Hosea - Chapter 10
Holy Bible

1 : ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ. ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ.
2 : ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದು ಹಾಕುವರು.
3 : “ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ.
4 : ಅವರು ಹರಟೆ ಹೊಡೆಯುತ್ತಾರೆ; ಸುಳ್ಳಾಣೆ ಇಟ್ಟು ಸಂಧಾನಮಾಡಿಕೊಳ್ಳುತ್ತಾರೆ. ಉತ್ತ ಹೊಲದಲ್ಲಿ ಬೆಳೆಯುವ ವಿಷದ ಕಳೆಗಳಂತೆ ನ್ಯಾಯಸ್ಥಾನಕ್ಕೆ ಬರುವ ಅವರ ವಾದವಿವಾದಗಳು ಹೆಚ್ಚಿಕೊಳ್ಳುತ್ತವೆ.
5 : ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು.
6 : ಆ ವಿಗ್ರಹವನ್ನು ಅಸ್ಸೀರಿಯದ ಜಗಳಗಂಟಿ ರಾಜನಿಗೆ ಕಾಣಿಕೆಯಾಗಿ ಕೊಡಲಾಗುವುದು. ಎಫ್ರಯಿಮಿಗೆ ಅವಮಾನವಾಗುವುದು. ಇಸ್ರಯೇಲ್ ತಾನು ಕೆತ್ತಿಸಿಕೊಂಡ ವಿಗ್ರಹಕ್ಕಾಗಿ ನಾಚಿಕೆಗೀಡಾಗುವುದು.
7 : ಸಮಾರ್ಯದ ರಾಜನು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಕಡ್ಡಿಯಂತೆ ಕಣ್ಮರೆ ಆಗುವನು.
8 : ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.”
9 : “ಇಸ್ರಯೇಲ್, ನೀನು ಗಿಬ್ಯದಲ್ಲಿದ್ದ ಕಾಲದಿಂದ ನನಗೆ ವಿರುದ್ಧ ಪಾಪ ಮಾಡುತ್ತಲೇ ಬಂದಿರುವೆ. ನಿನ್ನ ಜನರು ಪಾಪದಲ್ಲಿಯೇ ಮುಂದುವರಿಯುತ್ತಿದ್ದಾರೆ. ಗಿಬ್ಯದ ನಿವಾಸಿಗಳು ಯುದ್ಧಕ್ಕೆ ತುತ್ತಾಗಲಿದ್ದಾರೆ.
10 : ಸಕಾಲದಲ್ಲಿ ನಾನು ಅವರನ್ನು ದಂಡಿಸುವೆನು; ಅವರ ಇಮ್ಮಡಿ ಅಪರಾಧಕ್ಕೆ ತಕ್ಕ ಶಾಸ್ತಿ ಆಗುವುದು; ಆಗ ಇತರ ರಾಷ್ಟ್ರಗಳು ಅವರಿಗೆ ವಿರುದ್ಧವಾಗಿ ಒಂದುಗೂಡುವುವು.
11 : “ಎಫ್ರಯಿಮ್ ತೆನೆಹುಲ್ಲನ್ನು ತುಳಿಯುವುದರಲ್ಲಿ ಪಳಗಿರುವ ಹೋರಿಕರು. ಅದರ ಅಂದವಾದ ಹೆಗಲಮೇಲೆ ನೇಗಿಲನ್ನು ಇಟ್ಟಿರಲಿಲ್ಲ. ಜುದೇಯವು ಉಳುವಂತೆ ಮಾಡಿದೆನು. ಯಕೋಬ್ ಕುಂಟೆ ಎಳೆಯುವಂತೆ ಮಾಡಿದೆನು. ಈಗ ಎಫ್ರಯಿಮನ್ನು ನೊಗಕ್ಕೆ ಹೂಡುವೆನು.
12 : ನಾನು ಇಂತೆಂದೆ: “ಪಾಳುಬಿದ್ದ ನೆಲವನ್ನು ಉತ್ತು ಹದಮಾಡಿರಿ; ನೀತಿಯ ಬೀಜವನ್ನು ಬಿತ್ತಿರಿ; ಪ್ರೀತಿಯ ಫಲವನ್ನು ಕೊಯ್ಯಿರಿ. ಸಮಯವು ಸನ್ನಿಹಿತವಾಗಿದೆ. ಸರ್ವೇಶ್ವರ ಆಗಮಿಸಿ ನಿಮ್ಮ ಮೇಲೆ ನೀತಿಯನ್ನು ಮಳೆಗರೆಯುವಂತೆ ಅವರಿಗೆ ಶರಣು ಹೋಗಬೇಕು.
13 : ಇದಕ್ಕೆ ಬದಲಾಗಿ ನೀನು ಅಧರ್ಮದ ಬೀಜವನ್ನು ಬಿತ್ತಿರುವೆ, ಅನ್ಯಾಯದ ಬೆಳೆಯನ್ನು ಕೊಯ್ದಿರುವೆ, ಅಸತ್ಯದ ಫಲವನ್ನು ಉಂಡಿರುವೆ. ನಿನ್ನ ಭುಜಬಲದಲ್ಲೂ ಸಮರ ಶೂರರಲ್ಲೂ ಭರವಸೆಯಿಟ್ಟೆ.
14 : ಎಂತಲೇ ನಿನ್ನ ಜಾತಿಜನಾಂಗಗಳ ವಿರುದ್ಧ ಯುದ್ಧಘೋಷಣೆ ಮೊಳಗುವುದು. ಕಾಳಗದ ದಿನದಲ್ಲಿ ಕೋಟೆಕೊತ್ತಲಗಳು ಸೂರೆಯಾಗುವುವು. ಶಲ್ಮಾನ ರಾಜನು ಬೇತ್‍ಅರ್ಬೇಲ್ ಪಟ್ಟಣವನ್ನು ನೆಲಸಮ ಮಾಡಿದಂತೆ ಆಗುವುದು. ತಾಯಿ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದಂತೆ ಇದೆಲ್ಲ ನಡೆಯುವುದು.
15 : ಬೇತೇಲಿನ ಜನರೇ, ನಿಮಗೂ ಇಂಥ ದುರ್ಗತಿಯೇ ಸಂಭವಿಸಲಿರುವುದು, ಬೆಳಗಾಗುವುದರೊಳಗೆ ಇಸ್ರಯೇಲಿನ ರಾಜನು ಹತನಾಗುವನು. ಕಾರಣ, ನಿಮ್ಮ ಅಕ್ರಮವು ಘೋರವಾದುದು!”

Holydivine