Tobit - Chapter 7
Holy Bible

1 : ಎಕ್ಬತಾನವನ್ನು ಪ್ರವೇಶಿಸುತ್ತಿದ್ದಂತೆಯೇ ತೊಬಿಯಾಸನು, “ಗೆಳೆಯಾ, ಅಜರ್ಯನೇ, ನನ್ನ ಬಂಧು ರಾಗುಯೇಲನ ಮನೆಗೆ ನನ್ನನ್ನು ಕೂಡಲೆ ಕರೆದುಕೊಂಡು ಹೋಗು,” ಎಂದನು. ಅಂತೆಯೇ ರಫಯೇಲನು ಅವನನ್ನು ರಾಗುಯೇಲನ ಮನೆಗೆ ಕರೆದೊಯ್ದನು. ರಾಗುಯೇಲನು ತನ್ನ ಮನೆಯ ಅಂಗಳದ ಬಾಗಿಲ ಬಳಿ ಕುಳಿತಿರುವುದನ್ನು ಕಂಡನು. ಅವನನ್ನು ಇವರಿಬ್ಬರೂ ವಂದಿಸಿದರು. ಅದಕ್ಕೆ ಅವನು, “ಗೆಳೆಯರೇ, ಬನ್ನಿ, ನಮಸ್ಕಾರ, ಆರೋಗ್ಯವೇ,” ಎಂದು ಸ್ವಾಗತಿಸಿ ಮನೆಯೊಳಕ್ಕೆ ಕರೆದುಕೊಂಡು ಹೋದನು.
2 : ರಾಗುಯೇಲನು ತನ್ನ ಹೆಂಡತಿ ಎಡ್ನಳಿಗೆ, “ನೋಡು, ಈ ಯುವಕ ನನ್ನ ನೆಂಟ ತೊಬೀತನಂತೆ ಕಾಣುತ್ತಾನಲ್ಲವೆ?” ಎಂದನು.
3 : ಅದಕ್ಕೆ ಎಡ್ನ ಅತಿಥಿಗಳಿಗೆ, “ನೀವು ಎಲ್ಲಿಂದ ಬಂದಿದ್ದೀರಿ?” ಎಂದು ಕೇಳಿದಳು. ಅದಕ್ಕೆ ಅವರು, “ನಾವು ನಫ್ತಾಲಿ ಕುಲದವರು. ಈಗ ನಿನೆವೆಯಲ್ಲಿ ಗಡೀಪಾರಾಗಿದ್ದೇವೆ,” ಎಂದರು.
4 : ಅದಕ್ಕೆ ಅವಳು, “ನನ್ನ ನೆಂಟನಾದ ತೊಬೀತನ ಪರಿಚಯವಿದೆಯೆ?” ಎನ್ನಲು ಅವರು, “ಹೌದು, ಪರಿಚಯವುಂಟು,” ಎಂದರು. ಆಗ ಎಡ್ನ, “ಅವರು ಆರೋಗ್ಯವೇ?” ಎನ್ನಲು,
5 : ಅವರು, “ಹೌದು, ಇದ್ದಾರೆ, ಆರೋಗ್ಯದಿಂದ ಇದ್ದಾರೆ,” ಎಂದು ಉತ್ತರಿಸಿದರು. ಪುನಃ ತೊಬಿಯಾಸನು, “ಅವರು ನನ್ನ ತಂದೆ” ಎಂದು ಕೂಡಿಸಿದನು.
6 : ಇದನ್ನು ಕೇಳಿದ್ದೇ, ರಾಗುಯೇಲನು ಜಿಗಿದು ಅವನನ್ನು ಅಪ್ಪಿಕೊಂಡು ಮುತ್ತಿಟ್ಟು ಆನಂದಬಾಷ್ಪವನ್ನು ಸುರಿಸಿದನು.
7 : ಅನಂತರ ಮಾತನ್ನು ಮುಂದುವರಿಸುತ್ತಾ, “ಮಗನೇ, ದೇವರು ನಿನ್ನನ್ನು ಆಶೀರ್ವದಿಸಲಿ. ನಿನ್ನ ತಂದೆ ಗಣ್ಯವ್ಯಕ್ತಿ, ಪುಣ್ಯವಂತ! ಇಂಥಾ ನೀತಿವಂತ, ಪರೋಪಕಾರಿಯಾದಂಥ ವ್ಯಕ್ತಿ ಕುರುಡನಾದುದು ಎಂಥಾ ದುರ್ಭಾಗ್ಯ!” ಎಂದು ಹೇಳಿ ತೊಬಿಯಾಸನನ್ನು ತಬ್ಬಿಕೊಂಡು ಕಣ್ಣೀರಿಟ್ಟನು.
8 : ಅವನ ಹೆಂಡತಿ ಎಡ್ನಳೂ, ಮಗಳಾದ ಸಾರಳೂ ಸಂತಾಪ ಸೂಚಿಸಿ ಅತ್ತರು. ಬಳಿಕ ರಾಗುಯೇಲನು ತನ್ನ ಮಂದೆಯ ಟಗರೊಂದನ್ನು ಕೊಯ್ದು ಸ್ವಾಗತ ಔತಣವನ್ನು ಏರ್ಪಡಿಸಿದನು. ಅತಿಥಿಗಳು ಸ್ನಾನಮಾಡಿಕೊಂಡು ಊಟಕ್ಕೆ ಕುಳಿತರು. ಆಗ ತೊಬಿಯಾಸನು ರಫಯೇಲನಿಗೆ, “ಗೆಳೆಯಾ, ಅಜರ್ಯನೇ, ನನ್ನ ಸಂಬಂಧಿಕಳಾದ ಸಾರಳನ್ನು ನನಗೆ ಮದುವೆ ಮಾಡಿಕೊಡಬೇಕೆಂದು ರಾಗುಯೇಲನನ್ನು ಕೇಳುವುದಿಲ್ಲವೆ?” ಎಂದನು.
9 : ಇದನ್ನು ಕೇಳಿಸಿಕೊಂಡು ರಾಗುಯೇಲನು ಯುವಕನಿಗೆ,
10 : “ಮೊತ್ತಮೊದಲು ಈ ರಾತ್ರಿ ಊಟಮಾಡಿ ವಿಶ್ರಮಿಸು. ನನ್ನ ಮಗಳು ಸಾರಳ ಕೈ ಹಿಡಿಯಲು ನಿನಗಲ್ಲದೆ ಬೇರಾರಿಗೂ ಹಕ್ಕಿಲ್ಲ. ನೀನು ನಮ್ಮ ಹತ್ತಿರದ ನೆಂಟನಾದುದರಿಂದ ಆಕೆಯನ್ನು ಬೇರೆ ಯಾರಿಗೂ ಕೊಡುವ ಸ್ವಾತಂತ್ರ್ಯ ನನಗಿಲ್ಲ.
11 : ಆದರೂ ಮಗೂ, ನಾನು ನಿನಗೆ ನಿಜಸ್ಥಿತಿಯನ್ನು ಹೇಳಬೇಕು. ಬಿಚ್ಚುಮನಸ್ಸಿನಿಂದ ಹೇಳುತ್ತೇನೆ ಕೇಳು. ನಾನು ಈಗಾಗಲೇ ಆಕೆಯನ್ನು ನನ್ನ ಬಳಗದವರಲ್ಲಿ ಏಳು ವ್ಯಕ್ತಿಗಳಿಗೆ ಮದುವೆಮಾಡಿಕೊಟ್ಟೆ. ಆದರೆ ಅವರೆಲ್ಲರು ಅವಳ ಕೊಠಡಿಗೆ ಹೋದ ಮೊದಲ ರಾತ್ರಿಯೇ ಸತ್ತುಹೋದರು. ಆದರೆ ಮಗೂ, ಸದ್ಯಕ್ಕೆ ಊಟ ಮುಗಿಸು. ಸರ್ವೇಶ್ವರ ನಿನಗೆ ಒಳಿತನ್ನೇ ಮಾಡುತ್ತಾರೆ,” ಎಂದನು. ಅದಕ್ಕೆ ತೊಬಿಯಾಸನು, “ನೀವು ನಿಮ್ಮ ನಿರ್ಧಾರವನ್ನು ತಿಳಿಸುವ ತನಕ ನಾನು ಅನ್ನ ಪಾನವೇನನ್ನೂ ಮುಟ್ಟುವುದಿಲ್ಲ,” ಎಂದನು.
12 : ಆದುದರಿಂದ ರಾಗುಯೇಲನು, “ಆಗಲಿ, ಮೋಶೆಯ ಗ್ರಂಥದಲ್ಲಿರುವ ನಿಯಮದ ಪ್ರಕಾರ ಆಕೆ ನಿನಗೇ ಮೀಸಲು. ಇದು ಪರಲೋಕದಲ್ಲೇ ನಿಶ್ಚಯವಾಗಿದೆ. ಇವಳು ನಿನ್ನ ಸಂಬಂಧಿಕಳು. ಇಂದಿನಿಂದ ಈಕೆ ನಿನ್ನವಳೇ, ನೀನು ಆಕೆಗೆ ಸೇರಿದವನೇ. ಇಂದಿಗೂ ಎಂದೆಂದಿಗೂ ಆಕೆ ನಿನ್ನ ಪತ್ನಿ. ಮಗೂ, ಪರಲೋಕದ ಸರ್ವೇಶ್ವರ ಈ ರಾತ್ರಿ ನಿಮ್ಮಿಬ್ಬರನ್ನೂ ಕಾಪಾಡಿ, ಮುನ್ನಡೆಸಲಿ; ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!” ಎಂದನು.
13 : ಬಳಿಕ ರಾಗುಯೇಲನು ತನ್ನ ಮಗಳನ್ನು ಕರೆಸಿದನು. ಅವಳು ಬಂದಾಗ, ಅವಳ ಕೈಹಿಡಿದು ತೊಬಿಯಾಸನಿಗೆ ಕೊಟ್ಟನು. “ಮೋಶೆಯ ಗ್ರಂಥದ ವಿಧಿನಿಯಮದ ಪ್ರಕಾರ ಈಕೆಯನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸು. ನಿನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗು. ಪರಲೋಕದ ದೇವರು ಸುಖಕರ ಪ್ರಯಾಣವನ್ನೂ ಶಾಂತಿಯನ್ನೂ ಅನುಗ್ರಹಿಸಲಿ!” ಎಂದು ಹಾರೈಸಿದನು.
14 : ತದನಂತರ ಸಾರಳ ತಾಯಿಯನ್ನು ಕರೆದು, ಸುರುಳಿಯನ್ನು ತರುವಂತೆ ಆಜ್ಞಾಪಿಸಿದನು. ಅದರಲ್ಲಿ ಮೋಶೆಯ ಧರ್ಮಶಾಸ್ತ್ರದ ನಿಯಮಕ್ಕೆ ಅನುಸಾರ ಸಾರಳನ್ನು ತೊಬಿಯಾಸನಿಗೆ ಮದುವೆ ಮಾಡಿಕೊಡಲಾಗಿದೆ ಎಂಬ ವಿವಾಹ ಒಪ್ಪಂದವನ್ನು ಬರೆದುಕೊಟ್ಟನು.
15 : ಇದಾದ ನಂತರ ಅವರು ಅನ್ನಪಾನಗಳನ್ನು ಸ್ವೀಕರಿಸಲಾರಂಭಿಸಿದರು.
16 : ರಾಗುಯೇಲನು ಪತ್ನಿ ಎಡ್ನಳನ್ನು ಕರೆದು, “ಪ್ರಿಯಳೇ, ಮತ್ತೊಂದು ಕೊಠಡಿಯನ್ನು ಸಿದ್ಧಗೊಳಿಸಿ ಸಾರಳನ್ನು ಅಲ್ಲಿಗೆ ಕರೆದುಕೊಂಡು ಹೋಗು,” ಎಂದನು.
17 : ಅಂತೆಯೇ ಎಡ್ನಳು ಹಾಸಿಗೆಯನ್ನು ಸಿದ್ಧಮಾಡಿ ಸಾರಳನ್ನು ಅಲ್ಲಿಗೆ ಕರೆದೊಯ್ದಳು. ತನ್ನ ಮಗಳಿಗಾಗಿ ಕಣ್ಣೀರು ಇಟ್ಟಳು. ಅನಂತರ ಕಣ್ಣುಗಳನ್ನು ಒರೆಸಿಕೊಂಡು ಹೀಗೆಂದಳು:
18 : “ಮಗಳೇ, ಎದೆಗುಂದಬೇಡ, ಪರಲೋಕದ ಸರ್ವೇಶ್ವರ ನಿನ್ನ ದುಃಖವನ್ನು ಸಂತೋಷವನ್ನಾಗಿ ಮಾರ್ಪಡಿಸಲಿ. ಮಗಳೇ, ಧೈರ್ಯದಿಂದಿರು!” ಹೀಗೆಂದ ಮೇಲೆ ಕೊಠಡಿಯಿಂದ ಹೊರಟುಹೋದಳು.

Holydivine