Daniel - Chapter 6
Holy Bible

1 : ರಾಜ್ಯಾಡಳಿತ ನಿರ್ವಹಣೆಗಾಗಿ ದಾರ್ಯಾವೆಷನು ನೂರಿಪ್ಪತ್ತು ಮಂದಿ ಪ್ರಾಂತ್ಯಾಧಿಪತಿಗಳನ್ನು ಆಯಾಯ ಪ್ರಾಂತ್ಯಗಳ ಮೇಲೆ ನೇಮಿಸಲು ತೀರ್ಮಾನಿಸಿದನು.
2 : ಇವರ ಮೇಲ್ವಿಚಾರಣೆಗಾಗಿಯೂ ತನ್ನ ಹಿತಾಸಕ್ತಿಯ ದೃಷ್ಟಿಯಿಂದಲೂ ಮೂವರು ಮುಖ್ಯಾಧಿಕಾರಿಗಳನ್ನು ನೇಮಿಸಲು ನಿಶ್ಚಯಿಸಿದನು. ಈ ಮೂವರು ಮುಖ್ಯಸ್ಥರಲ್ಲಿ ದಾನಿಯೇಲನು ಒಬ್ಬನು.
3 : ಈತ ಪರಮಜ್ಞಾನಿ. ಮಿಕ್ಕ ಮುಖ್ಯಾಧಿಕಾರಿಗಳಿಗಿಂತಲೂ ಅಧಿಪತಿ ಗಳಿಗಿಂತಲೂ ಹೆಚ್ಚು ಸಮರ್ಥನು. ಇವನನ್ನು ರಾಜನು ಸಮಸ್ತ ರಾಜ್ಯದ ಮೇಲ್ವಿಚಾರಕನನ್ನಾಗಿ ನೇಮಿಸಲು ಉದ್ದೇಶಿಸಿದ್ದನು.
4 : ಹೀಗಿರಲು ಮುಖ್ಯಾಧಿಕಾರಿಗಳು ಮತ್ತು ಪ್ರಾಂತ್ಯಾಧಿಪತಿಗಳು ರಾಜ್ಯಾಡಳಿತದ ವಿಷಯವಾಗಿ ದಾನಿಯೇಲನ ಮೇಲೆ ತಪ್ಪು ಹೊರಿಸುವುದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ತಪ್ಪು ಹೊರಿಸುವ ಯಾವ ಸಂದರ್ಭವೂ ದೊರಕಲಿಲ್ಲ. ಅವನಲ್ಲಿ ಯಾವ ತಪ್ಪನ್ನೂ ಕಾಣಲಾರದೆ ಹೋದರು. ಅವನು ಅಷ್ಟು ನಂಬಿಕಸ್ತನಾಗಿದ್ದನು! ಅವನಲ್ಲಿ ಯಾವ ಅಕ್ರಮವಾಗಲಿ, ಆಲಸ್ಯವಾಗಲಿ ಕಾಣಸಿಗಲಿಲ್ಲ.
5 : ಆಗ ಆ ಅಧಿಕಾರಿಗಳು, “ಈ ದಾನಿಯೇಲನ ಮೇಲೆ ತಪ್ಪು ಹೊರಿಸಬೇಕಾದರೆ ಇವನ ದೇವರ ಹಾಗೂ ಧರ್ಮದ ಮೂಲಕವೇ ಹೊರತು ಇನ್ನಾವುದರಲ್ಲೂ ನಮಗೆ ಅವಕಾಶ ದೊರಕದು,” ಎಂದುಕೊಂಡರು.
6 : ಬಳಿಕ ಆ ಮುಖ್ಯಾಧಿಕಾರಿಗಳೂ ಪ್ರಾಂತ್ಯಾಧಿಪತಿಗಳೂ ರಾಜನ ಸಮ್ಮುಖದಲ್ಲಿ ಕೂಡಿಬಂದು ಅವನಿಗೆ, “ದಾರ್ಯಾವೆಷ ರಾಜರೇ, ಚಿರಂಜೀವಿಯಾಗಿರಿ!
7 : ರಾಜ್ಯದ ಸಕಲ ಮುಖ್ಯಾಧಿಕಾರಿ, ನಾಯಕ, ಪ್ರಾಂತ್ಯಾಧಿಪತಿ, ಮಂತ್ರಿ, ಸಂಸ್ಥಾನಾಧ್ಯಕ್ಷರು ಇವರೆಲ್ಲರ ಅಭಿಪ್ರಾಯದ ಪ್ರಕಾರ ತಾವು ಒಂದು ಶಾಸನವನ್ನು ಹೊರಡಿಸಬೇಕು. ಯಾವನೂ ಮೂವತ್ತು ದಿನಗಳ ತನಕ ರಾಜರಾದ ತಮಗೆ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ಪ್ರಾರ್ಥನೆ ಮಾಡಬಾರದು; ಮಾಡಿದರೆ ಸಿಂಹಗಳ ಗವಿಗೆ ಹಾಕಲಾಗುವುದು ಎಂದು ರಾಜಾಜ್ಞಾರೂಪವಾಗಿ ನಿಷೇಧಿಸುವುದು ಒಳ್ಳೆಯದು.
8 : ರಾಜರೇ, ಈ ಶಾಸನಕ್ಕೆ ನೀವು ಇದೀಗಲೇ ಹಸ್ತಾಕ್ಷರಗಳಿಂದ ರುಜುಹಾಕಬೇಕು. ಆಗ ಅದು ಮೇದ್ಯದ ಮತ್ತು ಪರ್ಷಿಯದ ಧರ್ಮ ವಿಧಿಗಳಂತೆ ಎಂದಿಗೂ ರದ್ದಾಗದೆ ಊರ್ಜಿತವಾಗುವುದು,” ಎಂದು ವಿನಂತಿಸಿದರು.
9 : ಅಂತೆಯೇ ರಾಜನಾದ ದಾರ್ಯಾವೆಷನು ರುಜುಹಾಕಿದನು.
10 : ಶಾಸನಕ್ಕೆ ರುಜುವಾದ ವಿಷಯ ದಾನಿಯೇಲನಿಗೆ ತಿಳಿಯಿತು. ಆತ ತನ್ನ ಮನೆಗೆ ಹೊರಟು ಹೋದನು. ಅಲ್ಲಿ ತನ್ನ ಮಹಡಿಯ ಕೊಠಡಿಯಲ್ಲಿನ ಕಿಟಕಿಗಳು ಜೆರುಸಲೇಮಿನ ಕಡೆಗೆ ತೆರೆದಿದ್ದವು. ವಾಡಿಕೆಯ ಪ್ರಕಾರ ದಿನಕ್ಕೆ ಮೂರಾವರ್ತಿ ಅಲ್ಲಿ ತನ್ನ ದೇವರಿಗೆ ಮೊಣಕಾಲೂರಿ ಪ್ರಾರ್ಥಿಸಿ ಸ್ತೋತ್ರ ಸಲ್ಲಿಸುತ್ತಿದ್ದನು.
11 : ದಾನಿಯೇಲನ ಆ ವಿರೋಧಿಗಳು ಗುಂಪಾಗಿ ಕೂಡಿಬಂದರು. ಆತ ತನ್ನ ದೇವರಿಗೆ ಅಭಿಮುಖವಾಗಿ ಪ್ರಾರ್ಥಿಸಿ ವಿಜ್ಞಾಪಿಸುವುದನ್ನು ಕಂಡರು.
12 : ಕೂಡಲೆ ಆಸ್ಥಾನಕ್ಕೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, “ರಾಜರೇ, ಯಾರೂ ಮೂವತ್ತು ದಿನಗಳ ತನಕ ತಮಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಮಾಡಕೂಡದು. ಮಾಡಿದರೆ ಅಂಥವನನ್ನು ಸಿಂಹಗಳ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀವು ರುಜುಹಾಕಿದಿರಲ್ಲವೆ?” ಎಂದು ಕೇಳಿದರು. ಅದಕ್ಕೆ ರಾಜನು, “ಹೌದು, ಮೇದ್ಯರ ಹಾಗು ಪರ್ಷಿಯರ ಧರ್ಮವಿಧಿಗಳಂತೆ ಅದು ಸ್ಥಿರವಾದ ನಿಬಂಧನೆ,” ಎಂದು ಉತ್ತರಕೊಟ್ಟನು.
13 : 3ಆಗ ಅವರು ರಾಜಸನ್ನಿಧಿಯಲ್ಲಿ, “ರಾಜರೇ, ಜುದೇಯದಿಂದ ಸೆರೆಯಾಳುಗಳಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿಮ್ಮನ್ನಾಗಲಿ, ನಿಮ್ಮ ಹಸ್ತಾಕ್ಷರದ ರುಜುವಿರುವ ಶಾಸನವನ್ನಾಗಲಿ ಮಾನ್ಯಮಾಡುತ್ತಿಲ್ಲ,” ಬದಲಿಗೆ ದಿನಕ್ಕೆ ಮೂರಾವರ್ತಿ ಪ್ರಾರ್ಥನೆ ಮಾಡುತ್ತಿದ್ದಾನೆ,” ಎಂದು ದೂರಿತ್ತರು.
14 : ಆದರೆ ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡನು. ದಾನಿಯೇಲನನ್ನು ಈ ಇಕ್ಕಟ್ಟಿನಿಂದ ತಪ್ಪಿಸಲು ಮನಸ್ಸು ಮಾಡಿಕೊಂಡನು. ಆದರೆ ಹೇಗೆ ರಕ್ಷಿಸುವುದೆಂದು ಸೂರ್ಯಾಸ್ತಮದವರೆಗೂ ಆಲೋಚಿಸುತ್ತಾ ಇದ್ದನು.
15 : ಇದನ್ನು ಅರಿತುಕೊಂಡ ಆ ಅಧಿಕಾರಿಗಳು ರಾಜಸನ್ನಿಧಿಗೆ ಮತ್ತೆ ಕೂಡಿಬಂದು, “ಪ್ರಭೂ, ರಾಜರು ವಿಧಿಸಿದ ಯಾವ ನಿಬಂಧನೆಯಾಗಲಿ, ಶಾಸನವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರ ಮೇದ್ಯರಲ್ಲೂ ಪರ್ಷಿಯರಲ್ಲೂ ಉಂಟೆಂಬುದು ತಮಗೆ ತಿಳಿದಿರಬೇಕು,” ಎಂದರು.
16 : ಈ ಕಾರಣ ರಾಜನು ಅಪ್ಪಣೆ ಕೊಡಲೇಬೇಕಾಯಿತು. ಕೂಡಲೆ ಅವರು ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ಹಾಕಿಯೇಬಿಟ್ಟರು. ಆಗ ರಾಜನು ದಾನಿಯೇಲನಿಗೆ, “ನೀನು ದಿನನಿತ್ಯವೂ ಆರಾಧಿಸುವ ದೇವರು ನಿನ್ನನ್ನು ಉದ್ಧರಿಸಲಿ!” ಎಂದು ಹರಸಿದನು.
17 : ಆ ಅಧಿಕಾರಿಗಳಾದರೋ ಒಂದು ಬಂಡೆಯನ್ನು ತಂದು ಆ ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಗತಿಯನ್ನು ಯಾರೂ ಬದಲಾಯಿಸಲಾಗದಂತೆ ರಾಜನ ಮತ್ತು ಅವನ ಮುಖಂಡರ ಮುದ್ರೆಯನ್ನು ಅದಕ್ಕೆ ಒತ್ತಿ ಮೊಹರು ಮಾಡಲಾಯಿತು.
18 : ಬಳಿಕ ರಾಜನು ಅರಮನೆಗೆ ಹಿಂದಿರುಗಿದನು. ಆ ರಾತ್ರಿಯೆಲ್ಲಾ ಉಪವಾಸವಿದ್ದನು. ವಾದ್ಯವಿನೋದಾವಳಿ ಯಾವುದನ್ನೂ ಹತ್ತಿರಬರಲು ಬಿಡಲಿಲ್ಲ. ನಿದ್ರೆ ಅವನ ಕಣ್ಣುಗಳಿಂದ ಮಾಯವಾಯಿತು.
19 : ಮಾರನೆಯ ದಿನ ಬೆಳಿಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ವೇಗವಾಗಿ ಹೋದನು.
20 : ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು, ದುಃಖ ಧ್ವನಿಯಿಂದ ದಾನಿಯೇಲನನ್ನು ಕೂಗಿ, “ದಾನಿಯೇಲನೇ, ಜೀವಸ್ವರೂಪನಾದ ದೇವರ ದಾಸನೇ, ನೀನು ದಿನನಿತ್ಯವೂ ಆರಾಧಿಸುವ ನಿನ್ನ ದೇವರಿಗೆ ನಿನ್ನನ್ನು ಸಿಂಹಗಳಿಂದ ಉದ್ಧರಿಸಲು ಸಾಧ್ಯವಾಯಿತೋ?” ಎಂದು ಕೇಳಿದನು.
21 : ಆಗ ದಾನಿಯೇಲನು ರಾಜನಿಗೆ, “ಅರಸರೇ, ಜಿರಂಜೀವಿಯಾಗಿರಿ!
22 : ನನ್ನ ದೇವರು ತಮ್ಮ ದೂತನನ್ನು ಕಳಿಸಿ, ಸಿಂಹಗಳ ಬಾಯನ್ನು ಬಂಧಿಸಿದರು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆ ದೇವರ ದೃಷ್ಟಿಯಲ್ಲಿ ನಾನು ನಿರ್ಮಲನು. ರಾಜರಾದ ತಮಗೂ ನಾನು ಯಾವ ದ್ರೋಹವನ್ನೂ ಮಾಡಲಿಲ್ಲ,” ಎಂದು ಹೇಳಿದನು.
23 : ರಾಜನು ಇದನ್ನು ಕೇಳಿ ಬಹಳ ಸಂತೋಷಪಟ್ಟನು. ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆತ್ತಬೇಕೆಂದು ಅಪ್ಪಣೆಮಾಡಿದನು. ಅಂತೆಯೇ ಅವನನ್ನು ಮೇಲಕ್ಕೆತ್ತಲಾಯಿತು. ಆತನು ತನ್ನ ದೇವರಲ್ಲಿ ದೃಢವಾದ ವಿಶ್ವಾಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ.
24 : ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು ಮಡದಿಮಕ್ಕಳ ಸಮೇತ ತಂದು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಅವರು ಗವಿಯ ತಳಮುಟ್ಟುವುದರೊಳಗೆ ಸಿಂಹಗಳ ಅವರ ಮೇಲೆ ಹಾರಿ ಅವರ ಎಲುಬುಗಳನ್ನೆಲ್ಲ ಚೂರು ಚೂರು ಮಾಡಿದವು.
25 : ಇದಾದಮೇಲೆ ರಾಜ ದಾರ್ಯಾವೆಷನು ಜಗದಲ್ಲಿ ವಾಸಿಸುವ ಸಕಲ ದೇಶ-ಕುಲ-ಭಾಷೆಗಳವರಿಗೆ ಈ ಪ್ರಸಿದ್ಧ ಪತ್ರವನ್ನು ಬರೆಯಿಸಿದನು: “ನಿಮಗೆ ಹೆಚ್ಚೆಚ್ಚು ಸುಖಶಾಂತಿ ಲಭಿಸಲಿ!”
26 : ನನ್ನ ರಾಜ್ಯದ ಪ್ರಜೆಗಳೆಲ್ಲರಿಗೆ ನಾನು ಆಜ್ಞಾಪಿಸುವುದೇನೆಂದರೆ: ನೀವೆಲ್ಲರು ದಾನಿಯೇಲನ ದೇವರ ಮುಂದೆ ಭಯಭಕ್ತಿಯಿಂದ ನಡೆದುಕೊಳ್ಳತಕ್ಕದ್ದು. ಏಕೆಂದರೆ ಆತನೇ ಜೀವಸ್ವರೂಪನಾದ ಸನಾತನ ದೇವರು ! ಆತನ ರಾಜ್ಯ ಎಂದೆಂದಿಗೂ ಅಳಿಯದು ಆತನ ಆಳ್ವಿಕೆ ಶಾಶ್ವತವಾದುದು !
27 : ಆತ ಉದ್ಧರಿಸುವಂಥವನು, ರಕ್ಷಿಸುವಂಥವನು ಭೂಮ್ಯಾಕಾಶಗಳಲ್ಲಿ ಅದ್ಭುತ ಮಹತ್ವಗಳನ್ನು ನಡೆಸುವಂಥವನು ! ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದವನು !
28 : ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲೂ ಪರ್ಷಿಯಾನಾದ ಸೈರೆಷನ ಆಳ್ವಿಕೆಯಲ್ಲೂ ಪ್ರವರ್ಧಿಸುತ್ತಾ ಬಾಳಿದನು.

Holydivine