Ecclesiastes - Chapter 12
Holy Bible

1 : ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು.
2 : ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು;
3 : ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು.
4 : ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿಯದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿ ಹೋಗುವುದು;
5 : ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂ ಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು,
6 : ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿ ಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು.
7 : ಮಣ್ಣಿನ ದೇಹ ತನ್ನ ಭೂಮಿಗೆ ಸೇರಿ ಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು, (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ).
8 : “ವ್ಯರ್ಥವೇ ವ್ಯರ್ಥ ! ಸಮಸ್ತವೂ ವ್ಯರ್ಥ! !” ಎನ್ನುತ್ತಾನೆ ಉಪದೇಶಕ.
9 : ಉಪದೇಶಕನು ಜ್ಞಾನಿಯಾಗಿದ್ದ; ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದ. ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ, ಕ್ರಮಪಡಿಸಿದ.
10 : ಹಿತಕರವಾದ ವಚನಗಳನ್ನು ಅವನು ಹುಡುಕಿ ಆರಿಸಿದ; ಅವನಿಂದ ರಚಿತವಾದವು ಸರಿಯಾದುವು, ಸತ್ಯವಾದುವು.
11 : ಜ್ಞಾನಿಗಳ ನುಡಿಗಳು ಮೊನೆಗೋಲುಗಳು, ಅವರು ಸಂಗ್ರಹಿಸಿದ ವಚನಗಳು ಬಿಗಿಯಾಗಿ ಜಡಿದ ಮೊಳೆಗಳು. ಅವುಗಳ ಮೂಲಕರ್ತನು ಎಲ್ಲರ ಏಕೈಕ ಮೇಷಪಾಲ.
12 : ಕುಮಾರಾ, ಇವುಗಳಲ್ಲದೆ ನೀನು ಎಚ್ಚರಿಕೆಯಿಂದಿರಬೇಕಾದುವು ಇನ್ನೂ ಇವೆ. ಗ್ರಂಥಗಳ ರಚನೆಗೆ ಮಿತಿಯಿಲ್ಲ. ಅತಿಯಾದ ವ್ಯಾಸಂಗದಿಂದ ದೇಹಕ್ಕೆ ಆಯಾಸ.
13 : ವಿಷಯ ಮುಗಿಯಿತು; ಎಲ್ಲವನ್ನೂ ಕೇಳಿ ಆಯಿತು. ದೇವರಿಗೆ ಭಯಪಟ್ಟು ಅವರ ಆಜ್ಞೆಗಳನ್ನು ಕೈಗೊಳ್ಳು. ಇದೇ ಪ್ರತಿಯೊಬ್ಬ ಮಾನವನ ಕರ್ತವ್ಯ.
14 : ದೇವರು ಎಲ್ಲ ಕಾರ್ಯಗಳನ್ನು, ರಹಸ್ಯವಾದುವುಗಳನ್ನು ಕೂಡ, ಅವು ಒಳ್ಳೆಯದಾಗಿರಲಿ, ಕೆಟ್ಟದಾಗಿರಲಿ, ನ್ಯಾಯವಿಚಾರಣೆಗೆ ಗುರಿಮಾಡುವರು.

Holydivine