಊರ ಬಾಗಿಲಿನ ಹೊರಕ್ಕೆ ತರಿಸಿ ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ ಊರಲ್ಲಿದ್ದು ಕೂಗಿಕೊಳ್ಳದೆ ಹೋದುದರಿಂದ ಆ ಮಹಿಳೆಗೂ ಮರಣಶಿಕ್ಷೆ ಆಗಬೇಕು. ಹೀಗೆ ನೀವು ಇಂಥ ಕೇಡನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.
25 : “ಆದರೆ ಆ ವ್ಯಕ್ತಿ ನಿಶ್ಚಿತಳಾದ ಆ ಮಹಿಳೆಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಆ ವ್ಯಕ್ತಿಗೆ ಮಾತ್ರ ಮರಣಶಿಕ್ಷೆ ಆಗಬೇಕು.
26 : ಆ ಮಹಿಳೆಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣಶಿಕ್ಷೆಗೆ ಪಾತ್ರ ಆದ ಅಪರಾಧವೇನೂ ಇಲ್ಲ. ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಹಾಗೆಯೇ ಇದು ಕೂಡ;
27 : ಆ ಮಹಿಳೆ ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಡಿಕೊಂಡಿದ್ದರೂ ತಪ್ಪಿಸುವವರು ಇರಲಿಲ್ಲ.
28 : “ಯಾರಿಗೂ ನಿಶ್ಚಯವಾಗದೆ ಇರುವ ಕನ್ಯೆಯೊಡನೆ ಒಬ್ಬನು ಬಲಾತ್ಕಾರ ಸಂಭೋಗ ಮಾಡಿ ಸಿಕ್ಕಿಬಿದ್ದರೆ
29 : ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ ಅವಳ ತಂದೆಗೆ ಐವತ್ತು ಬೆಳ್ಳಿ ನಾಣ್ಯ ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗ ಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
30 : “ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇಬಾರದು; ಅದು ತಂದೆಗೆ ಅಪಮಾನ ಪಡಿಸಿದ ಹಾಗಾಗುವುದು.

Holydivine