Hosea - Chapter 2
Holy Bible

1 : ನಿಮ್ಮ ಸಹೋದರರನ್ನು ‘ನಮ್ಮವರೇ’ ಎಂದೂ ನಿಮ್ಮ ಸಹೋದರಿಯರನ್ನು ‘ಪ್ರೀತಿಪಾತ್ರರೇ’ ಎಂದೂ ಸಂಭೋಧಿಸಿರಿ.
2 : ಮಕ್ಕಳೇ, ವಾದಿಸಿರಿ; ನಿಮ್ಮ ತಾಯಿಯೊಡನೆ ವಾದಿಸಿರಿ. ಅವಳು ನನ್ನ ಪತ್ನಿಯಲ್ಲ, ನಾನು ಅವಳ ಪತಿಯಲ್ಲ. ತನ್ನ ಮುಖದಿಂದ ವೇಶ್ಯಾಚಾರದ ಸೋಗನ್ನೂ ಸ್ತನಮಧ್ಯದಿಂದ ವ್ಯಭಿಚಾರದ ಬೆಡಗನ್ನೂ ತ್ಯಜಿಸಲಿ.
3 : ಇಲ್ಲವಾದರೆ ಅವಳನ್ನು ನಗ್ನವಾಗಿಸಿ (ಹುಟ್ಟಿದಾಗ ಇದ್ದಂತೆ) ಬೆತ್ತಲೆಯಾಗಿ ನಿಲ್ಲಿಸುವೆನು. ಅವಳನ್ನು ಬೆಂಗಾಡನ್ನಾಗಿ ಮಾಡಿ, ಮರುಭೂಮಿಯಂತೆ ಮಾರ್ಪಡಿಸಿ, ನೀರಡಿಕೆಯಿಂದ ಸಾಯುವಂತೆ ಮಾಡುವೆನು.
4 : ಅವಳ ಮಕ್ಕಳಿಗೂ ಕರುಣೆಯನ್ನು ತೋರಿಸೆನು; ಅವರು ವ್ಯಭಿಚಾರದಿಂದ ಹುಟ್ಟಿದವರು.
5 : ಅವರ ತಾಯಿ ವೇಶ್ಯೆಯಾಗಿದ್ದಾಳೆ; ಲಜ್ಜೆಗೆಟ್ಟ ಹೆಂಗಸಾಗಿ ವರ್ತಿಸಿದ್ದಾಳೆ. ‘ನನಗೆ ಅನ್ನಪಾನ, ಉಣ್ಣೆ ಉಡಿಗೆ, ಎಣ್ಣೆತೈಲ, ಪಾಯಸಪಾನಕಗಳನ್ನು ಕೊಡುವಂಥ ನಲ್ಲರ ಹಿಂದೆ ಹೋಗುವೆನು’ ಎಂದುಕೊಂಡಿದ್ದಾಳೆ.
6 : ಆದುದರಿಂದ ನಾನು ಅವಳ ದಾರಿಗೆ ಮುಳ್ಳುಬೇಲಿಹಾಕುವೆನು. ಇಷ್ಟಬಂದ ದಾರಿಯನ್ನು ಹಿಡಿಯದಂತೆ ಅವಳ ಮುಂದೆ ಅಡ್ಡಗೋಡೆಯನ್ನು ಎಬ್ಬಿಸುವೆನು.
7 : ಅವಳು ತನ್ನ ನಲ್ಲರನ್ನು ಹಿಂದಟ್ಟಿ ಹೋದರೂ ಅವರನ್ನು ಸಂಧಿಸಲಾರಳು; ಅವರನ್ನು ಹುಡುಕಿದರೂ ಕಂಡು ಹಿಡಿಯಲಾರಳು. ಆಗ ಅವಳು: ‘ನನ್ನನ್ನು ಮದುವೆಯಾದ ಪತಿಯ ಬಳಿಗೆ ಹಿಂತಿರುಗುವೆನು. ಈಗಿನ ಸ್ಥಿತಿಗಿಂತ ಆಗಿನ ಸ್ಥಿತಿಯೇ ಉತ್ತಮವಾಗಿತ್ತು’ ಎಂದುಕೊಳ್ಳುವಳು.
8 : ಅವಳಿಗೆ ದವಸಧಾನ್ಯ, ದ್ರಾಕ್ಷಾರಸ, ತೈಲಗಳನ್ನು ಕೊಟ್ಟವನು ನಾನೇ ಎಂಬುದನ್ನು ಅರಿತುಕೊಳ್ಳದೆ ಹೋದಳು. ನಾನು ಧಾರಾಳವಾಗಿ ಕೊಟ್ಟ ಬೆಳ್ಳಿ ಬಂಗಾರಗಳನ್ನು ಬಾಳನ ಪೂಜೆಗೆ ಉಪಯೋಗಿಸಿದಳು.
9 : ಆದಕಾರಣ ನಾನು ದವಸ ಧಾನ್ಯ, ದ್ರಾಕ್ಷಾರಸಗಳನ್ನು ಆಯಾ ಕಾಲದಲ್ಲಿ ಹಿಂದಕ್ಕೆ ತೆಗೆದುಕೊಳ್ಳುವೆನು. ಅವಳ ಮಾನವನ್ನು ಮುಚ್ಚುತ್ತಿದ್ದ ಉಣ್ಣೆಉಡಿಗೆಗಳನ್ನು ಹಿಂತೆಗೆದುಕೊಳ್ಳುವೆನು.
10 : ಅವಳ ನಲ್ಲರ ಕಣ್ಣೆದುರಿಗೆ ಅವಳ ಲಜ್ಜೆಗೇಡಿತನವನ್ನು ಬಯಲುಮಾಡುವೆನು. ಅವಳನ್ನು ನನ್ನ ಕೈಯಿಂದ ಯಾರೂ ಬಿಡಿಸರು.
11 : ಅವಳ ಸಂಭ್ರಮಗಳನ್ನು - ಹಬ್ಬ ಹುಣ್ಣಿಮೆ, ಸಬ್ಬತ್ ಆಚರಣೆ, ಸಭೆಸಮಾರಂಭಗಳು – ಇವೆಲ್ಲವನ್ನೂ ನಿಲ್ಲಿಸಿಬಿಡುವೆನು.
12 : ‘ನನ್ನ ನಲ್ಲರು ನನಗೆ ಉಡುಗೊರೆಯಾಗಿ ಕೊಟ್ಟವುಗಳು’ ಎಂದು ಅವಳು ಹೇಳಿಕೊಳ್ಳುವ ದ್ರಾಕ್ಷಾಲತೆಗಳನ್ನೂ ಅಂಜೂರದ ವೃಕ್ಷಗಳನ್ನೂ ನಾಶಪಡಿಸುವೆನು. ಅವುಗಳನ್ನು ಕಾಡುಪೊದೆಗಳನ್ನಾಗಿ ಮಾರ್ಪಡಿಸುವೆನು. ಕಾಡುಮೃಗಗಳು ಅವುಗಳನ್ನು ಕಬಳಿಸುವುವು.
13 : ಅವಳು ನನ್ನನ್ನು ಮರೆತು ಬಿಟ್ಟಿದ್ದಾಳೆ; ಬಂಗಾರದ ಮೂಗುತಿ ಮುಂತಾದ ಒಡವೆಗಳಿಂದ ಶೃಂಗರಿಸಿಕೊಂಡು ನಲ್ಲರನ್ನು ವರಿಸುತ್ತಾ ಹೋಗಿದ್ದಾಳೆ. ಅಷ್ಟೇ ಅಲ್ಲ, ಬಾಳ್‍ದೇವತೆಗಳ ಹಬ್ಬದಲ್ಲಿ ಧೂಪಾರತಿಯನ್ನು ಬೆಳಗಿದ್ದಾಳೆ. ಈ ಕಾರಣ ನಾನು ಅವಳನ್ನು ದಂಡಿಸುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ.
14 : ಆದುದರಿಂದ ಇಗೋ, ನಾನು ಅವಳನ್ನು ಪುನಃ ಬೆಂಗಾಡಿಗೆ ಕರೆದೊಯ್ಯುವೆನು. ಹೃದಯಂಗಮವಾಗಿ ಅವಳನ್ನು ಒಲಿಸಿಕೊಂಡು ಮಾತಾಡುವೆನು.
15 : ಅವಳ ದ್ರಾಕ್ಷಾತೋಟಗಳನ್ನು ಅಲ್ಲಿಯೇ ಅವಳಿಗೆ ಹಿಂದಿರುಗಿಕೊಡುವೆನು. ಆಕೋರಿನ ಕಣಿವೆಯನ್ನು ಅವಳ ಆಶಾದ್ವಾರವನ್ನಾಗಿ ಮಾಡುವೆನು. ಅವಳು ತನ್ನ ಯೌವನದ ದಿನಗಳಲ್ಲಿಯೂ ಈಜಿಪ್ಟ್‍ನಿಂದ ಬಿಡುಗಡೆಯಾಗಿ ಬಂದ ಸಮಯದಲ್ಲಿಯೂ ಇದ್ದಂತೆ ಅಲ್ಲಿ ಒಲುಮೆಯಿಂದಿರುವಳು.
16 : ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನಗಳಲ್ಲಿ ನೀನು ನನ್ನನ್ನು ‘ಬಾಳ್‍ದೇವತೆ’ ಎಂದು ಕರೆಯದೆ ‘ನನ್ನ ಪತಿ’ ಎಂದು ಕರೆಯುವೆ.
17 : ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಚರಿಸದಂತೆ ಮಾಡುವೆನು.
18 : ಆ ದಿನಗಳಲ್ಲಿ ನನ್ನ ಜನರಿಗೆ ಹಾನಿ ಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದ ಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು.
19 : ನನ್ನವಳನ್ನಾಗಿ ಮಾಡಿಕೊಳ್ಳುವೆನು ನಿನ್ನನ್ನು ಅನವರತ ನಿನ್ನ ವರಿಸುವೆನು ಕರುಣೆಯಿಂದ, ನೀತಿನ್ಯಾಯದಿಂದ, ನಿಶ್ಚಲ ಪ್ರೀತಿಯಿಂದ.
20 : ನಂಬಿಕೆಯಿಂದ ಸ್ವೀಕರಿಸುವೆನು ನಿನ್ನನು ಆಗ ನೀ ಅರಿತುಕೊಳ್ಳುವೆ ಸರ್ವೇಶ್ವರನಾದ ನನ್ನನು.
21 : ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನದಂದು ಪ್ರೀತಿಸುವೆನು ನಿನ್ನನು; ಆಲಿಸುವೆನು ಆಗಸದ ಮೊರೆಯನು.
22 : ಆಗಸವು ಆಲಿಸುವುದು ಭೂಮಿಯ ಮೊರೆಯನು ಇವು ಆಲಿಸುವುವು ಇಸ್ರಯೇಲಿನ ಮೊರೆಯನು.
23 : ನನ್ನ ನಾಮದ ಪ್ರಯುಕ್ತವೇ, ಮಾಡುವೆನು ಇಸ್ರಯೇಲ್ ಏಳಿಗೆಯಾಗುವಂತೆ ಜಗದೊಳಗೆ ತೋರಿಸುವೆನು ಪ್ರೀತಿವಾತ್ಸಲ್ಯವನ್ನು ಲೋರುಹಾಮಳಿಗೆ ಹೇಳುವೆನು ‘ನೀನು ನನ್ನ ಪ್ರಜೆ’ಯೆಂದು ಲೋಅಮ್ಮಿಗೆ ಭಜಿಸುವರವರು ‘ನೀವೇ ನಮ್ಮ ದೇವರು’ ಎಂದು ನನಗೆ.

Holydivine