Daniel - Chapter 10
Holy Bible

1 : ಪರ್ಷಿಯದ ರಾಜನಾದ ಸೈರೆಷನ ಆಳ್ವಿಕೆಯ ಮೂರನೇ ವರ್ಷದಲ್ಲಿ ಬೇಲ್ತೆಶಚ್ಚೆರನೆಂಬ ದಾನಿಯೇಲನಿಗೆ ಒಂದು ಸಂಗತಿ ಪ್ರಕಟವಾಯಿತು. ಅದು ಮಹಾ ಹೋರಾಟದ ಸಂಗತಿ, ಸತ್ಯವಾದ ಸಂಗತಿ. ಅದರ ಅರ್ಥವನ್ನು ತಾನು ಕಂಡ ದರ್ಶನದಿಂದ ಮನದಟ್ಟು ಮಾಡಿಕೊಂಡನು.
2 : ಆ ದಿನಗಳಲ್ಲಿ ದಾನಿಯೇಲನಾದ ನಾನು ಮೂರು ವಾರ ಒಂದು ವ್ರತವನ್ನು ಕೈಗೊಂಡಿದ್ದೆ.
3 : ಆ ಮೂರು ವಾರ ಮುಗಿಯುವ ತನಕ ನಾನು ಯಾವ ರುಚಿಪದಾರ್ಥವನ್ನೂ ತಿನ್ನಲಿಲ್ಲ. ಮಾಂಸವನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಬಾಯಲ್ಲಿ ಇಡಲಿಲ್ಲ. ಎಣ್ಣೆಯನ್ನೂ ಹಚ್ಚಿಕೊಳ್ಳಲಿಲ್ಲ.
4 : ಮೊದಲನೆಯ ತಿಂಗಳಿನ ಇಪ್ಪತ್ನಾಲ್ಕನೆಯ ದಿನದಲ್ಲಿ ನಾನು ಟೈಗ್ರಿಸ್ ಎಂಬ ಮಹಾನದಿಯ ದಡದ ಮೇಲೆ ನಿಂತಿದ್ದೆ.
5 : ಕಣ್ಣೆತ್ತಿ ನೋಡಲು, ನಾರುಬಟ್ಟೆಯನ್ನು ಹೊದ್ದುಕೊಂಡಿದ್ದ, ಊಫಜಿನ ಬಂಗಾರದ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡಿದ್ದ, ಒಬ್ಬ ವ್ಯಕ್ತಿ ನನಗೆ ಕಾಣಿಸಿದ.
6 : ಅವನ ಶರೀರ ಸುವರ್ಣರತ್ನದ ಹಾಗೆ ಕಂಗೊಳಿಸಿತು. ಅವನ ಮುಖ ಮಿಂಚಿನಂತೆ ಹೊಳೆಯಿತು. ಅವನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ಫಳಫಳಿಸಿದವು. ಅವನ ಕೈಕಾಲುಗಳು ಬೆಳಗಿದ ಕಂಚಿನ ಹಾಗೆ ಥಳಿಥಳಿಸಿದವು. ಅವನ ಮಾತಿನ ಶಬ್ದ ಜನಸಂದಣಿಯ ಕೋಲಾಹಲದಂತಿತ್ತು.
7 : ಆ ದರ್ಶನವನ್ನು ಕಂಡವನು ದಾನಿಯೇಲನಾದ ನಾನೊಬ್ಬನೇ. ನನ್ನೊಂದಿಗೆ ಇದ್ದವರು ಅದನ್ನು ಕಾಣಲಿಲ್ಲ. ಅವರು ಭಯಭ್ರಾಂತರಾಗಿ ಓಡಿಹೋಗಿ ಅವಿತುಕೊಂಡರು.
8 : ನಾನು ಒಂಟಿಯಾಗಿ ಉಳಿದು ಆ ಅದ್ಭುತವನ್ನು ಕಂಡೆ. ನನ್ನ ಶಕ್ತಿಯೆಲ್ಲಾ ಕರಗಿಹೋಯಿತು. ನನ್ನ ಗಾಂಭೀರ್ಯ ಅಳಿಯಿತು. ನಾನು ನಿತ್ರಾಣನಾದೆ.
9 : ಆದರೂ ಅವನು ಮಾತಾಡುವ ಶಬ್ದ ಕೇಳಿಸಿತು. ಅದು ನನ್ನ ಕಿವಿಗೆ ಬಿದ್ದಾಗ ನಾನು ಮೈಮರೆತು ಅಧೋಮುಖವಾಗಿ ಅಡ್ಡಬಿದ್ದೆ.
10 : ಆಗ ಯಾರದೋ ಕೈ ನನ್ನನ್ನು ಮುಟ್ಟಿದಂತಾಯಿತು. ನಾನು ಗಡಗಡನೆ ನಡುಗುತ್ತಾ ಅಂಗೈಗಳನ್ನೂ ಮೊಣಕಾಲುಗಳನ್ನೂ ಊರಿ ನಿಲ್ಲುವಂತೆ ಮಾಡಿತು.
11 : ಆಗ ಅವನು ನನಗೆ, “ಅತಿಪ್ರಿಯ ದಾನಿಯೇಲನೇ, ನಾನು ನುಡಿಯುವ ಮಾತುಗಳನ್ನು ಗ್ರಹಿಸು. ಎದ್ದು ನಿಂತುಕೋ. ನಾನು ನಿನ್ನ ಬಳಿಗೆ ಕಳುಹಿಸಲ್ಪಟ್ಟವನು,” ಎಂದನು.
12 : ಆಮೇಲೆ ಅವನು ನನಗೆ, “ದಾನಿಯೇಲನೇ, ಭಯಪಡಬೇಡ! ಏಕೆಂದರೆ ನೀನು ನಿನ್ನ ದೇವರ ಮುಂದೆ ವಿನಮ್ರಪೂರ್ವಕವಾಗಿ (ದೈವಸಂಕಲ್ಪವನ್ನು) ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ಮೊದಲನೆಯ ದಿನದಲ್ಲೇ ನಿನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು. ಆ ಪ್ರಾರ್ಥನೆಯ ನಿಮಿತ್ತವೇ ನಾನು ಬಂದಿದ್ದೇನೆ.
13 : ಪರ್ಷಿಯ ರಾಜ್ಯದ ಕಾವಲುದೂತನು ಇಪ್ಪತ್ತೊಂದು ದಿನ ನನ್ನನ್ನು ಎದುರಿಸಿ ನಿಂತನು. ಆದರೆ ಪ್ರಧಾನ ದೂತರಲ್ಲಿ ಒಬ್ಬನಾದ ಮಿಕಾಯೇಲನು ನನ್ನ ಸಹಾಯಕ್ಕೆ ಬಂದನು. ಅಲ್ಲಿನ ಪರ್ಷಿಯ ರಾಜರ ಸಂಗಡ ಹೋರಾಡಲು ಅವನನ್ನು ಬಿಟ್ಟು ಬಂದಿದ್ದೇನೆ.
14 : ಅಂತ್ಯಕಾಲದಲ್ಲಿ ನಿನ್ನ ಜನರಿಗೆ ಬರಲಿರುವ ಗತಿಯನ್ನು ನಿನಗೆ ತಿಳಿಸುವುದಕ್ಕೋಸ್ಕರ ಬಂದೆ. ಆ ಕಾಲದ ಸಂಗತಿಯನ್ನು ವ್ಯಕ್ತಪಡಿಸುವ ಇನ್ನೊಂದು ದರ್ಶನವಿದೆ,” ಎಂದು ಹೇಳಿದನು.
15 : ಅವನು ಈ ಮಾತನ್ನು ನನಗೆ ಹೇಳಿದ ಕೂಡಲೆ ನಾನು ಮುಖವನ್ನು ತಗ್ಗಿಸಿಕೊಂಡು ನಿಶ್ಯಬ್ದನಾದೆ.
16 : ಆಗ ನರರೂಪ ಹೊಂದಿದ್ದ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದ. ನಾನು ಬಾಯಿತೆರೆದು ನನ್ನ ಮುಂದೆ ನಿಂತಿದ್ದವನಿಗೆ, “ಎನ್ನೊಡೆಯಾ, ಈ ದರ್ಶನದಿಂದ ವೇದನೆಗಳು ನನ್ನನ್ನು ಆಕ್ರಮಿಸಿವೆ, ನಾನು ನಿತ್ರಾಣನಾಗಿದ್ದೇನೆ.
17 : ನನ್ನೊಡೆಯನ ದಾಸನಾದ ನನ್ನಂಥವನು ಎನ್ನೊಡೆಯರಾದ ತಮ್ಮಂಥವರ ಸಂಗಡ ಹೇಗೆ ಮಾತಾಡಬಹುದು? ಈಗ ಶಕ್ತಿಯನ್ನೆಲ್ಲಾ ಕಳೆದುಕೊಂಡಿದ್ದೇನೆ; ನನ್ನಲ್ಲಿ ಉಸಿರೇ ಇಲ್ಲವಾಗಿದೆ,” ಎಂದು ಹೇಳಿದೆ.
18 : ಮನುಷ್ಯರೂಪ ಹೊಂದಿದ್ದ ಆ ವ್ಯಕ್ತಿ ಪುನಃ ನನ್ನನ್ನು ಮುಟ್ಟಿ ಬಲಪಡಿಸಿದ.
19 : ಬಳಿಕ ಆ ವ್ಯಕ್ತಿ ನನಗೆ, “ಅತಿಪ್ರಿಯನೇ, ಭಯಪಡಬೇಡ. ನಿನಗೆ ಶಾಂತಿ ಸಮಾಧಾನವಿರಲಿ! ಧೈರ್ಯತಂದುಕೊ! ಧೈರ್ಯತಂದುಕೊ!” ಎಂದು ಹೇಳಿದ. ಅವನ ಈ ಮಾತನ್ನು ಕೇಳಿದ ಕೂಡಲೆ ನಾನು ಧೈರ್ಯದಿಂದ, “ಎನ್ನೊಡೆಯಾ, ಮಾತಾಡು. ನನಗೆ ಧೈರ್ಯತುಂಬಿರುವೆ,” ಎಂದು ಅರಿಕೆಮಾಡಿದೆ.
20 : ಅವನು ನನಗೆ ಹೀಗೆಂದು ಹೇಳಿದ: “ನಾನು ನಿನ್ನ ಬಳಿಗೆ ಏಕೆ ಬಂದೆನೆಂಬುದು ನಿನಗೆ ಗೊತ್ತಲ್ಲವೇ? ಈಗ ನಾನು ಪರ್ಷಿಯ ರಾಜ್ಯದ ಕಾವಲುದೂತನೊಂದಿಗೆ ಹೋರಾಡಲು ಹಿಂದಿರುಗಬೇಕು. ನಾನು ಆ ಹೋರಾಟವನ್ನು ತೀರಿಸಿದ ಕೂಡಲೆ ಗ್ರೀಕ್ ರಾಜ್ಯದ ಕಾವಲುದೂತನು ಎದುರು ಬೀಳುವನು.
21 : ಸತ್ಯಗ್ರಂಥದಲ್ಲಿ ಲಿಖಿತವಾದುದನ್ನು ಈಗ ನಿನಗೆ ತಿಳಿಸುತ್ತೇನೆ. ಇವರಿಬ್ಬರೊಂದಿಗೆ ಹೋರಾಡುವಲ್ಲಿ ನಿಮ್ಮ ಕಾವಲುದೂತನಾದ ಮಿಕಾಯೇಲನ ಹೊರತು ನನಗೆ ಬೆಂಬಲಿಗರಾಗ ತಕ್ಕವರು ಇನ್ನಾರೂ ಇಲ್ಲ.

Holydivine