Daniel - Chapter 5
Holy Bible

1 : ಬೇಲ್ಯಚ್ಚರ ಎಂಬ ಅರಸನು ತನ್ನ ರಾಜ್ಯದ ಪ್ರಮುಖರಲ್ಲಿ ಸಾವಿರ ಮಂದಿಯನ್ನು ಸೇರಿಸಿ ಒಂದು ಔತಣವನ್ನು ಏರ್ಪಡಿಸಿದ. ಆ ಸಾವಿರ ಜನರ ಮುಂದೆ ಅವನೂ ದ್ರಾಕ್ಷಾರಸವನ್ನು ಕುಡಿದ.
2 : ಹಾಗೆ ಕುಡಿದು ಕೊಂಡಿರುವಾಗ ತಾನೂ ತನ್ನ ಪ್ರಮುಖರೂ ಪತ್ನಿಯರೂ ಉಪಪತ್ನಿಯರೂ ಕುಡಿಯುವುದಕ್ಕಾಗಿ ತನ್ನ ತಂದೆ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದ ಗರ್ಭಗುಡಿಯಿಂದ ಸೂರೆಯಾಗಿ ತಂದ
3 : ಬಂಗಾರದ ಪೂಜಾ ಪಾತ್ರೆಗಳನ್ನು ತರಿಸಿದ. ರಾಜನೂ ಅವನ ಪ್ರಮುಖರೂ ಪತ್ನಿ – ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
4 : ಕುಡಿದುಕೊಂಡೇ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ತಮ್ಮ ದೇವರುಗಳನ್ನು ಆರಾಧಿಸಿದರು.
5 : ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಕೈಬೆರಳುಗಳು ಕಾಣಿಸಿಕೊಂಡು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು. ಬರೆಯುತ್ತಿದ್ದ ಆ ಕೈಯನ್ನು ರಾಜನು ನೋಡಿದನು.
6 : ಅದನ್ನು ಕಂಡದ್ದೆ ಅವನ ಮುಖ ಕಳೆಗುಂದಿತು, ಮನಸ್ಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲಗೊಂಡಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
7 : ಕೂಡಲೆ ರಾಜನು ಗಟ್ಟಿಯಾಗಿ ಕೂಗಿ ಮಂತ್ರವಾದಿ, ಪಂಡಿತ ಹಾಗು ಶಾಕುನಿಕರನ್ನು ಕರೆಯಿಸಿದನು. ಬಾಬಿಲೋನಿನ ಆ ವಿದ್ವಾಂಸರಿಗೆ, “ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ಕೆನ್ನೀಲಿ ರಾಜವಸ್ತ್ರವನ್ನು ತೊಡಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು.
8 : ಆಸ್ಥಾನದ ವಿದ್ವಾಂಸರೆಲ್ಲರು ಬಂದು ಸೇರಿದರು. ಆದರೆ ಆ ಬರಹವನ್ನು ಓದುವುದಕ್ಕಾಗಲಿ, ಅದರ ಅರ್ಥವನ್ನು ರಾಜನಿಗೆ ತಿಳಿಸುವುದಕ್ಕಾಗಲಿ ಅವರಿಂದ ಆಗಲಿಲ್ಲ.
9 : ಆಗ ರಾಜ ಬೇಲ್ಯಚ್ಚರನು ಬಹಳ ಕಳವಳಗೊಂಡನು. ಅವನ ಮುಖ ಕಳೆಗುಂದಿತು. ಅವನ ಸಾಮಂತರು ದಿಕ್ಕು ತೋಚದವರಾದರು.
10 : ರಾಜನೂ ಅವನ ಸಾಮಂತರೂ ಆಡಿದ ಮಾತು ರಾನಿಗೆ ಮುಟ್ಟಿತು. ಆಕೆ ಔತಣ ಶಾಲೆಗೆ ಬಂದು, “ರಾಜರೇ, ಚಿರಂಜೀವಿಯಾಗಿರಿ! ನಿಮ್ಮ ಮನಸ್ಸು ಕಳವಳಗೊಳ್ಳದಿರಲಿ, ನಿಮ್ಮ ಮುಖ ಕಳೆಗುಂದದಿರಲಿ! ಪರಿಶುದ್ಧ ದೇವರ ಆತ್ಮ ನೆಲೆಸಿರುವ ಒಬ್ಬ ವ್ಯಕ್ತಿ ನಿಮ್ಮ ರಾಜ್ಯದಲ್ಲಿದ್ದಾನೆ.
11 : ನಿಮ್ಮ ತಂದೆಯ ಕಾಲದಲ್ಲಿ ಬುದ್ಧಿವಂತಿಕೆ, ತಿಳುವಳಿಕೆ, ದೇವರುಗಳಿಗೆ ಸಮಾನವಾದ ಜ್ಞಾನ ಅವನಲ್ಲಿ ಕಂಡುಬಂದುವು. ನಿಮ್ಮ ತಂದೆ ರಾಜ ನೆಬೂಕದ್ನೆಚ್ಚರನು, ಅವನನ್ನು ಜೋಯಿಸರಿಗೂ ಮಂತ್ರವಾದಿಗಳಿಗೂ ಪಂಡಿತರಿಗೂ ಶಾಕುನಿಕರಿಗೂ ಅಧ್ಯಕ್ಷನನ್ನಾಗಿ ನೇಮಿಸಿದ್ದರು.
12 : ಹೌದು, ‘ಬೇಲ್ತೆಶಚ್ಚರ’ನೆಂಬ ಹೆಸರನ್ನು ರಾಜನಿಂದ ಹೊಂದಿದ ಆ ದಾನಿಯೇಲನು ಪರಮ ಬುದ್ಧಿವಂತ, ಜ್ಞಾನಿ, ವಿವೇಕಿ, ಕನಸುಗಳ ಅರ್ಥವನ್ನು ತಿಳಿಸುವ ಜಾಣತನ, ಒಗಟು ಬಿಡಿಸುವ ಚಮತ್ಕಾರ, ಗುಂಜುಗಂಟು ಬಿಚ್ಚುವ ಚಾತುರ್ಯ ಅವನಲ್ಲಿ ತೋರಿಬಂದವು. ಆದ್ದರಿಂದಲೇ ಅವನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಯಿತು. ದಾನಿಯೇಲನನ್ನು ಈಗಲೇ ಕರೆಯಿಸಿರಿ. ಆತ ಬರಹದ ಅರ್ಥವನ್ನು ವಿವರಿಸುವನು,” ಎಂದಳು.
13 : ಅಂತೆಯೇ, ದಾನಿಯೇಲನನ್ನು ರಾಜ ಸನ್ನಿಧಿಗೆ ಬರಮಾಡಲಾಯಿತು. ರಾಜನು ಅವನಿಗೆ: “ರಾಜನಾದ ನನ್ನ ತಂದೆ ಜುದೇಯದಿಂದ ಖೈದಿಯಾಗಿ ತಂದು ಸೆರೆಮಾಡಿದ ಯೆಹೂದ್ಯರಲ್ಲಿ ದಾನಿಯೇಲ್ ಎಂಬುವನು ನೀನೋ?
14 : ದೇವರ ಆತ್ಮ ನಿನ್ನಲ್ಲಿ ನೆಲೆಸಿದೆಯೆಂದು ನಾನು ಕೇಳಿದ್ದೇನೆ. ನಿನಗೆ ಪರಮಜ್ಞಾನ, ವಿವೇಕ, ಬುದ್ಧಿ, ತೇಜಸ್ಸು ಇದೆಯೆಂದು ನನಗೆ ತಿಳಿದುಬಂದಿದೆ.
15 : ಈಗ ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುವುದಕ್ಕಾಗಿ ವಿದ್ವಾಂಸರನ್ನೂ ಮಂತ್ರವಾದಿಗಳನ್ನೂ ಸಮ್ಮುಖಕ್ಕೆ ಬರಮಾಡಿದೆ. ಅವರು ಇದರ ಅರ್ಥವನ್ನು ವಿವರಿಸಲಾರದೆ ಹೋದರು.
16 : ನೀನು ಗೂಡಾರ್ಥಗಳನ್ನು ವಿವರಿಸಬಲ್ಲವನೂ ಗುಂಜುಗಂಟುಗಳನ್ನು ಬಿಚ್ಚಬಲ್ಲವನೂ ಎಂಬ ಸಮಾಚಾರ ನನಗೆ ಮುಟ್ಟಿದೆ. ಈ ಬರಹವನ್ನು ಓದಿ, ಇದರ ಅಭಿಪ್ರಾಯವನ್ನು ನನಗೆ ತಿಳಿಸಿದೆಯಾದರೆ ನಿನಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು.
17 : ಆಗ ದಾನಿಯೇಲನು ರಾಜನಿಗೆ, “ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು.
18 : ಪರಾತ್ಪರ ದೇವರು ನಿಮ್ಮ ತಂದೆಯಾದ ನೆಬೂಕದ್ನೆಚ್ಚರ್ ಅವರಿಗೆ ರಾಜ್ಯ ಮಹತ್ವವನ್ನು ಹಾಗೂ ಮಾನ ಸನ್ಮಾನಗಳನ್ನು ದಯಪಾಲಿಸಿದ್ದರು.
19 : ಇಂಥ ಮಹತ್ವ ವರದ ನಿಮಿತ್ತ ಸಕಲ ದೇಶ-ಕುಲ-ಭಾಷೆಗಳವರು ಅವರ ಮುಂದೆ ಭಯದಿಂದ ನಡುಗುತ್ತಿದ್ದರು. ತಮಗೆ ಇಷ್ಟಬಂದ ಹಾಗೆ ಒಬ್ಬನನ್ನು ಬದುಕಿಸಿದರು, ಇನ್ನೊಬ್ಬನನ್ನು ಕೊಲ್ಲಿಸಿದರು. ಮನಸ್ಸಿಗೆ ಬಂದ ಹಾಗೆ ಒಬ್ಬನನ್ನು ಮೇಲೇರಿಸಿದರು, ಇನ್ನೊಬ್ಬನನ್ನು ಕೆಳಕ್ಕಿಳಿಸಿದರು,
20 : ಹಾಗೆ ಅವರ ಎದೆ ಗರ್ವದಿಂದ ಉಬ್ಬಿಹೋಯಿತು. ಮನಸ್ಸಿಗೆ ಸೊಕ್ಕೇರಿ ಹೋಯಿತು. ಅವರನ್ನೂ ರಾಜಾಸ್ಥಾನದಿಂದ ತಳ್ಳಲಾಯಿತು. ಮಾನ ಕಳೆದುಹೋಯಿತು.
21 : ಸಮಾಜದಿಂದ ಬಹಿಷ್ಕøತರಾಗಿ, ಮೃಗಬುದ್ಧಿಯುಳ್ಳವರಾಗಿ, ಕಾಡುಕತ್ತೆಗಳ ನಡುವೆ ವಾಸಮಾಡಬೇಕಾಯಿತು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೆ ಅಧಿಕಾರವಿದೆ. ಅದನ್ನು ತಮಗೆ ಇಷ್ಟಬಂದವರಿಗೆ ಒಪ್ಪಿಸುತ್ತಾರೆ ಎಂಬುದನ್ನು ಅವರು ಗ್ರಹಿಸುವ ತನಕ ದನಗಳಂತೆ ಹುಲ್ಲುಮೇಯುವ ಗತಿ ಅವರದಾಯಿತು. ಆಕಾಶದ ಇಬ್ಬನಿ ಅವನ ಮೈಯನ್ನು ತೋಯಿಸುತ್ತಿತ್ತು.”
22 : “ಬೇಲ್ಯಚ್ಚರರೇ, ಅವರ ಕುಮಾರರಾದ ತಾವು ಇದನ್ನೆಲ್ಲ ತಿಳಿದುಕೊಂಡಿದ್ದರೂ ದೀನ ಮನಸ್ಕರಾಗದೆ ಇದ್ದೀರಿ.
23 : ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿಮ್ಮನ್ನೆ ಹೆಚ್ಚಿಸಿಕೊಂಡಿದ್ದೀರಿ. ದೇವಾಲಯದಿಂದ ಪವಿತ್ರ ಪೂಜಾಪಾತ್ರೆಗಳನ್ನು ಇಲ್ಲಿಗೆ ತಂದಿದ್ದೀರಿ. ನೀವೂ ನಿಮ್ಮ ರಾಜ್ಯದ ಪ್ರಮುಖರೂ ಪತ್ನಿ-ಉಪಪತ್ನಿಯರೂ ಅವುಗಳಲ್ಲಿ ದ್ರಾಕ್ಷಾರಸವನ್ನೂ ಕುಡಿದಿದ್ದೀರಿ. ಬುದ್ಧಿ, ಕಣ್ಣು, ಕಿವಿ ಇಲ್ಲದೆ ಬೆಳ್ಳಿಬಂಗಾರಗಳ, ಕಂಚು ಕಬ್ಬಿಣಗಳ, ಮರ ಕಲ್ಲುಗಳ ದೇವರುಗಳನ್ನೂ ಆರಾಧಿಸಿದ್ದೀರಿ. ನಿಮ್ಮ ಪ್ರಾಣ ಯಾರ ಕೈಯಲ್ಲಿದೆಯೋ ನಿಮ್ಮ ಸ್ಥಿತಿಗತಿಗಳು ಯಾರ ಅಧೀನದಲ್ಲಿದೆಯೋ ಆ ದೇವರನ್ನು ಮಾತ್ರ ಗೌರವಿಸದೆ ಇದ್ದೀರಿ.
24 : ಹೀಗಿರಲು, ಆ ಕೈಬೆರಳು ದೇವರ ಸನ್ನಿಧಿಯಿಂದ ಬಂದು ಬರೆದಿದೆ.”
25 : “ಬರೆದಿರುವ ಮಾತುಗಳು ಇವು: “ಮೆನೇ, ಮೆನೇ, ತೆಕೇಲ್, ಉಫರ್ಸಿನ್.”
26 : ಇದರ ಅರ್ಥ ಹೀಗಿದೆ: “ಮೆನೇ” ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ.
27 : ‘ತೆಕೇಲ್’ ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನಿನ್ನ ತೂಕ ಕಡಿಮೆಯಾಗಿ ಕಂಡುಬಂದಿದೆ.
28 : ‘ಫರ್ಸಿನ್’ ಎಂದರೆ ನಿನ್ನ ರಾಜ್ಯವನ್ನು ವಿಭಾಗಮಾಡಿ ಮೇದ್ಯರಿಗೂ ಪರ್ಷಿಯದವರಿಗೂ ಕೊಡಲಾಗಿದೆ,” ಎಂದು ಅರಿಕೆಮಾಡಿದನು.
29 : ತಕ್ಷಣವೇ ಬೇಲ್ಯಚ್ಚರನ ಆಜ್ಞೆಯ ಮೇರೆಗೆ ದಾನಿಯೇಲನಿಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿದರು. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿದರು. ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನಾದನು ಎಂದು ಪ್ರಕಟಿಸಿದರು.
30 : ಅದೇ ರಾತ್ರಿ ಬಾಬಿಲೋನಿನ ರಾಜ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.
31 : ಸುಮಾರು 62 ವಯಸ್ಸಿನ ಮೇದ್ಯನಾದ ದಾರ್ಯವೆಷನು ರಾಜ್ಯವನ್ನು ವಹಿಸಿಕೊಂಡನು.

Holydivine