Daniel - Chapter 7
Holy Bible

1 : ಬಾಬಿಲೋನಿನ ಅರಸನಾದ ಬೇಲ್ಯಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನು ಹಾಸಿಗೆಯ ಮೇಲೆ ಮಲಗಿದ್ದಾಗ ಒಂದು ಕನಸು ಕಂಡನು. ಅವನ ಮನಸ್ಸಿಗೆ ಒಂದು ದೃಶ್ಯಕಾಣಿಸಿತು. ಕೂಡಲೆ ಅವನು ಆ ಕನಸನ್ನೂ ಅದರ ಮುಖ್ಯಾಂಶಗಳನ್ನೂ ಬರೆದಿಟ್ಟನು.
2 : ಅದರ ಸಾರಾಂಶ ಇದು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು.
3 : ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಆ ಸಾಗರದಿಂದ ಹೊರಗೆ ಬಂದವು.
4 : ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೆ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯಕೊಡಲಾಯಿತು.
5 : ಬಳಿಕ ಎರಡನೆಯ ಇನ್ನೊಂದು ಮೃಗವನ್ನು ಕಂಡೆ. ಅದು ಕರಡಿಯ ಹಾಗಿತ್ತು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿನ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. “ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು,” ಎಂದು ಅದಕ್ಕೆ ಹೇಳಲಾಯಿತು.
6 : ಅನಂತರ ನಾನು ನೋಡುತ್ತಿರುವಾಗಲೆ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು.
7 : ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು. ಹದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.
8 : ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಾಗಲೆ ಅವುಗಳ ನಡುವೆ ಇಗೋ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದಕ್ಕೆ ಎಡೆಮಾಡಿಕೊಡಲು ಮುಂಚಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಆಶ್ಚರ್ಯವೆಂದರೆ, ಆ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳಿದ್ದವು. ಬಡಾಯಿ ಕೊಚ್ಚಿಕೊಳ್ಳುವ ಬಾಯೂ ಇತ್ತು.
9 : ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.
10 : ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು.
11 : ನಾನು ನೋಡುತ್ತಾ ಇದ್ದೆ: ಆ ಕಿರುಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು.
12 : ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವಾವಧಿಯನ್ನು ಉಳಿಸಿದರು.
13 : ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು.
14 : ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
15 : ದಾನಿಯೇಲನಾದ ನನ್ನ ಮನ ಒಳಗೇ ವ್ಯಥೆಗೊಂಡಿತು. ನನ್ನ ಮನಸ್ಸಿನಲ್ಲಿ ತೋಚಿದ ದರ್ಶನಗಳು ನನ್ನನ್ನು ಕಳವಳಪಡಿಸಿದವು.
16 : ಹತ್ತಿರದಲ್ಲೆ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸರಿಯಾದ ಅರ್ಥ ಏನೆಂದು ವಿಚಾರಿಸಿದೆ.
17 : ಅವನು ನನಗೆ: “ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರಗಳಿಂದ ಏರತಕ್ಕ ನಾಲ್ಕು ರಾಜ್ಯಗಳು.
18 : ಆದರೆ ರಾಜ್ಯಾಧಿಕಾರ ಲಭಿಸುವುದು ಮಹೋನ್ನತರ ಪವಿತ್ರ ಪ್ರಜೆಗೆ. ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವವರು ಅವರೇ,” ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು.
19 : ಅದಾದ ಮೇಲೆ ಇತರ ಮೃಗಗಳಿಗಿಂತ ವಿಲಕ್ಷಣವಾಗಿಯೂ ಅತಿಭಯಂಕರವಾಗಿಯೂ ಕಬ್ಬಿಣದ ಹಲ್ಲು, ಕಂಚಿನ ಉಗುರು ಉಳ್ಳದ್ದಾಗಿಯೂ ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿದ್ದ ಹಾಗು ಮಿಕ್ಕದ್ದನ್ನು ಕಾಲಿನಿಂದ ತುಳಿಯುತ್ತಿದ್ದ ಈ ನಾಲ್ಕನೆಯ ಮೃಗದ ವಿಷಯವನ್ನು ತಿಳಿದುಕೊಳ್ಳಲು ಬಯಸಿದೆ.
20 : ಅದರ ತಲೆಯ ಮೇಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ,
21 : ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲೆ ಕಣ್ಣುಳ್ಳದ್ದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇತ್ತೋ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನೂ ತಿಳಿದುಕೊಳ್ಳಬೇಕೆಂದು ವಿಚಾರಿಸಿದೆ.
22 : ಆ ಕೊಂಬು ಪವಿತ್ರ ಪ್ರಜೆಯೊಂದಿಗೆ ಯುದ್ಧಮಾಡುತ್ತಿತ್ತು. ಮಹಾವೃದ್ಧನು ಬಂದು ಮಹೋನ್ನತರ ಆ ಪವಿತ್ರ ಪ್ರಜೆಗೆ ನ್ಯಾಯ ತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು.
23 : ಆಗ ಅವನು ನನಗೆ ಕೊಟ್ಟ ವಿವರ ಇದು: “ಆ ನಾಲ್ಕನೆಯ ಮೃಗ ಲೋಕದಲ್ಲಿ ತಲೆಯೆತ್ತುವ ನಾಲ್ಕನೆಯ ರಾಜ್ಯ. ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾದುದು. ಲೋಕವನ್ನೇ ಕಾಲಿನಿಂದ ತುಳಿದು ಚೂರುಚೂರು ಮಾಡಿ ಕಬಳಿಸುವುದು.
24 : ಆ ಹತ್ತು ಕೊಂಬುಗಳು ಅದೇ ರಾಜ್ಯವನ್ನು ಆಳುವ ಹತ್ತು ಮಂದಿ ಅರಸರು. ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿರುವನು. ಆ ಮೂವರು ಅರಸರನ್ನು ಸದೆಬಡಿದುಬಿಡುವನು.
25 : ಅವನು ಮಹೋನ್ನತ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು (ಸಂತರನ್ನು) ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು.
26 : ಆದರೆ (ದೇವರ) ನ್ಯಾಯಸಭೆ ತೀರ್ಪಿತ್ತು, ಅವನ ದೊರೆತನವನ್ನು ಕಿತ್ತು, ವಿನಾಶಮಾಡಿ, ಕೊನೆಗಾಣಿಸಿಬಿಡುವುದು.
27 : ರಾಜ್ಯಭಾರವೂ ದೊರೆತನವೂ ಸಮಸ್ತ ಲೋಕದಲ್ಲಿನ ರಾಜ್ಯಗಳ ಮಹಿಮೆಯೂ ಮಹೋನ್ನತರ ಭಕ್ತ ಜನರಿಗೆ ಕೊಡಲಾಗುವುದು. ಅವರ ರಾಜ್ಯ ಶಾಶ್ವತ ರಾಜ್ಯ. ಎಲ್ಲ ದೇಶಾಧಿಪತಿಗಳೂ ಅವರಿಗೆ ಅಧೀನರಾಗಿ ಸೇವೆ ಮಾಡುವರು,” ಎಂದು ಹೇಳಿದನು.
28 : ಇಲ್ಲಿಗೆ ಆ ಕನಸಿನ ವಿವರ ಮುಗಿಯಿತು. ದಾನಿಯೇಲನಾದ ನಾನು ನನ್ನ ಆಲೋಚನೆಗಳಿಂದ ಬಹಳ ಕಳವಳಗೊಂಡೆ. ನನ್ನ ಮುಖ ಬಾಡಿತು. ಆದರೂ ನಡೆದ ಸಂಗತಿಯನ್ನು ಮನಸ್ಸಿನಲ್ಲೇ ಇಟ್ಟುಕೊಂಡೆ.

Holydivine