Daniel - Chapter 3
Holy Bible

1 : ರಾಜ ನೆಬೂಕದ್ನೆಚ್ಚರನು 27 ಮೀಟರ್ ಎತ್ತರದ 3 ಮೀಟರ್ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ ಬಾಬಿಲೋನ್ ಸಂಸ್ಥಾನದ ‘ದೂರಾ’ ಎಂಬ ಬಯಲಿನಲ್ಲಿ ನಿಲ್ಲಿಸಿದನು.
2 : ಬಳಿಕ ರಾಜ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ್ದ ಆ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭವನ್ನು ಏರ್ಪಡಿಸಿ, ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಸಭೆಸೇರಿಸುವಂತೆ ದೂತರನ್ನು ಕಳುಹಿಸಿದನು.
3 : ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ನೆರೆದು ಬಂದು ಆ ಪ್ರತಿಮೆಯ ಮುಂದೆ ನಿಂತುಕೊಂಡರು.
4 : ಆಗ, ಸಾರುವವನು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ-ಕುಲ-ಭಾಷೆಗಳವರೇ, ನಿಮಗೆ ಹೀಗೆಂದು ರಾಜಾಜ್ಞೆಯಾಗಿದೆ:
5 : ನೀವು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು ರಾಜ ನೆಬೂಕದ್ನೆಚ್ಚರರು ನಿಲ್ಲಿಸಿರುವ ಈ ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕು.
6 : ಯಾರು ಅಡ್ಡಬಿದ್ದು ಆರಾಧಿಸುವುದಿಲ್ಲವೋ ಅಂಥವರನ್ನು ತಕ್ಷಣವೇ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು,” ಎಂದು ಸಾರಿದನು.
7 : ಅಂತೆಯೇ ಸಮಸ್ತ ಜನಾಂಗ-ಕುಲ-ಭಾಷೆಗಳವರು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಎಲ್ಲರು ಅದೇ ಸಮಯದಲ್ಲಿ ಅಡ್ಡಬಿದ್ದು ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ್ದ ಆ ಬಂಗಾರದ ಪ್ರತಿಮೆಯನ್ನು ಆರಾಧಿಸಿದರು.
8 : ಆಗ ಕೆಲವು ಮಂದಿ ಬಾಬಿಲೋನಿಯರು ಯೆಹೂದ್ಯರ ಮೇಲೆ ದೂರು ಹೊರಿಸಲು ರಾಜ ನೆಬೂಕದ್ನೆಚ್ಚರನ ಬಳಿಗೆ ಬಂದರು.
9 : “ಅರಸರೇ, ನೀವು ಚಿರಂಜೀವಿಯಾಗಿರಿ!”
10 : ಪ್ರಭುವೇ, ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಲಿ;
11 : ಯಾವನು ಅಡ್ಡಬಿದ್ದು ಆರಾಧಿಸುವುದಿಲ್ಲವೋ ಅಂಥವನು ಧಗಧಗಿಸುವ ಆವಿಗೆಯೊಳಗೆ ಹಾಕಲ್ಪಡಲಿ ಎಂದು ತಾವು ಆಜ್ಞೆ ಮಾಡಿದಿರಲ್ಲವೆ?
12 : ತಾವು ಬಾಬಿಲೋನಿನ ಸಂಸ್ಥಾನಾಧಿಕರಾತ್ವವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್ ಹಾಗೂ ಅಬೇದ್‍ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜರೇ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ. ನಿಮ್ಮ ದೇವರುಗಳಿಗೆ ಸೇವೆ ಮಾಡುವುದಿಲ್ಲ. ನೀವು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಆಪಾದಿಸಿದರು.
13 : ನೆಬೂಕದ್ನೆಚ್ಚರನು ಉಗ್ರಕೋಪಗೊಂಡು ಶದ್ರಕ್, ಮೇಶಕ್, ಅಬೇದ್‍ನೆಗೋ ಎಂಬವರನ್ನು ಹಿಡಿದುತರಲು ಆಜ್ಞಾಪಿಸಿದನು.
14 : ಅದರಂತೆಯೇ ಅವರನ್ನು ಹಿಡಿದು ತರಲಾಯಿತು. ನೆಬೂಕದ್ನಚ್ಚರನು ಅವರಿಗೆ, “ಶದ್ರಕ್, ಮೇಶಕ್, ಹಾಗು ಅಬೇದ್‍ನೆಗೋ ಎಂಬವರೇ,ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ?
15 : ಈಗಲಾದರು ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ದಾನೆ?” ಎಂದು ಹೇಳಿದನು.
16 : ಇದನ್ನು ಕೇಳಿದ ಶದ್ರಕ್, ಮೇಶಕ್ ಮತ್ತು ಆಬೇದ್‍ನೆಗೋ ಎಂಬುವರು ರಾಜನಿಗೆ: “ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ.
17 : ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು.
18 : ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಉತ್ತರಕೊಟ್ಟರು.
19 : ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು.
20 : ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್‍ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು.
21 : ಅದರಂತೆಯೇ ಉಡಿಗೆತೊಡಿಗೆ, ಪೇಟ ಮುಂತಾದ ಬಟ್ಟೆಬರೆಗಳನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಿಬಿಟ್ಟರು.
22 : ರಾಜಾಜ್ಞೆಯು ಖಡಾಖಂಡಿತವಾಗಿ ದ್ದುರಿಂದಲೂ ಆವಿಗೆಯ ಕಾವು ಅತಿ ತೀಕ್ಷ್ಣವಾಗಿದ್ದರಿಂದಲೂ ಅಗ್ನಿಕುಂಡವು ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಎಂಬುವರನ್ನು ಎತ್ತಿ ತಂದವರನ್ನೇ ಭಸ್ಮಮಾಡಿ ಬಿಟ್ಟಿತು.
23 : ಅತ್ತ ಶದ್ರಕ್, ಮೇಶಕ್, ಅಬೇದ್‍ನೆಗೋ ಈ ಮೂವರು ಕಟ್ಟಿನೊಂದಿಗೆ ಧಗಧಗನೆ ಉರಿಯುವ ಆವಿಗೆಯ ನಡುವೆ ಬಿದ್ದರು.
24 : ಇತ್ತ ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, “ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?” ಎಂದು ಕೇಳಿದನು. ಅವರು ರಾಜನಿಗೆ, “ಹೌದು ಪ್ರಭೂ, ಅದು ಸತ್ಯ,” ಎಂದು ಉತ್ತರ ಕೊಟ್ಟರು.
25 : ಅದಕ್ಕೆ ಅವನು, “ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ.
26 : ನಾಲ್ಕನೆಯವನ ರೂಪ ದೇವಪುತ್ರನ ರೂಪದಂತಿದೆ!” ಎಂದು ಹೇಳಿ ಧಗಧಗನೆ ಉರಿಯುತ್ತಿದ್ದ ಆವಿಗೆಯ ಬಾಯಿಯ ಬಳಿಗೆಹೋಗಿ, “ಪರಾತ್ಪರ ದೇವರ ದಾಸರಾದ ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಎಂಬುವರೇ ಬನ್ನಿ, ಹೊರಗೆ ಬನ್ನಿ,” ಎಂದು ಕೂಗಿಕೊಂಡನು.
27 : ಅವರನ್ನು ನೋಡಲು ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ ಇವರೆಲ್ಲರು ಕೂಡಿ ಬಂದರು. ಅವರಿಗೆ ಬೆಂಕಿಯ ತಾಪವೂ ತಟ್ಟಿಲ್ಲ, ತಲೆಗೂದಲೂ ಸುಟ್ಟಿಲ್ಲ, ಅವರ ಬಟ್ಟೆಬರೆಗೆ ಏನೂ ಆಗಿಲ್ಲ, ಬೆಂಕಿಯ ವಾಸನೆಯೂ ಇಲ್ಲ, ಎಂದು ತಿಳಿದುಕೊಂಡರು.
28 : ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್ ಹಾಗು ಅಬೇದ್‍ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟ ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು!
29 : ಸಕಲ ದೇಶ-ಕುಲ-ಭಾಷೆಗಳವರಲ್ಲಿ ಯಾರಾದರು ಶದ್ರಕ್, ಮೇಶಕ್ ಹಾಗು ಅಬೇದ್‍ನೆಗೋ ಎಂಬುವರ ದೇವರ ವಿಷಯದಲ್ಲಿ ಅಲ್ಲಸಲ್ಲದ ಮಾತನಾಡಿದರೆ ಅಂಥವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸಬೇಕೆಂದು ಆಜ್ಞೆ ವಿಧಿಸುತ್ತೇನೆ. ಹೀಗೆ ರಕ್ಷಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲವೇ ಇಲ್ಲ,” ಎಂದು ಹೇಳಿದನು.
30 : ಇದಾದ ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್‍ನೆಗೋ ಎಂಬುವರನ್ನು ಸಂಸ್ಥಾನದಲ್ಲಿ ಉನ್ನತಪದವಿಗೆ ಏರಿಸಿದನು.

Holydivine