Judges - Chapter 11
Holy Bible

1 : ಗಿಲ್ಯಾದ್ಯನಾದ ಯೆಪ್ತಾಹನು ಒಬ್ಬ ಮಹಾಪರಾಕ್ರಮಿ. ಈತ ಗಿಲ್ಯಾದನಿಗೆ ಒಬ್ಬ ಉಪಪತ್ನಿಯಲ್ಲಿ ಹುಟ್ಟಿದವನು.
2 : ಗಿಲ್ಯಾದನಿಗೆ ಹೆಂಡತಿಯಲ್ಲೂ ಮಕ್ಕಳು ಹುಟ್ಟಿದರು. ಇವರು ದೊಡ್ಡವರಾದ ಮೇಲೆ ಯೆಪ್ತಾಹನಿಗೆ, “ನೀನು ಪರಸ್ತ್ರೀಯಿಂದ ಹುಟ್ಟಿದವನು; ಆದುದರಿಂದ ನಿನಗೆ ನಮ್ಮ ತಂದೆಯ ಮನೆಯಲ್ಲಿ ಬಾಧ್ಯತೆ ಸಿಕ್ಕಲಾರದು,” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
3 : ಅವನು ತನ್ನ ಸಹೋದರನನ್ನು ಬಿಟ್ಟು ಟೋಬ್‍ದೇಶಕ್ಕೆ ಹೋದನು. ಅಲ್ಲಿನ ಪುಂಡ ಪೋಕರಿಗಳು ಕೂಡಿ ಅವನನ್ನು ಹಿಂಬಾಲಿಸಿದರು.
4 : ಇಸ್ರಯೇಲರಿಗೆ ವಿರೋಧವಾಗಿ ಬಂದ ಅಮ್ಮೋನಿಯರು ಸ್ವಲ್ಪದಿನಗಳಾದ ಮೇಲೆ ಯುದ್ಧವನ್ನು ಪ್ರಾರಂಭಿಸಿದರು.
5 : ಆಗ ಗಿಲ್ಯಾದಿನ ಹಿರಿಯರು ಯೆಪ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರುವುದಕ್ಕಾಗಿ ಅಲ್ಲಿಗೆ ಹೋದರು.
6 : ಅವನಿಗೆ, “ನಾವು ಅಮ್ಮೋನಿಯರೊಡನೆ ಯುದ್ದಮಾಡುವ ಹಾಗೆ ನೀನು ಬಂದು ನಮ್ಮ ನಾಯಕನಾಗು,” ಎಂದು ಬೇಡಿಕೊಂಡರು.
7 : ಅವನು ಅವರಿಗೆ, “ನನ್ನನ್ನು ಹಗೆಮಾಡಿ ನನ್ನ ತಂದೆಯ ಮನೆಯಿಂದ ಅಟ್ಟಿಬಿಟ್ಟವರು ನೀವೇ ಅಲ್ಲವೇ? ನಿಮಗೆ ಕಷ್ಟಬಂದಾಗ ನನ್ನ ಬಳಿಗೆ ಏಕೆ ಬಂದಿರಿ?” ಎಂದನು.
8 : ಅವರು, “ಆದುದರಿಂದಲೇ ಈಗ ಪುನಃ ನಿನ್ನ ಬಳಿಗೆ ಬಂದಿದ್ದೇವೆ; ನಮ್ಮ ಸಂಗಡ ಬಂದು ಅಮ್ಮೋನಿಯರೊಡನೆ ಯುದ್ಧಮಾಡುವಿಯಾದರೆ ಗಿಲ್ಯಾದಿನವರಿಗೆಲ್ಲಾ ನೀನೆ ಶಿರಸ್ಸಾಗಿರುವೆ,” ಎಂದು ಹೇಳಿದರು.
9 : ಆಗ ಯೆಪ್ತಾಹನು ಅವರಿಗೆ, “ನೀವು ನನ್ನನ್ನು ಅಮ್ಮೋನಿಯರೊಡನೆ ಯುದ್ದ ಮಾಡುವುದಕ್ಕಾಗಿ ಕರೆದುಕೊಂಡು ಹೋಗುವುದಾದರೆ ಸರ್ವೇಶ್ವರ ಅವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟರೆ ನಿಜವಾಗಿ ನೀವು ನನ್ನನ್ನು ಅಧಿಪತಿಯನ್ನಾಗಿ ಮಾಡುವಿರೋ?” ಎಂದು ಕೇಳಿದನು.
10 : ಅವರು ಅವನಿಗೆ, “ಹಾಗೆಯೇ ಮಾಡುತ್ತೇವೆ; ಉಭಯತ್ರರ ಮಾತುಗಳಿಗೆ ಸರ್ವೇಶ್ವರನೇ ಸಾಕ್ಷಿ,” ಎಂದು ಉತ್ತರಕೊಟ್ಟರು.
11 : ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇಮಿಸಿದರು. ಯೆಪ್ತಾಹನು ತನ್ನ ವಿಷಯಗಳನ್ನೆಲ್ಲಾ ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಅರಿಕೆ ಮಾಡಿದನು.
12 : ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧ ಮಾಡುವುದಕ್ಕೇನು ಕಾರಣ?” ಎಂದು ಕೇಳಿದನು.
13 : ಆ ಅರಸನು ದೂತರಿಗೆ, “ಇಸ್ರಯೇಲರು ಈಜಿಪ್ಟಿನಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್, ಜೋರ್ಡನ್ ನದಿಗಳವರೆಗೂ ಇದ್ದು ನನ್ನ ದೇಶವನ್ನು ಕಸಿದುಕೊಂಡರಲ್ಲವೆ? ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು,” ಎಂದು ಹೇಳಿ ಕಳುಹಿಸಿದನು.
14 : ಯೆಪ್ತಾಹನು ಇನ್ನೊಂದು ಸಾರಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ಅವನಿಗೆ,
15 : “ಯೆಪ್ತಾಹನಾದ ನನ್ನ ಮಾತನ್ನು ಕೇಳು; ಇಸ್ರಯೇಲರು ಮೋವಾಬ್ಯರ ಮತ್ತು ಅಮ್ಮೋನಿಯರ ದೇಶವನ್ನು ತೆಗೆದುಕೊಳ್ಳಲೇ ಇಲ್ಲ.
16 : ಅವರು ಈಜಿಪ್ಟರ ನಾಡನ್ನು ಬಿಟ್ಟ ನಂತರ ಮರುಭೂಮಿಯಲ್ಲಿ ಸಂಚರಿಸಿ ಕೆಂಪುಸಮುದ್ರಕ್ಕೂ ಅನಂತರ ಕಾದೇಶಿಗೂ ಬಂದರು.
17 : ಅವರು ಅಲ್ಲಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ಅಪ್ಪಣೆಯಾಗಬೇಕು,’ ಎಂದು ಬೇಡಿಕೊಳ್ಳಲು ಅವನು ಒಪ್ಪಿಕೊಳ್ಳಲಿಲ್ಲ. ತರುವಾಯ ಮೋವಾಬ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಲು ಅವನು ಒಪ್ಪಿಕೊಳ್ಳಲಿಲ್ಲ; ಆದುದರಿಂದ ಅವರು ಕಾದೇಶಿನಲ್ಲಿಯೇ ನಿಂತರು.
18 : ಅನಂತರ ಅವರು ಮರುಭೂಮಿಯಲ್ಲಿ ಪ್ರಯಾಣ ಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್ ದೇಶದ ಪೂರ್ವ ದಿಕ್ಕಿಗೆ ಬಂದು ಅದರ ಮೇರೆಯಾಗಿರುವ ಅರ್ನೋನ್ ನದಿಯ ಆಚೆಯಲ್ಲಿ ಇಳಿದುಕೊಂಡರು; ಮೋವಾಬ್ಯರ ಮೇರೆಯೊಳಗೆ ಕಾಲು ಇಡಲಿಲ್ಲ.
19 : ಬಳಿಕ ಹೆಷ್ಬೋನನ್ನು ರಾಜಧಾನಿ ಮಾಡಿಕೊಂಡಿದ್ದ ಅಮೋರಿಯರ ಅರಸನಾದ ಸೀಹೋನನ ಬಳಿಗೆ ಅವರು ದೂತರನ್ನು ಕಳುಹಿಸಿ, “ನಿನ್ನ ದೇಶವನ್ನು ದಾಟಿ ನಮ್ಮ ಸ್ಥಳಕ್ಕೆ ಹೋಗುವುದಕ್ಕೆ ಅಪ್ಪಣೆ ಕೊಡು,” ಎಂದು ಅವನನ್ನು ಬೇಡಿಕೊಂಡರು.
20 : ಆದರೆ ಸೀಹೋನನು ಅವರನ್ನು ನಂಬದೆ ತನ್ನ ಸೀಮೆಯನ್ನು ದಾಟಿ ಹೋಗುವುದಕ್ಕೆ ಅಪ್ಪಣೆಕೊಡದೆ ತನ್ನ ಜನರನ್ನು ಕೂಡಿಸಿಕೊಂಡು ಯಹಚಕ್ಕೆ ಬಂದು ಅವರೊಡನೆ ಯುದ್ಧ ಮಾಡಿದನು.
21 : ಇಸ್ರಯೇಲರ ದೇವರಾದ ಸರ್ವೇಶ್ವರ ಸೀಹೋನನನ್ನೂ ಅವನ ಜನರೆಲ್ಲರನ್ನೂ ಇಸ್ರಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು.
22 : ಹೀಗೆ ಇಸ್ರಯೇಲರು ಅರ್ನೋನಿನಿಂದ ಯಬ್ಬೋಕಿನವರೆಗೂ ಮರುಭೂಮಿಯಿಂದ ಜೋರ್ಡನಿನವರೆಗೂ ಇದ್ದ ಅಮೋರಿಯರ ಪ್ರಾಂತ್ಯವನ್ನೆಲ್ಲಾ ವಶಮಾಡಿಕೊಂಡರು.
23 : “ಇಸ್ರಯೇಲರ ದೇವರಾದ ಸರ್ವೇಶ್ವರ ಈ ದೇಶವನ್ನು ಅಮೋರಿಯರಿಂದ ತೆಗೆದು ತನ್ನ ಪ್ರಜೆಗಳಾದ ಇಸ್ರಯೇಲರಿಗೆ ಕೊಟ್ಟ ಮೇಲೆ ನೀನು ಅದನ್ನು ತೆಗೆದುಕೊಳ್ಳುವುದು ಹೇಗೆ?
24 : ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವತಂತ್ರಿಸಿಕೊಳ್ಳುವುದಿಲ್ಲವೇ? ಹಾಗೆಯೇ ನಮ್ಮ ದೇವರಾದ ಸರ್ವೇಶ್ವರ ನಮಗೆ ಒಪ್ಪಿಸಿಕೊಡುವುದನ್ನು ನಾವು ಸ್ವತಂತ್ರಿಸಿಕೊಳ್ಳುವುದು ನ್ಯಾಯವಾಗಿದೆ.
25 : ಚಿಪ್ಪೋರನ ಮಗನೂ ಮೋವಾಬ್ಯರ ಅರಸನೂ ಆದ ಬಾಲಾಕನಿಗಿಂತ ನೀನು ಹೆಚ್ಚಿನವನೇ? ಅವನು ಇಸ್ರಯೇಲರೊಡನೆ ಎಂದಾದರೂ ವಿವಾದಮಾಡಿದನೇ? ಅಥವಾ ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೇ?
26 : ಇಸ್ರಯೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲೂ ಅವುಗಳ ಗ್ರಾಮಗಳಲ್ಲೂ ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲೂ ವಾಸಿಸುತ್ತಿದ್ದಾರಲ್ಲವೆ? ಇಷ್ಟು ದಿವಸಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ?
27 : ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯ ಮಾಡಿದ ಹಾಗಾಯಿತು. ನ್ಯಾಯಸ್ಥಾಪಕರಾದ ಸರ್ವೇಶ್ವರಸ್ವಾಮಿಯೇ ಈ ಹೊತ್ತು ಇಸ್ರಯೇಲರಿಗೂ ಅಮ್ಮೋನಿಯರಿಗೂ ಮಧ್ಯೆ ನ್ಯಾಯ ತೀರಿಸಲಿ,” ಎಂದು ಹೇಳಿಸಿದನು.
28 : ಆದರೆ ಯೆಪ್ತಾಹನು ಹೇಳಿಕಳುಹಿಸಿದ ಮಾತುಗಳಿಗೆ ಅಮ್ಮೋನಿಯರ ಅರಸನು ಕಿವಿಗೊಡಲಿಲ್ಲ.
29 : ಆಗ ಸರ್ವೇಶ್ವರನ ಆತ್ಮ ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್‍ಪ್ರಾಂತ್ಯ, ಮನಸ್ಸೆಯ ನಾಡು, ಇವುಗಳಲ್ಲಿ ಸಂಚರಿಸಿ ಮತ್ತೆ ಗಿಲ್ಯಾದಿನ ಮಿಚ್ಫೆಗೆ ಬಂದು ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು.
30 : ಇದಲ್ಲದೆ ಅವನು ಸರ್ವೇಶ್ವರಸ್ವಾಮಿಗೆ, “ತಾವು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ
31 : ನಾನು ಸುರಕ್ಷಿತವಾಗಿ ಹಿಂದಿರುಗುವಾಗ ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥ ಪ್ರಾಣಿ ತಮಗೆ ವಿೂಸಲು ಎಂದೂ ಅದನ್ನು ತಮಗೆ ದಹನಬಲಿದಾನ ಮಾಡುವೆನು” ಎಂದೂ ಹರಕೆಮಾಡಿದನು.
32 : ಯೆಪ್ತಾಹನು ನದಿಯನ್ನು ದಾಟಿ ಅಮ್ಮೋನಿಯರಿಗೆ ವಿರುದ್ಧ ಯುದ್ಧಕ್ಕೆ ಹೋಗಲು ಅವರನ್ನು ಸರ್ವೇಶ್ವರ ಅವನ ಕೈಗೆ ಒಪ್ಪಿಸಿದರು.
33 : ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಅಬೇಲ್ ಕೆರಾವಿೂಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳು ಮಾಡಿದನು. ಹೀಗೆ ದೊಡ್ಡ ಜಯವಾಗಿ, ಅಮ್ಮೋನಿಯರು ಇಸ್ರಯೇಲರಿಗೆ ಶರಣಾದರು.
34 : ಯೆಪ್ತಾಯನ ಮಿಚ್ಫೆಯಲ್ಲಿದ್ದ ತನ್ನ ಮನೆಯನ್ನು ಸವಿೂಪಿಸಿದಾಗ ಅವನ ಮಗಳು ದಮ್ಮಡಿ ಬಡಿಯುತ್ತಾ ನಾಟ್ಯವಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆ ಅವನ ಒಬ್ಬಳೇ ಮಗಳು. ಆಕೆಯ ಹೊರತು ಅವನಿಗೆ ಬೇರೆ ಗಂಡುಹೆಣ್ಣು ಮಕ್ಕಳೇ ಇರಲಿಲ್ಲ.
35 : ಆಕೆಯನ್ನು ಕಾಣುತ್ತಲೆ ಅವನು ದುಃಖತಾಳಲು ಆಗದೆ ಬಟ್ಟೆಯನ್ನು ಹರಿದುಕೊಂಡು, “ಅಯ್ಯೋ ನನ್ನ ಮಗಳೇ, ನೀನು ನನ್ನನ್ನು ಎಂಥಾ ಯಾತನೆಗೆ ಈಡುಮಾಡಿದೆ; ನನಗೆ ಮಹಾ ಸಂಕಟವನ್ನುಂಟುಮಾಡಿದೆ! ನಾನು ಬಾಯಾರೆ ಸರ್ವೇಶ್ವರನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾಗದು,” ಎಂದು ಕೂಗಿಕೊಂಡನು.
36 : ಆಕೆ ಅವನಿಗೆ, “ಅಪ್ಪಾ, ನೀನು ಬಾಯಾರೆ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅವರು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿತೀರಿಸಿದ್ದಾರೆ. ಆದ್ದರಿಂದ ನಿನ್ನ ಬಾಯಿಂದ ಬಂದದ್ದನ್ನೇ ನೆರವೇರಿಸು,” ಎಂದಳು.
37 : ಆಕೆ ಪುನಃ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಆಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಗುಡ್ಡ ಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗಾಗಿ ಗೋಳಾಡುವೆನು,” ಎಂದಳು. ಅವನು, “ಎರಡು ತಿಂಗಳ ತನಕ ಹೋಗಿ ಬಾ,” ಎಂದು ಹೇಳಿ ಕಳುಹಿಸಿದನು.
38 : ಆಕೆ ಸಖಿಯರ ಸಹಿತ ಗುಡ್ಡ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗಾಗಿ ಗೋಳಾಡಿದಳು.
39 : ಎರಡು ತಿಂಗಳು ಕಳೆದ ನಂತರ ಆಕೆ ಮರಳಿ ತಂದೆಯ ಹತ್ತಿರ ಬಂದಳು. ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆ ಕನ್ಯೆಯಾಗಿಯೇ ಸತ್ತಳು.
40 : ಇಸ್ರಯೇಲರ ಹೆಣ್ಣು ಮಕ್ಕಳು ಪ್ರತಿ ವರ್ಷ ನಾಲ್ಕುದಿವಸ ಗಿಲ್ಯಾದ್ಯನಾದ ಯೆಪ್ತಾಹನ ಮಗಳ ಸ್ಮರಣೆಮಾಡುತ್ತಾರೆ. ಅವರಲ್ಲಿ ಇದೊಂದು ಪದ್ಧತಿ.

Holydivine