Judges - Chapter 5
Holy Bible

1 : ಆ ದಿನ ದೆಬೋರಳು ಮತ್ತು ಅಬೀನೋವಮನ ಮಗ ಬಾರಾಕನು ಈ ಗೀತೆಯನ್ನು ಹಾಡಿದರು:
2 : ಪಣತೊಟ್ಟಿದ್ದರು ಇಸ್ರಯೇಲಿನ ವೀ ರರು ಸೈನ್ಯಸೇರಿದ್ದಾರೆ ಸ್ವೇಚ್ಛೆಯಿಂದಾ ಜನರು ಮಾಡಿರಿ ನೀವು ಸರ್ವೇಶ್ವರನಾ ಗುಣಗಾನವನು;
3 : ಅರಸರೇ, ಕೇಳಿ; ಪ್ರಭುಗಳೇ, ಕಿವಿಗೊಡಿ: ನಾ ಕಟ್ಟುವೆನು ಕವಿತೆಯನು ಸರ್ವೇಶ್ವರನಿಗೆ ನಾ ಭಜಿಸಿ ಹಾಡುವೆನು ಇಸ್ರಯೇಲರಾ ದೇವನಿಗೆ;
4 : ಎದೋಮ್ಯರ ಪ್ರಾಂತ್ಯದಿಂದ, ಸೇಯಿರ ಗುಡ್ಡದಿಂದ ಹೇ ಸರ್ವೇಶ್ವರಾ, ನೀ ಹೊರಟು ಬರುವಾಗ ಕಂಪಿಸಿತು ಭೂಮಿ, ಹನಿಗರೆಯಿತು ಆಗಸ ಮಳೆಸುರಿಸಿತು ಮೇಘಮಂಡಲ
5 : ಕರಗಿಹೋದವು ಬೆಟ್ಟಗುಡ್ಡಗಳು ಆ ಸರ್ವೇಶ್ವರನ ಮುಂದೆ ನೀರಾಗಿಹೋಯಿತು ಸೀನಾಯಿ ಪರ್ವತವು ಇಸ್ರಯೇಲರ ದೇವನೆದುರಿಗೆ.
6 : ಅನಾತನ ಮಗ ಶಮ್ಗರನ ಕಾಲದಲ್ಲಿ ಯಾಯೇಲನ ದಿನಗಳಲಿ ನಿಂತುಹೋಯಿತು ಸಂಚಾರ ರಾಜಮಾರ್ಗಗಳಲಿ, ನಡೆದರು ಪಯಣಿಗರು ಸೀಳುದಾರಿಗಳಲಿ.
7 : ದೆಬೋರಾ, ಇಸ್ರಯೇಲರ ತಾಯಿಯಂತೆ ನೀ ಬರುವ ಮುನ್ನ ಪಾಳುಬಿದ್ದಿದ್ದವು ಇಸ್ರಯೇಲ ಗ್ರಾಮಗಳೆಲ್ಲ.
8 : ಆರಿಸಿಕೊಂಡಿದ್ದರು ಜನರು ಅನ್ಯ ದೇವತೆಗಳನು ಊರಬಾಗಿಲವರೆಗೆ ಬಂದಿತು ಕದನಕಾಳಗಗಳು ಇರಲಿಲ್ಲ ಗುರಾಣಿ, ಭರ್ಜಿಗಳಾವು ಓರ್ವರಲ್ಲೂ ಇಸ್ರಯೇಲರಾ ನಾಲ್ವತ್ತು ಸಾವಿರ ಸೈನಿಕರಲ್ಲೂ.
9 : ಇಸ್ರಯೇಲಿನಾ ನಾಯಕರೊಡನೆ ಸೇರಿ ಸ್ವೇಚ್ಛೆಯಿಂದ ಸೈನ್ಯಸೇರಿದಾ ಜನರೊಡಗೂಡಿ ನಾ ನಲಿದುಹಾಡುವೆನು, ಮಾಡಿರಿ ನೀವು ಸರ್ವೇಶ್ವರನ ಗುಣಗಾನವನು:
10 : ಬಿಳೀಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾಡಿರಿ ಗಾನ, ಮಾಡಿರಿ ಗುಣಗಾನ, ಓ ಪಯಣಿಗರೇ.
11 : ಸೇದುವ ಬಾವಿಗಳ ಬಳಿ ಕುಳಿತು ಕೊಳ್ಳೆಹಂಚಿಕೊಳ್ಳುವವರ ಧ್ವನಿಯನಾಲಿಸು! ವರ್ಣಿಸುತಿಹರವರು ಸರ್ವೇಶ್ವರ ಸಾಧಿಸಿದ ನೀತಿಯನು, ತನ್ನ ಪ್ರಜೆ ಇಸ್ರಯೇಲ್ ಊರುಗಳಲ್ಲಾತನು ಸ್ಥಾಪಿಸಿದ ನ್ಯಾಯವನು.
12 : ಎಚ್ಚರಗೊಳ್ಳು, ಎಚ್ಚರಗೊಳ್ಳು, ದೆಬೋರಾ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಮಾಡು ನೀ ಗುಣಗಾನ ಬಾರಾಕನೇ, ಏಳು; ಅಬೀನೋವಮನ ಮಗನೇ, ಏಳು, ಸೆರೆಹಿಡಿದವರನು ನೀ ಸಾಗಿಸಿಕೊಂಡು ಹೋಗು.
13 : ಚದರಿಹೋದವರು ಕೂಡಿಬಂದರು ನಾಯಕರ ಬಳಿಗೆ ಸರ್ವೇಶ್ವರನ ಶೂರಜನರು ವೀರರಂತೆ ನೆರೆದುಬಂದರು ನನ್ನ ಸಹಾಯಕ್ಕೆ.
14 : ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯಿಮ್ಯರು, ಅವರೊಂದಿಗೆ ಬಂದರು ಬೆನ್ಯಾವಿೂನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.
15 : ಇಸ್ಸಾಕಾರ್ ಕುಲಪ್ರಭುಗಳು ಬಂದರು ದೆಬೋರಳ ಜೊತೆಯಲಿ, ಆಗಮಿಸಿದನು ಬಾರಾಕನು ಇಸ್ಸಾಕಾರ್ಯರ ಸಂಗಡದಲಿ, ಇವನ ಹೆಜ್ಜೆಹಿಡಿದು ಬಂದರು ಅವರೆಲ್ಲರು ತವಕದಲಿ.
16 : ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು: ರೂಬೇನ್ಯರೇ, ನೀವೇಕೆ ಕೂತಿರಿ ಕುರಿಹಟ್ಟಿಗಳಲಿ? ಮಂದೆಗಳ ಮಧ್ಯೆಯಲಿ? ಕೇಳಬೇಕೆಂದೋ ಅಪಾಯದ ಸಿಳ್ಳು ಸದ್ದನು? ಹೌದು ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು.
17 : ಗಿಲ್ಯಾದರು ಉಳಿದರು ಜೋರ್ಡನಿನ ಆಚೆಯಲ್ಲೇ ದಾನ್‍ಕುಲದವರು ಉಳಿದರೇಕೆ, ಹಡಗುಗಳಲ್ಲೇ? ಅಶೇರ್ ಕುಲದವರೋ ಅಂಟುಕೊಂಡರು ತಮ್ಮ ರೇವುಗಳಿಗೇ ನೆಮ್ಮದಿಯಾಗಿ ಕೂತುಬಿಟ್ಟರು ಸಮುದ್ರತೀರದಲ್ಲೆ.
18 : ಅಂಥವರಲ್ಲ ಈ ಜೆಬುಲೂನ್ಯರು, ನಫ್ತಾಲ್ಯರು ಪ್ರಾಣವನೇ ಮುಡಿಪಾಗಿಟ್ಟರು ರಣಭೂಮಿಯೊಳು.
19 : ಎದ್ದುಬಂದು ಯುದ್ಧ ಮಾಡಿದರು ಅರಸುಗಳು ಕೂಡಿಬಂದು ಕಾದಾಡಿದರು ಕಾನಾನ್ಯ ರಾಜರುಗಳು ಮೆಗಿದ್ದೋ ನದಿಗಳ ಬಳಿ ತಾನಾಕದೊಳು ಆದರೆ ಗಿಟ್ಟಲಿಲ್ಲ ಅವರಿಗೆ ಬೆಳ್ಳಿದ್ರವ್ಯಗಳೇನು !
20 : ಕದನವಾಡಿದವು ತಾರೆಗಳು ಆಗಸದಿಂದಲೆ ಯುದ್ಧ ಮಾಡಿದವು ಸೀಸೆರನ ವಿರುದ್ಧ ತಮ್ಮಾ ಪಥದಿಂದಲೆ.
21 : ಶತ್ರುಗಳನು ಕೊಚ್ಚಿಕೊಂಡು ಹೋಯಿತು ಪೂರ್ವಪ್ರಸಿದ್ಧವಾದ ಆ ಕೀಷೋನ್ ಹೊಳೆಯು. ನನ್ನ ಮನವೇ, ನೀ ಧೈರ್ಯದಿಂದ ಮುಂದೆ ಸಾಗು.
22 : ನೆಲ ಕಂಪಿಸಿತು ಕುದುರೆಗಳ ಭರದೌಡಿನಿಂದ ಸುತ್ತಿಗೆಯಂತಹ ಆ ಕಾಲುಗಳ ಪೆಟ್ಟಿನಿಂದ.
23 : ‘ಶಾಪಹಾಕಿರಿ ಮೇರೋಜ್ ಊರಿಗೆ, ಅದರ ನಿವಾಸಿಗಳಿಗೆ ಬರಲಿಲ್ಲ ಅವರು ಯುದ್ಧವೀರರ ಜೊತೆಗೆ ಸರ್ವೇಶ್ವರನ ಸಹಾಯಕ್ಕೆ. ಶಪಿಸಿರಿ ಅವರನ್ನು’ ಎಂದು ಕರೆಗೊಟ್ಟನು ಸರ್ವೇಶ್ವರನ ದೂತನೆ.
24 : ಗುಡಾರಗಳಲಿ ವಾಸಿಸುವ ಸ್ತ್ರೀಯರಲ್ಲಿ ಯಾಯೇಲಳೆ ಭಾಗ್ಯವತಿ, ಹೌದು, ಅವಳೇ ಭಾಗ್ಯವತಿ, ಕೇನ್ಯನಾದ ಹೆಬೆರನ ಆ ಹೆಂಡತಿ.
25 : ನೀರುಕೇಳಲು ಹಾಲುಕೊಟ್ಟಳು ಉತ್ತಮ ಪಾತ್ರೆಯಲ್ಲಿ ಮೊಸರುಕೊಟ್ಟಳು.
26 : ಗೂಟ ತೆಗೆದುಕೊಂಡಳು ಕೈಚಾಚಿ ಹಿಡಿದಳು ಬಲಗೈಯಲಿ ದೊಡ್ಡ ಕೊಡತಿ ಜಡಿದಳು ಸೀಸೆರನ ತಲೆಯನು ಬಡಿದಳಾ ಕೊಡತಿಯಿಂದ ಕಣತಲೆಗೇ ತಿವಿದು.
27 : ಬೊಗ್ಗಿಬಿದ್ದನು, ಉರುಳಿಬಿದ್ದನು, ಮುದುರಿಬಿದ್ದನವನು ಅವಳ ಕಾಲುಗಳ ಬಳಿ ಅಲ್ಲೆ ಸತ್ತುಬಿದ್ದನು.
28 : ಸೀಸೆರನ ತಾಯಿ ಇಣುಕಿ ನೋಡಿದಳು ಕಿಟಕಿಯಿಂದ ಕೂಗಿದಳು ಆ ಕಿಟಕಿಯ ಜಾಲರಿಗಳಿಂದ: ‘ಇಷ್ಟು ಹೊತ್ತಾಗಬೇಕೆ ರಥ ಬರುವುದಕ್ಕೆ? ಕುದುರೆಗಳ ಕಾಲುಗಳಿಗೆ ಇಷ್ಟು ಸಾವಕಾಶವೇಕೆ?’
29 : ಸಭ್ಯಸ್ತ್ರೀಯರೊಳು ಬುದ್ಧಿವಂತೆಯರು ಕೊಟ್ಟ ಉತ್ತರವನು ತನ್ನೊಳಗೇ ಮೆಲಕು ಹಾಕಿದ್ದಳು ಇಂತೆಂದುಕೊಂಡು:
30 : ‘ನಿಶ್ಚಯವಾಗಿ ಸಿಕ್ಕಿರಬೇಕು ಅವರಿಗೆ ಕೊಳ್ಳೆ ಹಂಚಿಕೊಳ್ಳುತ್ತಿರಬೇಕು ಅದನು ತಮ್ಮತಮ್ಮಲ್ಲೆ ಪ್ರತಿಯೊಬ್ಬ ಸೈನಿಕನಿಗೆ ಒಬ್ಬೊಬ್ಬ ದಾಸಿಯರು ಸೀಸೆರನಿಗೊ, ಬಣ್ಣಬಣ್ಣವಾದ ಬಟ್ಟೆಬರೆಗಳು ವಿಚಿತ್ರ ಕಸೂತಿಹಾಕಿದ ಒಂದೆರಡು ವಸ್ತ್ರಗಳು, ಕಂಠಮಾಲೆಗಳು’.
31 : ಸರ್ವೇಶ್ವರನ ಶತ್ರುಗಳೆಲ್ಲರು ನಾಶವಾಗಲಿ ಇವರಂತೆ ಆತನ ಭಕ್ತರು ಬೆಳಗಲಿ ಉದಯಕಾಲದ ಸೂರ್ಯನಂತೆ! ನಾಡಿನಲಿ ನಾಲ್ವತ್ತು ವರ್ಷಕಾಲ ಶಾಂತಿ ನೆಲಸಿತ್ತು!

Holydivine