Ecclesiastes - Chapter 7
Holy Bible

1 : ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಲೇಸು ಜನನದ ದಿನಕ್ಕಿಂತ ಮರಣದ ದಿನ ಲೇಸು.
2 : ಔತಣ ನಡೆವ ಮನೆಗೆ ಹೋಗುವುದಕ್ಕಿಂತ ಗೋಳಾಟವಿರುವ ಮನೆಗೆ ಹೋಗುವುದು ಲೇಸು, ಎಲ್ಲಾ ಮಾನವರ ಅಂತಿಮ ಗತಿ ಸಾವೇ. ಜೀವಂತರು ಇದನ್ನು ಮನಸ್ಸಿನಲ್ಲಿಡುವರು.
3 : ನಗೆಗಿಂತ ಅಳುವು ಲೇಸು; ಮುಖದಲ್ಲಿ ದುಃಖ, ಹೃದಯಕ್ಕೆ ಸುಖ.
4 : ಜ್ಞಾನಿಯ ಹೃದಯ ಶೋಕದ ಆಲಯ; ಮೂಢನ ಹೃದಯ ಹಿಗ್ಗಿನ ನಿಲಯ.
5 : ಅಜ್ಞಾನಿಗಳ ಸ್ತುತಿಗೀತೆಗಿಂತ ಸುಜ್ಞಾನಿಗಳ ಗದರಿಕೆ ಲೇಸು.
6 : ಮೂಢರ ನಗೆಚಾಟಿಕೆ, ಮಡಕೆಯಡಿ ಉರಿವ ಮುಳ್ಮ್ಳಕಡ್ಡಿಯ ಚಟಪಟ. ಇದೂ ಸಹ ನಿರರ್ಥಕ.
7 : ದಬ್ಬಾಳಿಕೆ ಬುದ್ಧಿವಂತನನ್ನೂ ಹುಚ್ಚನನ್ನಾಗಿಸುತ್ತದೆ; ಲಂಚಕೋರತನ ಅಂತರಂಗವನ್ನೂ ಕೆಡಿಸುತ್ತದೆ.
8 : ಆದಿಗಿಂತ ಅಂತ್ಯಲೇಸು; ಗರ್ವಕ್ಕಿಂತ ತಾಳ್ಮೆ ಲೇಸು.
9 : ತವಕಬೇಡ ಕೋಪಮಾಡಲಿಕ್ಕೆ; ಕೋಪಕ್ಕೆ ನೆಲೆ ಮೂಢನ ಎದೆ.
10 : ಹಿಂದಿನ ಕಾಲ ಈ ಕಾಲಕ್ಕಿಂತ ಮೇಲಾದುದಕ್ಕೆ ಕಾರಣ ಕೇಳಬೇಡ; ಇದು ಬುದ್ಧಿವಂತನು ಕೇಳುವ ಪ್ರಶ್ನೆಯಲ್ಲ.
11 : ಜ್ಞಾನವು ಆಸ್ತಿಗಿಂತ ಪ್ರಯೋಜನಕರ; ಜೀವಿತರಿಗೆ ಅದು ಎಷ್ಟೋ ಲಾಭಕರ.
12 : ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನದ ವೈಶಿಷ್ಟ್ಯವೆಂದರೆ ಅದು ಜ್ಞಾನಿಗೆ ಜೀವದಾಯಕ.
13 : ದೇವರ ಸೃಷ್ಟಿಕಾರ್ಯವನ್ನು ಗಮನಿಸು; ಅವರು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವವರು ಯಾರು?
14 : ಸುಖದಿನದಲ್ಲಿ ಸಂತೋಷದಿಂದಿರು, ದುಃಖದಿನದಲ್ಲಿ ಆಲೋಚಿಸಿ ನೋಡು; ಮನುಷ್ಯನು ತನ್ನ ಆಯುಸ್ಸು ಕಳೆದ ಮೇಲೆ ಸಂಭವಿಸುವುದೇನೆಂದು ಗ್ರಹಿಸಲಾಗದಂತೆ ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ.
15 : ಸಜ್ಜನನು ಸದ್ಧರ್ಮಿಯಾಗಿ ಜೀವಿಸುತ್ತಾ ಗತಿಸಿಹೋಗುತ್ತಾನೆ; ದುರ್ಜನನಾದರೋ ಅಧರ್ಮದಲ್ಲಿ ಬಹುಕಾಲ ಬದುಕುತ್ತಾನೆ. ಇದನ್ನು ಎಲ್ಲಾ ನನ್ನ ನಿರರ್ಥಕ ಜೀವನದಲ್ಲಿ ಎಷ್ಟೋ ನೋಡಿದ್ದೇನೆ.
16 : ಧರ್ಮಿಷ್ಠನಾಗಿ ಬಾಳುವುದರಲ್ಲಿ ಆಗಲಿ, ಜ್ಞಾನಾರ್ಜನೆಯಲ್ಲಾಗಲಿ ಮಿತಿ ಮೀರಿ ವರ್ತಿಸಬೇಡ; ನಿನ್ನನ್ನು ನೀನೇ ವಿನಾಶಕ್ಕೆ ಗುರಿಮಾಡಿಕೊಳ್ಳಬೇಡ.
17 : ದುರ್ನಡತೆಯಲ್ಲೇ ಆಗಲಿ, ಬುದ್ಧಿ ಹೀನತೆಯಲ್ಲೇ ಆಗಲಿ ಮಿತಿಮೀರಿ ವರ್ತಿಸುವುದು ಸಲ್ಲ. ಕಾಲ ಬರುವ ಮೊದಲೇ ಸಾವಿಗೆ ತುತ್ತಾಗಬೇಡ.
18 : ನೀನು ಒಂದನ್ನು ಹಿಡಿದುಕೊಂಡು ಇನ್ನೊಂದನ್ನೂ ಕೈ ಬಿಡದಿರುವುದು ಒಳಿತು. ದೇವರಲ್ಲಿ ಭಯಭಕ್ತಿಯುಳ್ಳವರು ಇವರೆಡರಿಂದಲೂ ಪಾರು.
19 : ಹತ್ತು ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ದೃಢತೆಗಿಂತ ಜ್ಞಾನಿಗೆ ಜ್ಞಾನದಿಂದ ದೊರಕುವ ದೃಢತೆ ಹೆಚ್ಚು.
20 : ಪಾಪ ಮಾಡದೆ ಧರ್ಮವನ್ನೇ ಆಚರಿಸುವ ಸತ್ಪುರುಷ ಜಗದಲ್ಲಿ ಇಲ್ಲವೇ ಇಲ್ಲ.
21 : ಜನರು ಆಡುವ ಮಾತುಗಳನ್ನೆಲ್ಲ ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ. ನಿನ್ನ ಆಳೂ ನಿನ್ನನ್ನು ಶಪಿಸುವುದು ಕಿವಿಗೆ ಬೀಳಬಹುದು.
22 : ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದೀ; ಇದಕ್ಕೆ ನಿನ್ನ ಮನಸ್ಸೇ ಸಾಕ್ಷಿ.
23 : ಇದನ್ನೆಲ್ಲ ಜ್ಞಾನದಿಂದ ಪರೀಕ್ಷಿಸಿದೆ, ಜ್ಞಾನಿಯಾಗುತ್ತೇನೆಂದು ನಿರ್ಧರಿಸಿಕೊಂಡೆ. ಆದರೆ ಅದು ನನಗೆ ದೂರವಾಯಿತು.
24 : ಮಹೋನ್ನತವೂ ನಿಗೂಢವೂ ಆದ ತತ್ವವನ್ನು ಅರಿತುಕೊಳ್ಳಬಲ್ಲವರಾರು?
25 : ನಾನು ಮತ್ತೆ ಜ್ಞಾನವನ್ನೂ ಮೂಲತತ್ವವನ್ನೂ ಹುಡುಕಿ, ವಿಚಾರಿಸಿ, ಗ್ರಹಿಸಿಕೊಳ್ಳಲು ಆಶಿಸಿದೆ; ಅಧರ್ಮವು ಮೂಢತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳಲು ಮನಸ್ಸುಮಾಡಿದೆ.
26 : ಸಾವಿಗಿಂತ ಹೆಚ್ಚು ವಿಷಕರವಾದ ವಿಷಯವೊಂದು ನನಗೆ ಕಂಡುಬಂದಿತು. ಅದು ಯಾವುದೆಂದರೆ - ಕೆಟ್ಟ ಹೆಂಗಸು. ಅವಳು ತೋರಿಸುವ ಪ್ರೀತಿ ಒಂದು ಬೋನು, ಸಿಕ್ಕಿಸಿಕೊಳ್ಳುವ ಒಂದು ಬಲೆ; ಅವಳ ತೋಳುಗಳು ಸಂಕೋಲೆಗಳು. ದೇವರು ಒಲಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯಾದರೋ ಅವಳ ಕೈಗೆ ಸಿಕ್ಕಿಬೀಳುವನು.
27 : “ಹೌದು, ಒಂದಾದ ಮೇಲೊಂದನ್ನು ಆಲೋಚಿಸಿ ನಾನು ಇದನ್ನು ಕಂಡುಹಿಡಿದೆ” ಎನ್ನುತ್ತಾನೆ ಉಪದೇಶಕ. ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ನನಗೆ ಉತ್ತರ ಸಿಕ್ಕಲಿಲ್ಲ.
28 : ಸಹಸ್ರ ಪುರುಷರಲ್ಲಿ ಯೋಗ್ಯ ಎನ್ನತಕ್ಕ ಒಬ್ಬನನ್ನು ಕಂಡಿದ್ದರೂ ಕಂಡಿರಬಹುದು; ಮೇಲಾದ ಹೆಂಗಸು ಎನ್ನತಕ್ಕವಳು ಸಿಕ್ಕಲಿಲ್ಲ.
29 : ಇದೊಂದು ನಿನಗೆ ತಿಳಿದಿರಲಿ: ದೇವರು ಮನುಷ್ಯರನ್ನು ಸಜ್ಜನರನ್ನಾಗಿ ಸೃಷ್ಟಿಸಿದರು; ಮನುಷ್ಯರಾದರೂ ಅನೇಕ ಸಮಸ್ಯೆಗಳನ್ನು ಕಲ್ಪಿಸಿಕೊಂಡಿದ್ದಾರೆ. ನನಗೆ ಕಂಡುಬಂದುದು ಇದುವೇ.

Holydivine