Ecclesiastes - Chapter 6
Holy Bible

1 : ಧರೆಯಲ್ಲಿ ಮಾನವರಿಗೆ ಬಂದೊದಗುವ ದೊಡ್ಡ ದುರವಸ್ಥೆ ಒಂದನ್ನು ಕಂಡೆ.
2 : ಅದೇನು ಎಂದರೆ, ದೇವರು ಒಬ್ಬನಿಗೆ ಧನಸಂಪತ್ತನ್ನೂ ಘನತೆಗೌರವವನ್ನೂ ಅನುಗ್ರಹಿಸುತ್ತಾರೆ. ಅವನ ಇಷ್ಟಾರ್ಥಕ್ಕೆ ಯಾವ ಕೊರತೆಯೂ ಇಲ್ಲದಂತೆ ಮಾಡುತ್ತಾರೆ. ಆದರೆ ಅವನ್ನು ಅನುಭವಿಸುವುದಕ್ಕೆ ಶಕ್ತಿಯನ್ನು ದೇವರು ಅವನಿಗೆ ಕೊಡುವುದಿಲ್ಲ. ಅವುಗಳನ್ನು ಮತ್ತೊಬ್ಬನು ಅನುಭವಿಸುತ್ತಾನೆ. ಇದೂ ಸಹ ನಿರರ್ಥಕ; ದೊಡ್ಡ ಪಿಡುಗು.
3 : ಒಬ್ಬನು ನೂರಾರು ಮಕ್ಕಳನ್ನು ಪಡೆಯಬಹುದು, ಹಣ್ಣು ಹಣ್ಣು ಮುದುಕನಾಗುವ ತನಕ ಬದುಕಬಹುದು. ಆದರೆ ಜೀವನದಲ್ಲಿ ಸುಖಾನುಭವ ಇಲ್ಲದೆ, ಉತ್ತರಕ್ರಿಯೆಯೂ ಇಲ್ಲದೆ ಹೋದರೆ ಏನು ಪ್ರಯೋಜನ? ಅವನಿಗಿಂತ ಗರ್ಭಸ್ರಾವದ ಪಿಂಡವೇ ಮೇಲು ಎಂದುಕೊಂಡೆ.
4 : ಅದು ವ್ಯರ್ಥವಾಗಿ ಬರುತ್ತದೆ. ಕತ್ತಲಲ್ಲೇ ಮರೆಯಾಗುತ್ತದೆ. ಅದರ ಹೆಸರು ಕಾರಿರುಳು.
5 : ಅದು ಸೂರ್ಯನನ್ನು ಕಂಡಿಲ್ಲ. ತಿಳುವಳಿಕೆಯೆಂಬುದು ಅದಕ್ಕೆ ಇಲ್ಲವೇ ಇಲ್ಲ. ಆದರೂ ಅದರ ನೆಮ್ಮದಿ ಸುಖಾನುಭವ ಇಲ್ಲದವನ ಪರಿಸ್ಥಿತಿಗಿಂತ ಮಿಗಿಲಾದುದು.
6 : ಸಾವಿರ ವರ್ಷದ ಮೇಲೆ ಸಾವಿರ ವರ್ಷ ಬದುಕಿಯೂ ಸುಖವನ್ನು ಅನುಭವಿಸದಿದ್ದರೆ ಏನು ಪ್ರಯೋಜನ? ಇವೆರಡೂ ಒಂದೇ ಸ್ಥಳಕ್ಕೆ ಹೋಗುತ್ತವೆ, ಅಲ್ಲವೇ?
7 : ಮಾನವನು ಪಡುವ ಪ್ರಯಾಸವೆಲ್ಲ ಅವನ ಹೊಟ್ಟೆಪಾಡಿಗಾಗಿಯೇ. ಆದರೂ ಅವನಿಗೆ ತೃಪ್ತಿಯಿಲ್ಲ.
8 : ಜ್ಞಾನಿಯಾಗಲಿ, ಜನರ ಮುಂದೆ ಸಜ್ಜನನಾಗಿ ನಡೆಯಬಲ್ಲ ಬಡವನಾಗಲಿ, ಮೂಢನಿಗಿಂತ ಹೇಗೆ ಶ್ರೇಷ್ಠ?
9 : ಬಗೆಬಗೆಯಾಗಿ ಬಯಸುವುದಕ್ಕಿಂತ ಕಣ್ಣೆದುರಿಗೆ ಇರುವುದನ್ನು ಅನುಭವಿಸುವುದೇ ಲೇಸು. ಆದರೆ ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ನಿರರ್ಥಕ.
10 : ಈಗ ಇರುವ ಪ್ರತಿಯೊಂದು ಹಿಂದಿನಿಂದಲೇ ಹೆಸರುವಾಸಿಯಾಗಿದೆ. ಮನುಷ್ಯನು ಯಾರೆಂದು ಗೊತ್ತಿದೆ. ತನಗಿಂತ ಬಲಿಷ್ಠನ ಸಂಗಡ ವಾದಿಸಲು ಅವನಿಂದಾಗದು.
11 : ಮಾತು ಹೆಚ್ಚಿದಷ್ಟೂ ಪರಿಣಾಮ ಕಡಿಮೆ. ಅದರಿಂದ ಮನುಷ್ಯನಿಗಾಗುವ ಪ್ರಯೋಜನವಾದರೂ ಏನು?
12 : ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮಾನವನ ಜೀವಮಾನ ದಿನಗಳಲ್ಲೆಲ್ಲಾ ಅನಿಗೆ ಯಾವುದು ಹಿತವೆಂದು ಯಾರಿಗೆ ಗೊತ್ತು? ತಾನು ಕಾಲವಾದ ಮೇಲೆ ಇಹಲೋಕದಲ್ಲಿ ಏನಾಗುವುದೆಂದು ಅವನು ಯಾರಿಂದ ತಿಳಿದಕೊಳ್ಳಲು ಸಾಧ್ಯ?

Holydivine