Judges - Chapter 7
Holy Bible

1 : ‘ಯೆರುಬ್ಬಾಳ’ ಎನಿಸಿಕೊಂಡ ಗಿದ್ಯೋನನೂ ಅವನ ಸಂಗಡ ಇದ್ದ ಜನರೂ ಬೆಳಿಗ್ಗೆ ಎದ್ದು ಹೊರಟು ಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಇಳಿದುಕೊಂಡರು. ಇವರಿಗೆ ಉತ್ತರದಿಕ್ಕಿನಲ್ಲಿ ಮೋರೆ ಗುಡ್ಡದ ಹಿಂದಿನ ತಗ್ಗಿನಲ್ಲಿ ಮಿದ್ಯಾನ್ಯರ ದಂಡಿಳಿದಿತ್ತು.
2 : ಸರ್ವೇಶ್ವರ ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರ ಕೈಗೆ ಮಿದ್ಯಾನ್ಯರನ್ನು ಒಪ್ಪಿಸುವುದು ನನಗೆ ಸರಿಯಾಗಿ ಕಾಣುವುದಿಲ್ಲ; ಏಕೆಂದರೆ ಹಾಗೆ ಒಪ್ಪಿಸಿಕೊಟ್ಟರೆ ಸ್ವಂತ ಶಕ್ತಿಯಿಂದಲೇ ನಮಗೆ ರಕ್ಷಣೆ ಲಭಿಸಿತು ಎಂದು ಹೆಚ್ಚಳಪಟ್ಟು ನನ್ನನ್ನು ಅಲಕ್ಷ್ಯ ಮಾಡಬಹುದು.
3 : ಆದ್ದರಿಂದ ಎಲ್ಲಾ ಜನರಿಗೆ ಕೇಳಿಸುವಂತೆ, ‘ಭಯಭೀತರೂ ಅಂಜುಬುರುಕರೂ ಈ ಗಿಲ್ಯಾದ್ ಪರ್ವತವನ್ನು ಬಿಟ್ಟು ಮನೆಗೆ ಹೋಗಲಿ,’ ಎಂದು ಪ್ರಕಟಿಸು,” ಎಂದರು. ಹಾಗೆ ಮಾಡಲು ಇಪ್ಪತ್ತೆರಡು ಸಾವಿರ ಮಂದಿ ಹಿಂದಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.
4 : ಸರ್ವೇಶ್ವರ ಪುನಃ ಗಿದ್ಯೋನನಿಗೆ, “ನಿನ್ನ ಬಳಿ ಇರುವ ಜನರು ಇನ್ನೂ ಹೆಚ್ಚಾಗಿದ್ದಾರೆ; ನೀನು ಅವರನ್ನು ಒಂದು ಹಳ್ಳಕ್ಕೆ ಕರೆದುಕೊಂಡು ಹೋಗು; ಅಲ್ಲಿ ಅವರನ್ನು ನಿನಗಾಗಿ ಆರಿಸುವೆನು. ಯಾರು ನಿನ್ನ ಸಂಗಡ ಹೋಗಬಹುದೆಂದು ಹೇಳುವೆನೋ ಅವರು ಮಾತ್ರ ಹೋಗಲಿ. ಯಾರಿಗೆ ಹೋಗಬಾರದೆಂದು ಹೇಳುವೆನೋ ಅವರು ಹೋಗದಿರಲಿ,” ಎಂದರು.
5 : ಗಿದ್ಯೋನನು ಜನರನ್ನು ಹಳ್ಳಕ್ಕೆ ಕರೆದುಕೊಂಡು ಬಂದಾಗ ಸರ್ವೇಶ್ವರ ಅವನಿಗೆ, “ನಾಯಿಯಂತೆ ನೀರನ್ನು ನಾಲಿಗೆಯಿಂದ ನೆಕ್ಕುವವರನ್ನೂ ಮೊಣಕಾಲೂರಿ ಕುಡಿಯುವವರನ್ನೂ ಬೇರೆ ಬೇರೆಯಾಗಿ ನಿಲ್ಲಿಸು,” ಎಂದು ಹೇಳಿದರು.
6 : ಕೈಯಿಂದ ನೀರನ್ನು ಬಾಯಿಗೆ ತೆಗೆದುಕೊಂಡು ನೆಕ್ಕಿದವರ ಸಂಖ್ಯೆ ಮುನ್ನೂರು. ಇತರ ಜನರು ಮೊಣಕಾಲೂರಿ ಕುಡಿದವರು.
7 : ಆಗ ಸರ್ವೇಶ್ವರ ಗಿದ್ಯೋನನಿಗೆ, “ನೀರನ್ನು ನೆಕ್ಕಿದ ಆ ಮುನ್ನೂರು ಮಂದಿಯಿಂದಲೇ ನಿಮಗೆ ಜಯವನ್ನುಂಟುಮಾಡಿ ಮಿದ್ಯಾನ್ಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದು ಆಜ್ಞಾಪಿಸಿದರು.
8 : ಗಿದ್ಯೋನನು ಆ ಮುನ್ನೂರು ಜನರನ್ನು ಇಟ್ಟುಕೊಂಡು ಉಳಿದ ಇಸ್ರಯೇಲರನ್ನು ಅವರವರ ಗುಡಾರಗಳಿಗೆ ಕಳುಹಿಸಿದನು. ಕಳುಹಿಸುವಾಗ ಅವರ ಹತ್ತಿರ ಇದ್ದ ಆಹಾರವನ್ನೂ ಕೊಂಬುಗಳನ್ನೂ ತನ್ನ ಜನರಿಗಾಗಿ ತೆಗೆದುಕೊಂಡನು. ಮಿದ್ಯಾನ್ಯರ ದಂಡು ಕೆಳಗೆ ತಗ್ಗಿನಲ್ಲಿ ಇಳಿದುಕೊಂಡಿತ್ತು.
9 : ಅದೇ ರಾತ್ರಿ ಸರ್ವೇಶ್ವರ ಗಿದ್ಯೋನ್ಯನಿಗೆ, “ನೀನು ಎದ್ದು ಹೋಗಿ ಶತ್ರುಗಳ ಪಾಳೆಯದ ಮೇಲೆ ಬೀಳು; ಅದನ್ನು ನಿನಗೆ ಒಪ್ಪಿಸಿ ಕೊಟ್ಟಿದ್ದೇನೆ.
10 : ಅವರ ಮೇಲೆ ಬೀಳುವುದಕ್ಕೆ ಹೆದರಿಕೆಯಾದರೆ ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ ಅವರು ಮಾತಾಡಿಕೊಳ್ಳುವುದನ್ನು ಆಲಿಸು;
11 : ಆಗ ಅವರ ಮೇಲೆ ಬೀಳುವುದಕ್ಕೆ ನಿನಗೆ ಧೈರ್ಯ ಬರುವುದು,” ಎಂದರು. ಗಿದ್ಯೋನನು ಅದರಂತೆಯೇ ತನ್ನ ಸೇವಕನಾದ ಪುರನ ಸಂಗಡ ಶತ್ರು ಸೈನಿಕರ ಪಾಳೆಯದ ಕಡೇ ಭಾಗಕ್ಕೆ ಹೋದನು.
12 ಮಿದ್ಯಾನ್ಯರೂ ಅಮಾಲೇಕ್ಯರೂ ಪೂರ್ವದೇಶದವರೂ ಮಿಡಿತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳಿದುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು.
13 : ಮಿದ್ಯಾನ್ಯರೂ ಅಮಾಲೇಕ್ಯರೂ ಪೂರ್ವದೇಶದವರೂ ಮಿಡಿತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳಿದುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು.
14 : “ಇದು ಇಸ್ರಯೇಲನಾದ ಯೋವಾಷನ ಮಗ ಗಿದ್ಯೋನನ ಕತ್ತಿಯೇ ಹೊರತು ಮತ್ತೊಂದಲ್ಲ; ದೇವರು ಮಿದ್ಯಾನ್ಯರನ್ನೂ ಅವರ ಪಾಳೆಯಗಳನ್ನೂ ಅವನ ಕೈಗೆ ಒಪ್ಪಿಸಿರುವರು,” ಎಂದನು.
15 : ಗಿದ್ಯೋನ್ಯನು ಆ ಕನಸನ್ನೂ ಅದರ ಅರ್ಥವನ್ನೂ ಕೇಳಿದಾಗ ಸರ್ವೇಶ್ವರನಿಗೆ ಅಡ್ಡಬಿದ್ದು ಇಸ್ರಯೇಲರ ಪಾಳೆಯಕ್ಕೆ ಹಿಂದಿರುಗಿ ಬಂದು, ಅವರಿಗೆ, “ಏಳಿ, ಸರ್ವೇಶ್ವರ ಮಿದ್ಯಾನ್ಯರ ಪಾಳೆಯವನ್ನು ನಿಮ್ಮ ಕೈಗೆ ಒಪ್ಪಿಸಿದ್ದಾರೆ,” ಎಂದನು.
16 : ಅಲ್ಲದೆ, ಅವನು ಆ ಮುನ್ನೂರು ಮಂದಿಯನ್ನು ಮೂರು ಗುಂಪು ಮಾಡಿ ಪ್ರತಿ ಒಬ್ಬನ ಕೈಯಲ್ಲಿ ಕೊಂಬನ್ನೂ ಉರಿಯುವ ಪಂಜಡಗಿರುವ ಬರಿಕೊಡವನ್ನೂ ಕೊಟ್ಟು ಅವರಿಗೆ,
17 : “ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿ. ನಾನು ಪಾಳೆಯದ ಅಂಚಿಗೆ ಬಂದಾಗ ಹೇಗೆ ಮಾಡುತ್ತೇನೋ ಹಾಗೆ ನೀವು ಮಾಡಬೇಕು.
18 : ನಾನೂ ನನ್ನ ಸಂಗಡಿಗರೂ ಕೊಂಬುಗಳನ್ನು ಊದುವಾಗ ನೀವೂ ಪಾಳೆಯದ ಸುತ್ತಲೂ ಕೊಂಬನ್ನು ಊದಿ, ‘ಸರ್ವೇಶ್ವರಗೆ ಜಯ, ಗಿದ್ಯೋನನಿಗೆ ಜಯ’ ಎಂದು ಕೂಗಿರಿ,” ಎಂದು ಹೇಳಿದನು.
19 : ಮಧ್ಯರಾತ್ರಿ ಪ್ರಾರಂಭವಾಗುತ್ತಿದ್ದಂತೆ ಮೊದಲ ಕಾವಲುಗಾರರು ಬದಲಾದ ಕೂಡಲೆ ಗಿದ್ಯೋನನು ಮತ್ತು ಅವನ ಸಂಗಡ ಇದ್ದ ನೂರುಮಂದಿ (ಶತ್ರುಗಳ) ಪಾಳೆಯದ ಅಂಚಿಗೆ ಬಂದು ಕೊಂಬುಗಳನ್ನು ಊದಿ, ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು.
20 : ಕೂಡಲೆ ಮೂರು ಗುಂಪಿನವರೂ ಕೊಂಬುಗಳನ್ನು ಊದಿ, ಕೊಡಗಳನ್ನು ಒಡೆದುಬಿಟ್ಟು ಎಡಗೈಯಲ್ಲಿ ಪಂಜುಗಳನ್ನೂ ಬಲಗೈಯಲ್ಲಿ ಊದುವ ಕೊಂಬುಗಳನ್ನೂ ಹಿಡಿದು, “ಸರ್ವೇಶ್ವರನಿಗೆ ಪರಾಕು” ಎಂದು ಕೂಗಿ
21 : ಪಾಳೆಯದ ಸುತ್ತಲೂ ತಮ್ಮ ತಮ್ಮ ಸ್ಥಳದಲ್ಲಿ ನಿಂತರು. ಪಾಳೆಯದವರಾದರೋ ಗಲಿಬಿಲಿಗೊಂಡು ಚೀರುತ್ತಾ ಓಡಿಹೋಗಲು ಆರಂಭಿಸಿದರು.
22 : ಆ ಮುನ್ನೂರು ಮಂದಿ ಕೊಂಬುಗಳನ್ನು ಊದುತ್ತಿರುವಲ್ಲಿ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಸರ್ವೇಶ್ವರ ಮಾಡಿದರು. ಪಾಳೆಯದವರು ಚೇರೆರದ ದಾರಿಯಲ್ಲಿರುವ ಬೇತ್‍ಷೀಟ್ಟದವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾ ಪ್ರಾಂತ್ಯದವರೆಗೂ ಓಡಿಹೋದರು.
23 : ಇಸ್ರಯೇಲರಾದ ನಫ್ತಾಲಿ, ಆಶೇರ್ ಕುಲಗಳವರೂ ಮನಸ್ಸೆಕುಲದ ಜನರೆಲ್ಲರೂ ಕೂಡಿ ಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.
24 : ಇದಲ್ಲದೆ, ಗಿದ್ಯೋನನು ಎಫ್ರಯಿಮ್ ಪರ್ವತ ಪ್ರದೇಶಗಳಿಗೆ ದೂತರನ್ನು ಅಟ್ಟಿ ಆ ಜನರಿಗೆ, “ನೀವು ಮಿದ್ಯಾನ್ಯರಿಗೆ ವಿರೋಧವಾಗಿ ಹೊರಟು, ಅವರು ಬೇತ್‍ಬಾರದವರೆಗಿರುವ ಪ್ರವಾಹಗಳನ್ನೂ ಜೋರ್ಡನ್ ನದಿಯನ್ನೂ ದಾಟಿ ಹೋಗದಂತೆ ಅಡ್ಡಗಟ್ಟಿರಿ,” ಎಂದು ಹೇಳಿಕಳಿಸಿದನು. ಆಗ ಎಫ್ರಯಿಮ್ಯರೆಲ್ಲರೂ ಬೇತ್‍ಬಾರದವರೆಗಿರುವ ಪ್ರವಾಹಗಳಿಗೂ ಜೋರ್ಡನ್ ನದಿಗೂ ಬಂದು ಅವುಗಳ ಹಾಯಗಡಗಳನ್ನೆಲ್ಲಾ ಹಿಡಿದರು.
25 : ಇದಲ್ಲದೆ ಅವರು ಮಿದ್ಯಾನ್ಯರ ನಾಯಕರಾದ ಓರೇಬ್, ಜೇಬ್ ಎಂಬವರನ್ನು ಹಿಡಿದು ಓರೇಬನನ್ನು ಓರೇಬನ ಬಂಡೆಯ ಮೇಲೂ ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯಲ್ಲೂ ಕೊಂದು ಅವರ ತಲೆಗಳನ್ನು ತೆಗೆದುಕೊಂಡು ಮಿದ್ಯಾನ್ಯರನ್ನು ಹಿಂದಟ್ಟುತ್ತಾ ಜೋರ್ಡನಿನ ಆಚೆಗೆ ಹೋಗಿ ಅಲ್ಲಿದ್ದ ಗಿದ್ಯೋನನಿಗೆ ಅವುಗಳನ್ನು ಒಪ್ಪಿಸಿದರು.

Holydivine