Hosea - Chapter 11
Holy Bible

1 : ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ.
2 : ದೂರ ಸರಿದರು ಆ ಇಸ್ರಯೇಲರು ನಾ ಕರೆದರೂ ನನ್ನ ಬಳಿಗೆ ಅರ್ಪಿಸುತ್ತಾ ಬಂದರು ಯಜ್ಞವನ್ನು ಬಾಳ್‍ದೇವತೆಗಳಿಗೆ ಧೂಪಾರತಿ ಬೆಳಗುತ್ತಾ ಬಂದರು ಆ ವಿಗ್ರಹಗಳಿಗೆ.
3 : ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆ ಹೋದರು ಈ ವಿಷಯವನೇ.
4 : ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ.
5 : “ಅವರು ನನ್ನ ಬಳಿಗೆ ಬಾರದ ಕಾರಣ, ಇಸ್ರಯೇಲ್ ಈಜಿಪ್ಟಿಗೆ ಹಿಂದಿರುಗುವುದು, ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವುದು.
6 : ತಮ್ಮ ಇಚ್ಛಾನುಸಾರ ಅವರು ನಡೆದ ಕಾರಣ, ಅವರ ಪಟ್ಟಣಗಳಲ್ಲಿ ಕತ್ತಿಯ ಕಾಳಗ ನಡೆಯುವುದು. ಅವರ ಪುರದ್ವಾರದ ಕಬ್ಬಿಣದ ಅಗುಳಿಗಳನ್ನು ಮುರಿದು ಕೋಟೆಯಲ್ಲೇ ಅವರನ್ನು ಕಡಿದು ಹಾಕುವರು.
7 : ಅವರು ನನ್ನ ಕಡೆಯಿಂದ ದೂರ ಹೋಗುವ ಹಠಹಿಡಿದಿದ್ದಾರೆ; ಅವರು ನೊಗದ ಭಾರವನ್ನು ತಾಳದೆ ಕೂಗಿಕೊಂಡರೂ ಅದನ್ನು ಬಿಚ್ಚುವವರು ಯಾರೂ ಇಲ್ಲ.
8 : “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ?
9 : ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು !
10 : “ಶತ್ರುಗಳ ಕಡೆಗೆ ಸಿಂಹದಂತೆ ಗರ್ಜಿಸುವ ಸ್ವಾಮಿಯನ್ನು ಆ ಜನರು ಹಿಂಬಾಲಿಸುತ್ತಾರೆ. ಆತ ಆರ್ಭಟಿಸಲು ಅವರ ಮಕ್ಕಳು ನಡುನಡುಗುತ್ತಾ ಬರುತ್ತಾರೆ.
11 : ಗುಬ್ಬಿಗಳಂತೆ ಈಜಿಪ್ಟಿನಿಂದಲೂ ಪಾರಿವಾಳಗಳಂತೆ ಅಸ್ಸೀರಿಯದಿಂದಲೂ ಅವರು ಬೆದರುತ್ತಾ ಓಡಿಬರುತ್ತಾರೆ. ಅವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವಂತೆ ಮಾಡುವೆನು.
12 : “ಎಫ್ರಯಿಮಿನ ಸುಳ್ಳುತನ, ಇಸ್ರಯೇಲಿನ ಕಪಟತನ ನನ್ನನ್ನು ಮುತ್ತಿಕೊಂಡಿವೆ. ಸತ್ಯ ಸ್ವರೂಪಿಯೂ ಪರಮಪಾವನರೂ ಆದ ದೇವರಿಂದ ದೂರವಾಗಿ ಜುದೇಯವು ಅಲೆಯುತ್ತಿದೆ.

Holydivine