Ecclesiastes - Chapter 3
Holy Bible

1 : ಪ್ರತಿಯೊಂದು ಕಾರ್ಯಕ್ಕೂ ನಿಗದಿಯಾದ ಕಾಲವಿದೆ. ಜಗತ್ತಿನಲ್ಲಿ ನಡೆಯುವ ಒಂದೊಂದು ಕೆಲಸಕ್ಕೂ ಸೂಕ್ತ ಸಮಯವಿದೆ:
2 : ಹುಟ್ಟುವ ಸಮಯ, ಸಾಯುವ ಸಮಯ ನೆಡುವ ಸಮಯ, ನೆಟ್ಟದ್ದನ್ನು ಕೀಳುವ
3 : ಕೊಲ್ಲುವ ಸಮಯ, ಗುಣಪಡಿಸುವ ಸಮಯ ಕೆಡವಿಬಿಡುವ ಸಮಯ, ಕಟ್ಟಿ ಎಬ್ಬಿಸುವ ಸಮಯ.
4 : ಅಳುವ ಸಮಯ, ನಗುವ ಸಮಯ ಗೋಳಾಡುವ ಸಮಯ, ಕುಣಿದಾಡುವ ಸಮಯ.
5 : ಕಲ್ಲುಗಳನ್ನು ಬಿಸಾಡುವ ಸಮಯ ಕಲ್ಲುಗಳನ್ನು ಕೂಡಿಸಿಡುವ ಸಮಯ ಆಲಿಂಗನ ಮಾಡುವ ಸಮಯ, ಆಲಿಂಗನ ಮಾಡದ ಸಮಯ.
6 : ಗಳಿಸುವ ಸಮಯ, ಕಳೆದುಕೊಳ್ಳುವ ಸಮಯ ಕಾಪಾಡುವ ಸಮಯ, ಬಿಸಾಡುವ ಸಮಯ.
7 : ಹರಿಯುವ ಸಮಯ, ಹೊಲಿಯುವ ಸಮಯ ಸುಮ್ಮನಿರುವ ಸಮಯ, ಮಾತಾಡುವ ಸಮಯ.
8 : ಪ್ರೀತಿಸುವ ಸಮಯ, ದ್ವೇಷಿಸುವ ಸಮಯ ಯುದ್ಧಮಾಡುವ ಸಮಯ, ಸಮಾಧಾನ ಮಾಡುವ ಸಮಯ.
9 : ಕಷ್ಟಪಟ್ಟು ಮಾಡುವ ದುಡಿಮೆಯಿಂದ ಒಬ್ಬನಿಗೆ ಸಿಗುವ ಲಾಭವಾದರೂ ಏನು?
10 : ನರಮಾನವರ ಕರ್ತವ್ಯವೆಂದು ದೇವರು ವಿಧಿಸಿರುವ ದುಡಿಮೆಯನ್ನು ನಾನು ಗಮನಿಸಿದ್ದೇನೆ.
11 : ಒಂದೊಂದು ವಸ್ತುವನ್ನೂ ಸಮಯಕ್ಕೆ ತಕ್ಕಂತೆ ಸುಂದರವಾಗಿ ನಿರ್ಮಿಸಿದ್ದಾರೆ ದೇವರು. ಇದಲ್ಲದೆ, ಮನುಷ್ಯನ ಹೃದಯದಲ್ಲಿ ಅಮರತ್ವದ ಪ್ರತಿಯನ್ನು ಮೂಡಿಸಿದ್ದಾರೆ.
12 : ಮನುಷ್ಯರು ತಮ್ಮ ಇಡೀ ಜೀವಮಾನದಲ್ಲಿ ಸುಖಸಂತೋಷವನ್ನು ಅನುಭವಿಸುವುದಕ್ಕಿಂತ ಮೇಲಾದುದು ಅವರಿಗೆ ಯಾವುದೂ ಇಲ್ಲ ಎಂಬುದನ್ನು ನಾನು ಗ್ರಹಿಸಿದ್ದೇನೆ.
13 : ಅಲ್ಲದೆ, ಪ್ರತಿಯೊಬ್ಬನು ಅನ್ನಪಾನಗಳನ್ನು ಸೇವಿಸಿ, ತನ್ನ ನಾನಾತರದ ದುಡಿಮೆಗಳಲ್ಲೂ ಸೇವಿಸಿ, ತನ್ನ ನಾನಾತರದ ದುಡಿಮೆಗಳಲ್ಲೂ ಸುಖವನ್ನು ಅನುಭವಿಸುವುದು ದೇವರ ಅನುಗ್ರಹವೇ ಎಂದು ನನಗೆ ತಿಳಿದಿದೆ.
14 : ದೇವರ ಕಾರ್ಯವೆಲ್ಲವು ಶಾಶ್ವತವಾದುದು ಎಂದು ಬಲ್ಲೆ. ಅದಕ್ಕೆ ಯಾವುದನ್ನೂ ಸೇರಿಸಲಾಗದು. ಅದರಿಂದ ಯಾವುದನ್ನೂ ಕಳೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮಾನವರು ಭಯಭಕ್ತಿಯಿಂದ ಇರಬೇಕೆಂಬ ಕಾರಣದಿಂದಲೇ ದೇವರು ಹೀಗೆ ಮಾಡಿದ್ದಾರೆ.
15 : ಈಗಿನದು ಹಿಂದೆ ಇತ್ತು; ಮುಂದಿನದು ಈಗಲೂ ಇದೆ; ಗತಿಸಿ ಹೋದದ್ದನ್ನು ದೇವರು ಮರಳಿ ಬರಮಾಡುವರು.
16 : ಇದಲ್ಲದೆ, ನಾನು ಲೋಕವನ್ನು ದೃಷ್ಟಿಸಿ ನೋಡಿ ನ್ಯಾಯಸ್ಥಾನದಲ್ಲೂ ಧರ್ಮಸ್ಥಾನದಲ್ಲೂ ಅಧರ್ಮ ಇರುವುದನ್ನು ಗಮನಿಸಿದೆ.
17 : ಆಗ ನಾನು ಮನಸ್ಸಿನಲ್ಲೇ, “ದೇವರು ಸಜ್ಜನರಿಗೂ ದುರ್ಜನರಿಗೂ ನ್ಯಾಯ ತೀರಿಸುವರು. ಅವರ ನ್ಯಾಯಕ್ರಮದಲ್ಲಿ ಎಲ್ಲ ಕೆಲಸ ಕಾರ್ಯಗಳಿಗೂ ತಕ್ಕ ಸಮಯ ಉಂಟಲ್ಲವೆ?” ಎಂದುಕೊಂಡೆ.
18 : ಮತ್ತೆ ಮನಸ್ಸಿನಲ್ಲೇ ಮಾನವರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿದೆ; ಮನುಷ್ಯರು ಪಶುಗಳಿಗೆ ಸಮಾನರೆಂದು ತಾವೇ ಗ್ರಹಿಸಿಕೊಳ್ಳುವುದಕ್ಕೆ ಆಸ್ಪದವಾಗುವಂತೆ ದೇವರು ಮನುಷ್ಯರನ್ನು ಪರೀಕ್ಷಿಸುತ್ತಾರೆ.
19 : ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ; ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುತ್ತದೆ. ಎಲ್ಲಕ್ಕೂ ಇರುವ ಪ್ರಾಣ ಒಂದೇ. ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ. ಎಲ್ಲವೂ ವ್ಯರ್ಥವೇ.
20 : ಎಲ್ಲ ಪ್ರಾಣಿಗಳೂ ಒಂದೇ ಸ್ಥಳಕ್ಕೆ ಹೋಗುತ್ತವೆ. ಎಲ್ಲವೂ ಮಣ್ಣಿನಿಂದ ಆದವು, ಎಲ್ಲವೂ ಮರಳಿ ಮಣ್ಣಿಗೆ ಸೇರುತ್ತವೆ.
21 : ಮನುಷ್ಯನ ಆತ್ಮ ಮೇಲಕ್ಕೆ ಏರುತ್ತದೋ? ಪಶುವಿನ ಆತ್ಮ ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ? ಯಾರಿಗೆ ಗೊತ್ತು?”
22 : ಈ ಪ್ರಕಾರ ನಾನು ಆಲೋಚಿಸಿ ಮನುಷ್ಯನು ತನ್ನ ಕೆಲಸಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಅವನಿಗೆ ಮೇಲಾದುದು ಯಾವುದೂ ಇಲ್ಲ. ಇದೇ ಅವನ ಪಾಲಿಗೆ ಬಂದುದು ಎಂದು ಗ್ರಹಿಸಿಕೊಂಡೆ. ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?

Holydivine