Judith - Chapter 9
Holy Bible

1 : ಜೂಡಿತ್ ನೆಲದ ಮೇಲೆ ಅಧೋಮುಖವಾಗಿ ಬಿದ್ದು ಹಣೆಗೆ ಬೂದಿ ಹಚ್ಚಿಕೊಂಡಳು. ಒಳ್ಳೆಯ ಬಟ್ಟೆಗಳನ್ನು ತೆಗೆದಿಟ್ಟು, ಗೋಣಿತಟ್ಟನ್ನು ಮಾತ್ರ ಉಳಿಸಿಕೊಂಡು ಉಚ್ಚಸ್ವರದಿಂದ ದೇವರಿಗೆ ಪ್ರಾರ್ಥನೆ ಮಾಡಿದಳು. ಅದೇ ಸಮಯದಲ್ಲಿ ಜೆರುಸಲೇಮಿನ ದೇವಾಲಯದಲ್ಲಿ ಸಂಧ್ಯಾಧೂಪಾರತಿ ಬೆಳಗುತ್ತಿದ್ದರು. ಆಗ ಜೂಡಿತ್ ಹೇಳಿದ್ದೇನೆಂದರೆ:
2 : “ಸರ್ವೇಶ್ವರಾ, ನಮ್ಮ ಪೂರ್ವಜ ಸಿಮೆಯೋನನ ದೇವರೇ, ಪರಕೀಯರ ಮೇಲೆ ಸೇಡು ತೀರಿಸಲು ಆತನಿಗೆ ನೀ ಕತ್ತಿಯನ್ನಿತ್ತೆ. ಅವಮಾನಗೊಳಿಸಿದರವರು ಕನ್ಯೆಗೆ ಅತ್ಯಾಚಾರವೆಸಗಿ ಮಾನಭಂಗಮಾಡಿದರು ಆಕೆಯನ್ನು ಬಟ್ಟೆ ಬರಿದುಮಾಡಿ ನಾಚಿಕೆಗೀಡುಮಾಡಿದರು ಆಕೆಯ ಉದರವನ್ನು ಕೆಡಿಸಿ ‘ಮಾಡಕೂಡದೆಂದು’ ನೀ ವಿಧಿಸಿದರೂ ಎಸಗಿದರು ಹೀನಕೃತಿ.
3 : ಈ ಕಾರಣ ಹತ್ಯೆಗೀಡುಮಾಡಿದೆ ಅವರ ಅರಸರನೆ ರಕ್ತದಿಂದ ತೋಯಿಸಿದೆ ಅವರು ಹೇಸಿಗೆ ಮಾಡಿದ ಹಾಸಿಗೆಯನೆ. ಸದೆಬಡಿದೆ ನೀ ದಾಸರನು ದಣಿಗಳೊಂದಿಗೆ ಸದೆಬಡಿದೆ ಅವರನು ಅವರ ಸಿಂಹಾಸನಗಳ ಮೇಲೆಯೆ.
4 : ಅವರ ಸತಿಯರನ್ನು ಅಪಹರಿಸಲು ಶತ್ರುಗಳಿಗೆ ಬಿಟ್ಟೆ ಹೆಣ್ಣುಮಕ್ಕಳನ್ನು ಸೆರೆಹಿಡಿಯಲು ಅವರಿಗೆ ಕೊಟ್ಟೆ ಅವರ ಕೊಳ್ಳೆಯನ್ನು ಪಾಲು ಮಾಡಿಕೊಳ್ಳಲು ಪ್ರಿಯ ಇಸ್ರಯೇಲರಿಗೆ ಬಿಟ್ಟೆ. ನಿನ್ನಲ್ಲಿ ಭಕ್ತಿವಿಶ್ವಾಸವಿಟ್ಟ ಮಕ್ಕಳು ಅವರೇ ತಮ್ಮಲ್ಲಿ ಹೇಸಿಗೆ ಮಾಡಿದವರನ್ನು ದ್ವೇಷಿಸಿದವರು ಅವರೇ. ನಿಮ್ಮ ಆಶ್ರಯಕ್ಕಾಗಿ ಮೊರೆಯಿಟ್ಟವರು ಈ ಇಸ್ರಯೇಲರೇ. ಓ ದೇವಾ, ನನ್ನ ದೇವಾ, ಈ ವಿಧವೆಯ ಪ್ರಾರ್ಥನೆಯನ್ನಾಲಿಸಯ್ಯಾ !
5 : ನಿನ್ನೆ, ಇಂದು, ನಾಳೆ, ಎಂಬುದು ನಿನ್ನದೇ. ಇರುವುದನು, ಬರುವುದನು ಯೋಚಿಸುವವನು ನೀನೇ. ಗತಿಸಿಹೋದುದನು ಆಲೋಚಿಸಿದಾತನು ನೀನೇ.
6 : ನಿರೀಕ್ಷೆಯುಳ್ಳದ್ದಾಗಿವೆ ನಿನ್ನ ನಿರ್ಧಾರಗಳೆಲ್ಲ ಸಿದ್ಧವಿದ್ದು ‘ಇಗೋ ಇಲ್ಲಿದ್ದೇವೆ’ ಎನ್ನುವುವು ಅವೆಲ್ಲ. ಪೂರ್ವಸಿದ್ಧವಾದವು ನಿನ್ನ ಮಾರ್ಗಗಳೆಲ್ಲ ಪೂರ್ವವಿವೇಚನೆಯಿಂದಾದವು ನಿನ್ನ ತೀರ್ಪುಗಳೆಲ್ಲ.
7 : ಇಗೋ ನೋಡು, ಅಸ್ಸೀರಿಯದವರು ! ಮಹತ್ತಾದ ಸೈನ್ಯ ತಮಗಿದೆಯೆಂದು ಕೊಚ್ಚಿಕೊಳ್ಳುತಿಹರು ಕುದುರೆಗಳು, ರಾಹುತರು, ಇರುವುವೆಂದು ಮೆರೆಯುತಿಹರು. ಕಾಲಾಳುಗಳ ಸೇನೆ ಶಕ್ತಿಯಲಿ ಹಿಗ್ಗುತಿಹರು ಬಿಲ್ಲು ಗುರಾಣಿಗಳನೆ, ಕಲ್ಲು ಕವಣೆಗಳನೆ ನೆಚ್ಚಿಕೊಂಡಿಹರು. ನಿನ್ನನಾದರೋ ಒಪ್ಪದಿಹರು ಸರ್ವೇಶ್ವರನೆಂದು, ಯುದ್ಧಪಡೆಗಳನು ಪುಡಿಪುಡಿ ಮಾಡುವವನು ನೀನೆಂದು, ‘ಸರ್ವೇಶ್ವರ’ ಎಂಬ ಬಿರುದು ನಿನಗೆ ಮೀಸಲೆಂದು.
8 : ಅವರ ಹಿಂಸಾಚಾರವನು ನಿಲ್ಲಿಸು ದೇವಾ, ನಿನ್ನ ಶಕ್ತಿಯಿಂದ ಅವರ ಶೌರ್ಯವನು ಕರಗಿಸು ನಿನ್ನ ಕೋಪಾಗ್ನಿಯಿಂದ. ಏಕೆನೆ, ಹವಣಿಸುತಿಹರು ಪುಣ್ಯಕ್ಷೇತ್ರಗಳನು ಹೊಲಸಾಗಿಸಲು, ನಿನ್ನ ಮಹಿಮಾನಾಮದ ಗುಡಾರವನು ಮಲಿನಗೊಳಿಸಲು, ನಿನ್ನ ಬಲಿಪೀಠದ ಕೊಂಬುಗಳನು ಮುರಿದುಹಾಕಲು.
9 : ಅವರ ಗರ್ವವನು, ದೇವಾ, ಗಮನಿಸು ನಿನ್ನ ಕೋಪಾಗ್ನಿಯನು ಅವರ ಶಿರಗಳ ಮೇಲೆ ಸುರಿಸು ನನ್ನ ಮನದಾಲೋಚನೆಯನು ಕೈಗೂಡಿಸಲು ನನ್ನ ಕೈಗಳನು ಬಲಪಡಿಸು.
10 : ದಣಿಯನು, ದಾಸನನು ಅರಸನನು, ಸಿಂಹಾಸನವನು ಕೆಡವಿಬಿಡು ನಿನ್ನ ಮಾತಿನ ಮೋಡಿಯಿಂದ, ಅಡಗಿಸಿಬಿಡು ಅವರ ಸೊಕ್ಕನು ಈ ಮಹಿಳೆಯ ಕೈಯಿಂದ.
11 : ನಿನ್ನ ಶಕ್ತಿ ದೇವಾ, ಅಂಕೆಸಂಖ್ಯೆಗಳಲ್ಲಿಲ್ಲ ನಿನ್ನ ಶೌರ್ಯ ಶೂರರ ಸಾಮಥ್ರ್ಯದಲ್ಲಿಲ್ಲ. ಏಕೆನೆ ದೀನದಲಿತರ ದೇವ ನೀನು ದುರ್ಬಲರ, ಶೋಷಿತರ ಸಹಾಯಕ ನೀನು. ದಿಕ್ಕಿಲ್ಲದವರ ಉದ್ಧಾರಕ, ನಿರಾಶೆಗೊಂಡವರ ಆಶ್ರಯ ನೀನು.
12 : ದಯಮಾಡು, ದಯಮಾಡು, ನನ್ನ ಪಿತೃಗಳ ದೇವಾ ಇಸ್ರಯೇಲಿಗೆ ಸ್ವಾಸ್ತ್ಯವನ್ನೀಯುವ ದೇವಾ ಭೂಪರಗಳ ಒಡೆಯ, ಜಲರಾಶಿಗಳ ಸೃಷ್ಟಿಕರ್ತ ಸೃಷ್ಟಿಸಮಸ್ತಗಳ ರಾಜ, ಆಲಿಸು ನನ್ನೀ ಪ್ರಾರ್ಥನೆಯ.
13 : ನಿನ್ನ ಒಡಂಬಡಿಕೆಯನು, ನಿನ್ನ ಈ ಶ್ರೀನಿವಾಸವನು, ಸಿಯೋನ್ ಪರ್ವತವನು, ನಿನ್ನವರ ಮನೆತನವನು, ನಾಶಮಾಡಲು ಮಾಡಿಹರು ಕ್ರೂರ ಯೋಜನೆಗಳನು. ಗಾಯಗೊಳಿಸಿ ಸಾಯಿಸಲು ಈ ಶತ್ರುಗಳನು ಕರುಣಿಸೆನಗೆ ಕಪಟ ನಾಲಗೆಯೊಂದನು.
14 : ತೋರಿಸೀಗ ಸರ್ವಜಾತಿ ಜನಾಂಗಗಳಿಗೆ ಸರ್ವಶಕ್ತ, ಸರ್ವವಲ್ಲಭ, ಸರ್ವೇಶ್ವರ ನೀನೆಂದೇ; ಇಸ್ರಯೇಲ್ ಕುಲಕ್ಕೆ ಸಂರಕ್ಷಕನಾರೂ ಇಲ್ಲ ನೀನಲ್ಲದೆ.

Holydivine