Hosea - Chapter 3
Holy Bible

1 : ಅನಂತರ ಸರ್ವೇಶ್ವರ ನನಗೆ ಹೇಳಿದ್ದೇನೆಂದರೆ: “ನನ್ನ ಜನರಾದ ಇಸ್ರಯೇಲಿನವರು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು, ಅವುಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ಬಯಸುತ್ತಾರೆ. ಆದರೂ ಸರ್ವೇಶ್ವರ ಅವರನ್ನು ಪ್ರೀತಿಸುತ್ತಾರೆ. ಇದಕ್ಕೆ ನಿದರ್ಶನವಾಗಿ, ನೀನು ಹೋಗಿ, ಜಾರನಿಗೆ ಪ್ರಿಯಳೂ ಮತ್ತು ವ್ಯಭಿಚಾರಿಣಿಯೂ ಆದ ಸ್ತ್ರೀಯೊರ್ವಳನ್ನು ಪ್ರೀತಿಸು.”
2 : ಅಂತೆಯೇ ನಾನು ಹದಿನೈದು ಬೆಳ್ಳಿನಾಣ್ಯಗಳು ಮತ್ತು 150 ಕಿಲೋ ಗ್ರಾಂ. ಜವೆಗೋದಿಯನ್ನು ಕೊಟ್ಟು, ಅಂಥವಳನ್ನು ನನಗಾಗಿ ಕೊಂಡುಕೊಂಡೆನು.
3 : ಆಮೇಲೆ ಅವಳಿಗೆ: “ದೀರ್ಘಕಾಲ ನನ್ನವಳಾಗಿ ಜೀವಿಸು. ಇನ್ನು ಮುಂದೆ ವ್ಯಭಿಚಾರ ಮಾಡಬೇಡ. ಇತರರ ಸಹವಾಸ ನಿನಗೆ ಬೇಡ. ನಾನು ಸಹ ಅದರಂತೆಯೇ ನಿನ್ನವನಾಗಿ ಜೀವಿಸುವೆನು,” ಎಂದೆನು.
4 : ಹೀಗಿರಲು, ಅನೇಕ ದಿನಗಳವರೆಗೆ ಇಸ್ರಯೇಲಿನಲ್ಲಿ ರಾಜಯುವರಾಜರುಗಳು ಆಳ್ವಿಕೆ ನಡೆಸುವುದಿಲ್ಲ. ಬಲಿಯರ್ಪಣೆಗಳು ಇರುವುದಿಲ್ಲ, ವಿಗ್ರಹವೇದಿಕೆಗಳು ಅವರ ಮಧ್ಯೆ ಕಂಡುಬರುವುದಿಲ್ಲ, ಮಾಟಮಂತ್ರ ನಡೆಯುವುದಿಲ್ಲ.
5 : ತದನಂತರ ಇಸ್ರಯೇಲಿನವರು ತಮ್ಮ ದೇವರಾದ ಸರ್ವೇಶ್ವರನನ್ನು ಮತ್ತು ಅರಸ ದಾವೀದನನ್ನು ಆಶ್ರಯಿಸುವರು. ಅಂತಿಮ ದಿನಗಳಲ್ಲಿ ಅವರು ಭಯಭಕ್ತಿಯುಳ್ಳವರಾಗಿ ಸರ್ವೇಶ್ವರ ಸ್ವಾಮಿಯನ್ನೂ ಅವರ ಕೃಪಾಶ್ರಯವನ್ನೂ ಮರೆಹೋಗುವರು.

Holydivine