Judith - Chapter 4
Holy Bible

1 : ಜುದೇಯ ನಾಡಿನಲ್ಲಿ ವಾಸವಾಗಿದ್ದ ಇಸ್ರಯೇಲರು ಈ ಸುದ್ದಿಯನ್ನು ಕೇಳಿ ಹೊಲೊಫರ್ನೆಸನಿಗೆ ಬಹುವಾಗಿ ಅಂಜಿದರು.
2 : ಅಸ್ಸೀರಿಯದ ಅರಸ ನೆಬೂಕದ್ನೆಚ್ಚರನ ಪ್ರಧಾನ ಸೇನಾನಿ ಹೊಲೊಫರ್ನೆಸನು ಇತರ ರಾಷ್ಟ್ರಗಳಿಗೂ ಅವುಗಳ ದೇವಾಲಯಗಳಿಗೂ ಮಾಡಿದಂತೆ ಜೆರುಸಲೇಮಿಗೂ ತಮ್ಮ ಸರ್ವೇಶ್ವರನಾದ ದೇವರ ಮಹಾಲಯಕ್ಕೂ ಮಾಡುವನೆಂದು ಎಣಿಸಿ ನಡುಗಿದರು.
3 : ಹೊರನಾಡುಗಳಿಗೆ ಗಡೀಪಾರಾಗಿ ಹೋಗಿ ಬಂದು ಅವರು ಕೆಲವೇ ದಿನಗಳಾಗಿದ್ದವು. ಅವರು ಜುದೇಯಕ್ಕೆ ಹಿಂದಿರುಗಿ ಬಂದು, ಒಟ್ಟಿಗೆ ಅಲ್ಲಿ ನೆಲೆಗೊಂಡರು. ಅಪವಿತ್ರಗೊಳಿಸಲಾಗಿದ್ದ ಮಹಾದೇವಾಲಯವನ್ನು ಪುನಃ ಕಟ್ಟಿ, ಗರ್ಭಗುಡಿಯನ್ನು ಪ್ರತಿಷ್ಠಾಪಿಸಿದರು. ಇವು ಇತ್ತೀಚೆಗೆ ತಾನೇ ನಡೆದ ಘಟನೆಗಳಾಗಿದ್ದವು.
4 : ಎಂತಲೇ, ಅವರು ಸಮಾರಿಯ ಮತ್ತು ಸುತ್ತುಮುತ್ತಲಿನ ಊರುಗಳಾದ ಕೋನಾ, ಬೆತ್-ಹೊರೊನ್, ಬಿಲ್‍ಮಯಿನ್, ಜೆರಿಕೊ, ಚೋಬಾ, ಎಸೋರಾ ಮತ್ತು ಸಾಲಿಂ ಕಣಿವೆ ಇವುಗಳಲ್ಲಿದ್ದವರನ್ನೂ ಎಚ್ಚರಿಸಿದರು.
5 : ಎತ್ತರವಾದ ಬೆಟ್ಟಗಳ ತುದಿಗಳನ್ನು ಏರಿಹೋಗಿ, ಅಲ್ಲಿನ ಊರುಗಳನ್ನು ಭದ್ರಗೊಳಿಸಿದರು. ಆಗ ತಾನೇ ಕೊಯಿಲು ಮುಗಿದಿದ್ದರಿಂದ ದವಸಧಾನ್ಯಗಳನ್ನು ಸಂಗ್ರಹಿಸಿ, ಯುದ್ಧಕಾಲಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಂಡರು.
6 : ಆಗ ಜೆರುಸಲೇಮಿನಲ್ಲಿದ್ದ ಪ್ರಧಾನ ಯಾಜಕನಾದ ಯೊವಾಕಿಂ ದೋತಾನ್ ಬಯಲಿನ ಕಡೆ ಇದ್ದ ಎಸ್ಡ್ರಲೊನ್ ನಾಡಿಗೆ ಎದುರಾಗಿದ್ದ ಬೆಥೂಲಿಯ ಮತ್ತು ಬಿತೊಮಸ್ತಾಯಿಮ್ ಪಟ್ಟಣಗಳ ನಿವಾಸಿಗಳಿಗೆ ಈ ಸಮಾಚಾರವನ್ನು ಬರೆದು ಕಳುಹಿಸಿದನು.
7 : ಜುದೇಯವನ್ನು ಪ್ರವೇಶಿಸಲು ಸಂದುಗಳಿದ್ದ ಕಣಿವೆಗಳನ್ನು ಭದ್ರಪಡಿಸಿದನು. ಆ ಸಂದುಗಳು ಎಷ್ಟು ಇಕ್ಕಟ್ಟಾಗಿದ್ದವು ಎಂದರೆ, ಇಬ್ಬಿಬ್ಬರು ಮಾತ್ರ ಒಮ್ಮೆಗೆ ಹಾದು ಹೋಗಲು ಸಾಧ್ಯವಾಗಿತ್ತು. ಅಂಥ ದಾರಿಯಲ್ಲಿ ಶತ್ರುಗಳನ್ನು ಸುಲಭವಾಗಿ ತಡೆಗಟ್ಟುವಂತೆ ಸೈನಿಕರನ್ನು ಕಾವಲಿರಿಸಿದನು.
8 : ಹೀಗೆ ಪ್ರಧಾನ ಯಾಜಕ ಯೊವಾಕಿಂ ಮತ್ತು ಜೆರುಸಲೇಮಿನ ಪ್ರಮುಖರ ಆಲೋಚನಾ ಮಂಡಳಿಯ ಆಜ್ಞೆಯ ಪ್ರಕಾರ ಜುದೇಯದ ಜನರು ಎಲ್ಲವನ್ನೂ ಮಾಡಿದರು.
9 : ಇಸ್ರಯೇಲಿನ ಜನರೆಲ್ಲರೂ ಬಹು ದೈನ್ಯದಿಂದ ಮತ್ತು ಶ್ರದ್ಧೆಯಿಂದ ದೇವರಲ್ಲಿ ಮೊರೆ ಇಟ್ಟರು.
10 : ಹೆಂಗಸರು, ಮಕ್ಕಳು, ದನಕರುಗಳು, ಅಲ್ಲಿ ವಾಸವಾಗಿದ್ದ ಪರಕೀಯರು, ಕೂಲಿ ಆಳುಗಳು, ದಾಸದಾಸಿಯರು ಎಲ್ಲರೂ ತಪಶ್ಚರ್ಯೆಯ ಸೂಚನೆಯಾಗಿ ಗೋಣಿತಟ್ಟನ್ನು ಸುತ್ತಿಕೊಂಡರು.
11 : ಜೆರುಸಲೇಮಿನಲ್ಲಿದ್ದ ಇಸ್ರಯೇಲರೆಲ್ಲರು, ಹೆಂಗಸರು ಮಕ್ಕಳು ಎನ್ನದೆ, ಎಲ್ಲರೂ ಮಹಾದೇವಾಲಯದ ಮುಂದೆ ಸಾಷ್ಟಾಂಗವೆರಗಿದರು. ಹಣೆಗೆ ವಿಭೂತಿಯನ್ನು ಹಚ್ಚಿಕೊಂಡರು. ಕರಗಳನ್ನೆತ್ತಿ ದೇವರಿಗೆ ಪ್ರಾರ್ಥನೆ ಮಾಡಿದರು.
12 : ಬಲಿಪೀಠಕ್ಕೂ ಗೋಣಿತಟ್ಟನ್ನು ಸುತ್ತಿ, ದೇವರಿಗೆ ಮೊರೆಯಿಟ್ಟು, “ಶತ್ರುಗಳು ನಮ್ಮ ಮಕ್ಕಳನ್ನು ಎಳೆದುಕೊಂಡು ಹೋಗದಿರಲಿ. ನಮ್ಮ ಹೆಂಡತಿಯರನ್ನು ಕೊಳ್ಳೆಯಂತೆ ಹಂಚಿಕೊಳ್ಳದಿರಲಿ. ನಮ್ಮ ಸೊತ್ತಾದ ಪಟ್ಟಣಗಳನ್ನು ನಾಶಗೊಳಿಸದಿರಲಿ. ನಮ್ಮ ಮಹಾದೇವಾಲಯವನ್ನು ಹೊಲೆಗೆಡಿಸಿ, ಭ್ರಷ್ಟಗೊಳಿಸಿ, ಅನ್ಯಧರ್ಮೀಯರು ಕೊಚ್ಚಿಕೊಳ್ಳದಂತೆ ಕಾಪಾಡಿರಿ,” ಎಂದು ವಿನಯದಿಂದಲೂ ಶ್ರದ್ಧೆಯಿಂದಲೂ ಬೇಡಿಕೊಂಡರು.
13 : ಸರ್ವೇಶ್ವರಸ್ವಾಮಿ ಅವರ ಪ್ರಾರ್ಥನೆಯನ್ನು ಆಲಿಸಿದರು. ಅವರ ಸಂಕಟವನ್ನು ಕಂಡು ಕರುಣೆ ತೋರಿದರು. ಜೆರುಸಲೇಮಿನಲ್ಲಿ ಮಾತ್ರವಲ್ಲ, ಜುದೇಯದಲ್ಲೆಲ್ಲಾ ಜನರು ಸರ್ವಶಕ್ತ ದೇವರ ಪವಿತ್ರ ಸ್ಥಾನದ ಮುಂದೆ ಬಹಳ ದಿನಗಳವರೆಗೂ ಉಪವಾಸವ್ರತ ಕೈಗೊಂಡರು.
14 : ಪ್ರಧಾನ ಯಾಜಕ ಯೊವಾಕಿಂ ಹಾಗು ದೇವರ ಪೀಠದ ಮುಂದೆ ನಿಂತಿದ್ದ ಯಾಜಕರು ಮತ್ತು ಪರಿಚಾರಕರು ನಡುವಿಗೆ ಗೋಣಿತಟ್ಟನ್ನು ಕಟ್ಟಿಕೊಂಡು ದಹನ ಬಲಿಗಳನ್ನು ಅರ್ಪಿಸಿದರು; ಹರಕೆಗಳನ್ನೂ ಕಾಣಿಕೆಗಳನ್ನೂ ದೇವರಿಗೆ ಸಮರ್ಪಿಸಿದರು.
15 : ನೆತ್ತಿಯ ಮೇಲೆ ಬೂದಿಯನ್ನು ಹಚ್ಚಿಕೊಂಡು ದೇವರನ್ನು ಪ್ರಾರ್ಥಿಸುತ್ತಾ ಇಸ್ರಯೇಲಿನ ಮನೆತನಕ್ಕೆ ಕೃಪೆ ನೀಡಬೇಕೆಂದು ಯಾಚಿಸಿದರು.

Holydivine