Judith - Chapter 14
Holy Bible

1 : ಆಗ ಜೂಡಿತಳು, “ಸಹೋದರರೇ, ಕೇಳಿ: ಈ ತಲೆಯನ್ನು ತೆಗೆದುಕೊಂಡು ಕೋಟೆಯ ಗೋಡೆಗಳ ಮೇಲೆ ತೂಗುಹಾಕಿರಿ.
2 : ಬೆಳಗ್ಗೆ ಸೂರ್ಯೋದಯವಾದಾಗ ಪ್ರತಿ ಒಬ್ಬನೂ ತನ್ನ ಆಯುಧಗಳನ್ನು ತೆಗೆದುಕೊಳ್ಳಲಿ. ಪ್ರತಿಯೊಬ್ಬ ದೃಢಕಾಯವ್ಯಕ್ತಿ ಪಟ್ಟಣವನ್ನು ಬಿಟ್ಟು ಹೊರಡಲಿ. ಒಬ್ಬ ನಾಯಕನನ್ನು ಆರಿಸಿಕೊಳ್ಳಿ. ಅವನ ಹಿಂದೆ ಅಸ್ಸೀರಿಯದವರ ಪಾಳೆಯದ ಗಡಿದಳಕ್ಕೆ ಇದಿರಾಗಿ ಹೋಗುವವರಂತೆ ನಟಿಸಿರಿ, ಆದರೆ ಹೋಗಬೇಡಿ.q
3 : ಆಗ ಅಸ್ಸೀರಿಯದವರು ತಮ್ಮ ಆಯುಧಗಳನ್ನು ತೆಗೆದುಕೊಂಡು, ಪಾಳೆಯಕ್ಕೆ ಓಡಿಹೋಗಿ, ದಳಾಧಿಕಾರಿಗಳನ್ನು ಎಬ್ಬಿಸುವರು. ದಳಾಧಿಕಾರಿಗಳು ಹೊಲೊಫರ್ನೆಸನ ಡೇರೆಗೆ ಧಾವಿಸುವರು. ಆತನನ್ನು ಕಾಣಲಾರದೆ ಹೋದಾಗ ಕಂಗೆಟ್ಟು ನಿಮ್ಮ ಸೈನಿಕರನ್ನು ಎದುರಿಸಲಾರದೆ ಪಲಾಯನಗೈಯುವರು.
4 : ಆಗ ನೀವು ಮತ್ತು ಇಸ್ರಯೇಲಿನ ನಿವಾಸಿಗಳೆಲ್ಲರು ಮಾಡಬೇಕಾದುದು ಏನೆಂದರೆ: ಅವರು ಓಡಿ ಹೋಗುತ್ತಿರುವಾಗ ಅವರನ್ನು ಬೆನ್ನಟ್ಟಿ ಹೋಗಿ ಸದೆ ಬಡಿಯಬೇಕು.
5 : “ಇದನ್ನು ಮಾಡುವುದಕ್ಕೆ ಮುಂಚೆ ಅಮ್ಮೋನ್ಯನಾದ ಆಕಿಯೋರನನ್ನು ನನ್ನ ಬಳಿಗೆ ಕರೆಯಿರಿ. ಆತನೇ ಬಂದು, ಇಸ್ರಯೇಲಿನ ಮನೆತನವನ್ನು ಧಿಕ್ಕರಿಸಿದ ಇವನ ತಲೆಯನ್ನು ಗುರುತು ಹಚ್ಚಲಿ; ಇವನೇ ಅಲ್ಲವೆ ಆ ಆಕಿಯೋರನನ್ನು ಮರಣದಂಡನೆಗೆ ಗುರಿಯಾದವನಂತೆ ನಮ್ಮ ಬಳಿಗೆ ಕಳುಹಿಸಿದ್ದು?” ಎಂದು ಹೇಳಿದಳು.
6 : ಅಂತೆಯೇ ಜನರು ಆಕಿಯೋರನನ್ನು ಉಜ್ಜೀಯನ ಮನೆಯಿಂದ ಕರೆತಂದರು. ಅಲ್ಲಿ ನಿಂತಿದ್ದವರಲ್ಲಿ ಒಬ್ಬನು ಹೊಲೊಫರ್ನೆಸನ ತಲೆಯನ್ನು ಹಿಡಿದುಕೊಂಡಿರುವುದನ್ನು ಆಕಿಯೋರನು ಕಂಡದ್ದೇ, ಅವನು ಮೂರ್ಛೆ ಹೋದವನಂತೆ ಅಧೋಮುಖವಾಗಿ ನೆಲಕ್ಕೆಬಿದ್ದನು.
7 : ಜನರು ಅವನನ್ನು ಮೇಲಕ್ಕೆತ್ತಿದರು. ತಕ್ಷಣ ಅವನು ಜೂಡಿತಳ ಕಾಲುಗಳಿಗೆ ಸಾಷ್ಟಾಂಗವೆರಗಿ ಹೀಗೆಂದನು: “ಶುಭವಾಗಲಿ ನಿನಗೆ ಜುದೇಯದ ಮನೆಗಳಲ್ಲೆಲ್ಲ, ಸಕಲ ರಾಷ್ಟ್ರಗಳಲ್ಲೆಲ್ಲ ! ಭಯದಿಂದ ನಡುಗುವರು ನಿನ್ನ ನಾಮವನು ಕೇಳುವವರೆಲ್ಲ!”
8 : “ಕಳೆದ ಕೆಲವು ದಿನಗಳಲ್ಲಿ ನೀನು ಮಾಡಿದ್ದೆಲ್ಲವನ್ನು ಈಗ ಹೇಳು,” ಎಂದನು. ಜನರು ಸುತ್ತುವರಿದಿರಲು, ಬೆಥೂಲಿಯವನ್ನು ಬಿಟ್ಟುಹೋದ ದಿನದಿಂದ ಅಂದಿನವರೆಗೆ ಜೂಡಿತಳು ಮಾಡಿದ್ದೆಲ್ಲವನ್ನು ವಿವರಿಸಿದಳು.
9 : ಎಲ್ಲವನ್ನು ಹೇಳಿ ಮುಗಿಸಿದಾಗ, ಜನರೆಲ್ಲರು ಉಚ್ಚಸ್ವರದಿಂದ ಜಯಕಾರ ಮಾಡಿದರು. ಅವರ ಘೋಷಣೆ ಪಟ್ಟಣದಲ್ಲೆಲ್ಲಾ ಪ್ರತಿಧ್ವನಿಸಿತು.
10 : ಇಸ್ರಯೇಲಿನ ದೇವರು ಮಾಡಿದ ಕಾರ್ಯಗಳನ್ನು ಗಮನಿಸಿದ ಆಕಿಯೋರನು ಅವರ ದೇವರಲ್ಲಿ ಶ್ರದ್ಧೆಯಿಂದ ವಿಶ್ವಾಸವಿರಿಸಿದನು. ಸುನ್ನತಿ ಮಾಡಿಸಿಕೊಂಡು ಇಸ್ರಯೇಲರ ಮನೆತನಕ್ಕೆ ಸೇರ್ಪಡೆಯಾದನು.
11 : ಬೆಳಗಾದಾಗ ಜನರು ಹೊಲೊಫರ್ನೆಸನ ತಲೆಯನ್ನು ಕೋಟೆಯ ಗೋಡೆಯ ಮೇಲೆ ತೂಗುಹಾಕಿದರು. ಪ್ರತಿಯೊಬ್ಬನೂ ತನ್ನ ಆಯುಧಗಳನ್ನು ತೆಗೆದುಕೊಂಡನು. ಎಲ್ಲರು ಗುಂಪುಗುಂಪಾಗಿ ಬೆಟ್ಟದ ಇಳಿಜಾರಿನ ಕಡೆ ನಡೆದರು.
12 : ಇದನ್ನು ಕಂಡ ಅಸ್ಸೀರಿಯರು ತಮ್ಮ ದಳಾಧಿಕಾರಿಗಳಿಗೆ ಸಮಾಚಾರವನ್ನು ತಕ್ಷಣ ತಿಳಿಸಿದರು. ದಳಾಧಿಕಾರಿಗಳು ದಂಡ ನಾಯಕರಿಗೂ ಸಹಸ್ರಾಧಿಪತಿಗಳಿಗೂ ತಿಳಿಸಿದರು.
13 : ದಂಡನಾಯಕರು ಹೊಲೊಫರ್ನೆಸನ ಡೇರೆಗೆ ಓಡಿಹೋಗಿ ಮೇಳ್ವಿಚಾರಕನನ್ನು ಕಂಡು, “ಒಡೆಯನನ್ನು ಎಬ್ಬಿಸು; ಈ ಗುಲಾಮರು ನಮ್ಮ ಮೇಲೆ ಮುತ್ತಿಗೆ ಹಾಕಲು ಬಂದಿಳಿದಿದ್ದಾರೆ. ಅವರಲ್ಲಿ ಕಟ್ಟ ಕಡೆಯವನೂ ಅಳಿಯಬೇಕೆಂದೇ ಹೀಗಾಗಿರಬೇಕು,” ಎಂದರು.
14 : ಆಗ ಬಗೋವನು ಒಳಗೆ ಹೋಗಿ ಡೇರೆಯ ಮಧ್ಯೆ ಇದ್ದ ತೆರೆಯನ್ನು ಎಳೆದು ನೋಡಿದನು. ಹೊಲೊಫರ್ನೆಸ್ ಜೂಡಿತಳೊಂದಿಗೆ ಮಲಗಿರಬೇಕೆಂದು ಅವನು ಊಹಿಸಿದ್ದನು.
15 : ಆದರೆ ಯಾರ ಸುಳಿವೂ ಇಲ್ಲದಿರಲು ತೆರೆಯನ್ನು ಸರಿಯಾಗಿ ಎಳೆದು ಹೊಲೊಫರ್ನೆಸನ ಮಲಗುವ ಕೋಣೆಗೆ ಹೋದನು. ಅಲ್ಲಿ ಬಾಗಿಲ ಬಳಿ ತಲೆಯಿಲ್ಲದೆ ಬಿದ್ದಿದ್ದ ಹೊಲೊಫರ್ನೆಸನ ಮುಂಡವನ್ನು ಕಂಡನು.
16 : ತಕ್ಷಣವೇ ಆರ್ಭಟಿಸುತ್ತಾ ಕೂಗಿ ಕಣ್ಣೀರಿಟ್ಟು, ಕಿರಿಚಾಡುತ್ತಾ, ತನ್ನ ಬಟ್ಟೆಗಳನ್ನು ಹರಿದುಕೊಂಡನು.
17 : ಅನಂತರ ಜೂಡಿತಳ ಡೇರೆಗೆ ಹೋಗಿ ನೋಡುವಾಗ ಅಲ್ಲಿ ಅವಳೂ ಇಲ್ಲವೆಂದು ತಿಳಿಯಿತು.
18 : ಆಗ ಹೊರಗಡೆ ನಿಂತಿದ್ದ ಜನರ ಬಳಿಗೆ ಕೂಗುತ್ತಾ ಬಂದು, “ಗುಲಾಮರು ದಂಗೆಯೆದ್ದಿದ್ದಾರೆ; ಒಬ್ಬ ಹಿಬ್ರು ಮಹಿಳೆ ನೆಬೂಕದ್ನೆಚ್ಚರನ ವಂಶಕ್ಕೆ ಮಾನಭಂಗ ಮಾಡಿದ್ದಾಳೆ; ಹೊಲೊಫರ್ನೆಸ್ ತಲೆಯಿಲ್ಲದೆ ನೆಲದ ಮೇಲೆ ಬಿದ್ದಿದ್ದಾನೆ,” ಎಂದು ಅಬ್ಬರಿಸಿದನು.
19 : ಇದನ್ನು ಕೇಳಿದ ಅಸ್ಸೀರಿಯರ ಸೈನ್ಯದ ದಳಪತಿಗಳೆಲ್ಲ ತಲ್ಲಣಗೊಂಡು ತಮ್ಮ ಮೇಲ್ವಸ್ತ್ರಗಳನ್ನು ಹರಿದುಕೊಂಡರು. ಪಾಳೆಯದಲ್ಲೆಲ್ಲ ಕೂಗಾಟ, ಚೀರಾಟ ಪ್ರತಿಧ್ವನಿಸಿತು.

Holydivine