Judith - Chapter 7
Holy Bible

1 : ಮಾರನೆಯ ದಿನ ಹೊಲೊಫರ್ನೆಸನು ಇಸ್ರಯೇಲರ ಮೇಲೆ ದಂಡಯಾತ್ರೆಯನ್ನು ಪ್ರಾರಂಭಿಸುವ ಸಲುವಾಗಿ ಬೆಟ್ಟಗಳ ಮಧ್ಯೆ ಇರುವ ಕಣಿವೆಯ ಹಾದಿಯನ್ನು ಆಕ್ರಮಿಸಿಕೊಳ್ಳಬೇಕೆಂದು ಇಡೀ ಸೈನ್ಯಕ್ಕೂ ಮಿತ್ರಪಡೆಗಳಿಗೂ ಆಜ್ಞೆ ಹೊರಡಿಸಿದನು; ಬೆಥೂಲಿಯಕ್ಕೆ ಮುತ್ತಿಗೆ ಹಾಕಲು ಪಾಳೆಯದಿಂದ ಹೊರಡಬೇಕೆಂದು ಸೂಚಿಸಿದನು.
2 : 120,000 ಜನರಿಂದ ಕೂಡಿದ ಸೇನಾದಳ, 12,000 ರಾಹುತರು ಮತ್ತು ಇವರಿಗಾಗಿ ಸರಕು ಸರಂಜಾಮುಗಳನ್ನು ಹೊತ್ತು ಹಿಂಬಾಲಿಸುವ ಸಹಸ್ರಾರು ಕಾಲಾಳುಗಳು ಹೀಗೆ ಬೃಹತ್ತಾದ ಸೇನೆ ದಂಡಯಾತ್ರೆಗೆ ಹೊರಟಿತು.
3 : ಅವರೆಲ್ಲರು ಬೆಥೂಲಿಯದ ಪಕ್ಕದ ಕಣಿವೆಯ ಬುಗ್ಗೆಯ ಬಳಿಗೆ ಹೋಗಿ, ದೋತಾನಿನಿಂದ ಬಾಲ್ಬಾಯಿಮ್‍ನವರೆಗೂ, ಬೆಥೂಲಿಯದಿಂದ ಎಸ್ಡ್ರಲೋನಿಗೆ ಎದುರಿಗಿರುವ ಚಿಯಾಮೊನಿನವರೆಗೂ ಹರಡಿಕೊಂಡರು.
4 : ಇಸ್ರಯೇಲರು ಈ ದಂಡಿನ ಗಾತ್ರವನ್ನು ನೋಡಿ ಗಾಬರಿಗೊಂಡು, “ಈಗ ಅವರು ನಮ್ಮ ಇಡೀ ನಾಡನ್ನು ನೆಕ್ಕಿ ನುಂಗಿ ಬಿಡುವರು; ನಮ್ಮ ಅತ್ಯುನ್ನತ ಶಿಖರಗಳಾಗಲೀ ಕಮರಿಕಣಿವೆಗಳಾಗಲೀ ಅವರ ಒತ್ತಡವನ್ನು ತಡೆಯಲಾರವು” ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.
5 : ಪ್ರತಿಯೊಬ್ಬನೂ ತನ್ನ ಆಯುಧಗಳನ್ನು ಹಿಡಿದುಕೊಂಡನು; ಕಾವಲು ಗೋಪುರಗಳ ಮೇಲೆ ಪಂಜುಗಳನ್ನು ಹೊತ್ತಿಸಿಕೊಂಡು ರಾತ್ರಿಯೆಲ್ಲಾ ಕಾವಲಿದ್ದರು.
6 : ಮಾರನೆಯ ದಿನ ಹೊಲೊಫರ್ನೆಸನು ರಾಹುತರನ್ನು ಇಸ್ರಯೇಲರ ಮುಂದೆಯೇ ಬೆಥೂಲಿಯದಲ್ಲಿ ಹರಡಿದನು.
7 : ಪಟ್ಟಣಕ್ಕೆ ಮುಟ್ಟುವ ಇಳಿಜಾರು ಹಾದಿಯನ್ನು ಪರೀಕ್ಷಿಸಿದನು. ಕುಡಿಯಲು ನೀರಿರುವ ಸ್ಥಳಗಳನ್ನು ಗುರುತಿಸಿ ಆಕ್ರಮಣ ಮಾಡಿದನು. ಗಡಿಕಾವಲಿಗೆಂದು ಅಲ್ಲಲ್ಲಿ ಸೈನಿಕರನ್ನು ಇರಿಸಿದನು. ಅನಂತರ ಮುಖ್ಯ ಪಾಳೆಯಕ್ಕೆ ಹಿಂದಿರುಗಿದನು.
8 : ಏಸಾವನ ಗೋತ್ರದ ಮುಖಂಡರು, ಮೋವಾಬ್ಯರ ನಾಯಕರು ಹಾಗೂ ಕರಾವಳಿಯ ಪ್ರಾಂತ್ಯದ ದಳಪತಿಗಳು ಹೊಲೊಫರ್ನೆಸನ ಬಳಿಗೆ ಬಂದು,
9 : “ಒಡೆಯರಿಗೆ ಚಿತ್ತವಿದ್ದರೆ ನಾವು ಹೇಳಿದಂತೆ ಮಾಡಬಹುದು; ಆಗ ನಿಮ್ಮ ಸೈನ್ಯಕ್ಕೆ ಸ್ವಲ್ಪವಾದರೂ ತೊಂದರೆ ಆಗದು.
10 : ಈ ಇಸ್ರಯೇಲರ ನಂಬಿಕೆ ಇರುವುದು ಭರ್ಜಿಗಳಲ್ಲಿ ಅಲ್ಲ, ಅವರ ಸುಭದ್ರತೆ ಇರುವುದು ಬೆಟ್ಟದ ತುದಿಯಲ್ಲಿ. ಕಾರಣ, ಯಾರೂ ಈ ಮೇಡನ್ನು ಸುಲಭವಾಗಿ ಹತ್ತಲಾಗದು.
11 : “ಆದುದರಿಂದ ಒಡೆಯರೇ, ನಿಮ್ಮಲ್ಲಿ ಒಬ್ಬನನ್ನಾದರೂ ಕಳೆದುಕೊಳ್ಳದಿರಬೇಕಾದರೆ, ಅವರೊಡನೆ ಈ ಗುಡ್ಡಪ್ರದೇಶದಲ್ಲಿ ಯುದ್ಧಕ್ಕೆ ಇಳಿಯಬೇಡಿ.
12 : ತಾವು ಪಾಳೆಯದಲ್ಲೇ ಇದ್ದು ಸೈನ್ಯವನ್ನು ಅಲ್ಲೇ ಇರಿಸಿರಬೇಕು. ಬೆಟ್ಟದ ತುದಿಯಲ್ಲಿ ನೀರಿನ ಬುಗ್ಗೆಯೊಂದಿದೆ.
13 : ಇಡೀ ಬೆಥೂಲಿಯಕ್ಕೆ ನೀರು ಸರಬರಾಜಾಗುವುದು ಅಲ್ಲಿಂದಲೇ. ಅದನ್ನು ಮಾತ್ರ ತಮ್ಮ ಸೇವಕರು ಆಕ್ರಮಿಸಿಕೊಂಡರೇ ಸಾಕು. ಅವರು ನೀರಡಿಕೆಯಿಂದ ಬಳಲಿ ಶರಣಾಗತರಾಗುವರು. ಪಟ್ಟಣವನ್ನು ತಮಗೆ ಒಪ್ಪಿಸಿಬಿಡುವರು. ಅಷ್ಟರಲ್ಲಿ ನಾವೂ ನಮ್ಮ ಜನರೂ ಅತೀ ಹತ್ತಿರ ಇರುವ ಬೆಟ್ಟದ ತುದಿಗಳನ್ನು ಮುಟ್ಟಿ ಸೈನಿಕರನ್ನು ನೇಮಿಸುತ್ತೇವೆ. ಪಟ್ಟಣದಿಂದ ಯಾರೂ ಆಚೆ ಬಾರದಂತೆ ಅವರು ನೋಡಿಕೊಳ್ಳುವರು.
14 : ಬೆಥೂಲಿಯದವರೆಲ್ಲರೂ ಮಡದಿ ಮಕ್ಕಳೊಡನೆ ಹಸಿವಿನಿಂದ ಬಳಲುವರು. ನಿಮ್ಮ ಕತ್ತಿಯ ಬಾಯಿಗೆ ಸಿಗುವ ಮುನ್ನ ತಮ್ಮ ಮನೆಗಳ ಮುಂದೆ ಬೀದಿಗಳಲ್ಲಿ ಬಿದ್ದಿರುವರು.
15 : ಅವರು ನಿಮ್ಮೊಡನೆ ಸಂಧಾನ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ, ಅವರ ಆ ಉದ್ಧಟತನಕ್ಕೆ, ತಕ್ಕ ಶಾಸ್ತಿಯಾಗುವಂತೆ ಮಾಡುವಿರಿ,” ಎಂದರು.
16 : ಹೊಲೊಫರ್ನೆಸ್ ಮತ್ತು ಅವನೊಂದಿಗೆ ಇದ್ದ ಇತರ ಸೇನಾಧಿಪತಿಗಳಿಗೆ ಅವರ ಮಾತು ತುಂಬಾ ಹಿಡಿಯಿತು. ಅವರ ಸಲಹೆಯ ಪ್ರಕಾರ ಮಾಡಲು ಹೊಲೊಫರ್ನೆಸ್ ತೀರ್ಮಾನಿಸಿದನು.
17 : ಮೋವಾಬ್ಯರ ಸೇನಾಪಡೆ ಸುಮಾರು ಐದು ಸಾವಿರ ಅಸ್ಸೀರಿಯರೊಂದಿಗೆ ಮುಂದಕ್ಕೆ ಹೋಯಿತು. ಅವರು ಕಣಿವೆಯ ಮಾರ್ಗವಾಗಿ ಹೋಗಿ ಇಸ್ರಯೇಲರ ನೀರಿನ ಬುಗ್ಗೆಗಳನ್ನು ಆಕ್ರಮಿಸಿಕೊಂಡರು.
18 : ಅಷ್ಟರಲ್ಲಿ ಎದೋಮ್ಯರೂ ಅಮ್ಮೋನ್ಯರೂ ದೋತಾನನಿಗೆ ಎದುರಾಗಿರುವ ಮೇಲ್ನಾಡಿನಲ್ಲಿ ಅನುಕೂಲವಾದ ಸ್ಥಳವನ್ನು ಆಕ್ರಮಿಸಿಕೊಂಡರು. ತಮ್ಮಲ್ಲಿ ಕೆಲವರನ್ನು ಆಗ್ನೇಯದಲ್ಲಿರುವ ವಾಡಿಮೊಕ್‍ಮೂರಿನ ಎದುರಿಗೆ ಕೌಸಿನ ಬಳಿಯಿರುವ ಎಗ್ರೆಬೆಗೆ ಕಳುಹಿಸಿದರು. ಅಸ್ಸೀರಿಯಾ ಸೈನ್ಯದ ಇತರ ದಳಗಳು ಬಯಲಿನಲ್ಲೇ ಇದ್ದು ಕೊಂಚ ಸ್ಥಳವನ್ನೂ ಬಿಡದೆ ಎಲ್ಲ ಭಾಗವನ್ನು ಆಕ್ರಮಿಸಿಕೊಂಡರು. ಅವರ ಅಸಂಖ್ಯಾತ ಗುಡಾರಗಳು, ಆಯುಧಗಳು ಮುಂತಾದುವೆಲ್ಲವು ಸೇರಿ ಅವೇ ಒಂದು ಬೃಹತ್ ಪಾಳೆಯವಾಗಿ ಕಾಣಿಸುತ್ತಿತ್ತು.
19 : ಶತ್ರುಗಳು ಸುತ್ತುವರೆದು ಹಿಮ್ಮೆಟ್ಟಲು ಸಾಧ್ಯವಾಗದಂತೆ ತಡೆದುಕೊಂಡಿರಲಾಗಿ, ಇಸ್ರಯೇಲರು ಧೈರ್ಯಗೆಟ್ಟು, ಸರ್ವೇಶ್ವರನಾದ ದೇವರಿಗೆ ಮೊರೆಯಿಟ್ಟರು.
20 : ರಾಹುತರು, ರಥಗಳು ಮತ್ತು ಕಾಲಾಳುಗಳನ್ನೊಳಗೊಂಡ ಅಸ್ಸೀರಿಯರ ಸೈನ್ಯ ಅವರನ್ನು ಮೂವತ್ತನಾಲ್ಕು ದಿನಗಳವರೆಗೆ ಮುತ್ತಿಕೊಂಡಿತ್ತು.
21 : ಬೆಥೂಲಿಯದ ನಿವಾಸಿಗಳ ಮನೆಯಲ್ಲಿ ನೀರಿನ ಬಾನೆಗಳೆಲ್ಲ ಖಾಲಿಯಾಗಿದ್ದವು. ಕೊಳಗಳಲ್ಲಿ ಅವರು ಶೇಖರಿಸಿಟ್ಟ ನೀರೆಲ್ಲ ಇಂಗಿಹೋಗಿತ್ತು. ನೀರಿನ ಕೊರತೆಯ ನಿಮಿತ್ತ ದಿನಕ್ಕೆ ಸಾಕಾಗುವಷ್ಟು ಯಾರೂ ಕುಡಿಯುವಂತಿರಲಿಲ್ಲ.
22 : ಮಕ್ಕಳೆಲ್ಲ ಸೊರಗುತ್ತಿದ್ದವು; ಮಹಿಳೆಯರು, ಯುವಕರು ಬಾಯಾರಿ ಬಳಲಿದರು. ಕೆಲವರು ನಿಶ್ಯಕ್ತರಾಗಿ ಬೀದಿಗಳಲ್ಲೂ ಪಟ್ಟಣದ ಬಾಗಿಲ ಬಳಿಯಲ್ಲೂ ಕುಸಿದುಬಿದ್ದರು.
23 : ಯುವಕರು, ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರೂ ಉಜ್ಜೀಯನ ಬಳಿಗೆ ಬಂದು ಗೋಳಿಟ್ಟರು: ಊರ ಹಿರಿಯರು ಪ್ರಮುಖರ ಮುಂದೆ ಬಂದು ಕೂಗಾಡಿದರು:
24 : “ನಿಮಗೂ ನಮಗೂ ದೇವರೇ ನ್ಯಾಯ ತೀರಿಸಲಿ. ಅಸ್ಸೀರಿಯರೊಡನೆ ಸಂಧಾನ ಮಾಡಿಕೊಳ್ಳದೆ ನಮ್ಮನ್ನು ತುಂಬಾ ಅಪಾಯಕ್ಕೊಳಗಾಗಿಸಿದ್ದೀರಿ.
25 : ಈಗ ನಮಗೆ ಸಹಾಯಕರು ಯಾರೂ ಇಲ್ಲ. ನೀರಡಿಕೆ, ನಿಸ್ಸಹಾಯಕತೆಗಳಿಂದ ಶತ್ರುಗಳ ಮುಂದೆ ಶರಣಾಗಬೇಕೆಂದು ದೇವರು ನಮ್ಮನ್ನು ಕೈ ಬಿಟ್ಟಿದ್ದಾರೆ.
26 : ಅಸ್ಸೀರಿಯರನ್ನು ಕೂಡಲೇ ಕರೆಸಿರಿ. ಪಟ್ಟಣವನ್ನೆಲ್ಲ ಮುತ್ತಿಗೆ ಹಾಕಿ ಸೂರೆಮಾಡುವಂತೆ ಹೊಲೊಫರ್ನೆಸನಿಗೂ ಅವನ ಜನರಿಗೂ ಸೈನ್ಯಕ್ಕೂ ಒಪ್ಪಿಸಿಬಿಡಿ.
27 : ಈಗಿರುವುದಕ್ಕಿಂತ ಅವರಿಗೆ ಕೊಳ್ಳೆಯಾಗಿ ಬಿಡುವುದೇ ಲೇಸು. ನಾವು ಗುಲಾಮರಾಗುವುದೇನೋ ನಿಜ. ಆದರೆ ನಾವು ಜೀವದಿಂದಿರುವುದಕ್ಕೆ ಅವಕಾಶವಿದೆ. ನಮ್ಮ ಮಕ್ಕಳು ನಮ್ಮ ಕಣ್ಮುಂದೆ ಸಾಯುವುದನ್ನು, ನಮ್ಮ ಮಡದಿ ಮಕ್ಕಳು ನಾಶವಾಗುವುದನ್ನು ತಪ್ಪಿಸಿದಂತಾಗುವುದು;
28 : ಭೂಪರಗಳ ಮೇಲೂ, ನಮ್ಮ ಪಾಪಗಳಿಗೆ ಹಾಗೂ ನಮ್ಮ ಪೂರ್ವಜರ ಪಾಪಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವಂಥ ನಮ್ಮ ದೇವರ ಮೇಲೂ ನಮ್ಮ ಪೂರ್ವಜರ ಸರ್ವೇಶ್ವರನ ಮೇಲೂ ಪ್ರಮಾಣಮಾಡಿ ಇದೀಗಲೇ ಈ ನಿರ್ಧಾರವನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ,” ಎಂದರು.
29 : ಇಡೀ ಸಭೆಯು ಬಹುವಾಗಿ ಗೋಳಾಡಿತು. ಎಲ್ಲರೂ ಸರ್ವೇಶ್ವರನಾದ ದೇವರಿಗೆ ಉಚ್ಚಸ್ವರದಿಂದ ಮೊರೆಯಿಟ್ಟರು.
30 : ಆಗ ಉಜ್ಜೀಯನು: “ಸಹೋದರರೇ, ಧೈರ್ಯ ತಾಳಿ; ಇನ್ನೂ ಐದು ದಿನ ಕಾದಿರೋಣ. ಅಷ್ಟರೊಳಗೆ ನಮ್ಮ ದೇವರಾದ ಸರ್ವೇಶ್ವರ ನಮಗೆ ದಯೆತೋರುವರು. ಅವರು ನಮ್ಮನ್ನು ಸಂಪೂರ್ಣವಾಗಿ ಕೈಬಿಡಲಾರರು.
31 : ಈ ಅವಧಿಯೊಳಗೆ ಯಾವ ಸಹಾಯವೂ ಬಾರದಿದ್ದಲ್ಲಿ ನೀವು ಹೇಳಿದಂತೆಯೇ ಮಾಡೋಣ,” ಎಂದು ಹೇಳಿ ಜನರನ್ನು ಅವರವರ ನಿವಾಸಕ್ಕೆ ಕಳುಹಿಸಿಬಿಟ್ಟನು. ಗಂಡಸರು ಪಟ್ಟಣದ ಗೋಡೆ ಗೋಪುರಗಳನ್ನು ಕಾಯಲು ಹೋದರು. ಮಡದಿ ಮಕ್ಕಳು ತಮ್ಮ ತಮ್ಮ ಮನೆಗಳನ್ನು ಸೇರಿದರು. ಪಟ್ಟಣದಲ್ಲೆಲ್ಲಾ ನಿರಾಶೆಯ ಮಂಕು ಕವಿದಿತ್ತು.

Holydivine