Daniel - Chapter 4
Holy Bible

1 : ಜಗದಲ್ಲಿ ವಾಸಿಸುವ ಎಲ್ಲಾ ಜನಾಂಗದವರಿಗೂ ಕುಲದವರಿಗೂ ಭಾಷೆಯವರಿಗೂ ರಾಜ ನೆಬೂಕದ್ನೆಚ್ಚರನು ಹೊರಟಿಸಿದ ಪ್ರಕಟಣೆ- “ನಿಮಗೆ ಹೆಚ್ಚೆಚ್ಚು ಸುಖಶಾಂತಿ ಲಭಿಸಲಿ!
2 : ಪರಾತ್ಪರ ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸುವುದು ನನಗೆ ವಿಹಿತವೆಂದು ತೋರಿಬಂದಿದೆ:
3 : ದೇವರ ಸೂಚಕ ಕಾರ್ಯಗಳು ಎಷ್ಟೋ ಅತಿಶಯ ! ಅವರ ಅದ್ಭುತಗಳು ಎಷ್ಟೋ ಅಪಾರ ! ಅವರ ರಾಜ್ಯ ಶಾಶ್ವತ ಸಾಮ್ರಾಜ್ಯ; ಅವರ ಆಳ್ವಿಕೆ ತಲತಲಾಂತರಕ್ಕೂ ಸ್ಥಿರ.
4 : “ನೆಬೂಕದ್ನೆಚ್ಚರನಾದ ನಾನು ನನ್ನ ಅರಮನೆಯಲ್ಲಿ ಸುಖವಾಗಿದ್ದೆ. ನನ್ನ ರಾಜಭವನದಲ್ಲಿ ನೆಮ್ಮದಿಯಿಂದ ಇದ್ದೆ.
5 : ಹೀಗಿರುವಲ್ಲಿ ಭಯಂಕರವಾದ ಕನಸೊಂದನ್ನು ಕಂಡೆ. ನಿದ್ರೆಯಲ್ಲಿ ನನಗೆ ತೋಚಿದ ಆಲೋಚನೆಗಳು ಹಾಗು ಮನಸ್ಸಿಗೆ ಬಿದ್ದ ಸ್ವಪ್ನಗಳು ನನ್ನನ್ನು ಕಳವಳಕ್ಕೆ ಈಡುಮಾಡಿದವು.
6 : ಆದ್ದರಿಂದ ಕನಸಿನ ಅರ್ಥವನ್ನು ನನಗೆ ತಿಳಿಸಬೇಕೆಂದು ಬಾಬಿಲೋನಿನ ವಿದ್ವಾಂಸರೆಲ್ಲರನ್ನು ಕರೆದು ತರಬೇಕೆಂದು ಆಜ್ಞಾಪಿಸಿದೆ.
7 : ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರೆಲ್ಲರು ನನ್ನ ಸಮ್ಮುಖಕ್ಕೆ ಬಂದರು. ನಾನು ಕನಸನ್ನು ತಿಳಿಸಿದೆ. ಆದರೆ ಅದರ ಅರ್ಥವನ್ನು ಅವರಿಂದ ತಿಳಿಸಲಾಗಲಿಲ್ಲ.
8 : ನನ್ನ ದೇವರ ಹೆಸರು ಸೇರಿರುವ ‘ಬೇಲ್ತೆಶಚ್ಚರ’ ಎಂಬ ಅಡ್ಡ ಹೆಸರನ್ನು ಹೊಂದಿದ ದಾನಿಯೇಲನು ಕೊನೆಗೆ ನನ್ನ ಬಳಿಗೆ ಬಂದ. ಪರಿಶುದ್ಧ ದೇವರ ಆತ್ಮ ಅವನಲ್ಲಿತ್ತು. ಅವನಿಗೆ ನನ್ನ ಕನಸನ್ನು ಹೀಗೆ ತಿಳಿಸಿದೆ.
9 : ‘ಬೇಲ್ತೆಶಚ್ಚರನೇ, ಜೋಯಿಸರಲ್ಲಿ ಪ್ರಾಮುಖ್ಯನೇ, ಪರಿಶುದ್ಧ ದೇವರ ಆತ್ಮ ನಿನ್ನಲ್ಲಿ ನೆಲೆಯಾಗಿದೆಯೆಂದು ತಿಳಿದಿದ್ದೇನೆ. ಯಾವ ರಹಸ್ಯವೂ ನಿನಗೆ ಅಶೋಧ್ಯವಲ್ಲವೆಂದು ನನಗೆ ಗೊತ್ತು. ಆದುದರಿಂದ ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸು.’
10 : ‘ನಾನು ಹಾಸಿಗೆ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸುಗಳು ಇವು: ಇಗೋ ಭೂಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವನ್ನು ಕಂಡೆ.
11 : ಆ ಮರ ಬೆಳೆದು ಬಲಗೊಂಡಿತ್ತು. ಅದರ ತುದಿ ಆಕಾಶವನ್ನು ಮುಟ್ಟುತ್ತಿತ್ತು. ಅದು ಭೂಲೋಕದ ಕಟ್ಟಕಡೆಗೂ ಕಾಣಿಸುತ್ತಿತ್ತು.
12 : ಅದರ ಎಲೆಗಳು ಚೆಲುವಾಗಿದ್ದವು. ಅದು ಹಣ್ಣುಗಳಿಂದ ತುಂಬಿತ್ತು. ಅದರಿಂದ ಎಲ್ಲಕ್ಕೂ ಆಹಾರ, ವನ್ಯಮೃಗಗಳಿಗೆ ಅದರ ನೆರಳಿನಲ್ಲಿ ಆಶ್ರಯ, ಆಕಾಶದ ಪಕ್ಷಿಗಳಿಗೆ ಅದರ ಕೊಂಬೆಗಳಲ್ಲಿ ನೆಲೆ, ಎಲ್ಲಾ ಪ್ರಾಣಿಗಳಿಗೂ ಅದರಿಂದ ಪೋಷಣೆ ದೊರಕುತ್ತಿತ್ತು.
13 : ‘ನಾನು ಹಾಸಿಗೆ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸಿನಲ್ಲಿ, ಇಗೋ, ಕಾವಲುಗಾರನಾದ ದೇವದೂತನೊಬ್ಬನು ಆಕಾಶದಿಂದ ಇಳಿದು, ಗಟ್ಟಿಯಾಗಿ ಕೂಗಿ:
14 : ಆ ಮರವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿ, ಎಲೆಗಳನ್ನು ಉದುರಿಸಿ, ಹಣ್ಣುಗಳನ್ನು ಕಿತ್ತುಬಿಸಾಡಿ. ಮೃಗಗಳು ಅದರ ನೆರಳನ್ನು ಬಿಟ್ಟು ತೆರಳಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ.
15 : ಆದರೆ ಅದರ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಹಿತ್ತಾಳೆ ಕಬ್ಬಿಣಗಳ ಪಟ್ಟಿಯನ್ನು ಅದಕ್ಕೆ ಬಿಗಿಯಿರಿ. ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ.’ ‘ಆಕಾಶದ ಇಬ್ಬನಿ ಅದನ್ನು ತೋಯಿಸಲಿ, ಹುಲ್ಲುಗಿಡಗಳ ಹಾಗು ಕಾಡು ಮೃಗಗಳ ನಡುವೆ ಅದಿರಲಿ.
16 : ಅದಕ್ಕೆ ಏಳು ವರ್ಷಕಾಲ, ಮನುಷ್ಯ ಹೃದಯ ಹೋಗಿ ಮೃಗದ ಹೃದಯ ಬರಲಿ.
17 : ಇದು ಕಾವಲುಗಾರ ದೂತನ ತೀರ್ಮಾನ; ಹಾಗೂ ದೇವರ ತೀರ್ಪು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೂ ಅಧಿಕಾರವಿದೆ. ಅದರ ಆಳ್ವಿಕೆಯನ್ನು ಅವರು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಕನಿಷ್ಠರನ್ನೂ ಆ ಪದವಿಗೆ ನೇಮಿಸುತ್ತಾರೆ. ಇದು ಎಲ್ಲಾ ಜನರಿಗೆ ತಿಳಿದಿರಬೇಕೆಂಬುದೇ ಈ ತೀರ್ಮಾನ,’ ಎಂದು ಸಾರಿದನು.
18 : ‘ಇದೇ ನಾನು ಕಂಡ ಕನಸು. ಬೇಲ್ತೆಶಚ್ಚರನೇ, ನನ್ನ ರಾಜ್ಯದ ಸಕಲ ವಿದ್ವಾಂಸರಲ್ಲಿ ಯಾರಿಂದಲೂ ಇದರ ಅರ್ಥವನ್ನು ಹೇಳಲಾಗಲಿಲ್ಲ. ಅದನ್ನು ನೀನು ತಿಳಿಸು. ಪರಿಶುದ್ಧ ದೇವರ ಆತ್ಮ ನಿನ್ನಲ್ಲಿ ನೆಲೆಸಿರುವುದರಿಂದ ಇದು ನಿನ್ನಿಂದ ಸಾಧ್ಯ’,” ಎಂದನು ರಾಜ ನೆಬೂಕದ್ನೆಚ್ಚರನು.
19 : ಇದನ್ನು ಕೇಳಿದ ಬೇಲ್ತೆಶಚ್ಚರನೆಂದು ಹೆಸರುಗೊಂಡಿದ್ದ ದಾನಿಯೇಲನು ತುಸು ಹೊತ್ತು ಸ್ತಬ್ದನಾದ. ಅವನ ಬುದ್ಧಿಗೆ ಹೊಳೆದ ವಿಷಯ ಅವನಲ್ಲಿ ದಿಗಿಲನ್ನು ಉಂಟುಮಾಡಿತು. ರಾಜನು ಇದನ್ನು ಅರಿತು, “ಬೇಲ್ತೆಶಚ್ಚರನೇ, ನನ್ನ ಕನಸಾಗಲಿ, ಅದರ ಅರ್ಥವಾಗಲಿ ನಿನ್ನನ್ನು ಹೆದರಿಸದಿರಲಿ,” ಎಂದು ಧೈರ್ಯ ಹೇಳಿದ. ಆಗ ಬೇಲ್ತೆಶಚ್ಚರನು: “ನನ್ನೊಡೆಯಾ, ಈ ಕನಸು ನಿನ್ನ ವೈರಿಗಳಿಗೆ ಬರಲಿ! ಅದರ ಅರ್ಥ ನಿನ್ನ ವಿರೋಧಿಗಳಿಗೆ ತಗಲಲಿ!
20 : ನೀವು ಕಂಡ ಮರವು ಬೆಳೆದು, ಬಲಗೊಂಡು ಆಕಾಶದ ತುದಿಯನ್ನು ಮುಟ್ಟುತ್ತಿತ್ತು.
21 : ಲೋಕದ ಜನರೆಲ್ಲರಿಗೆ ಕಾಣಿಸುತ್ತಿತ್ತು. ಅಂದವಾದ ಎಲೆಗಳನ್ನೂ ಹುಲುಸಾದ ಹಣ್ಣುಗಳನ್ನೂ ಬಿಡುತ್ತಿತ್ತು. ಎಲ್ಲಕ್ಕೂ ಆಹಾರ ಒದಗಿಸುತ್ತಿತ್ತು. ತನ್ನ ನೆರಳನ್ನು ವನ್ಯಮೃಗಗಳಿಗೆ ಆಶ್ರಯವಾಗಿಯೂ ತನ್ನ ಕೊಂಬೆಗಳನ್ನು ಆಕಾಶ ಪಕ್ಷಿಗಳಿಗೆ ನೆಲೆಯಾಗಿಯೂ ಮಾಡಿತ್ತು. ಕನಸಿನಲ್ಲಿ ನಿಮಗೆ ತೋರಿದ ಆ ಮರವು ನೀವೇ.
22 : “ರಾಜರೇ, ನೀವು ಬೆಳೆದು ಬಲಗೊಂಡಿದ್ದೀರಿ. ನಿಮ್ಮ ಕೀರ್ತಿ ವೃದ್ಧಿಯಾಗಿ ಗಗನಕ್ಕೇರಿದೆ. ನಿಮ್ಮ ಆಳ್ವಿಕೆ ಲೋಕದ ಕಟ್ಟಕಡೆಗೂ ವ್ಯಾಪಿಸಿದೆ.
23 : ಕಾವಲುಗಾರನಾದ ದೂತನು ಆಕಾಶದಿಂದ ಇಳಿದುಬಂದು: ‘ಈ ಮರವನ್ನು ಕಡಿದು ಹಾಳುಮಾಡಿ. ಅದರ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಹಿತ್ತಾಳೆ ಕಬ್ಬಿಣಗಳ ಪಟ್ಟಿಯನ್ನು ಅದಕ್ಕೆ ಬಿಗಿಯಿರಿ. ಅಡವಿಯ ಹುಲ್ಲು ಅದರ ಸುತ್ತಲು ಬೆಳೆದಿರಲಿ, ಆಕಾಶದ ಇಬ್ಬನಿ ಅದನ್ನು ತೋಯಿಸಲಿ. ಏಳು ವರ್ಷಕಾಲ ಕಳೆಯುವ ತನಕ ಕಾಡುಮೃಗಗಳ ಸಹವಾಸದ ಗತಿ ಬರಲಿ’ ಎಂದು ಸಾರುವುದನ್ನು ರಾಜರಾದ ನೀವೇ ನೋಡಿದ್ದೀರಿ.”
24 : “ರಾಜರೇ, ಕನಸಿನ ತಾತ್ಪರ್ಯ ಇದು: ನನ್ನೊಡೆಯರಾದ ಅರಸರಿಗೆ ಉಂಟಾಗಲಿರುವ ಪರಾತ್ಪರ ದೇವರ ತೀರ್ಪು ಹೀಗಿದೆ –
25 : ತಾವು ಮಾನವ ಸಮಾಜದಿಂದ ಬಹಿಷ್ಕøತರಾಗುವಿರಿ. ಕಾಡುಮೃಗಗಳ ನಡುವೆ ವಾಸಮಾಡುವಿರಿ. ದನಕರುಗಳಂತೆ ಹುಲ್ಲು ಮೇಯುವ ಗತಿ ನಿಮ್ಮದಾಗುವುದು. ಆಕಾಶದ ಇಬ್ಬನಿ ನಿಮ್ಮನ್ನು ತೋಯಿಸುವುದು. ಪರಾತ್ಪರ ದೇವರಿಗೆ ಮಾನವರ ರಾಜ್ಯದ ಮೇಲೂ ಅಧಿಕಾರವಿದೆ. ಅದನ್ನು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಇದು ತಮಗೆ ತಿಳಿದುಬರುವುದರೊಳಗೆ ಏಳು ವರ್ಷ ಕಳೆದಿರುತ್ತದೆ.
26 : ಆ ಮರದ ಬುಡದ ಮೋಟನ್ನು ಉಳಿಸಿರೆಂದು ಅಪ್ಪಣೆಯಾಗಿದೆ. ಇದರ ತಾತ್ಪರ್ಯವೇನೆಂದರೆ: ಪರಲೋಕದ ದೇವರಿಗೆ ಸರ್ವಾಧಿಕಾರ ಉಂಟೆಂಬುದನ್ನು ತಾವು ಅರಿತುಕೊಂಡ ನಂತರ ನಿಮ್ಮ ರಾಜ್ಯ ನಿಮಗೆ ಸ್ಥಿರವಾಗಿ ದೊರಕುವುದು.
27 : ಆದಕಾರಣ ಅರಸರೇ, ಈ ನನ್ನ ಬುದ್ಧಿಮಾತು ತಮಗೆ ಒಪ್ಪಿಗೆಯಾಗಲಿ: ಸದಾಚಾರದ ಮೂಲಕ ನಿಮ್ಮ ಪಾಪಗಳನ್ನು ಅಳಿಸಿಬಿಡಿ. ದೀನದಲಿತರಿಗೆ ದಯೆತೋರಿ. ನಿಮ್ಮ ಅಪರಾಧಗಳನ್ನು ನೀಗಿಸಕೊಳ್ಳಿ. ಇದರಿಂದ ಬಹುಶಃ ನಿಮ್ಮ ನೆಮ್ಮದಿಕಾಲ ಹೆಚ್ಚಾದೀತು,” ಎಂದು ಅರಿಕೆ ಮಾಡಿದನು.
28 : ಇದೆಲ್ಲವು ನೆಬೂಕದ್ನೆಚ್ಚರನೆಂಬ ರಾಜನಿಗೆ ಸಂಭವಿಸಿದವು.
29 : ಹನ್ನೆರಡು ತಿಂಗಳು ಕಳೆದ ನಂತರ ಅವನು ಒಂದು ದಿನ ಬಾಬಿಲೋನಿನ ಅರಮನೆಯ ಮೇಲ್ಗಡೆ ತಿರುಗಾಡುತ್ತಿದ್ದನು.
30 : ಆಗ ಅವನು “ಹಾ, ಬಾಬಿಲೋನ್ ಎಂಥಾ ಮಹಾನಗರ! ಇಗೋ, ನನ್ನ ಶಕ್ತಿ ಸಾಮಥ್ರ್ಯದಿಂದ ನಾನು ಕಟ್ಟಿಸಿರುವ ರಾಜಭವನ! ನನ್ನ ಕೀರ್ತಿ ಪರಾಕ್ರಮವನ್ನು ಇದು ಪ್ರಕಟಿಸುತ್ತಿದೆ!” ಎಂದು ಕೊಚ್ಚಿಕೊಂಡನು.
31 : ಈ ಮಾತು ಅವನ ಬಾಯಿಂದ ಹೊರಡುತ್ತಿರುವಾಗಲೆ, “ಎಲೈ ರಾಜ ನೆಬೂಕದ್ನೆಚ್ಚರನೇ, ನಿನ್ನ ವಿಷಯವಾದ ಈ ದೈವೋಕ್ತಿಯನ್ನು ಕೇಳು –
32 : ‘ಈ ರಾಜ್ಯ ನಿನ್ನನ್ನು ಬಿಟ್ಟು ತೊಲಗಿದೆ. ನೀನು ಮಾನವ ಸಮಾಜದಿಂದ ಬಹಿಷ್ಕøತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ದನಗಳಂತೆ ಹುಲ್ಲು ಮೇಯುವ ಗತಿ ನಿನ್ನದಾಗುವುದು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೆ ಅಧಿಕಾರವಿದೆ. ಆ ರಾಜ್ಯವನ್ನು ತಮಗೆ ಬೇಕಾದವರಿಗೆ ಒಪ್ಪಿಸುತ್ತಾರೆ. ಇದನ್ನು ನೀನು ಗ್ರಹಿಸುವುದರೊಳಗೆ ಏಳು ವರ್ಷ ಕಳೆಯುವುದು,’ ಎಂದು ದೈವವಾಣಿಯಾಯಿತು.”
33 : ಆ ನುಡಿ ಕೂಡಲೆ ನೆರವೇರಿತು. ನೆಬೂಕದ್ನೆಚ್ಚರನು ಸಮಾಜದಿಂದ ಬಹಿಷ್ಕøತನಾದ. ದನಗಳಂತೆ ಹುಲ್ಲು ಮೇಯುತ್ತಾ ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದ. ಅವನ ಕೂದಲು ಹದ್ದುಗಳ ರೆಕ್ಕೆಗಳಂತೆಯೂ, ಅವನ ಉಗುರು ಹಕ್ಕಿಗಳ ಉಗುರಿನಂತೆಯೂ ಬೆಳೆದವು.
34 : ಗುರುತಿಸಲಾಗಿದ್ದ ಕಾಲವು ಕಳೆಯಿತು. ನೆಬೂಕದ್ನೆಚ್ಚರನು, “ನಾನು ಪರಲೋಕದ ಕಡೆಗೆ ಕಣ್ಣೆತ್ತಿ ನೋಡಿದೆ. ನನ್ನ ಬುದ್ಧಿ ಮತ್ತೆ ನನಗೆ ಸ್ವಾಧೀನವಾಯಿತು. ನನ್ನ ಬುದ್ಧಿ ಮತ್ತೆ ನನಗೆ ಸ್ವಾಧೀನವಾಯಿತು. ಆಗ ನಾನು ಪರಾತ್ಪರ ದೇವರನ್ನು ಕೊಂಡಾಡಿದೆ. ಜೀವಸ್ವರೂಪರಾದ ಅವರಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆ: ಆತನ ಆಳ್ವಿಕೆ ಶಾಶ್ವತ ಆತನ ರಾಜ್ಯ ತಲತಲಾಂತರಕ್ಕೂ ಸ್ಥಿರ.
35 : ಆತನ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರು ಶೂನ್ಯರು ಇಹದ ಜನರೂ ಪರದ ದೂತರೂ ಆತನಿಗೆ ಅಧೀನರು. ಆತನ ಶಕ್ತಿಯುತ ಹಸ್ತವನ್ನು ಯಾರಿಂದಲೂ ತಡೆಯಲಾಗದು. ‘ನೀನು ಮಾಡುತ್ತಿರುವುದೇನು?’ ಎಂದು ಯಾರೂ ಆತನನ್ನು ಪ್ರಶ್ನಿಸಲಾರರು.
36 : ಅದೇ ಸಮಯದಲ್ಲಿ ನನ್ನ ಬುದ್ಧಿ ನನಗೆ ಮತ್ತೆ ಸ್ವಾಧೀನವಾಯಿತು. ಘನತೆ ಗೌರವಗಳು ನನಗೆ ಮತ್ತೆ ಲಭಿಸಿದವು. ನನ್ನ ರಾಜ್ಯದ ಕೀರ್ತಿ ಬೆಳಗತೊಡಗಿತು. ನನ್ನ ಮಂತ್ರಿಗಳೂ ಪದಾಧಿಕಾರಿಗಳೂ ನನ್ನನ್ನು ಸ್ವಾಗತಿಸಲು ಬಂದರು. ರಾಜ್ಯದಲ್ಲಿ ನಾನು ನೆಲೆಗೊಂಡೆ. ಹಿಂದೆ ಇದ್ದುದಕ್ಕಿಂತಲೂ ಹೆಚ್ಚಿನ ಪ್ರತಿಭೆ ನನ್ನದಾಯಿತು.
37 : ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.

Holydivine