Judith - Chapter 10
Holy Bible

1 : ಮೇಲೆ ಹೇಳಿದಂತೆ ಇಸ್ರಯೇಲಿನ ದೇವರಲ್ಲಿ ಜೂಡಿತ್ ಪ್ರಾರ್ಥನೆ ಮಾಡಿದಳು. ಪ್ರಾರ್ಥನೆ ಮುಗಿದ ನಂತರ ನೆಲದಿಂದ ಎದ್ದು ತನ್ನ ಸೇವಕಿಯನ್ನು ಕರೆದುಕೊಂಡು ಶೃಂಗಾರದ ಕೋಣೆಗೆ ಇಳಿದುಹೋದಳು. ಸಬ್ಬತ್ ಹಾಗೂ ಹಬ್ಬದ ದಿನಗಳಲ್ಲಿ ಆ ಕೋಣೆಗೆ ಹೋಗುವುದು ಅವಳ ವಾಡಿಕೆ.
2 : ಮೇಲೆ ಹೇಳಿದಂತೆ ಇಸ್ರಯೇಲಿನ ದೇವರಲ್ಲಿ ಜೂಡಿತ್ ಪ್ರಾರ್ಥನೆ ಮಾಡಿದಳು. ಪ್ರಾರ್ಥನೆ ಮುಗಿದ ನಂತರ ನೆಲದಿಂದ ಎದ್ದು ತನ್ನ ಸೇವಕಿಯನ್ನು ಕರೆದುಕೊಂಡು ಶೃಂಗಾರದ ಕೋಣೆಗೆ ಇಳಿದುಹೋದಳು. ಸಬ್ಬತ್ ಹಾಗೂ ಹಬ್ಬದ ದಿನಗಳಲ್ಲಿ ಆ ಕೋಣೆಗೆ ಹೋಗುವುದು ಅವಳ ವಾಡಿಕೆ.
3 : ಅಲ್ಲಿ ತಾನು ಉಟ್ಟುಕೊಂಡಿದ್ದ ಗೋಣಿತಟ್ಟನ್ನೂ ವಿಧವೆಯ ವಸ್ತ್ರಗಳನ್ನೂ ತೆಗೆದುಹಾಕಿದಳು. ಸ್ನಾನಮಾಡಿ, ಯಥೇಚ್ಛವಾಗಿ ಪರಿಮಳ ತೈಲವನ್ನು ಹಚ್ಚಿಕೊಂಡು, ತಲೆಯನ್ನು ಬಾಚಿ ಕೇಶಕಿರೀಟವನ್ನು ಧರಿಸಿಕೊಂಡಳು. ಗಂಡ ಮನಸ್ಸೆ ಜೀವದಿಂದಿದ್ದಾಗ ಹಾಕಿಕೊಳ್ಳುತ್ತಿದ್ದ ನಯವಾದ ಬಟ್ಟೆಬರೆಗಳನ್ನು ತೊಟ್ಟುಕೊಂಡಳು.
4 : ಕೈಗೆ ಬಳೆಗಳು, ಕುತ್ತಿಗೆಗೆ ಕಂಠಹಾರಗಳು, ಬೆರಳಿಗೆ ಉಂಗುರಗಳು, ಕಿವಿಗೆ ಓಲೆಗಳು, ಕಾಲಿಗೆ ಪಾದರಕ್ಷೆಗಳು, ಈ ಒಡವೆ ವಸ್ತುಗಳನ್ನೆಲ್ಲ ಧರಿಸಿಕೊಂಡಳು. ಎಂಥಾ ಗಂಡಸಿನ ದೃಷ್ಟಿಯನ್ನೂ ಸೆಳೆದು ಮರುಳಾಗಿಸುವಷ್ಟು ಶೃಂಗಾರ ಮಾಡಿಕೊಂಡಳು.
5 : ಅನಂತರ, ದ್ರಾಕ್ಷಾರಸ ತುಂಬಿದ ಬುದ್ದಲಿ, ಎಣ್ಣೆ ತುಂಬಿದ ಸೀಸೆ, ಜವೆಗೋದಿಯ ರೊಟ್ಟಿ, ಒಣಹಣ್ಣುಗಳಿಂದ ಮಾಡಿದ ಒಬ್ಬಟ್ಟು ಇವುಗಳನ್ನು ಚೀಲದಲ್ಲಿ ತುಂಬಿ ಸೇವಕಿಯ ಕೈಗೆ ಕೊಟ್ಟಳು. ಸೇವಕಿಗೂ ಬೇಕಾದಷ್ಟು ತಿಂಡಿಯನ್ನು ಒದಗಿಸಿದಳು.
6 : ಇಬ್ಬರೂ ಹೊರಟು ಬೆಥೂಲಿಯದ ಊರಬಾಗಿಲಿಗೆ ಬಂದರು. ಅಲ್ಲಿ ಬಾಬ್ರಿ ಮತ್ತು ಚರ್ಮಿ ಎಂಬ ಹಿರಿಯರೊಡನೆ ಉಜ್ಜೀಯನಿದ್ದನು.
7 : ಬದಲಾಗಿದ್ದ ಅವಳ ವೇಷಭೂಷಣಗಳನ್ನು ಕಂಡು, ಅವಳ ರೂಪಲಾವಣ್ಯಕ್ಕೆ ಬೆರಗಾಗಿ ಅವರು:
8 : “ನಮ್ಮ ಪೂರ್ವಜರ ದೇವರು ತಮ್ಮ ಕೃಪಾಕಟಾಕ್ಷವನ್ನು ನಿನ್ನ ಮೇಲಿರಿಸಲಿ ! ಅವರು ನಿನ್ನ ಅಂತರಂಗದ ಆಲೋಚನೆಗಳನ್ನು ಯಶಸ್ವಿಗೊಳಿಸಲಿ ಇಸ್ರಯೇಲಿನ ಸಂತತಿಗೆ ಮಹಿಮೆಯಾಗಲಿ ಜೆರುಸಲೇಮಿಗೆ ಅನಂತ ಮಹಿಮೆಯಾಗಲಿ!” ಎಂದರು.
9 : ಜೂಡಿತ್ ದೇವರನ್ನು ಆರಾಧಿಸಿ, ಅನಂತರ ಜನರಿಗೆ, “ನೀವು ನನಗೆ ತಿಳಿಯಪಡಿಸಿದ ನಿಮ್ಮ ಆಶೋತ್ತರಗಳನ್ನು ಈಡೇರಿಸಲು ನಾನು ಆಚೆ ಹೋಗುವಂತೆ ಊರಬಾಗಿಲನ್ನು ತೆರೆಯಿರಿ,” ಎಂದಳು. ಅವರು ಅಂತೆಯೇ ಬಾಗಿಲನ್ನು ತೆರೆಯಲು ಇಬ್ಬರು ಯುವಕರಿಗೆ ಆಜ್ಞೆಯಿತ್ತರು.
10 : ಬಾಗಿಲನ್ನು ತೆರೆಯಲು, ಜೂಡಿತ್ ತನ್ನ ಸೇವಕಿಯೊಡನೆ ಹೊರಕ್ಕೆ ಹೋದಳು. ಅವಳು ಆ ಗುಡ್ಡದ ಕೆಳಗೆ ಇಳಿದುಹೋಗಿ ಮರೆಯಾಗುವವರೆಗೂ ಜನರು ನೋಡಿಕೊಂಡೇ ಇದ್ದರು.
11 : ಜೂಡಿತ್ ಸೇವಕಿಯ ಸಮೇತ ಕಣಿವೆಯ ದಾರಿಯಲ್ಲಿ ನೇರವಾಗಿ ನಡೆಯುತ್ತಿರಲು,
12 : ಅಸ್ಸೀರಿಯದ ಭದ್ರತಾಪಡೆಯವರು ಅವರನ್ನು ಹಿಡಿದು ನಿಲ್ಲಿಸಿ, “ನೀನು ಯಾವ ಕಡೆಯವಳು? ಎಲ್ಲಿಂದ ಬಂದೆ? ಈಗ ಎಲ್ಲಿಗೆ ಪ್ರಯಾಣ?” ಎಂದೆಲ್ಲ ಪ್ರಶ್ನಿಸಿದರು. ಅದಕ್ಕೆ ಜೂಡಿತ್, “ನಾನು ಹಿಬ್ರು ಮನೆತನದವಳು. ನಮ್ಮ ಜನರು ಶೀಘ್ರದಲ್ಲಿ ನಿಮಗೆ ಬಲಿಪಶುಗಳಾಗಲಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ.
13 : ಈಗ ನಿಮ್ಮ ಸೇನಾಧಿಪತಿಯಾಗಿರುವ ಹೊಲೊಫರ್ನೆಸನನ್ನು ಕಾಣಲು ಹೋಗುತ್ತಿದ್ದೇನೆ. ಅವರಿಗೆ ಗುಟ್ಟಾದ ಸಂಗತಿಯೊಂದನ್ನು ತಿಳಿಸಬೇಕಾಗಿದೆ. ಒಬ್ಬನೂ ಸಾಯದಂತೆ, ಒಂದು ಜೀವವನ್ನೂ ಕಳೆದುಕೊಳ್ಳದಂತೆ ಗುಡ್ಡಗಾಡಿನಲ್ಲಿರುವ ಎಲ್ಲಾ ಜನರನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಗುವಂತೆ ಅವರಿಗೊಂದು ಉಪಾಯವನ್ನು ತೋರಿಸುತ್ತೇನೆ,” ಎಂದಳು.
14 : ಭದ್ರತಾಪಡೆಯವರು ಅವಳು ಹೇಳಿದ್ದನ್ನು ಕೇಳುತ್ತಾ, ಆಕೆಯ ಸೌಂದರ್ಯಕ್ಕೆ ನಿಬ್ಬೆರಗಾಗಿ ಎವೆಯಿಕ್ಕದೆ ನಿಂತುಕೊಂಡರು.
15 : “ಸದ್ಯ, ನೀನಾಗಿಯೇ ಬಂದು ನಮ್ಮ ಒಡೆಯನನ್ನು ಕಾಣಲು ಹೋಗುತ್ತಿದ್ದೀಯೆ, ಬದುಕಿಕೊಂಡೆ. ನೀನು ಅವನ ಪಾಳೆಯಕ್ಕೆ ನೇರವಾಗಿ ನಡೆ. ನಮ್ಮ ಜನರು ನಿನ್ನನ್ನು ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸುವರು.
16 : ಅವನ ಸನ್ನಿಧಿಯಲ್ಲಿ ನಿಲ್ಲಲು ನೀನು ಹೆದರಬೇಕಾಗಿಲ್ಲ. ನಮಗೆ ಈಗ ನೀನು ಹೇಳಿದ್ದೆಲ್ಲವನ್ನೂ ಅವನಿಗೆ ತಿಳಿಸು. ಅವನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವನು,” ಎಂದು ಹೇಳಿ,
17 : ಅವಳ ಮತ್ತು ಸೇವಕಿಯ ಜೊತೆಯಲ್ಲಿ ನೂರು ಜನರನ್ನು ಕಳುಹಿಸಿದರು. ಅವರು ಜೂಡಿತಳನ್ನು ಹೊಲೊಫರ್ನೆಸನ ಪಾಳೆಯಕ್ಕೆ ಕರೆದೊಯ್ದರು.
18 : ಜೂಡಿತಳ ಆಗಮನದ ಸಂಗತಿ ಪಾಳೆಯದಲ್ಲೆಲ್ಲ ಹಬ್ಬಿ, ಎಲ್ಲರ ಕುತೂಹಲವನ್ನು ಕೆರಳಿಸಿತು. ಅವಳು ಇನ್ನೂ ಅಪ್ಪಣೆಪಡೆಯಲು ಪಾಳೆಯದ ಮುಂದೆ ಕಾದು ನಿಂತಿದ್ದಾಗ, ಜನರ ಗುಂಪು ಅವಳನ್ನು ಸುತ್ತುವರಿಯಿತು.
19 : ಅವರು ಆಕೆಯ ಚೆಲುವನ್ನು ಬಹುವಾಗಿ ಮೆಚ್ಚಿಕೊಂಡರು. ಇದರಿಂದ ಇಸ್ರಯೇಲರ ಬಗ್ಗೆ ಅವರಿಗೆ ಅಭಿಮಾನವೂ ಹುಟ್ಟಿತು: “ಇಂಥ ಸ್ತ್ರೀಯರಿರುವ ಜನಾಂಗವನ್ನು ಯಾರು ತಾನೇ ತಿರಸ್ಕರಿಸಲು ಸಾಧ್ಯ?” ಎಂದುಕೊಳ್ಳುತ್ತಿದ್ದರು ಕೆಲವರು. ಇತರರಾದರೋ, “ಅವರಲ್ಲಿ ಯಾರನ್ನೂ ಜೀವದಿಂದ ಬಿಡದಿದ್ದರೆ ಮೇಲು; ಯಾರಾದರೊಬ್ಬರು ಅವರ ಹತ್ತಿರಕ್ಕೆ ಹೋದರೆ ಇಡೀ ವಿಶ್ವವನ್ನೇ ತಮ್ಮ ಕೈಬೆರಳಿನ ಸುತ್ತ ಸೆಳೆದುಕೊಂಡು ಬಿಡುತ್ತಾರೆ!” ಎಂದರು.
20 : ಹೊಲೊಫರ್ನೆಸನ ಅಂಗರಕ್ಷಕರೂ ಸಹಾಯಕಪಡೆಯವರೂ ಆಚೆಬಂದು ಜೂಡಿತಳನ್ನು ಪಾಳೆಯದೊಳಕ್ಕೆ ಕರೆದೊಯ್ದರು.
21 : ಬಂಗಾರದ, ಕೆನ್ನೀಲಿ ಬಣ್ಣದ ಹಾಗೂ ಅಂದವಾದ ಮುತ್ತುರತ್ನಗಳಿಂದ ಅಲಂಕೃತವಾದ ಚಪ್ಪರದಡಿಯಲ್ಲಿ ಹೊಲೊಫರ್ನೆಸ್ ಒಂದು ಮಂಚದ ಮೇಲೆ ಮಲಗಿದ್ದನು.
22 : ಜೂಡಿತ್ ಬಂದಿದ್ದಾಳೆಂದು ಜನರು ಅವನಿಗೆ ತಿಳಿಸಲು ಅವನು ಎದ್ದು ಡೇರೆಯ ಬಾಗಿಲ ಬಳಿ ಬಂದನು. ಬೆಳ್ಳಿಯ ದೀಪಸ್ತಂಭಗಳನ್ನು ಹೊತ್ತ ಆಳುಗಳು ಅವನ ಮುಂದೆ ಇದ್ದರು.
23 : ಸೇನಾಧಿಪತಿಯ ಹಾಗು ಅವನ ಸಹಾಯಕರ ಸನ್ನಿಧಿಯಲ್ಲಿ ಜೂಡಿತ್ ಬಂದು ನಿಂತಾಗ ಅವರು ಅವಳ ರೂಪಲಾವಣ್ಯಗಳನ್ನು ಕಂಡು ಬೆಬ್ಬರಗಾದರು. ಜೂಡಿತ್ ಸೇನಾಧಿಪತಿಗೆ ಸಾಷ್ಟಾಂಗವೆರಗಿದಳು. ತಕ್ಷಣ ಸೇವಕರು ಆಕೆಯನ್ನು ಮೇಲಕ್ಕೆತ್ತಿದರು.

Holydivine