Judith - Chapter 6
Holy Bible

1 : ಸುತ್ತಮುತ್ತ ನಿಂತಿದ್ದ ಜನರ ಕೂಗಾಟ ನಿಂತಿತು. ಅಸ್ಸೀರಿಯರ ಪ್ರಧಾನ ಸೇನಾಧಿಪತಿಯಾದ ಹೊಲೊಫರ್ನೆಸ್ ಆಕಿಯೋರನನ್ನು ಪರಕೀಯರ ಹಾಗು ಅಮ್ಮೋನ್ಯರ ಮುಂದೆ ಖಂಡಿಸುತ್ತಾ ಹೀಗೆಂದನು:
2 : “ಆಕಿಯೋರ್, ನೀನು ಯಾರೆಂದು ನೆನಸುತ್ತೀ? ನೀನು ಮತ್ತು ಎಫ್ರಯಿಮರ ರಹಸ್ಯ ಕೂಲಿಯಾಳುಗಳು ಇಲ್ಲಿ ಮಾಡುತ್ತಿರುವುದೇನು? ಇಸ್ರಯೇಲರ ವಿರುದ್ಧ ಯುದ್ಧಮಾಡಬಾರದೆಂದು ಪ್ರವಾದಿಯ ವೇಷಧರಿಸಿ, ನಮ್ಮನ್ನು ಇಂದು ತಡೆಯಲು ಪ್ರಯತ್ನಿಸುತ್ತೀಯೋ? ಅವರ ದೇವರು ಅವರನ್ನು ಕಾಪಾಡುತ್ತಾರೆಂದು ವಾದಿಸುತ್ತೀಯೋ?
3 : ನೆಬೂಕದ್ನೆಚ್ಚರನ ಹೊರತು ಬೇರಾವ ದೇವರಿದ್ದಾರೆ? ನೆಬೂಕದ್ನೆಚ್ಚರನೇ ತನ್ನ ಶಕ್ತಿಸಾಮಥ್ರ್ಯವನ್ನು ಪ್ರದರ್ಶಿಸುವನು. ಆ ಜನರನ್ನೆಲ್ಲ ಧರೆಯಿಂದ ನಿರ್ಮೂಲಮಾಡುವನು. ಖಂಡಿತವಾಗಿಯೂ ಅವರನ್ನು ಆ ದೇವರಿಂದ ರಕ್ಷಿಸಲು ಸಾಧ್ಯವಾಗದು. ನೆಬೂಕದ್ನೆಚ್ಚರನ ಸೇವಕರಾದ ನಮ್ಮ ಮುಂದೆ ಅವರೆಲ್ಲರು ಒಂದೇ ಆಳಿನಂತಿದ್ದಾರೆ. ಅವರನ್ನು ಸುಲಭವಾಗಿ ಧ್ವಂಸ ಮಾಡಬಲ್ಲೆವು.
4 : ನಮ್ಮ ರಾಹುತರನ್ನು ಎದುರಿಸಲು ಅವರಿಂದ ಎಂದಿಗೂ ಆಗದು. ಅವರೆಲ್ಲರನ್ನು ಸುಟ್ಟುಹಾಕುವೆವು. ಆ ಬೆಟ್ಟಗುಡ್ಡಗಳು ಅವರ ರಕ್ತ ಕುಡಿದು ಮುಕ್ತವಾಗುವುವು; ಅವರ ಬಯಲಿನಲ್ಲಿ ಹೆಣಗಳು ತುಂಬಿರುವುವು. ನಮ್ಮನ್ನು ಎದುರಿಸುವುದಿರಲಿ, ಅವರಲ್ಲಿ ಪ್ರತಿಯೊಬ್ಬನು ಮಡಿದುಹೋಗುವನು. ವಿಶ್ವದೊಡೆಯನೂ ಅರಸನೂ ಆದ ನೆಬೂಕದ್ನೆಚ್ಚರನ ನುಡಿಗಳಿವು. ಆ ಅರಸನ ಮಾತುಗಳಿವು. ಅವನ ಮಾತು ವ್ಯರ್ಥವಾಗದು.
5 : ನೀನಾದರೋ, ಆಕಿಯೋರನೇ, ಅಮ್ಮೋನ್ಯರ ಕೈಕೂಲಿಯಾಳಾಗಿ ದುಡುಕುತನದಿಂದ ಮಾತಾಡಿರುವೆ; ಈಜಿಪ್ಟಿನಿಂದ ಬಂದಿರುವ ಈ ಸಂತಾನದ ಮೇಲೆ ಸೇಡನ್ನು ತೀರಿಸುವತನಕ ನೀನು ನನ್ನ ಮುಖವನ್ನು ನೋಡುವುದಿಲ್ಲ.
6 : ಅವರೆಲ್ಲರು ಸತ್ತಮೇಲೆ ನನ್ನ ಯೋಧರ ಕತ್ತಿಗಳು ನಿನ್ನ ಪಕ್ಕೆಯನ್ನು ತಿವಿಯುವುವು; ನಾಯಕರ ಭರ್ಜಿಗಳು ನಿನ್ನ ಹೊಟ್ಟೆಯನ್ನು ಇರಿಯುವುವು; ಇಸ್ರಯೇಲರ ಕಡೆ ನಾನು ತಿರುಗಿದ ಕ್ಷಣಮಾತ್ರದಲ್ಲಿ ನೀನು ಗಾಯಗೊಂಡು ಅವರ ಶವಗಳ ಮಧ್ಯೆ ಬೀಳುವೆ.
7 : “ಈಗ ನನ್ನ ಸೇವಕರು ನಿನ್ನನ್ನು ಆ ಗುಡ್ಡಗಾಡಿಗೆ ಕೊಂಡೊಯ್ದು ಆ ಕಣಿವೆಯ ಹಾದಿಯಲ್ಲಿ ಯಾವುದಾದರೊಂದು ಊರಿನ ಬಳಿ ಬಿಡುವರು.
8 : ಅವರೊಡನೆ ನೀನೂ ನಾಶವಾಗುವವರೆಗೆ, ನಿನ್ನ ಪ್ರಾಣ ಭದ್ರವಾಗಿರುತ್ತದೆ.
9 : ಚಿಂತಾಕ್ರಾಂತನಾಗಬೇಡ; ಅವರು ನಮ್ಮ ಆಕ್ರಮಣಕ್ಕೆ ತುತ್ತಾಗುವುದಿಲ್ಲ ಎಂಬ ನಂಬಿಕೆ ನಿನಗಿದೆಯಲ್ಲವೆ? ನಾನು ನುಡಿದಿದ್ದೇನೆ. ನನ್ನ ಮಾತುಗಳಲ್ಲಿ ಯಾವುದೂ ವ್ಯರ್ಥವಾಗದು,” ಎಂದನು.
10 : ಆಕಿಯೋರನನ್ನು ಬೆಥೂಲಿಯಕ್ಕೆ ಕೊಂಡೊಯ್ದು ಇಸ್ರಯೇಲರ ವಶಕ್ಕೆ ಒಪ್ಪಿಸಬೇಕೆಂದು ಹೊಲೊಫರ್ನೆಸ್ ತನ್ನ ಗುಡಾರದ ಕಾವಲಾಳುಗಳಿಗೆ ಆಜ್ಞೆಯಿತ್ತನು.
11 : ಅಂತೆಯೇ ಅವರು ಆಕಿಯೋರನನ್ನು ಕರೆದುಕೊಂಡು ಪಾಳೆಯದ ಹೊರಕ್ಕೆ ಹೋಗಿ ಬಯಲಿನ ಮಾರ್ಗವಾಗಿ ಗುಡ್ಡಗಾಡಿಗೆ ಬಂದು, ಬೆಥೂಲಿಯದ ತಗ್ಗಿನಲ್ಲಿರುವ ಬುಗ್ಗೆಗಳ ಬಳಿ ಇಳಿದರು.
12 : ಆ ಊರಿನ ಜನರ ಕಣ್ಣಿಗೆ ಇವರು ಬಿದ್ದದ್ದೇ, ಅವರು ಈ ಕಾವಲಾಳುಗಳ ಆಯುಧಗಳನ್ನು ಕಿತ್ತುಕೊಂಡು ಗುಡ್ಡದ ಮೇಲಕ್ಕೆ ಧಾವಿಸಿದರು. ಅಲ್ಲಿಂದ ಕವಣೆಗಾರರು ಆಕಿಯೋರನನ್ನು ಕರೆತಂದ ಕಾವಲಾಳುಗಳ ಮೇಲೆ ಕಲ್ಲೆಸೆದು, ಅವರು ಗುಡ್ಡವನ್ನು ಹತ್ತಲಾಗದಂತೆ ಮಾಡಿದರು.
13 : ಅಂತೂ ಕಾವಲಾಳುಗಳು ಬೆಟ್ಟದ ಇಳಿಜಾರಿಗೆ ಬಂದು ಆಕಿಯೋರನನ್ನು ಕಟ್ಟಿ, ಬೆಟ್ಟದ ಅಡಿಭಾಗದಲ್ಲಿ ಬಿಟ್ಟು, ತಮ್ಮ ಒಡೆಯನ ಬಳಿಗೆ ಹಿಂದಿರುಗಿದರು.
14 : ಆಗ ಇಸ್ರಯೇಲರು ಪಟ್ಟಣದಿಂದ ಕೆಳಕ್ಕೆ ಇಳಿದು ಬಂದು ಆಕಿಯೋರನನ್ನು ಕಂಡರು. ಅವನ ಕಟ್ಟುಗಳನ್ನು ಬಿಚ್ಚಿ ಬೆಥೂಲಿಯಕ್ಕೆ ಕರೆದುಕೊಂಡು ಹೋಗಿ, ತಮ್ಮ ಮುಖಂಡರ ಮುಂದೆ ನಿಲ್ಲಿಸಿದರು.
15 : ಆಗ ಸಿಮೆಯೋನ ಕುಲದ ಮೀಕನ ಮಗ ಉಜ್ಜೀಯ, ಗೊತ್ತೋನಿಯೆಲನ ಮಗ ಚಾಬ್ರಿ, ಮತ್ತು ಮೆಲ್ಕೀಯನ ಮಗ ಕಾರ್ಮಿ ಇವರು ಇಸ್ರಯೇಲರ ಮುಖಂಡರಾಗಿದ್ದರು.
16 : ಇವರು ಪಟ್ಟಣದ ಪ್ರಮುಖರನ್ನು ಕರೆಸಿದರು. ಯುವಕಯುವತಿಯರು ಸಹ ಕೂಟಕ್ಕೆ ತವಕದಿಂದ ಹಾಜರಾದರು. ಜನರೆಲ್ಲರು ಆಕಿಯೋರನ ಸುತ್ತ ನಿಂತರು. ಸಮಾಚಾರವೇನೆಂದು ಉಜ್ಜೀಯನು ಆಕಿಯೋರನನ್ನು ಕೇಳಿದನು.
17 : ಅವನು ಹೊಲೊಫರ್ನೆಸನ ಆಲೋಚನಾ ಸಭೆಯಲ್ಲಿ ನಡೆದ ಮಾತುಕತೆಯ ಬಗ್ಗೆ ವಿವರಿಸಿದನು; ಅಸ್ಸೀರಿಯರ ನಾಯಕರುಗಳ ಮುಂದೆ ತಾನು ಆಡಿದ ಮಾತುಗಳನ್ನು ತಿಳಿಸಿ, ಹೊಲೊಫರ್ನೆಸನು ಇಸ್ರಯೇಲ್ ಮನೆತನಕ್ಕೆ ಏನೇನು ಮಾಡಲಿರುವನೆಂದು ಕೊಚ್ಚಿಕೊಂಡ ರೀತಿಯನ್ನು ಬಣ್ಣಿಸಿದನು.
18 : ಇದನ್ನು ಕೇಳಿ ಆ ಜನರು ದೇವರಿಗೆ ಅಡ್ಡಬಿದ್ದು ಹೀಗೆಂದು ಪ್ರಾರ್ಥಿಸಿದರು:
19 : “ಪರಲೋಕದಲ್ಲಿರುವ ಸರ್ವೇಶ್ವರನಾದ ದೇವರೇ, ನಮ್ಮ ಶತ್ರುಗಳ ಸೊಕ್ಕನ್ನು ಗಮನಿಸಿ, ನಮ್ಮ ಜನತೆಗೆ ಉಂಟಾಗಲಿರುವ ನಿಂದೆ ಅವಮಾನ ತೊಲಗುವಂತೆ ಮಾಡಿರಿ. ನಿಮಗೆ ಪ್ರತಿಷ್ಠಿತರಾದ ಪ್ರಜೆಯ ಮೇಲೆ ಇಂದು ಕರುಣೆತೋರಿ,” ಎಂದು ಯಾಚಿಸಿದರು.
20 : ಅನಂತರ ಆಕಿಯೋರನಿಗೆ ಅಭಯವಿತ್ತು ಅವನನ್ನು ಬಹುವಾಗಿ ಪ್ರಶಂಶಿಸಿದರು.
21 ಕೂಟ ಮುಗಿದ ನಂತರ ಉಜ್ಜೀಯನು ಅವನನ್ನು ತನ್ನ ಮನೆಗೆ ಕರೆದೊಯ್ದು ಊರ ಹಿರಿಯರಿಗೆ ಔತಣವನ್ನು ಏರ್ಪಡಿಸಿದನು. ಆ ರಾತ್ರಿಯೆಲ್ಲ ಅವರು ದೇವರ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.

Holydivine