Judges - Chapter 13
Holy Bible

1 : ಇಸ್ರಯೇಲರು ಮತ್ತೊಮ್ಮೆ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ದ್ರೋಹಿಗಳಾದರು. ಆದುದರಿಂದ ಅವರನ್ನು ನಾಲ್ವತ್ತು ವರ್ಷಗಳ ತನಕ ಫಿಲಿಷ್ಟಿಯರ ಕೈಗೆ ಒಪ್ಪಿಸಲಾಯಿತು.
2 : ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ.
3 : ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, “ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭ ವತಿಯಾಗಿ ಒಬ್ಬ ಮಗನನ್ನು ಹೆರುವೆ.
4 : ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡದಿರು;
5 : ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು,” ಎಂದನು.
6 : ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. ‘ಎಲ್ಲಿಂದ ಬಂದಿರಿ?’ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.
7 : ಆದರೆ ಆತ ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತ ನಾಗಿರುವನು,’ ಎಂದು ಹೇಳಿದನು,” ಎಂದಳು.
8 : ಮಾನೋಹನು ಇದನ್ನು ಕೇಳಿ ಸರ್ವೇಶ್ವರನಿಗೆ, “ಸ್ವಾವಿೂ, ದಯವಿರಲಿ; ನೀವು ಕಳುಹಿಸಿದ ದೇವಪುರುಷ ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿರುವ ಮಗುವಿಗಾಗಿ ಮಾಡಬೇಕಾದುದ್ದನ್ನು ನಮಗೆ ಬೋಧಿಸಲಿ,” ಎಂದು ಬೇಡಿಕೊಳ್ಳಲು ದೇವರು ಅವನ ಮೊರೆಯನ್ನು ಕೇಳಿದರು.
9 : ಆ ಮಹಿಳೆ ಹೊಲದಲ್ಲಿ ಕುಳಿತಿರುವಾಗ ದೇವದೂತನು ತಿರುಗಿ ಬಂದನು. ಆಕೆಯ ಗಂಡ ಮಾನೋಹನು ಅಲ್ಲಿರಲಿಲ್ಲ.
10 : ಆದುದರಿಂದ ಆಕೆ ಬೇಗನೆ ಗಂಡನ ಬಳಿಗೆ ಹೋಗಿ, “ಮೊನ್ನೆ ನನಗೆ ಪ್ರತ್ಯಕ್ಷನಾದ ಪುರುಷ ತಿರುಗಿ ಬಂದಿದ್ದಾನೆ” ಎಂದು ತಿಳಿಸಿದಳು.
11 : ಅವನೆದ್ದು ಹೆಂಡತಿಯೊಡನೆ ಬಂದು ಆ ಪುರುಷನಿಗೆ, “ಮೊನ್ನೆ ಈಕೆಯೊಡನೆ ಮಾತಾಡಿದವರು ನೀವೋ” ಎಂದು ಕೇಳಲು ಅವನು,
12 : “ಹೌದು ನಾನೇ,” ಎಂದನು. ಆಗ ಮಾನೋಹನು, “ನೀವು ಹೇಳಿದ್ದು ನೆರವೇರಿದಾಗ ನಾವು ಆ ಮಗುವಿಗಾಗಿ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದು ಕೇಳಿದನು.
13 : ಸರ್ವೇಶ್ವರನ ದೂತನು ಮಾನೋಹನಿಗೆ, “ನಾನು ಹೇಳಿದ್ದನ್ನೆಲ್ಲಾ ಈಕೆ ಜಾಗರೂಕತೆಯಿಂದ ಕೈಗೊಳ್ಳಲಿ;
14 : ದ್ರಾಕ್ಷಾಫಲವನ್ನು ತಿನ್ನದಿರಲಿ; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರಲಿ; ನಿಷಿದ್ಧಾಹಾರವನ್ನು ಮುಟ್ಟದಿರಲಿ; ಹೀಗೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಕೈಗೊಳ್ಳಲಿ,” ಎಂದನು.
15 : ಮತ್ತೆ ಮಾನೋಹನು ಸರ್ವೇಶ್ವರನ ದೂತನನ್ನು, “ನಾವು ನಿಮಗಾಗಿ ಒಂದು ಹೋತಮರಿಯನ್ನು ಅಡಿಗೆ ಮಾಡಿ ತರುವವರೆಗೆ ದಯವಿಟ್ಟು ಇಲ್ಲೇ ನಿಲ್ಲಬೇಕು ಎಂದು ಬೇಡಿಕೊಂಡನು. ಅವನು,
16 : “ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ಆಹಾರವನ್ನು ಊಟಮಾಡುವುದಿಲ್ಲ; ಬಲಿದಾನ ಮಾಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಸರ್ವೇಶ್ವರನಿಗೆ ಸಮರ್ಪಿಸು,” ಎಂದನು. ಅವನು ಸರ್ವೇಶ್ವರನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.
17 : ಆದುದರಿಂದ ಅವನು ಆ ದೂತನನ್ನು, “ನೀವು ಹೇಳಿದ್ದು ನೆರವೇರಿದಾಗ ನಿಮ್ಮನ್ನು ಸನ್ಮಾನಿಸ ಬೇಕೆಂದಿರುತ್ತೇವೆ, ನಿಮ್ಮ ಹೆಸರೇನು?” ಎಂದು ಕೇಳಿದನು.
18 : ಸರ್ವೇಶ್ವರನ ದೂತನು, “ನನ್ನ ಹೆಸರನ್ನು ಕೇಳುವುದೇಕೆ? ಅದು ಆಶ್ಚರ್ಯಕರವಾದದ್ದು” ಎಂದನು.
19 : ಮಾನೋಹನು ಹೋತಮರಿಯನ್ನೂ ಧಾನ್ಯ ದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಸರ್ವೇಶ್ವರನಿಗೆ ಸಮರ್ಪಿಸಿದನು. ಮಾನೋಹನು ಮತ್ತು ಅವನ ಹೆಂಡತಿ ನೋಡುತ್ತಿರುವಾಗಲೇ ಸರ್ವೇಶ್ವರನ ದೂತನು ಒಂದು ಆಶ್ಚರ್ಯಕಾರ್ಯ ಮಾಡಿದನು.
20 : ಅದೇನೆಂದರೆ ಬಲಿಪೀಠದಿಂದ ಆಕಾಶಕ್ಕೆ ಹೋಗುತ್ತಿದ್ದ ಅಗ್ನಿಜ್ವಾಲೆಯೊಳಗೆ ಅವನು ಮೇಲಕ್ಕೇರಿ ಹೋದನು. ಅವರು ಇದನ್ನು ನೋಡುತ್ತಲೆ ನೆಲದ ಮೇಲೆ ಬೋರಲಾಗಿ ಬಿದ್ದರು.
21 : ಸರ್ವೇಶ್ವರನ ದೂತನು ಮಾನೋಹನಿಗೂ ಅವನ ಹೆಂಡತಿಗೂ ಪುನಃ ಕಾಣಿಸಲಿಲ್ಲ.
22 : ಆಗ ಮಾನೋಹನು ಆತ ಸರ್ವೇಶ್ವರನ ದೂತನೆಂದು ತಿಳಿದು ತನ್ನ ಹೆಂಡತಿಗೆ, “ನಾವು ಸಾಯಬೇಕು.
23 : ದೇವರನ್ನು ಕಣ್ಣಾರೆ ಕಂಡೆವಲ್ಲಾ!” ಎಂದನು. ಆಕೆ ಅವನಿಗೆ, “ಸರ್ವೇಶ್ವರ ನಮ್ಮನ್ನು ಕೊಲ್ಲಬೇಕೆಂದಿದ್ದರೆ ಅವರು ನಮ್ಮ ಕೈಯಿಂದ ಬಲಿಯನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿರಲಿಲ್ಲ. ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ; ಹೇಳುತ್ತಿರಲಿಲ್ಲ,” ಎಂದಳು.
24 : ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ ‘ಸಂಸೋನ’ ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು.
25 : ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸತೊಡಗಿತು.

Holydivine