Tobit - Chapter 11
Holy Bible

1 : ಅವರು ಪ್ರಯಾಣ ಮಾಡುತ್ತಾ ನಿನೆವೆ ನಗರಕ್ಕೆ ಎದುರಾಗಿದ್ದ ಕಸೆರೀನ್ ಪಟ್ಟಣಕ್ಕೆ ಬಂದರು.
2 : ಅಲ್ಲಿ ರಫಯೇಲನು, ತೊಬಿಯಾಸನಿಗೆ, “ಗೆಳೆಯಾ, ನಾವು ನಿನ್ನ ತಂದೆಯನ್ನು ಯಾವ ಸ್ಥಿತಿಯಲ್ಲಿ ಬಿಟ್ಟು ಬಂದೆವೆಂದು ನಿನಗೆ ಗೊತ್ತಿದೆಯಲ್ಲವೆ?
3 : ಆದ್ದರಿಂದ ಇವರೆಲ್ಲರಿಗೂ ಮುಂಚಿತವಾಗಿ ನಾವಿಬ್ಬರು ತ್ವರೆಮಾಡಿ ಹೋಗೋಣ,” ಎಂದನು.
4 : ಮುಂದಾಗಿ ಹೊರಡುವಾಗ ರಫಯೇಲನು, “ಮೀನಿನ ಪಿತ್ತಕೋಶ ನಿನ್ನ ಬಳಿ ಇದೆ ತಾನೆ?” ಎಂದು ನಿಗದಿ ಮಾಡಿಕೊಂಡನು. ನಾಯಿ ಅವರನ್ನು ಹಿಂಬಾಲಿಸಿತು.
5 : ಇತ್ತ ಅನ್ನಳು, ಮಗನು ಬರುವ ದಾರಿಯನ್ನೇ ಕಾಯುತ್ತ ಕುಳಿತಿದ್ದಳು.
6 : ತೊಬಿಯಾಸನು ಬರುತ್ತಿರುವುದನ್ನು ಕಂಡಕೂಡಲೇ ತೊಬೀತನಿಗೆ, “ಇಗೋ, ನಮ್ಮ ಮಗ ಬರುತ್ತಿದ್ದಾನೆ. ಅವನೊಡನೆ ಹೋಗಿದ್ದ ವ್ಯಕ್ತಿ ಸಹ ಬರುತ್ತಿದ್ದಾನೆ,” ಎಂದಳು.
7 : ಮನೆಯನ್ನು ಸೇರುವ ಮುಂಚೆ ರಫಯೇಲನು ತೊಬಿಯಾಸನಿಗೆ, “ನಿನ್ನ ತಂದೆಯ ಕಣ್ಣುಗಳು ತೆರೆಯುವುವು.
8 : ಮೀನಿನ ಪಿತ್ತರಸವನ್ನು ಅವನ ಕಣ್ಣುಗಳಿಗೆ ಹಚ್ಚು. ಈ ಔಷಧ ಅವನ ಕಣ್ಣುಗಳ ಬಿಳಿ ಮಚ್ಚೆಯನ್ನು ಒಣಗಿಸಿ, ಸುಲಿದುಬಿಡುತ್ತದೆ.
9 : ನಿನ್ನ ತಂದೆ ದೃಷ್ಟಿಪಡೆದು ಬೆಳಕನ್ನು ನೋಡುವನು,” ಎಂದನು. ತೊಬೀತನಿಗೆ ಮರುಕಳಿಸಿದ ದೃಷ್ಟಿ
10 : ತೊಬೀತನು ತಡವರಿಸುತ್ತಾ ಅಂಗಳದ ಬಾಗಿಲಿನ ಹೊರಗೆ ಬಂದನು.
11 : ತೊಬಿಯಾಸನು ಅವನ ಬಳಿಗೆ ಧಾವಿಸಿದನು. (ಮೀನಿನ ಪಿತ್ತರಸ ಅವನ ಕೈಯಲ್ಲಿತ್ತು). ತಂದೆಯನ್ನು ಬಿಗಿಯಾಗಿ ಹಿಡಿದು ಅವನ ಕಣ್ಣುಗಳನ್ನು ಊದಿ, “ಅಪ್ಪಾ, ಧೈರ್ಯವಾಗಿರು” ಎಂದು ಹೇಳಿ, ಕಣ್ಣುಗಳಿಗೆ ಆ ಔಷಧವನ್ನು ಹಚ್ಚಿದನು.
12 : ಅವನ ಕಣ್ಣುಗಳು ಉರಿಯತೊಡಗಿದವು.
13 : ಅನಂತರ ತನ್ನ ಎರಡು ಕೈಗಳಿಂದ ಆ ಬಿಳಿಮಚ್ಚೆಯನ್ನು ಅವನ ಕಣ್ಣುಗಳ ಕೊನೆಯಿಂದ ಸುಲಿದುಬಿಟ್ಟನು. ಆಗ ತೊಬೀತನಿಗೆ ಕಣ್ಣು ಕಾಣಿಸಿತು.
14 : ಅವನು ಮಗನನ್ನು ಎರಡು ಕೈಗಳಿಂದ ತಬ್ಬಿಕೊಂಡು ಅಳುತ್ತಾ, “ಮಗನೇ, ನನ್ನ ಕಣ್ಣುಗಳಿಗೆ ನೀನು ಕಾಣಿಸುತ್ತಿದ್ದಿಯೇ; ನೀನೇ ನನ್ನ ಕಣ್ಣುಗಳಿಗೆ ಬೆಳಕು!” ಎಂದನು. ಅನಂತರ ಹೀಗೆ ನುಡಿದನು: “ದೇವರಿಗೆ ಸ್ತುತಿಸ್ತೋತ್ರ! ಅವರ ಮಹಿಮಾ ನಾಮ ಪೂಜಿತ ಅವರ ಪೂಜ್ಯ ದೂತರೆಲ್ಲರಿಗೆ ಸ್ತೋತ್ರ! ಯುಗಯುಗಾಂತರಕ್ಕೂ ಅವರ ಶ್ರೀನಾಮ ಪೂಜಿತ.
15 : “ಅವರೆನಗೆ ನೀಡಿದ್ದರು ಯಾತನೆ ಈಗಲಾದರೂ ತೋರಿದರು ಕರುಣೆ ಕಾಣುತ್ತಿರುವನು ನನ್ನ ಮಗ ತೊಬಿಯನೆ!” ಹೀಗೆ ತೊಬೀತನು ಸಂತೋಷದಿಂದ ಘಂಟಾಘೋಷವಾಗಿ ದೇವರನ್ನು ಸ್ತುತಿಸುತ್ತಾ ಮನೆಯೊಳಕ್ಕೆ ಹೋದನು. ತೊಬಿಯಾಸನು ತನ್ನ ಪ್ರಯಾಣ ಯಶಸ್ವಿಯಾದುದನ್ನು ಕುರಿತು ವರದಿ ಮಾಡಿದನು. ತಾನು ಹಣವನ್ನು ಮರಳಿ ತಂದುದು ಮಾತ್ರವಲ್ಲ, ಸಾರಳೊಡನೆ ಮದುವೆಯಾದುದು ಹಾಗೂ ಆಕೆ ನಿನೆವೆ ನಗರದ ಬಾಗಿಲ ಬಳಿ ಬರುತ್ತಿರುವುದು, ಇದೆಲ್ಲದರ ಬಗ್ಗೆ ವಿವರಿಸಿದನು.
16 : ತೊಬೀತನು ನಿನೆವೆ ನಗರದ ಬಾಗಿಲ ಬಳಿ ಬರುತ್ತಿದ್ದ ತನ್ನ ಸೊಸೆಯನ್ನು ಎದುರುಗೊಳ್ಳಲು ಸಂತೋಷದಿಂದ ದೇವರನ್ನು ಸ್ತುತಿಸುತ್ತಾ ಹೋದನು. ಅವನು ಯಾರ ಸಹಾಯವಿಲ್ಲದೆ ತಾನಾಗಿಯೇ ಉತ್ಸಾಹದಿಂದ ನಡೆದು ಬರುತ್ತಿರುವುದನ್ನು ಕಂಡು ನಿನೆವೆಯ ನಿವಾಸಿಗಳು ನಿಬ್ಬೆರಗಾದರು.
17 : ದೇವರೇ ಕರುಣೆಯಿಟ್ಟು ದೃಷ್ಟಿಯನ್ನು ದಯಪಾಲಿಸಿದರೆಂಬುದನ್ನು ಅವರಿಗೆ ಬಹಿರಂಗಪಡಿಸಿದನು. ತೊಬಿಯಾಸನ ಸತಿ ಸಾರಳನ್ನು ತೊಬೀತನು ಎದುರುಗೊಂಡಾಗ, “ಬಾ ಮಗಳೇ, ಸಂತೋಷದಿಂದ ಬಾ. ನಿನ್ನನ್ನು ನಮಗೆ ಕೊಟ್ಟ ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ! ಮಗಳೇ, ನಿನ್ನ ತಂದೆ ತಾಯಿ, ನನ್ನ ಮಗ ತೊಬಿಯಾಸ್ ಹಾಗೂ ನೀನು ಎಲ್ಲರೂ ನಿಜವಾಗಿ ಧನ್ಯರೇ. ಈಗ ನಿನ್ನ ಹೊಸ ಮನೆಗೆ ಬಾ. ನಿನಗೆ ಸುಸ್ವಾಗತ; ಸಂತೋಷ ಸೌಭಾಗ್ಯ ನಿನ್ನದಾಗಲಿ. ಬಾ ಮಗಳೇ, ಬಾ!” ಎಂದು ಸ್ವಾಗತಿಸಿದನು. ನಿನೆವೆ ನಗರದಲ್ಲಿದ್ದ ಯೆಹೂದ್ಯರೆಲ್ಲರಿಗೆ ಅದೊಂದು ಸಂತೋಷ ಹಾಗೂ ಸಂಭ್ರಮದ ದಿನವಾಗಿತ್ತು.
18 : ತೊಬಿಯಾಸನ ವಿವಾಹ ಮಹೋತ್ಸವವನ್ನು ಏಳುದಿನದವರೆಗೂ ಕೊಂಡಾಡಿದರು. ಅವನಿಗೆ ಹಲವಾರು ಕೊಡುಗೆಗಳು ಲಭಿಸಿದವು.

Holydivine