Judges - Chapter 3
Holy Bible

1 : ಕಾನಾನ್ಯರೊಡನೆ ನಡೆದ ಯುದ್ಧಗಳಲ್ಲಿ ಒಂದರಲ್ಲೂ ಪಾಲ್ಗೊಳ್ಳದೆ ಇದ್ದ ಇಸ್ರಯೇಲರನ್ನು ಪರೀಕ್ಷಿಸುವುದಕ್ಕೂ
2 : ಇಸ್ರಯೇಲ್ ಸಂತತಿಯವರಲ್ಲಿ ಯುದ್ಧವಿದ್ಯೆ ಅರಿಯದವರಿಗೆ ಅದನ್ನು ಕಲಿಸುವುದಕ್ಕೂ ಸರ್ವೇಶ್ವರ ಆ ನಾಡಿನಲ್ಲೇ ಉಳಿಸಿದ ಅನ್ಯಜನಾಂಗದವರು ಇವರು:
3 : ಐದುಮಂದಿ ಫಿಲಿಷ್ಟಿಯ ಪ್ರಭುಗಳು, ಸರ್ವಕಾನಾನ್ಯರು, ಸಿದೋನ್ಯರು, ಲೆಬನೋನ್ ಪರ್ವತದಲ್ಲಿ ಬಾಳ್ ಹೆರ್ಮೋನ್ ಬೆಟ್ಟದಿಂದ ಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು.
4 : ತಾವು ಮೋಶೆಯ ಮೂಲಕ ಇವರ ಪೂರ್ವಜರಿಗೆ ವಿಧಿಸಿದ ಆಜ್ಞೆಗಳನ್ನು ಇಸ್ರಯೇಲರು ಕೈಗೊಂಡು ನಡೆಯುವರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳುವುದಕ್ಕಾಗಿ ಸರ್ವೇಶ್ವರ ಅವರನ್ನು ಉಳಿಸಿದರು.
5 : ಇಸ್ರಯೇಲರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಎಂಬೀ ಜನಾಂಗಗಳ ಮಧ್ಯದಲ್ಲಿ ವಾಸಮಾಡುತ್ತಾ
6 : ಅವರ ಕನ್ಯೆಯರನ್ನು ತಾವು ತಂದು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಕೊಟ್ಟು ಅವರ ದೇವತೆಗಳನ್ನು ಪೂಜಿಸಿದರು.
7 : ಇಸ್ರಯೇಲರು ಬಾಳ್, ಅಶೇರ ಎಂಬ ದೇವತೆಗಳನ್ನು ಪೂಜಿಸಿ ತಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು. ಅವರ ದೃಷ್ಟಿಯಲ್ಲಿ ದ್ರೋಹಿಗಳಾದರು.
8 : ಆದುದರಿಂದ ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸ ಕೂಷನ್ ರಿಷಾತಯಿಮ್ ಎಂಬವನಿಗೆ ಮಾರಿಬಿಟ್ಟರು. ಈ ಕಾರಣ ಇಸ್ರಯೇಲರು ಎಂಟು ವರ್ಷಗಳವರೆಗೆ ಅವನಿಗೆ ಗುಲಾಮರಾಗಿದ್ದರು.
9 : ಇಸ್ರಯೇಲರು ಮೊರೆಯಿಟ್ಟಾಗ ಅವರನ್ನು ಬಿಡುಗಡೆಮಾಡಲು ಸರ್ವೇಶ್ವರ ಒಬ್ಬ ವ್ಯಕ್ತಿಯನ್ನು ಎಬ್ಬಿಸಿದರು; ಆತನೇ ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲ್.
10 : ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನು ಇಸ್ರಯೇಲರಿಗೆ ನ್ಯಾಯದೊರಕಿಸಲು ಯುದ್ಧಕ್ಕೆ ಹೊರಟನು. ಎರಡು ನದಿಗಳ ಮಧ್ಯೆಯಿರುವ ಅರಾಮ್ ರಾಜ್ಯದ ಅರಸ ಕೂಷನ್ ರಿಷಾತಯಿಮನನ್ನು ಸರ್ವೇಶ್ವರ ಆತನ ಕೈಗೊಪ್ಪಿಸಿದ್ದರಿಂದ ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು.
11 : ನಾಡಿನಲ್ಲಿ ನಾಲ್ವತ್ತು ವರ್ಷಗಳ ಕಾಲ ನೆಮ್ಮದಿ ನೆಲಸಿತ್ತು. ತರುವಾಯ ಕೆನಜನ ಮಗ ಒತ್ನೀಯೇಲನು ಮರಣ ಹೊಂದಿದನು.
12 : ಇಸ್ರಯೇಲರು ಮತ್ತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ಮೋವಾಬ್ಯರ ಅರಸ ಎಗ್ಲೋನನನ್ನು ಇಸ್ರಯೇಲರಿಗೆ ವಿರುದ್ದ ಸರ್ವೇಶ್ವರ ಬಲಪಡಿಸಿದರು.
13 : ಎಗ್ಲೋನನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಬಂದು ಇಸ್ರಯೇಲರನ್ನು ಸೋಲಿಸಿ ಖರ್ಜೂರ ನಗರವನ್ನು ಗೆದ್ದುಕೊಂಡನು.
14 : ಹದಿನೆಂಟು ವರ್ಷಕಾಲ ಇಸ್ರಯೇಲರು ಅವನಿಗೆ ಗುಲಾಮರಾಗಿದ್ದರು.
15 : ಆಗ ಇಸ್ರಯೇಲರು ಸರ್ವೇಶ್ವರನಿಗೆ ಮೊರೆಯಿಟ್ಟರು. ಅವರನ್ನು ಬಿಡುಗಡೆಮಾಡಲು ಬೆನ್ಯಾವಿೂನ್ ಕುಲದ ಗೇರನ ಮಗ ಏಹೂದನನ್ನು ವಿಮೋಚಕನಾಗಿ ಕಳುಹಿಸಲಾಯಿತು. ಅವನೊಬ್ಬ ಎಡಚ. ಇಸ್ರಯೇಲರು ಅವನ ಮುಖಾಂತರ ಮೋವಾಬ್ಯರ ಅರಸ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಕಳುಹಿಸಿದರು.
16 : ಅವನು ತನಗಾಗಿ ಒಂದುವರೆ ಅಡಿ ಉದ್ದವಾದ ಇಬ್ಬಾಯಿ ಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಒಳಗೆ, ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋದನು.
17 : ಮೋವಾಬ್ಯರ ಅರಸ ಎಗ್ಲೋನನಿಗೆ ಕಾಣಿಕೆಯನ್ನು ಒಪ್ಪಿಸಿದನು. ಎಗ್ಲೋನನು ಬಹಳ ದಪ್ಪನಾದ ವ್ಯಕ್ತಿ.
18 : ಏಹೂದನು ಕಾಣಿಕೆಯನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತು ತಂದ ಆಳುಗಳನ್ನು ಕಳುಹಿಸಿಬಿಟ್ಟನು
19 : ತಾನಾದರೋ ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದವರೆಗೆ ಹೋಗಿ, ಹಿಂದಿರುಗಿ ಎಗ್ಲೋನನ ಬಳಿಗೆ ಬಂದನು; “ಅರಸರೇ, ತಮಗೆ ತಿಳಿಸಬೇಕಾದ ಒಂದು ರಹಸ್ಯ ವಿಷಯವಿದೆ,” ಎಂದನು. ಆಗ ಅರಸ, “ನಿಶ್ಯಬ್ದ” ಎಂದನು. ಅವನ ಸೇವಕರೆಲ್ಲರು ಅಲ್ಲಿಂದ ಹೊರಗೆ ಹೋದರು.
20 : ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕುಳಿತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಬಂದನು; “ನಿಮಗೆ ತಿಳಿಸಬೇಕಾದ ಒಂದು ದೈವೋಕ್ತಿ ಇದೆ,” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದು ನಿಂತನು.
21 : ಆಗ ಏಹೂದನು ಎಡಗೈ ಚಾಚಿ, ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯನ್ನು ತಿವಿದನು
22 : ಆ ಕತ್ತಿ ಹಿಡಿಯ ಸಮೇತ ಹೊಟ್ಟೆಯನ್ನು ಹೊಕ್ಕಿತು. ಏಹೂದನು ಕತ್ತಿಯನ್ನು ಹೊರಗೆ ತೆಗೆಯಲಿಲ್ಲ. ಬೊಜ್ಜು ಅದನ್ನು ಮುಚ್ಚಿಕೊಂಡಿತ್ತು. ಮಲ ಹೊರಗೆ ಬಂದಿತು.
23 : ಏಹೂದನು ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ, ಅಗಳಿ ಹಾಕಿ ಪಡಸಾಲೆಯ ಮೂಲಕ ಹೊರಟು ಹೋದನು.
24 : ತರುವಾಯ ಸೇವಕರು ಅಲ್ಲಿಗೆ ಬಂದು ಬಾಗಿಲಿಗೆ ಅಗಳಿ ಹಾಕಿರುವುದನ್ನು ಕಂಡು, “ಅರಸ ತಂಪಾದ ಕೊಠಡಿಗೆ ಸೇರಿದ ಪಾಯಖಾನೆಗೆ ಹೋಗಿರಬೇಕೆಂದು,
25 : ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಅರಸ ಕದಗಳನ್ನು ತೆರೆಯದೆ ಇರುವುದನ್ನು ನೋಡಿ ಬೀಗದ ಕೈಯಿಂದ ತಾವೇ ಬಾಗಿಲು ತೆರೆದರು. ಇಗೋ, ಅವರ ಒಡೆಯ ನೆಲದ ಮೇಲೆ ಸತ್ತುಬಿದ್ದಿದ್ದನು!
26 : ಅವರು ಕಾಯ್ದಿದ್ದ ಸಮಯದಲ್ಲೇ ಏಹೂದನು ತಪ್ಪಿಸಿಕೊಂಡು ವಿಗ್ರಹಗಳಿದ್ದ ಸ್ಥಳದಲ್ಲಿ ನದಿ ದಾಟಿ
27 : ಸೆಯಿರಾ ಎಂಬಲ್ಲಿಗೆ ಬಂದು ಎಫ್ರಯಿಮ್ ಪರ್ವತಪ್ರದೇಶದಲ್ಲಿ ಕಹಳೆಯನ್ನು ಊದಿದನು. ಕೂಡಲೆ ಇಸ್ರಯೇಲರು ಅವನ ಬಳಿಗೆ ಬಂದು, ಗುಡ್ಡದಿಂದ ಇಳಿದು ಅವನ ಸಂಗಡ ಹೊರಟರು.
28 : ಏಹೂದನು ಅವರಿಗೆ ನಾಯಕನಾಗಿ, “ನನ್ನನ್ನು ಹಿಂಬಾಲಿಸಿ ಬನ್ನಿ; ಸರ್ವೇಶ್ವರ ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೊಪ್ಪಿಸಿದ್ದಾರೆ,” ಎಂದನು. ಅಂತೆಯೇ ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲ ಹಿಡಿದುಕೊಂಡು ಯಾರನ್ನೂ ದಾಟಗೊಡಲಿಲ್ಲ.
29 : ಅಂದು ಅವರು ಸುಮಾರು ಹತ್ತು ಸಾವಿರ ಮಂದಿ, ಪುಷ್ಠ ಹಾಗು ಪರಾಕ್ರಮಿಗಳಾದ ಮೋವಾಬ್ಯರನ್ನು ಸದೆಬಡಿದರು. ಒಬ್ಬನೂ ತಪ್ಪಿಸಿಕೊಳ್ಳಲಾಗಲಿಲ್ಲ.
30 : ಮೋವಾಬ್ಯರು ಇಸ್ರಯೇಲರಿಗೆ ಶರಣಾದರು; ನಾಡಿನಲ್ಲಿ ಎಂಬತ್ತು ವರ್ಷ ನೆಮ್ಮದಿ ಇತ್ತು.
31 : ಏಹೂದನ ಬಳಿಕ ಅನಾತನ ಮಗ ಶಮ್ಗರನು ಮುಂದೆಬಂದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಠಿಯರನ್ನು ಕೊಂದು ಇಸ್ರಯೇಲರನ್ನು ಕಾಪಾಡಿದನು.

Holydivine