Ecclesiastes - Chapter 10
Holy Bible

1 : ಸತ್ತ ನೊಣಗಳಿಂದ ಗಂದಿಗನ ತೈಲ ಕೂಡ ನಾರುತ್ತದೆ. ಅಂತೆಯೇ ಹುಚ್ಚುತನ ಕೊಂಚವಾದರೂ ಜ್ಞಾನಮಾನಗಳನ್ನು ಕೆಡಿಸಿ ಬಿಡುತ್ತದೆ.
2 : ಜ್ಞಾನಿಯ ಬುದ್ಧಿ ಬಲಗೈಯಾದರೆ ಅಜ್ಞಾನಿಯ ಬುದ್ಧಿ ಎಡಗೈ.
3 : ಬುದ್ಧಿತಪ್ಪಿ ತಿರುಗಾಡುವ ಹುಚ್ಚನು ದಾರಿಯಲ್ಲೆಲ್ಲಾ ತನ್ನ ಹುಚ್ಚುತನವನ್ನು ಪ್ರಕಟ ಮಾಡುತ್ತಾನೆ.
4 : ರಾಜನು ಸಿಟ್ಟುಗೊಂಡನೆಂದು ಉದ್ಯೋಗಕ್ಕೇ ರಾಜೀನಾಮೆ ಕೊಟ್ಟುಬಿಡಬೇಡ; ತಾಳ್ಮೆಯಿಂದ ಘನದೋಷಗಳನ್ನೂ ಅಳಿಸಬಹುದು.
5 : ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ಕಂಡೆ. ಅದು ಅಧಿಪತಿಗಳ ತಪ್ಪಿನಿಂದಾದುದು.
6 ಅದು ಯಾವುದೆಂದರೆ, ಮೂಢರನ್ನು ಮಹಾಪದವಿಗೆ ಏರಿಸುತ್ತಾರೆ; ಘನವಂತರನ್ನು ಹೀನಸ್ಥಿತಿಯಲ್ಲಿ ಇರಿಸುತ್ತಾರೆ.
7 : ಗುಲಾಮನು ಕುದುರೆ ಸವಾರಿ ಮಾಡುವುದನ್ನೂ ಯಜಮಾನನು ಮನೆಯಾಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.
8 : ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ಗೋಡೆ ಒಡೆಯುವವನನ್ನು ಹಾವು ಕಡಿಯುವುದು.
9 : ಬಂಡೆ ಸೀಳುವವನು ಬಂಡೆಯಿಂದಲೇ ಗಾಯಗೊಳ್ಳುವನು; ಮರಕಡಿಯುವವನು ಅದರಿಂದಲೇ ಅಪಾಯಕ್ಕೆ ಗುರಿಯಾಗುವನು.
10 : ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ ಹೆಚ್ಚು ಬಲಪ್ರಯೋಗ ಮಾಡಬೇಕಾಗುವುದು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ.
11 : ಹಾವಾಡಿಗ ಹಾವಾಡಿಸುವುದಕ್ಕೆ ಮುಂಚೆಯೇ ಹಾವಿನಿಂದ ಕಡಿಸಿಕೊಂಡರೆ ಏನು ಪ್ರಯೋಜನ?
12 : ಜ್ಞಾನಿಯ ಮಾತು ಹಿತಕರ; ಅಜ್ಞಾನಿಯ ಮಾತು ಅವನಿಗೆ ವಿನಾಶಕರ.
13 : ಅದು ಬುದ್ಧಿಹೀನತೆಯಿಂದ ಆರಂಭವಾಗುತ್ತದೆ. ಮೋಸ, ಮರುಳುತನದಲ್ಲಿ ಮುಕ್ತಾಯಗೊಳ್ಳುತ್ತದೆ.
14 : ಅಜ್ಞಾನಿ ಮಾತಿನ ಮಲ್ಲ. ಭವಿಷ್ಯತನ್ನು ಮಾನವ ತಿಳಿಯನು; ತಾನು ಕಾಲವಾದ ಮೇಲೆ ಏನಾಗುವುದೆಂದು ಅವನು ಯಾರಿಂದ ತಿಳಿಯಬಲ್ಲನು?
15 : ಪಟ್ಟಣಕ್ಕೆ ದಾರಿತಿಳಿಯದವನಿಗೆ ಮೂಢರು ತಿಳಿಸಲು ಪಡುವ ಪ್ರಯಾಸ ಕೇವಲ ಆಯಾಸ.
16 : ಓ ನಾಡೇ, ನಿನ್ನ ಒಡೆಯ ಬಾಲಕನಾಗಿದ್ದು ನಿನ್ನ ನಾಯಕರೆಲ್ಲರು ಹೊತ್ತಾರೆಯೇ ಔತಣಕ್ಕೆ ಕುಳಿತುಕೊಳ್ಳುವಂಥವರಾಗಿದ್ದಾರೆ, ಅದು ನಿನ್ನ ದೌರ್ಭಾಗ್ಯವೇ ಸರಿ.
17 : ನಾಡೇ, ನಿನ್ನ ಒಡೆಯ ಕುಲೀನನಾಗಿದ್ದು, ನಿನ್ನ ನಾಯಕರೆಲ್ಲ ಸಕಾಲದಲ್ಲಿ ಊಟಮಾಡಿ, ಕುಡುಕರಾಗುವುದರ ಬದಲು ಶಕ್ತಿಯುತರಾದರೆ, ಅದು ನಿನ್ನ ಸೌಭಾಗ್ಯವೇ ಸರಿ.
18 : ಮೈಗಳ್ಳನ ಮನೆ ಅಂಕುಡೊಂಕಾಗಿರುತ್ತದೆ; ಸೋಮಾರಿಯ ಸೂರು ಸೋರುತ್ತಿರುತ್ತದೆ.
19 : ವಿನೋದಕ್ಕಾಗಿ ಔತಣ, ಆನಂದಕ್ಕಾಗಿ ಮದ್ಯಪಾನ; ಎಲ್ಲವನ್ನು ಒದಗಿಸಿಕೊಡುವುದಕ್ಕಾಗಿ ಹಣ.
20 : ಅರಸನನ್ನು ಮನಸ್ಸಿನಲ್ಲೂ ನಿಂದಿಸಬೇಡ; ಧನಿಕನನ್ನು ಮಲಗುವ ಕೋಣೆಯಲ್ಲೂ ದೂಷಿಸಬೇಡ; ಆಕಾಶದ ಹಕ್ಕಿ ಆ ಸುದ್ಧಿಯನ್ನು ಮುಟ್ಟಿಸೀತು; ಹಾರುವ ಪಕ್ಷಿ ಆ ಸಮಾಚಾರವನ್ನು ತಿಳಿಸೀತು!

Holydivine