Judges - Chapter 2
Holy Bible

1 : ಸರ್ವೇಶ್ವರಸ್ವಾಮಿಯ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ ನಿಮ್ಮ ಪೂರ್ವಜರಿಗೆ ಪ್ರಮಾಣಮಾಡಿದ ನಾಡಿಗೆ ಕರೆದುತಂದೆನು. ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲ ಎಂದು ಮಾತುಕೊಟ್ಟೆನು.
2 : ಆಗ, ನೀವು ಈ ನಾಡಿನ ನಿವಾಸಿಗಳ ಸಂಗಡ ಒಡಂಬಡಿಕೆಮಾಡಿ ಕೊಳ್ಳಬಾರದು, ಅವರ ಬಲಿಪೀಠಗಳನ್ನು ಕೆಡವಿ ಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೇಕೆ ಮಾಡಿದಿರಿ?
3 : ನೀವು ಹೀಗೆ ಮಾಡುವುದಾದರೆ ನಾನು ಈ ನಾಡಿನ ನಿವಾಸಿಗಳನ್ನು ನಿಮ್ಮಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮನ್ನು ಉಪದ್ರವಪಡಿಸುವರು. ಅವರ ದೇವತೆಗಳು ನಿಮ್ಮನ್ನು ತಮ್ಮ ಉರುಳಿನಲ್ಲಿ ಸಿಕ್ಕಿಸಿಕೊಳ್ಳುವುವು ಎಂದು ನಿಮಗೆ ಮೊದಲೇ ಹೇಳಿದ್ದೇನೆ” ಎಂದನು.
4 : ಸರ್ವೇಶ್ವರನ ದೂತನು ಹೇಳಿದ ಈ ಮಾತುಗಳನ್ನು ಕೇಳಿ ಇಸ್ರಯೇಲರೆಲ್ಲರು ಗಟ್ಟಿಯಾಗಿ ಅತ್ತರು.
5 : ಆದುದರಿಂದಲೇ ಆ ಸ್ಥಳಕ್ಕೆ ‘ಬೋಕೀಮ್’ ಎಂದು ಹೆಸರಿಟ್ಟು ಅಲ್ಲಿಯೇ ಸರ್ವೇಶ್ವರನಿಗೆ ಬಲಿಯನ್ನರ್ಪಿಸಿದರು.
6 : ಯೆಹೋಶುವನು ಇಸ್ರಯೇಲರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವತಂತ್ರಿಸಿಕೊಂಡರು
7 : ಯೆಹೋಶುವನ ದಿನಗಳಲ್ಲೂ ಅವನ ಕಾಲದಿಂದ ಇನ್ನೂ ಜೀವಿಸುತ್ತಿದ್ದ ಹಿರಿಯರ ದಿನಗಳಲ್ಲೂ ಇಸ್ರಯೇಲರು ಸರ್ವೇಶ್ವರನಿಗೆ ಸೇವೆಸಲ್ಲಿಸುತ್ತಾ ಬಂದರು. ಈ ಹಿರಿಯರು ಸರ್ವೇಶ್ವರ ಇಸ್ರಯೇಲರ ಪರವಾಗಿ ಮಾಡಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದರು.
8 : ಸರ್ವೇಶ್ವರನ ದಾಸ ನೂನನ ಮಗ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದನು.
9 : ಅವನನ್ನು ಅವನ ಸ್ವಾಸ್ತ್ಯಭೂಮಿಯಾದ ತಿಮ್ನತ್‍ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು. ಅದು ಎಫ್ರಯಿಮ್ ಪರ್ವತಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿದೆ
10 : ಅವನ ಕಾಲದವರೆಲ್ಲರೂ ತಮ್ಮ ಪೂರ್ವಜರಂತೆ ದೈವಾಧೀನರಾದ ಮೇಲೆ ಬೇರೊಂದು ಸಂತಾನ ಹುಟ್ಟಿಕೊಂಡಿತು. ಇವರು ಸರ್ವೇಶ್ವರಸ್ವಾಮಿಯನ್ನು ಮರೆತರು; ಇಸ್ರಯೇಲರಿಗೆ ಮಾಡಿದ ಮಹತ್ಕಾರ್ಯಗಳ ನೆನಪು ಇವರಿಗೆ ಇರಲಿಲ್ಲ.
11 : ಈ ಇಸ್ರಯೇಲರು ಬಾಳ್ ದೇವತೆಯ ಪ್ರತಿಮೆಗಳನ್ನು ಪೂಜಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು.
12 : ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದುತಂದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಮುತ್ತಲಿನ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಸರ್ವೇಶ್ವರನನ್ನು ರೇಗಿಸಿದರು.
13 : ಅವರು ಸರ್ವೇಶ್ವರನನ್ನು ಬಿಟ್ಟು ‘ಬಾಳ್ ಅಷ್ಟೋರೆತ್’ ಎಂಬ ದೇವತೆಗಳನ್ನು ಪೂಜಿಸತೊಡಗಿದರು.
14 : ಆದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆಹೊಡೆಯುವವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿಬಿಟ್ಟರು. ಆ ಶತ್ರುಗಳ ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು.
15 : ಮೊದಲೇ ಆಣೆಯಿಟ್ಟು ಹೇಳಿದಂತೆ ಅವರು ಎಲ್ಲಿಗೆ ಹೋದರೂ ಸರ್ವೇಶ್ವರನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರಿಗೆ ಬಹಳ ದುಃಖ ಉಂಟಾಯಿತು.
16 : ಆಗ ಸರ್ವೇಶ್ವರ ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದರು.
17 : ಇಸ್ರಯೇಲರು ಇವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವದ್ರೋಹಿಗಳಾದರು. ಸರ್ವೇಶ್ವರನ ಆಜ್ಞೆಗಳನ್ನು ಪಾಲಿಸುತ್ತಿದ್ದ ತಮ್ಮ ಪೂರ್ವಜರ ಮಾರ್ಗವನ್ನು ಬೇಗನೆ ತ್ಯಜಿಸಿಬಿಟ್ಟರು. ಅವರಂತೆ ನಡೆಯಲೇ ಇಲ್ಲ.
18 : ವೈರಿಗಳ ಹಿಂಸೆಯನ್ನು ತಾಳಲಾರದೆ ಇಸ್ರಯೇಲರು ಗೋಳು ಇಟ್ಟರು. ಸರ್ವೇಶ್ವರ ಅದನ್ನು ಕೇಳಿ ಕನಿಕರಪಟ್ಟು ನ್ಯಾಯಾಧಿಪತಿಗಳನ್ನು ಕಳುಹಿಸಿಕೊಟ್ಟರು; ಜೀವಮಾನವೆಲ್ಲ ಅವರ ಸಂಗಡವೇ ಇದ್ದು ಅವರ ಮುಖಾಂತರ ಇಸ್ರಯೇಲರನ್ನು ಶತ್ರುಗಳಿಂದ ಬಿಡಿಸಿದರು. ತಮ್ಮನ್ನು ಹಿಂಸಿಸುತ್ತಿದ್ದವರ ಕಾಟವನ್ನು ತಾಳದೆ ಮೊರೆಯಿಡುವುದನ್ನು ಸರ್ವೇಶ್ವರ ಕೇಳಿ ಮನಮರುಗಿದರು.
19 : ಅಂಥ ನ್ಯಾಯಾಧಿಪತಿಗಳು ತೀರಿಹೋದ ನಂತರ ಇಸ್ರಯೇಲರು ಮತ್ತೆ ತಮ್ಮ ಹಿಂದಿನವರಿಗಿಂತಲೂ ಭ್ರಷ್ಠರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಸೇವೆಮಾಡಿ ಅಡ್ಡಬಿದ್ದರು. ಅವರು ತಮ್ಮ ದರ್ಮಾರ್ಗವನ್ನೂ ಹಠಮಾರಿತನವನ್ನೂ ಬಿಡಲೇಇಲ್ಲ.
20 : ಆದ್ದರಿಂದ ಸರ್ವೇಶ್ವರನ ಕೋಪ ಇಸ್ರಯೇಲರ ಮೇಲೆ ಉರಿಯುತ್ತಲೇ ಇತ್ತು; “ಈ ಜನರ ಪೂರ್ವಜರಿಗೆ ನಾನು ಕೊಟ್ಟ ನಿಬಂಧನೆಯನ್ನು ಇವರು ಪಾಲಿಸಲಿಲ್ಲ, ನನ್ನ ಮಾತಿಗೆ ಕಿವಿಗೊಡಲಿಲ್ಲ.
21 : ಇವರು ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಸರ್ವೇಶ್ವರನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮುಖಾಂತರವೇ ಪರೀಕ್ಷಿಸುವೆನು,” ಎಂದುಕೊಂಡರು.
22 : ಆದ್ದರಿಂದ ಯೆಹೋಶುವನು ಸಾಯುವ ಮೊದಲು ಹೊರಗಟ್ಟದೆ ಬಿಟ್ಟ ಜನಾಂಗಗಳಲ್ಲಿ ಒಂದನ್ನಾದರೂ ನಾನು ಹೊರಡಿಸುವುದಿಲ್ಲ.
23 : ಈ ಕಾರಣ ಸರ್ವೇಶ್ವರಸ್ವಾಮಿ ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಅಟ್ಟಿಬಿಡಲಿಲ್ಲ.

Holydivine