Hosea - Chapter 12
Holy Bible

1 : “ಎಫ್ರಯಿಮ್ ಕೇವಲ ಗಾಳಿಗೆ ಕುರಿಗಾಹಿ; ಅದು ದಿನವಿಡೀ ಗುದ್ದಾಡುತ್ತಿರುವುದು ಮೂಡಣಗಾಳಿಯನ್ನೇ. ಅದು ಮೋಸವನ್ನೂ ಹಿಂಸೆಯನ್ನೂ ನಿರಂತರವಾಗಿ ಹೆಚ್ಚಿಸುತ್ತಿದೆ. ಅಸ್ಸೀರಿಯದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತಿದೆ.”
2 : ಸರ್ವೇಶ್ವರ ಜುದೇಯದ ಮೇಲೆ ಆಪಾದನೆ ಹೊರಿಸಿದ್ದಾರೆ. ಯಕೋಬನನ್ನು ಅದರ ನಡತೆಗೆ ತಕ್ಕಂತೆ ದಂಡಿಸುತ್ತಾರೆ. ಅದರ ಕೃತ್ಯಗಳಿಗನುಸಾರವಾಗಿ ಪ್ರತೀಕಾರ ಮಾಡುತ್ತಾರೆ.
3 : ಯಕೋಬನು ಅಣ್ಣನ ಜೊತೆ ತಾಯಿಯ ಗರ್ಭದಲ್ಲಿರುವಾಗಲೇ ಅವನ ಹಿಮ್ಮಡಿಯನ್ನು ಹಿಡಿದು ವಂಚಿಸಿದವನು. ಪ್ರಾಯಕ್ಕೆ ಬಂದಮೇಲೆ ದೇವರೊಡನೆ ಹೋರಾಡಿದನು.
4 : ಹೌದು, ಯಕೋಬನು ದೇವದೂತನ ಸಂಗಡ ಹೋರಾಡಿ ಗೆದ್ದನು. ಅಳುತ್ತಾ ಆತನ ಅನುಗ್ರಹಕ್ಕಾಗಿ ಯಾಚಿಸಿದನು. ಆತನು ಬೇತೇಲಿನಲ್ಲಿ ದೇವರನ್ನು ಕಂಡನು. ದೇವರು ಅಲ್ಲಿ ಆತನೊಂದಿಗೆ ಮಾತನಾಡಿದರು.
5 : ಅವರೇ ಸರ್ವಶಕ್ತನಾದ ದೇವರು; ಸರ್ವೇಶ್ವರ ಎಂಬುದೇ ಅವರನ್ನು ಸ್ಮರಿಸುವ ನಾಮಧೇಯ.
6 : ಆದುದರಿಂದ ಇಸ್ರಯೇಲ್, ನೀನು ದೇವರ ಕಡೆ ತಿರುಗಿಕೋ, ನೀತಿ ಪ್ರೀತಿಗಳಿಗೆ ಅನುಗುಣವಾಗಿ ನಡೆ. ನಿರಂತರವಾಗಿ ದೇವರನ್ನು ನಿರೀಕ್ಷಿಸಿಕೊಂಡಿರು.
7 : ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲ್ ಮೋಸದ ತಕ್ಕಡಿ ಹಿಡಿದು ವ್ಯಾಪಾರಮಾಡುವ ಕಾನಾನ್ಯರಂತೆ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅದರ ದುರಾಸೆ.”
8 : ಎಫ್ರಯಿಮ್ ಹೇಳಿಕೊಳ್ಳುವು ದೇನೆಂದರೆ: “ನಾನು ಐಶ್ವರ್ಯವಂತನಾಗಿಬಿಟ್ಟೆ. ನನಗಾಗಿ ಆಸ್ತಿಪಾಸ್ತಿಯನ್ನು ಗಳಿಸಿಕೊಂಡಿದ್ದೇನೆ. ನನ್ನ ಗಳಿಕೆಯಲ್ಲಿ ಪಾಪವೆಂಬ ದೋಸವೇನೂ ಇಲ್ಲ.”
9 : ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ ನಿನ್ನ ಸರ್ವೇಶ್ವರನಾದ ದೇವರಾದ ನಾನು, ಯಾತ್ರಾದಿನಗಳಲ್ಲಿ ನೀನು ವನವಾಸ ಮಾಡಿದಂತೆ ನಿಮ್ಮನ್ನು ಪುನಃ ಗುಡಾರದವಾಸಕ್ಕೆ ಗುರಿಪಡಿಸುವೆನು.
10 : “ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮತಿಗಳನ್ನು ಹೇಳಿ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದೇನೆ.
11 : ಆದರೂ ಗಿಲ್ಯಾದಿನಲ್ಲಿ ಅಧರ್ಮ ನೆಲೆಗೊಂಡಿದೆ. ಅದಕ್ಕೆ ದುರ್ಗತಿ ಕಾದಿದೆ. ಗಿಲ್ಗಾಲಿನಲ್ಲಿ ಬಸವನಿಗೆ ಯಜ್ಞಗಳನ್ನು ಅರ್ಪಿಸಲಾಗುತ್ತಿದೆ. ಅಲ್ಲಿನ ನೇಗಿಲಿಗೆ ಸಿಕ್ಕುವ ಕಲ್ಲುಕುಪ್ಪೆಗಳಾಗುವುವು.”
12 : ಯಕೋಬನು ಮೆಸಪಟೋಮಿಯಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಮದುವೆಗೋಸ್ಕರ ಜೀತಮಾಡಿದನು; ವಧುವಿಗೋಸ್ಕರ ಕುರಿಕಾಯ್ದನು.
13 : ದೇವರು ಪ್ರವಾದಿಯನ್ನು ಕಳುಹಿಸಿ, ಇಸ್ರಯೇಲನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಪ್ರವಾದಿಯ ಮುಖಾಂತರ ಇಸ್ರಯೇಲಿಗೆ ರಕ್ಷಣೆ ದೊರಕಿತು.
14 : ಎಫ್ರಯಿಮ್ ದೇವರನ್ನು ಉಗ್ರವಾಗಿ ರೇಗಿಸಿದೆ; ರಕ್ತಾಪರಾಧವನ್ನು ಅದರ ಮೇಲೆ ಹೊರಿಸಲಾಗುವುದು. ಅದು ಮಾಡಿದ ಅವಮಾನಕ್ಕೆ ಪ್ರತಿಯಾಗಿ ದೇವರು ಅದನ್ನು ಅವಮಾನಕ್ಕೆ ಗುರಿಪಡಿಸುವರು.

Holydivine