Judges - Chapter 10
Holy Bible

1 : ಅಬೀಮೆಲೆಕನ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಎದ್ದು ಇಸ್ರಯೇಲರನ್ನು ಕಾಪಾಡಿದನು. ಅವನು ಎಫ್ರಯಿಮ್ ಮಲೆನಾಡಿನ ಶಾವಿೂರವೆಂಬ ಊರಲ್ಲಿ ವಾಸವಾಗಿದ್ದನು.
2 : ಇಪ್ಪತ್ತಮೂರು ವರ್ಷಗಳವರೆಗೆ ಇಸ್ರಯೇಲರನ್ನು ಪಾಲಿಸಿದ ನಂತರ ಸತ್ತು ಸಮಾಧಿಯಾದನು.
3 : ಅವನ ತರುವಾಯ ಗಿಲ್ಯಾದ್ಯನಾದ ಯಾಯಿರನು ಎದ್ದು ಇಸ್ರಯೇಲರನ್ನು ಇಪ್ಪತ್ತೆರಡು ವರ್ಷಪಾಲಿಸಿದನು.
4 : ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರಿ ಕತ್ತೆಗಳೂ ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನವರೆಗೂ ಯಾಯಿರನ ಗ್ರಾಮಗಳೆಂದು ಹೆಸರಿದೆ.
5 : ಯಾಯಿರನು ಸತ್ತು ಕಾಮೋನಿನಲ್ಲಿ ಸಮಾಧಿಯಾದನು.
6 : ಅಮ್ಮೋನಿಯರ ಕಾಟ ಇಸ್ರಯೇಲರು ಇನ್ನೊಮ್ಮೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ಸರ್ವೇಶ್ವರನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಮತ್ತು ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸತೊಡಗಿದರು. ಸರ್ವೇಶ್ವರನನ್ನಾದರೋ ಬಿಟ್ಟೇಬಿಟ್ಟರು.
7 : ಆದುದರಿಂದ ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿದರು.
8 : ಇವರು ಆ ವರ್ಷದಿಂದ ಹದಿನೆಂಟು ವರ್ಷಗಳವರೆಗೆ ಜೋರ್ಡನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಯೇಲರನ್ನು ಬಹಳವಾಗಿ ಪೀಡಿಸುತ್ತಾ ಅವರ ಮೇಲೆ ದಬ್ಬಾಳಿಕೆ ನಡೆಸಿದರು. ಈ ನಾಡು ಮೊದಲು ಅಮೋರಿಯರದಾಗಿತ್ತು.
9 : ಇದಲ್ಲದೆ ಅಮ್ಮೋನಿಯರು ಜೋರ್ಡನ್ ನದಿಯನ್ನು ದಾಟಿ ಯೆಹೂದ, ಬೆನ್ಯಾವಿೂನ್, ಎಫ್ರ¬ೂಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಯೇಲರು ಬಹಳ ಕಷ್ಟಕ್ಕೀಡಾದರು.
10 : ಆಗ ಅವರು ಸರ್ವೇಶ್ವರನಿಗೆ, “ನಾವು ನಮ್ಮ ದೇವರಾದ ನಿಮ್ಮನ್ನು ಬಿಟ್ಟು ಬಾಳನ ಪ್ರತಿಮೆಗಳನ್ನು ಪೂಜಿಸಿ ನಿಮಗೆ ವಿರುದ್ಧವಾಗಿ ಪಾಪಮಾಡಿದ್ದೇವೆ,” ಎಂದು ಮೊರೆಯಿಟ್ಟರು.
11 : ಸರ್ವೇಶ್ವರ ಅವರಿಗೆ, “ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ
12 : ಇವೇ ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ಬಿಡಿಸಿದೆ.
13 : ಆದರೂ ನೀವು ಮತ್ತೆ ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಪೂಜಿಸುತ್ತಾ ಬಂದಿರಿ; ಆದುದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದೇ ಇಲ್ಲ.
14 : ಹೋಗಿ, ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿ; ಅವು ನಿಮ್ಮ ಈ ಇಕ್ಕಟ್ಟಿನಲ್ಲಿ ಸಹಾಯ ಮಾಡಲಿ,” ಎಂದರು.
15 : ಇಸ್ರಯೇಲರು ಮರಳಿ ಸರ್ವೇಶ್ವರನಿಗೆ, “ಪಾಪ ಮಾಡಿದ್ದೇವೆ; ನಿಮಗೆ ಸರಿ ತೋರಿದಂತೆ ನಮಗೆ ಮಾಡಿ; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು,” ಎಂದು ಮೊರೆಯಿಟ್ಟರು. ಅನ್ಯದೇವತೆಗಳನ್ನು ಹೊರಗೆ ಹಾಕಿ ಸರ್ವೇಶ್ವರನನ್ನು ಪೂಜಿಸತೊಡಗಿದರು.
16 : ಆಗ ಇಸ್ರಯೇಲರ ಸಂಕಟದ ನಿಮಿತ್ತ ಸರ್ವೇಶ್ವರ ಬಹಳವಾಗಿ ನೊಂದುಕೊಂಡರು.
17 : ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳಿದುಕೊಂಡರು. ಇಸ್ರಯೇಲರು ಕೂಡಿ ಮಿಚ್ಛೆಯಲ್ಲಿ ಪಾಳೆಯಮಾಡಿಕೊಂಡರು.
18 : ಗಿಲ್ಯಾದಿನ ಜನರು ಹಾಗು ಅಧಿಪತಿಗಳು, “ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕಬಲ್ಲವನಾರು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡಬಹುದಲ್ಲಾ” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

Holydivine