Judith - Chapter 3
Holy Bible

1 : ಆದ್ದರಿಂದ ಈ ಎಲ್ಲಾ ನಾಡಿನವರು ರಾಯಭಾರಿಗಳನ್ನು ಹೊಲೊಫರ್ನೆಸನ ಬಳಿಗೆ ಕಳುಹಿಸಿದರು.
2 : ಇವರು ಬಂದು, “ಮಹಾರಾಜ ನೆಬೂಕದ್ನೆಚ್ಚರವರ ದಾಸರು ನಾವು; ನಿಮಗೆ ಅಡ್ಡಬೀಳುತ್ತೇವೆ. ತಮ್ಮ ಇಚ್ಛಾನುಸಾರ ನಮಗೆ ಏನು ಬೇಕಾದರೂ ಮಾಡಬಹುದು.
3 : ಇದೋ, ನಮ್ಮ ಹುಲ್ಲುಗಾವಲುಗಳು, ಬೆಳೆ ತುಂಬಿದ ಹೊಲಗದ್ದೆಗಳು, ದನಕರುಗಳು, ಆಡು ಮೇಕೆಗಳು, ನಮ್ಮ ಸ್ವತ್ತನೆಲ್ಲವನ್ನು ನಿಮಗೆ ಒಪ್ಪಿಸುತ್ತೇವೆ. ನಿಮಗೆ ಇಷ್ಟಬಂದಂತೆ ಉಪಯೋಗಿಸಿಕೊಳ್ಳಬಹುದು.
4 : ನಮ್ಮ ಪಟ್ಟಣಗಳು, ಅವುಗಳ ನಿವಾಸಿಗಳು ಸಹ ನಿಮ್ಮ ಸೇವೆಗೆ ಮೀಸಲಾಗಿವೆ. ನಿಮಗೆ ಉಚಿತವಾಗಿ ಕಂಡಂತೆ ಬಳಸಿಕೊಳ್ಳಬಹುದು,” ಎಂದು ತಿಳಿಸಿದರು.
5 : ಮೇಲ್ಕಂಡ ವರದಿಯನ್ನು ಕೇಳಿದನಂತರ ಹೊಲೊಫರ್ನೆಸ್ ಮಹಾ ಠೀವಿಯಿಂದ ಸೈನ್ಯದೊಂದಿಗೆ ಹೊರಟನು. ಗುಡ್ಡದಿಂದ ಇಳಿದು ಕರಾವಳಿಯ ಕಡೆ ಹೋದನು.
6 : ದಾರಿಯಲ್ಲಿ ಕೋಟೆಗಳ ಕಾವಲಾಗಿ ಪಡೆಗಳನ್ನು ಇರಿಸಿದನು. ಸಹಾಯಪಡೆಗೆಂದು ಶೂರರಾದ ಸೈನಿಕರನ್ನು ಆರಿಸಿಕೊಂಡನು.
7 : ಅಲ್ಲಿನ ನಗರಗಳ ಹಾಗೂ ಪಟ್ಟಣಗಳ ನಿವಾಸಿಗಳು ಪುಷ್ಪಹಾರಗಳೊಂದಿಗೆ, ವಾದ್ಯಸಂಗೀತದೊಂದಿಗೆ ಅವನನ್ನು ಸ್ವಾಗತಿಸಿದರು.
8 : ಆದರೆ ಅವನು ಅವರ ಪುಣ್ಯಕ್ಷೇತ್ರಗಳನ್ನು ನೆಲಸಮಮಾಡಿದನು. ಪೂಜಾಮರಗಳನ್ನು ಕಡಿದು ಹಾಕಿದನು. ನಾಡುದೇವತೆಗಳನ್ನು ತೆಗೆದುಹಾಕಿದನು. ಹೀಗೆ ಸರ್ವರಾಷ್ಟ್ರಗಳ ಎಲ್ಲಾ ಭಾಷೆಗಳಾಡುವವರು ಹಾಗೂ ಇತರ ಜನಾಂಗದವರು ನೆಬೂಕದ್ನೆಚ್ಚರನನ್ನೇ ದೇವರೆಂದು ಪೂಜಿಸಬೇಕು ಎಂಬ ರಾಜಾಜ್ಞೆಯನ್ನು ಅಕ್ಷರಶಃ ಈಡೇರಿಸಿದನು.
9 : ಈಪರಿ ಸಾಗುತ್ತಾ ಎಸ್ಡ್ರಲೋನಿನ ಗಡಿಯ ಬಳಿ, ಅಂದರೆ ಜುದೇಯ ಪರ್ವತಶ್ರೇಣಿಗೆ ಎದುರಾಗಿದ್ದ ದೋತಾನ್ ಎಂಬ ಗ್ರಾಮದ ಅರುಗಿನಲ್ಲಿ ಸೇರಿದನು.
10 ಅಲ್ಲಿ ಗೆಬಾ ಮತ್ತು ಶಿತೋಪೊಲಿಸಿನ ಮಧ್ಯೆ ದಂಡಿಳಿಸಿದನು. ಸೈನ್ಯದಳಗಳೆಲ್ಲವನ್ನು ವ್ಯವಸ್ಥಿತವಾಗಿ ಒಂದುಗೂಡಿಸುವ ಸಲುವಾಗಿ ಒಂದು ತಿಂಗಳವರೆಗೆ ಅಲ್ಲಿಯೇ ತಂಗಿದ್ದನು.

Holydivine