Hosea - Chapter 9
Holy Bible

1 : ಇಸ್ರಯೇಲ್, ಹರ್ಷಿಸದಿರುಲ ಇತರ ರಾಷ್ಟ್ರಗಳೊಡನೆ ಆನಂದಿಸದಿರು. ನಿನ್ನ ದೇವರನ್ನು ತೊರೆದು ವ್ಯಭಿಚಾರಮಾಡಿರುವೆ. ಇತರರ ಕಣಗಳಿಂದ ದೊರಕುವ ಕಾಳು ನಿನ್ನ ವ್ಯಭಿಚಾರದ ಸಂಭಾವನೆಯೆಂದು ಹಂಬಲಿಸಿರುವೆ.
2 : ಸುಗ್ಗಿಯ ಕಣವೂ ದ್ರಾಕ್ಷಾರಸದ ತೊಟ್ಟಿಯೂ ನಿನ್ನ ಜನರಿಗೆ ಜೀವನಾಧಾರವಾಗವು. ಹೊಸ ದ್ರಾಕ್ಷಾರಸದ ನಿರೀಕ್ಷೆ ಅವರನ್ನು ನಿರಾಶೆಗೊಳಿಸುವುದು.
3 : ಅವರು ಸರ್ವೇಶ್ವರಸ್ವಾಮಿಯ ನಾಡಿನಲ್ಲಿ ವಾಸಮಾಡುವುದಿಲ್ಲ. ಎಫ್ರಯಿಮರು ಈಜಿಪ್ಟಿಗೆ ಹಿಂದಿರುಗುವರು. ಅಸ್ಸೀರಿಯದಲ್ಲಿ ಅವರು ತಿನ್ನುವ ಆಹಾರ ಹೊಲಸಾಗುವುದು.
4 : ಇನ್ನವರು ಸರ್ವೇಶ್ವರಸ್ವಾಮಿಗೆ ನೈವೇದ್ಯವಾಗಿ ದ್ರಾಕ್ಷಾರಸವನ್ನು ಸುರಿಯರು. ಅವರ ಯಜ್ಞಗಳು ಆ ಸ್ವಾಮಿಗೆ ಮೆಚ್ಚುಗೆಯಾಗುವುದಿಲ್ಲ. ಅವರ ಆಹಾರ ಹೆಣದ ಮನೆಯ ಆಹಾರದಂತಿರುವುದು. ಅದನ್ನು ತಿನ್ನುವವರೆಲ್ಲರು ಅಶುದ್ಧರಾಗುವರು. ಅದು ಹೊಟ್ಟೆ ತುಂಬಲು ಮಾತ್ರ ಸರಿಯೇ ಹೊರತು ದೇವಾಲಯದಲ್ಲಿ ಮಾಡುವ ಅರ್ಪಣೆಗೆ ಸಲ್ಲದು.
5 : ಹಬ್ಬದ ದಿನಗಳಲ್ಲಿ ಅವರೇನು ಮಾಡುವರು? ಸರ್ವೇಶ್ವರ ಸ್ವಾಮಿಯ ಮಹೋತ್ಸವಗಳನ್ನು ಹೇಗೆ ಆಚರಿಸುವರು?
6 : ವಿನಾಶದ ದೇಶವನ್ನು ಅವರು ಬಿಟ್ಟು ಹೋಗಬಹುದು. ಆದರೆ ಈಜಿಪ್ಟ್ ಅವರಿಗೆ ಸ್ಮಶಾನವಾಗುವುದು. ಮೋಫ್ ಪಟ್ಟಣದಲ್ಲಿ ಅವರಿಗೆ ಸಮಾಧಿಯಾಗುವುದು. ಅವರ ಬೆಳ್ಳಿಯ ಒಡವೆಗಳು ಮುಳ್ಳುಪೊದೆಗಳ ಪಾಲಾಗುವುವು; ಅವರ ಗುಡಾರಗಳಲ್ಲಿ ಕಳೆಗಳು ಬೆಳೆಯುವುವು.
7 : ಇಗೋ, ದಂಡನೆಯ ದಿನಗಳು ಸಮೀಪಿಸಿವೆ; ಮುಯ್ಯಿತೀರಿಸುವ ದಿನಗಳು ಬಂದಿವೆ. ಇಸ್ರಯೇಲರಿಗೆ ಇದು ತಿಳಿದಿರಲಿ. “ಪ್ರವಾದಿಯು ಹುಚ್ಚನು; ದೇವರಾತ್ಮ ಪ್ರೇರಿತನು ಮೂರ್ಖನು,” ಎಂದು ಹೇಳಿಕೊಳ್ಳುತ್ತೀರಿ. ಅತ್ಯಧಿಕವಾಗಿರುವ ನಿಮ್ಮ ಅಧರ್ಮ, ಮಿತಿಮೀರಿರುವ ನಿಮ್ಮ ದ್ವೇಷ ಇದಕ್ಕೆ ಕಾರಣ.
8 : ಎಫ್ರಯಿಮನ ದೇವಜನರಿಗೆ ಪ್ರವಾದಿಯೇ ಕಾವಲುಗಾರ. ಆದರೂ ಅವನ ಹಾದಿಯಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ. ದೇವರ ಆಲಯದಲ್ಲೂ ಅವನಿಗೆ ಹಗೆತನ ಕಾದಿದೆ.
9 : ಪೂರ್ವದಲ್ಲಿ ಗಿಬ್ಯದವರು ಭ್ರಷ್ಟರಾದಂತೆ ಎಫ್ರಯಿಮಿನವರು ಅತಿ ಭ್ರಷ್ಟರಾಗಿದ್ದಾರೆ. ದೇವರು ಅವರ ಅಪರಾಧವನ್ನು ನೆನಪಿಗೆ ತಂದುಕೊಳ್ಳುವರು. ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವರು.
10 : ಬೆಂಗಾಡಿನಲ್ಲಿ ದ್ರಾಕ್ಷೆ ಸಿಕ್ಕಿದಂತೆ ಇಸ್ರಯೇಲ್ ನನಗೆ ಸಿಕ್ಕಿತು. ಅಂಜೂರದ ಮರದ ಮೊತ್ತಮೊದಲ ಹಣ್ಣು ಕಣ್ಣಿಗೆ ಬೀಳುವಂತೆ ನಿಮ್ಮ ಪಿತೃಗಳು ನನಗೆ ಕಾಣಿಸಿಕೊಂಡರು. ಆದರೆ ಅವರು ಬಾಳ್ ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾದರು. ಅವರು ನೆಚ್ಚಿಕೊಂಡ ದೇವತೆಯಂತೆ ನೀಚರಾದರು.
11 : ಎಫ್ರಯಿಮರ ಮಹಿಮೆ ಪಕ್ಷಿಯಂತೆ ಹಾರಿಹೋಗುವುದು. ಅಲ್ಲಿ ಯಾರೂ ಮಕ್ಕಳನ್ನು ಹೆರುವುದಿಲ್ಲ; ಯಾರೂ ಗರ್ಭಿಣಿಯಾಗುವುದಿಲ್ಲ; ಯಾರೂ ಗರ್ಭಧರಿಸುವುದಿಲ್ಲ.
12 : ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಅವರಾರೂ ಉಳಿಯದಂತೆ ಅವರಿಗೆ ನಿರಂತರವಾಗಿ ಪುತ್ರ ಶೋಕವನ್ನುಂಟುಮಾಡುವೆನು. ನಾನು ಅವರಿಗೆ ವಿಮುಖನಾಗುವೆನು. ಅವರ ಗತಿ ಹೇಳತೀರದಂತಾಗುವುದು.
13 : ಎಫ್ರಯಿಮಿನ ಮಕ್ಕಳು ಬೇಟೆಗೆ ಗುರಿ ಆದವರಂತೆ ಕಾಣಿಸುತ್ತಾರೆ. ಎಫ್ರಯಿಮ್ ತನ್ನ ಪುತ್ರರನ್ನು ವಧ್ಯಸ್ಥಾನಕ್ಕೆ ಕರೆದೊಯ್ಯಬೇಕಾಗುವುದು.
14 : ಸರ್ವೇಶ್ವರಾ, ಇವರಿಗೆ ಏನನ್ನು ವಿಧಿಸುವೆ? ಇವರಿಗೆ ಎಂಥ ಗತಿಯನ್ನು ಬರಮಾಡುವೆ? ಅವರ ಮಹಿಳೆಯರಿಗೆ ಗರ್ಭಪಾತವಾಗಲಿ! ಅವರ ಮೊಲೆ ಬತ್ತಿಹೋಗಲಿ! ಇಸ್ರಯೇಲರು ಅಲೆಮಾರಿಗಳಾಗುವರು
15 : “ಅವರ ದುಷ್ಟತನ ಗಿಲ್ಗಾಲಿನಲ್ಲೇ ಪ್ರಾರಂಭವಾಯಿತು. ಅಲ್ಲೇ ಅವರು ನನ್ನ ದ್ವೇಷಕ್ಕೆ ಗುರಿಯಾದರು. ಅವರ ಪಾಪಕೃತ್ಯಗಳ ನಿಮಿತ್ತ ನನ್ನ ಆಲಯದಿಂದ ಹೊರಗಟ್ಟುವೆನು. ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲ ದ್ರೋಹಿಗಳೇ.
16 : ಎಫ್ರಯಿಮಿಗೆ ಏಟು ಬಿದ್ದಿದೆ; ಅವರ ವಂಶದ ಬೇರು ಬತ್ತಿಹೋಗಿದೆ. ಅವರು ಫಲಹೀನರಾಗಿದ್ದಾರೆ. ಮಕ್ಕಳನ್ನು ಹೆತ್ತರೂ ಅವಳ ಕರುಳ ಕುಡಿಯನ್ನು ಕತ್ತರಿಸಿ ಹಾಕುವೆನು.”
17 : ತಮ್ಮ ಮಾತಿಗೆ ಕಿವಿಗೊಡದ ಈ ಜನರನ್ನು ಸರ್ವೇಶ್ವರ ತಳ್ಳಿಬಿಡುವರು. ಇತರ ಜನಾಂಗಗಳ ಮಧ್ಯೆ ಅವರು ಅಲೆಮಾರಿಗಳಂತೆ ಇರುವರು. ಪಾಳುಬಿದ್ದ ಬಲಿಪೀಠಗಳು

Holydivine