Judges - Chapter 8
Holy Bible

1 : ಅನಂತರ ಎಫ್ರಯಿಮ್ಯರು ಗಿದ್ಯೋನನಿಗೆ, “ನೀನು ಹೀಗೇಕೆ ಮಾಡಿದೆ? ಮಿದ್ಯಾನ್ಯರೊಡನೆ ಯುದ್ಧ ಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರ ವಾಗ್ವಾದ ಮಾಡಿದರು.
2 : ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸರಿಸಮಾನ ಆದದ್ದನ್ನು ನಾನೇನು ಮಾಡಿದೆ? ಅಭೀಯಿಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ ಎಫ್ರಯಿಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ?
3 : ದೇವರು ಮಿದ್ಯಾನ್ಯರ ನಾಯಕರಾದ ಓರೇಬ್ ಮತ್ತು ಜೇಬರನ್ನೇ ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರಲ್ಲವೆ; ಇದಕ್ಕೆ ಸರಿಸಮಾನವಾದದ್ದನ್ನು ನಾನೇನು ಮಾಡಿದ್ದೇನೆ?” ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರ ಸಿಟ್ಟಿಳಿಯಿತು.
4 : ಗಿದ್ಯೋನನೂ ಅವನ ಸಂಗಡ ಇದ್ದ ಮುನ್ನೂರು ಮಂದಿಯೂ ಬಹಳ ದಣಿದಿದ್ದರು. ಆದರೂ ಹಿಂದಟ್ಟುತ್ತಾ ಜೋರ್ಡನನ್ನು ದಾಟಿ ಸುಖೋತಿಗೆ ಬಂದರು.
5 : ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಸ್ವಲ್ಪ ರೊಟ್ಟಿ ಕೊಡಿ. ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಹಿಂದಟ್ಟುತ್ತಾ ಇದ್ದೇನೆ,” ಎಂದನು.
6 : ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಕೊಡುವುದಕ್ಕೆ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?”, ಎಂದು ತಿರಸ್ಕರಿಸಿದರು.
7 : ಆಗ ಗಿದ್ಯೋನನು ಅವರಿಗೆ, “ಒಳ್ಳೆಯದು, ಸರ್ವೇಶ್ವರ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಜಾಲಿ ಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸುವೆನು,” ಎಂದು ಹೇಳಿದನು.
8 : ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನ ಜನರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ತಾತ್ಸಾರಮಾಡಿದರು.
9 : ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
10 : ಜೆಬಹ ಮತ್ತು ಚಲ್ಮುನ್ನ ಎಂಬವರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಯೋಧರು ಹತರಾಗಿ ಉಳಿದವರು ಇಷ್ಟೇ ಮಂದಿ.
11 : ಗಿದ್ಯೋನನು ಕಾಡುಗೊಲ್ಲರ ಪ್ರದೇಶ ಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳಿದುಕೊಂಡಿದ್ದ ಆ ಪಾಳೆಯದ ಮೇಲೆ ದಾಳಿಮಾಡಿದನು.
12 : ಜೆಬಹನೂ ಚಲ್ಮುನ್ನನೂ ಓಡಿ ಹೋಗುವಾಗ ಅವರನ್ನು ಹಿಂದಟ್ಟಿ ಹಿಡಿದು ಅವರ ಸೈನ್ಯವನ್ನು ಚದರಿಸಿಬಿಟ್ಟನು.
13 : ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದನು.
14 : ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು ಆ ಊರಿನ ಮುಖಂಡರೂ ಹಿರಿಯರೂ ಯಾರಾರೆಂದು ವಿಚಾರಿಸಿ ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆಸಿಕೊಂಡನು.
15 : ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “‘ದಣಿದಿರುವ ನಿನ್ನ ಸೈನಿಕರಿಗಾಗಿ ನಾವು ರೊಟ್ಟಿ ಕೊಡುವುದಕ್ಕೆ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೈಕಟ್ಟಿ ಸ್ವಾಧೀನ ಮಾಡಿಕೊಂಡಿದ್ದೀಯೋ?,’ ಎಂದು ನನ್ನನ್ನು ನಿಂದಿಸಿದಿರಲ್ಲವೆ;
16 : ನೋಡಿ, ಅವರು ಇಲ್ಲಿರುತ್ತಾರೆ” ಎಂದು ಊರಿನ ಹಿರಿಯರನ್ನೂ ಮುಖಂಡರನ್ನೂ ಜಾಲಿಮುಳ್ಳು ಹಾಗು ಕಾರೆ ಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿಕಲಿಸಿದನು.
17 : ಮತ್ತು ಪೆನೂವೇಲಿನ ಗೋಪುರವನ್ನು ಕೆಡವಿ ಬಿಟ್ಟು ಆ ಊರಿನ ಜನರನ್ನು ಕೊಂದುಹಾಕಿದನು.
18 : ಬಳಿಕ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನ ಎಂಬವರನ್ನು, “ನೀವು ತಾಬೋರದಲ್ಲಿ ಕೊಂದು ಹಾಕಿದ ವ್ಯಕ್ತಿಗಳು ಹೇಗಿದ್ದರು?” ಎಂದು ಕೇಳಿದಾಗ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜ ಪುತ್ರರಂತಿದ್ದರು,” ಎಂದು ಉತ್ತರಕೊಟ್ಟರು.
19 : ಆಗ ಅವನು; “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಸರ್ವೇಶ್ವರನ ಆಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿ
20 : ತನ್ನ ಹಿರಿಯ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು,” ಎಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
21 : ಆಗ ಜೆಬಹನು ಹಾಗು ಚಲ್ಮುನ್ನನು ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮ ಮೇಲೆ ಬೀಳು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದೆ ಅಲ್ಲವೆ?” ಎನ್ನಲು ಅವನೆದ್ದು ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೊಂದುಹಾಕಿ ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
22 : ತರುವಾಯ ಇಸ್ರಯೇಲರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲವೆ? ನೀನೂ ನಿನ್ನ ಮಗನೂ ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು,” ಎಂದರು.
23 : ಅವನು ಅವರಿಗೆ, “ನಾನಾಗಲಿ, ನನ್ನ ಮಗನಾಗಲಿ ನಿಮ್ಮನ್ನು ಆಳುವುದಿಲ್ಲ; ಸರ್ವೇಶ್ವರನೇ ನಿಮ್ಮ ಅರಸ.
24 : ಆದರೆ ನಿಮ್ಮಲ್ಲಿ ನನ್ನದೊಂದು ಬಿನ್ನಹ: ಪ್ರತಿಯೊಬ್ಬನು ತಾನು ಕೊಳ್ಳೆಹೊಡೆದ ಮುರುವುಗಳನ್ನು ನನಗೆ ಕೊಡಲಿ,” ಎಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದುದರಿಂದ ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
25 : ಗಿದ್ಯೋನನ ಬಿನ್ನಹಕ್ಕೆ ಇಸ್ರಯೇಲರು, “ನಾವು ಸಂತೋಷದಿಂದ ಕೊಡುತ್ತೇವೆ,” ಎಂದು ಹೇಳಿ ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಮುರುವುಗಳನ್ನು ಇಟ್ಟರು.
26 : ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ ಇವುಗಳ ಹೊರತಾಗಿ ಅವನು ಇಸ್ರಯೇಲರಿಂದ ಕೇಳಿ ತೆಗೆದುಕೊಂಡ ಮುರುವುಗಳ ಬಂಗಾರವೇ 20 ಕಿಲೋಗ್ರಾಂ ತೂಕವಾಗಿತ್ತು.
27 : ಈ ಬಂಗಾರದಿಂದ ಗಿದ್ಯೋನನು ಒಂದು ‘ಏಫೋದ’ನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಅದನ್ನು ಪೂಜಿಸುತ್ತಿದ್ದುದರಿಂದ ಇಸ್ರಯೇಲರೆಲ್ಲರೂ ದೇವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಒಂದು ಉರುಲು ಆಯಿತು.
28 : ಮಿದ್ಯಾನ್ಯರು ಇಸ್ರಯೇಲರ ಮುಂದೆ ಬಹಳವಾಗಿ ತಗ್ಗಿಹೋದರು. ಅವರು ಮರಳಿ ತಲೆಯೆತ್ತಲಾಗಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಾಲ್ವತ್ತು ವರ್ಷಗಳ ಕಾಲಪರ್ಯಂತ ದೇಶದಲ್ಲಿ ಶಾಂತಿಸಮಾಧಾನವಿತ್ತು.
29 : ಯೋವಾಷನ ಮಗ ‘ಯೆರುಬ್ಬಾಳ’ನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು.
30 : ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರು ಇದ್ದರು. ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು.
31 : ಅವನಿಗೆ ಶೆಕೆಮಿನಲ್ಲಿ ಇದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗ ಹುಟ್ಟಿದನು. ಅವನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
32 : ಯೋವಾಷನ ಮಗನಾದ ಗಿದ್ಯೋನನು ಹಣ್ಣು ಹಣ್ಣು ಮುದುಕನಾಗಿ ಮರಣ ಹೊಂದಲು ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿ ಅವನ ತಂದೆ ಆದ ಯೋವಾಷನದಾಗಿತ್ತು.
33 : ಗಿದ್ಯೋನನು ಸತ್ತನಂತರ ಇಸ್ರಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್ ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು.
34 : ಸುತ್ತಮುತ್ತಲಿನ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು.
35 : ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸಲಿಲ್ಲ; ಅವನ ಮನೆಯವರಿಗೆ ದಯೆ ತೋರಿಸಲಿಲ್ಲ.

Holydivine