Daniel - Chapter 8
Holy Bible

1 : ಮೊದಲು ನನಗೆ ಕಾಣಿಸಿದ ಕನಸಲ್ಲದೆ, ಅರಸ ಬೇಲ್ಯಚ್ಚರನ ಆಳ್ವಿಕೆಯ ಮೂರನೇ ವರ್ಷದಲ್ಲಿ ದಾನಿಯೇಲನಾದ ನನಗೆ ಇನ್ನೊಂದು ಕನಸು ಕಾಣಿಸಿತು.
2 : ಈ ಕನಸಿನಲ್ಲಿ ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿ ನಾನಿದ್ದೆ. ಊಲಾ ಕಾಲುವೆಯ ದಡದ ಮೇಲೆ ನಾನು ನಿಂತುಕೊಂಡಿದ್ದ ಹಾಗೆ ತೋರಿತು.
3 : ಕಣ್ಣೆತ್ತಿ ನೋಡಿದಾಗ ಎರಡು ಕೊಂಬಿನ ಒಂದು ಟಗರು ಕಾಲುವೆಯ ಹತ್ತಿರ ನಿಂತಿದ್ದು ಕಾಣಿಸಿತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ದೊಡ್ಡದಾಗಿತ್ತು. ಆ ದೊಡ್ಡದು ಮೊಳೆತದ್ದು ಚಿಕ್ಕ ಕೊಂಬು ಮೊಳೆತ ಮೇಲೆ.
4 : ನಾನು ನೋಡುತ್ತಿದ್ದ ಹಾಗೆ ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹಾದಾಡುತ್ತಿತ್ತು. ಯಾವ ಪ್ರಾಣಿಯೂ ಅದರ ಎದುರಿಗೆ ನಿಲ್ಲಲಾರದೆ ಹೋಯಿತು. ಅದರ ಕೈಯಿಂದ ಬಿಡಿಸಲು ಯಾವ ಮೃಗಕ್ಕೂ ಶಕ್ತಿಯಿರಲಿಲ್ಲ. ಅದು ಇಷ್ಟ ಬಂದಂತೆ ನಡೆದು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿತ್ತು.
5 : ನಾನು ಅದನ್ನು ಗಮನಿಸುತ್ತಿರುವಾಗಲೇ ಹೋತವೊಂದು ಪಶ್ಚಿಮದಿಂದ ಹೊರಟು ಬಂದಿತು. ಅದು ಜಗವೆಲ್ಲವನ್ನು ದಾಟಿಕೊಂಡು ನೆಲವನ್ನು ಸೋಕದೆ, ಅಲ್ಲಿಗೆ ಧಾವಿಸಿತು. ಅದರ ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿತ್ತು.
6 : ನಾನು ಕಾಲುವೆಯ ಹತ್ತಿರ ಕಂಡ ಎರಡು ಕೊಂಬಿನ ಟಗರಿನ ಬಳಿಗೆ ಆ ಹೋತ ಓಡಿತು. ಪರಾಕ್ರಮದಿಂದ ಉಬ್ಬಿ, ರೋಷಗೊಂಡು, ಅದರ ಮೇಲೆ ಬೀಳಬೇಕೆಂದು ದೌಡಾಯಿಸಿತು.
7 : ಆ ಟಗರನ್ನು ಸಮೀಪಿಸುವುದನ್ನು ನಾನು ಗಮನಿಸಿದೆ. ಟಗರಿನ ವಿರುದ್ಧ ಮಹಾರೌದ್ರದಿಂದ ಉರಿಯುತ್ತಾ ಅದರ ಮೇಲೆ ಎರಗಿ ಅದರ ಎರಡು ಕೊಂಬುಗಳನ್ನು ಮುರಿದು ಬಿಟ್ಟಿತು. ಅದನ್ನು ಎದುರಿಸುವ ಶಕ್ತಿ ಯಾವುದೂ ಆ ಟಗರಿಗೆ ಇರಲಿಲ್ಲ. ಹೋತ ಟಗರನ್ನು ನೆಲಕ್ಕೆ ಕೆಡವಿ ತುಳಿದುಹಾಕಿತು. ಅದರ ಕೈಯಿಂದ ಟಗರನ್ನು ಬಿಡಿಸುವ ಪ್ರಾಣಿ ಯಾವುದೂ ಇರಲಿಲ್ಲ.
8 : ಆ ಹೋತಕ್ಕೆ ಅತ್ಯಧಿಕ ಹುಮ್ಮಸ್ಸು ಬಂದಿತು. ಆದರೆ ಅದು ಪ್ರಾಬಲ್ಯಕ್ಕೆ ಬರುವಾಗಲೇ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಪ್ರಸಿದ್ಧ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೂ ಚಾಚಿಕೊಂಡವು.
9 : ಅವುಗಳೊಳಗೆ ಒಂದರಲ್ಲಿ ಒಂದು ಚಿಕ್ಕ ಕೊಂಬು ಮೊಳೆತು, ಬಹುದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ಚೆಲುವಿನ ನಾಡಾದ ಪಾಲೆಸ್ತೀನಿನ ಕಡೆಗೂ ಪ್ರಬಲಗೊಂಡಿತು.
10 : ಅದು ನಕ್ಷತ್ರ ಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ ಆ ಗಣದ ಕೆಲವು ನಕ್ಷತ್ರಗಳನ್ನೂ ನೆಲಕ್ಕೆ ಕೆಡವಿ ತುಳಿದು ಬಿಟ್ಟಿತು.
11 : ಅದು ಮಾತ್ರವಲ್ಲ, ಆ ನಕ್ಷತ್ರ ಗಣದ ಅಧಿಪತಿಯನ್ನೇ ಎದುರಿಸುವಷ್ಟು ಉಬ್ಬಿಹೋಗಿ ಅನುದಿನದ ಬಲಿಯರ್ಪಣೆ ಆತನಿಗೆ ಸಲ್ಲದಂತೆ ಮಾಡಿತು.
12 : ಆತನ ಪವಿತ್ರಾಲಯವನ್ನು ಕೆಡವಿತು. ಅನುದಿನದ ಬಲಿಯರ್ಪಣೆಯನ್ನು ಅಡಗಿಸುವುದಕ್ಕಾಗಿ ನೀಚತನದಿಂದ ಒಂದು ಸೈನ್ಯವನ್ನೆಬ್ಬಿಸಿತು. ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿತು. ತನ್ನ ಇಷ್ಟಾರ್ಥವನ್ನು ಈಡೇರಿಸಿಕೊಂಡು ವೃದ್ಧಿಗೆ ಬಂದಿತು.
13 : ಆಗ ಒಬ್ಬ ದೇವದೂತನು ಮಾತಾಡುವುದು ನನಗೆ ಕೇಳಿಸಿತು. ಮಾತಾಡುವವನನ್ನು ಮತ್ತೊಬ್ಬ ದೇವದೂತನು ಸಂಬೋಧಿಸಿ: “ಅನುದಿನದ ಬಲಿಯರ್ಪಣೆಯನ್ನು ನಿಲ್ಲಿಸುವುದು, ಭಯಂಕರವಾದ ದೇವದ್ರೋಹ ಮಾಡುವುದು, ಪವಿತ್ರಾಲಯವನ್ನೂ ದೇವಭಕ್ತಗಣವನ್ನೂ ತುಳಿಯುವುದೂ-ಕನಸಿನ ಇಂಥಾ ಕಾರ್ಯಗಳು ಎಷ್ಟು ಕಾಲ ನಡೆಯುವುವು?” ಎಂದು ಪ್ರಶ್ನೆಮಾಡಿದನು.
14 : ಅವನು ಇವನಿಗೆ, “ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರರವರೆಗೆ ನಡೆಯುವುವು. ಅನಂತರ ಪವಿತ್ರಾಲಯಕ್ಕೆ ಪುನಃ ನ್ಯಾಯಸ್ಥಾಪನೆ ಆಗುವುದು,” ಎಂದು ಹೇಳಿದನು.
15 : ದಾನಿಯೇಲನಾದ ನಾನು ಈ ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ತಟ್ಟನೆ ಮನುಷ್ಯ ರೂಪಹೊಂದಿದ ಒಬ್ಬನು ನನ್ನೆದುರಿಗೆ ನಿಂತನು.
16 : ಆಗ, “ಗ್ರಬಿಯೇಲನೇ, ಕನಸಿನ ಅರ್ಥವನ್ನು ಇವನಿಗೆ ತಿಳಿಯಪಡಿಸು,” ಎಂದು ಮನುಷ್ಯ ಧ್ವನಿಯಂಥ ಒಂದು ವಾಣಿ ಊಲಾ ಕಾಲುವೆಯ ನಡುವೆ ನನಗೆ ಕೇಳಿಸಿತು.
17 : ಅದರಂತೆ ಅವನು ನನ್ನ ಹತ್ತಿರಕ್ಕೆ ಬಂದನು. ನಾನು ಭಯಭ್ರಾಂತನಾಗಿ ಅಡ್ಡಬಿದ್ದೆ. ನನಗೆ ಅವನು, “ನರಪುತ್ರನೇ, ಇದು ಅಂತ್ಯಕಾಲದಲ್ಲಿ ನೆರವೇರುವ ಕನಸು ಎಂಬುದು ನಿನಗೆ ಮನದಟ್ಟಾಗಿರಲಿ;” ಎಂದು ಹೇಳಿದನು.
18 : ಅವನು ನನ್ನೊಡನೆ ಮಾತಾಡುತ್ತಿರುವಾಗ ನಾನು ಮೈ ಮರೆತು ಅಧೋಮುಖವಾಗಿ ಬಿದ್ದಿದ್ದೆ. ಆಗ ಅವನು ನನ್ನನ್ನು ಮುಟ್ಟಿ, ನಿಲ್ಲಿಸಿ ನನಗೆ:
19 : “ದೇವರು ತಮ್ಮ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುತ್ತೇನೆ ಕೇಳು – ಅದು ನಿಯಮಿತ ಅಂತ್ಯ ಕಾಲಕ್ಕೆ ಸಂಬಂಧಪಟ್ಟದ್ದು.”
20 : “ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯದ ಮತ್ತು ಪರ್ಷಿಯದ ರಾಜ್ಯ.
21 : ಆ ಹೋತ ಗ್ರೀಕ್ ರಾಜ್ಯ. ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ.
22 : ಆ ಕೊಂಬು ಮುರಿದು ಹೋದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದಂತೆಯೆ ಆ ಜನಾಂಗದಿಂದ ನಾಲ್ಕು ರಾಜ್ಯಗಳು ಏಳುವುವು. ಆದರೆ ಮೊದಲನೇ ರಾಜನಿಗೆ ಇದ್ದಷ್ಟು ಶಕ್ತಿ ಅವುಗಳಿಗೆ ಇರುವುದಿಲ್ಲ.
23 : ಆ ರಾಜ್ಯಗಳ ಕಡೆಯಕಾಲ ಬಂದಾಗ, ಅಧರ್ಮಿಗಳ ಅಪರಾಧ ಭರ್ತಿಯಾದಾಗ, ಕ್ರೂರ ಮುಖನೂ ಕುತಂತ್ರ ವಚನ ನಿಪುಣನೂ ಆದ ಒಬ್ಬ ರಾಜನು ತಲೆದೋರುವನು.
24 : ಅವನು ಪ್ರಬಲನಾಗುವನು, ಆದರೆ ಸ್ವಬಲದಿಂದಲ್ಲ. ಅತ್ಯಧಿಕವಾಗಿ ಹಾಳುಮಾಡಿ, ಅಭಿವೃದ್ಧಿಯಾಗುವನು. ತನ್ನ ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲಿಷ್ಠರನ್ನೂ ದೇವಜನರನ್ನೂ ಧ್ವಂಸಮಾಡುವನು.
25 : ಯುಕ್ತಿಯಿಂದಲೆ ತನ್ನ ಕಪಟತನವನ್ನು ಸಿದ್ಧಿಗೆತರುವನು, ಮನದಲ್ಲೆ ಉಬ್ಬಿಕೊಂಡು ನೆಮ್ಮದಿಯಾಗಿರುವ ಬಹುಜನರನ್ನು ನಾಶ ಪಡಿಸುವನು. ರಾಜಾಧಿರಾಜನಿಗೂ ವಿರುದ್ಧವಾಗಿ ಏಳುವನು, ಆದರೂ ಯಾರ ಕೈಯೂ ಸೋಕದೆ ಹಾಳಾಗುವನು.
26 : ಕನಸಿನಲ್ಲಿ ತಿಳಿಸಲಾದ ಉದಯಾಸ್ತಮಾನಗಳ ವಿಷಯ ನಿಜವೇ ಸರಿ. ಆದರೆ ಆ ಕನಸು ಗುಟ್ಟಾಗಿರಲಿ. ಅದು ಬಹು ದೂರದ ಕಾಲದ್ದು,” ಎಂದು ಹೇಳಿದನು.
27 : ದಾನಿಯೇಲನಾದ ನಾನು ಮೂರ್ಛೆಗೊಂಡೆ. ಕೆಲವು ದಿವಸ ಕಾಯಿಲೆ ಬಿದ್ದೆ. ಆಮೇಲೆ ಎದ್ದು ರಾಜಕಾರ್ಯವನ್ನು ಆರಂಭಿಸಿದೆ. ಆದರೂ ಆ ಕನಸಿಗೆ ಬೆಚ್ಚಿಬೆರಗಾದೆ. ಅದರ ಅರ್ಥವನ್ನು ಗ್ರಹಿಸಿಕೊಳ್ಳಲಾಗಲಿಲ್ಲ.

Holydivine