Tobit - Chapter 5
Holy Bible

1 : ತೊಬಿಯಾಸನು ತನ್ನ ತಂದೆ ತೊಬೀತನಿಗೆ, “ಅಪ್ಪಾ, ನೀವು ಹೇಳಿದ್ದೆಲ್ಲವನ್ನು ಮಾಡುತ್ತೇನೆ.
2 : ಆದರೆ ಗಬಯೇಲನಿಂದ ಹಣವನ್ನು ಪಡೆಯುವುದು ಹೇಗೆ? ನನ್ನ ಪರಿಚಯ ಅವನಿಗಿಲ್ಲ. ಅವನ ಪರಿಚಯ ನನಗಿಲ್ಲ. ಅವನು ನನ್ನನ್ನು ನಂಬಿ ಹಣವನ್ನು ಹಿಂದಿರುಗಿಸುವಂತೆ ಯಾವ ಗುರುತನ್ನು ಅವನಿಗೆ ತೋರಿಸಲಿ? ಅಲ್ಲದೆ ಮೇದ್ಯನಾಡಿನ ದಾರಿ ನನಗೆ ಗೊತ್ತಿಲ್ಲ, ಅಲ್ಲಿಗೆ ಹೋಗುವುದಾದರೂ ಹೇಗೆ?” ಎಂದು ವಿಚಾರಿಸಿದನು.
3 : ಅದಕ್ಕೆ ತೊಬೀತನು, “ನಾವಿಬ್ಬರೂ ಒಂದು ಮುಚ್ಚಳಿಕೆಗೆ ಸಹಿ ಹಾಕಿದ್ದೇವೆ. ಅದನ್ನು ಇಬ್ಭಾಗ ಮಾಡಿ, ಒಂದನ್ನು ತೆಗೆದುಕೊಂಡು ಇನ್ನೊಂದನ್ನು ಆ ಬೆಳ್ಳಿನಾಣ್ಯದ ಜೊತೆಯಲ್ಲೇ ಇಟ್ಟಿದ್ದೇನೆ. ಇಲ್ಲಿಗೆ ಇಪ್ಪತ್ತು ವರ್ಷಗಳು ಸಂದಿವೆ ಆ ಹಣವನ್ನು ಅವನ ಬಳಿಯಲ್ಲಿಟ್ಟು. ಮಗನೇ, ನಿನ್ನೊಂದಿಗೆ ಪ್ರಯಾಣಮಾಡಲು ಒಬ್ಬ ನಂಬಿಗಸ್ಥ ವ್ಯಕ್ತಿಯನ್ನು ಹುಡುಕು. ನೀನು ಹೋಗಿ ಹಿಂದಿರುಗುವವರೆಗೆ ಎಷ್ಟು ದಿನಗಳು ಹಿಡಿಯುತ್ತವೋ ಅಷ್ಟು ದಿನಗಳ ಕೂಲಿಯನ್ನು ಅವನಿಗೆ ಕೊಡೋಣ. ಹೋಗಿ ಗಬಯೇಲನಿಂದ ಆ ಹಣವನ್ನು ತೆಗೆದುಕೊಂಡು ಬಾ,” ಎಂದು ಆಜ್ಞಾಪಿಸಿದನು.
4 : ತೊಬಿಯಾಸನು ತನ್ನೊಡನೆ ಮೇದ್ಯಕ್ಕೆ ಪ್ರಯಾಣಮಾಡಬಲ್ಲ ಹಾಗು ಅಲ್ಲಿಗೆ ಹೋಗಲು ದಾರಿ ತೋರಿಸಬಲ್ಲ ಒಬ್ಬ ವ್ಯಕ್ತಿಯನ್ನು ಹುಡುಕುವ ಆಲೋಚನೆಯಿಂದ ಹೊರಗೆ ಬಂದನು. ಕೂಡಲೇ ರಫಯೇಲನೆಂಬ ಒಬ್ಬನು ಅವನಿಗೆ ಎದುರಾಗಿ ನಿಂತಿರುವುದನ್ನು ಕಂಡನು. ಆತ ದೇವದೂತನೆಂದು ತೊಬಿಯಾಸನಿಗೆ ತಿಳಿದಿರಲಿಲ್ಲ. “ಅಯ್ಯಾ, ನೀನು ಎಲ್ಲಿಯವನು?” ಎಂದು ಅವನನ್ನು ಕೇಳಿದನು.
5 : ಅದಕ್ಕೆ ರಫಯೇಲನು ಮರುತ್ತರವಾಗಿ, “ನಾನು ನಿನ್ನ ಸೋದರ ಇಸ್ರಯೇಲರಲ್ಲಿ ಒಬ್ಬನು; ಕೆಲಸ ಹುಡುಕಿಕೊಂಡು ನಿನೆವೆಗೆ ಬಂದಿದ್ದೇನೆ,” ಎಂದನು.
6 : “ಹೌದು, ಚೆನ್ನಾಗಿ ಗೊತ್ತಿದೆ. ಅಲ್ಲಿಗೆ ಅನೇಕಸಾರಿ ಹೋಗಿ ಬಂದಿದ್ದೇನೆ. ಅಲ್ಲಿಯ ದಾರಿಗಳೆಲ್ಲ ನನಗೆ ಸುಪರಿಚಿತ. ಮೇದ್ಯಕ್ಕೆ ಹೋಗಿ ಅಲ್ಲಿ ರ್ಹಾಜೆಸ್ ಎಂಬ ಊರಿನಲ್ಲಿ ನನ್ನ ಬಂಧುಗಳಲ್ಲೊಬ್ಬನಾದ ಗಬಯೇಲನ ಮನೆಯಲ್ಲಿ ಎಷ್ಟೋ ಸಾರಿ ತಂಗಿದ್ದೇನೆ. ಎಕ್ಬತಾನ ನಗರದಿಂದ ರ್ಹಾಜೆಸ್ ಪಟ್ಟಣವನ್ನು ತಲುಪಲು ಎರಡು ದಿನ ಹಿಡಿಯುತ್ತದೆ. ರ್ಹಾಜೆಸ್ ಇರುವುದು ಮಲೆನಾಡಿನಲ್ಲಿ, ಎಕ್ಬತಾನ ಇರುವುದು ಬಯಲು ನಾಡಿನ ಮಧ್ಯದಲ್ಲಿ,” ಎಂದು ವಿವರವಿತ್ತನು.
7 : ಆಗ ತೊಬಿಯಾಸನು ರಫಯೇಲನಿಗೆ, “ಹಾಗಾದರೆ, ಅಯ್ಯಾ, ಇಲ್ಲೇ ಕಾದಿರು. ನಾನು ಹೋಗಿ ನನ್ನ ತಂದೆಗೆ ತಿಳಿಸಿಬರುತ್ತೇನೆ. ನಿನ್ನೊಡನೆ ನಾನು ಪ್ರಯಾಣಮಾಡಬೇಕಾಗಿದೆ. ನಿನಗೆ ಬೇಕಾದ ಕೂಲಿಯನ್ನು ಕೊಡುತ್ತೇನೆ,” ಎಂದು ಹೇಳಲು,
8 : “ಆಗಲಿ ಕಾದಿರುತ್ತೇನೆ. ಆದರೆ ತಡಮಾಡಬೇಡ,” ಎಂದನು.
9 : ತೊಬಿಯಾಸನು ಒಳಕ್ಕೆ ಹೋಗಿ ತನ್ನ ತಂದೆಗೆ, “ನಮ್ಮ ಸೋದರ ಇಸ್ರಯೇಲರಲ್ಲಿ ಒಬ್ಬ ನನಗೆ ಸಿಕ್ಕಿಬಿಟ್ಟಿದ್ದಾನೆ,” ಎನ್ನಲು ತೊಬೀತನು, “ಅವನನ್ನು ಒಳಗೆ ಕರೆದುಕೊಂಡು ಬಾ ಮಗನೇ. ಅವನ ಕುಟುಂಬ ಯಾವುದು? ಅವನ ಕುಲ ಯಾವುದು? ಅವನು ನಿನ್ನೊಂದಿಗೆ ಪ್ರಯಾಣ ಮಾಡಲು ನಂಬಿಗಸ್ಥ ಸಂಗಡಿಗನೋ? ಎಂದು ತಿಳಿದುಕೊಳ್ಳಬೇಕು,” ಎಂದನು. ರಫಯೇಲ ತೊಬೀತರ ಭೇಟಿ ತೊಬಿಯಾಸನು ಹೊರಗೆ ಹೋಗಿ, ರಫಯೇಲನಿಗೆ, “ಅಯ್ಯಾ, ನನ್ನ ತಂದೆ ನಿನ್ನನ್ನು ಕರೆಯುತ್ತಿದ್ದಾರೆ,” ಎಂದನು. ಆತ ಒಳಗೆ ಬರಲು, ತೊಬೀತನೇ ಅವನಿಗೆ ನಮಸ್ಕಾರ ಮಾಡಿದನು. ರಫಯೇಲನು, “ನಮಸ್ಕಾರ, ಕ್ಷೇಮವೇ?” ಎಂದನು. ಅದಕ್ಕೆ ತೊಬೀತನು, “ನನಗೆಲ್ಲಿ ಕ್ಷೇಮ? ನಾನೊಬ್ಬ ಕುರುಡ. ಆಕಾಶದ ಬೆಳಕನ್ನು ನೋಡಲು ನನ್ನಿಂದಾಗದು. ಕತ್ತಲಲ್ಲಿರುವ ಸತ್ತವರಂತೆ ಇದ್ದೇನೆ. ಆದರೂ ಜೀವಂತನಾಗಿದ್ದೇನೆ. ಜನರ ಮಾತು ಕೇಳಿಸುತ್ತದೆ. ಆದರೆ ಅವರು ಕಾಣಿಸುವುದಿಲ್ಲ,” ಎಂದು ಹೇಳಿದನು. ಅದಕ್ಕೆ ರಫಯೇಲನು, “ಧೈರ್ಯದಿಂದಿರು, ದೇವರು ನಿನ್ನನ್ನು ಶೀಘ್ರದಲ್ಲೇ ಗುಣಪಡಿಸುವರು, ಧೈರ್ಯದಿಂದಿರು,” ಎಂದನು. ತೊಬೀತನು ಅವನಿಗೆ, “ನನ್ನ ಮಗ ತೊಬಿಯಾಸನು ಮೇದ್ಯಕ್ಕೆ ಹೋಗಬೇಕೆಂದಿದ್ದಾನೆ. ಅವನಿಗೆ ದಾರಿ ತೋರಿಸಲು ಅವನೊಂದಿಗೆ ಹೋಗಬಲ್ಲೆಯಾ? ನಿನಗೆ ಬೇಕಾದ ಕೂಲಿ ಕೊಡುತ್ತೇನೆ,” ಎಂದು ಕೇಳಿದನು. ಅದಕ್ಕೆ ರಫಯೇಲನು, “ಆಗಲಿ, ಅವನ ಸಂಗಡ ಹೋಗುತ್ತೇನೆ. ನನಗೆ ದಾರಿ ಚೆನ್ನಾಗಿ ಗೊತ್ತಿದೆ. ಅನೇಕ ಸಾರಿ ಮೇದ್ಯಕ್ಕೆ ಹೋಗಿ ಬಂದಿದ್ದೇನೆ. ಮಲೆನಾಡಿನಲ್ಲೂ ಬಯಲು ಸೀಮೆಯಲ್ಲೂ ಪ್ರಯಾಣಮಾಡಿದ್ದೇನೆ. ಆ ದಾರಿಗಳ ಪರಿಚಯ ನನಗಿದೆ,” ಎಂದು ಉತ್ತರವಿತ್ತನು.
10 : ಆಗ ತೊಬೀತನು, “ತಮ್ಮಾ, ನಿನ್ನ ಕುಟುಂಬ ಯಾವುದು? ನಿನ್ನ ಕುಲ ಯಾವುದು? ತಿಳಿಸು,” ಎಂದು ಕೇಳಲು ರಫಯೇಲನು, “ನನ್ನ ಕುಲದ ವಿಷಯ ನಿನಗೇಕೆ?” ಎಂದನು.
11 : ಅದಕ್ಕೆ ತೊಬೀತನು, “ತಮ್ಮಾ, ನೀನು ಯಾರ ಮಗ? ನಿನ್ನ ಹೆಸರೇನು? ಇದನ್ನು ಖಚಿತವಾಗಿ ತಿಳಿದುಕೊಳ್ಳಬೇಕಾಗಿದೆ, ಸ್ಪಷ್ಟವಾಗಿ ಹೇಳು,” ಎಂದನು.
12 : ಅದಕ್ಕೆ ದೂತನು, “ನಾನು ಅಜರ್ಯ, ನಿನ್ನ ಬಳಗದಲ್ಲಿ ಪ್ರಸಿದ್ಧನಾದ ಅನನೀಯನ ಮಗ,” ಎಂದು ಉತ್ತರಕೊಟ್ಟನು.
13 : ಆಗ ತೊಬೀತನು, “ಸಂತೋಷ, ದೇವರು ನಿನ್ನನ್ನು ಆಶೀರ್ವದಿಸಲಿ! ನಿನ್ನ ಕುಲಗೋತ್ರದ ಬಗ್ಗೆ ವಿಚಾರಿಸಿದ್ದಕ್ಕಾಗಿ ಬೇಸತ್ತುಕೊಳ್ಳಬೇಡ. ನಿನ್ನ ಕುಟುಂಬದ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಬೇಕಾಗಿತ್ತು, ಅಷ್ಟೆ. ನೀನು ನಮ್ಮವನೇ ಎಂದು ಈಗ ತಿಳಿಯಿತು. ನೀನು ಸುಪ್ರಸಿದ್ಧ ಹಾಗೂ ಒಳ್ಳೆಯ ಮನೆತನದವನು. ಅನನೀಯ ಮತ್ತು ನಾತಾನ್ ಇಬ್ಬರೂ ಶೆಮ್ಮಾಯನ ಮಕ್ಕಳು; ಅವರ ಪರಿಚಯ ನನಗೆ ಚೆನ್ನಾಗಿದೆ. ಅವರೂ ನಾನೂ ಒಟ್ಟಿಗೆ ಜೆರುಸಲೇಮಿಗೆ ಹೋಗಿ ಆರಾಧನೆಮಾಡಿ ಬರುತ್ತಿದ್ದೆವು. ಅವರು ಎಂದೂ ದಾರಿತಪ್ಪಿದವರಲ್ಲ. ನಿನ್ನ ಬಳಗದವರೆಲ್ಲ ಒಳ್ಳೆಯವರು. ನೀನು ಒಳ್ಳೆಯ ಸಂತತಿಗೆ ಸೇರಿದವನು. ನೀನು ಬಂದದ್ದು ಬಹಳ ಉಪಕಾರವಾಯಿತು,” ಎಂದನು.
14 : ಬಳಿಕ ತೊಬೀತನು ಮುಂದುವರಿಸುತ್ತಾ, “ನಿನಗೆ ದಿನಗೂಲಿಯಷ್ಟೇ ಅಲ್ಲ, ನನ್ನ ಮಗನಿಗಾಗುವಷ್ಟು ಖರ್ಚನ್ನೂ ಸೇರಿಸಿಕೊಡುತ್ತೇನೆ. ನನ್ನ ಮಗನ ಜೊತೆಯಲ್ಲಿ ಹೋಗಿ ಬಾ.
15 : ದಿನ ಕೂಲಿಗಿಂತ ಮಿಗಿಲಾದ ಸಂಭಾವನೆಯನ್ನು ಕೊಡುತ್ತೇನೆ,” ಎಂದನು.
16 : ರಫಯೇಲನು ಮರುತ್ತರವಾಗಿ, “ಅವನ ಸಂಗಡ ಹೋಗಿಬರುತ್ತೇನೆ, ಹೆದರಬೇಡ. ಸುರಕ್ಷಿತವಾಗಿ ಇಬ್ಬರೂ ಹೋಗಿಬರುತ್ತೇವೆ. ದಾರಿಯೂ ಅಪಾಯಕಾರಿಯಲ್ಲ,” ಎಂದನು. ಆಗ ತೊಬೀತನು, “ತಮ್ಮಾ, ದೇವರು ನಿನ್ನನ್ನು ಆಶೀರ್ವದಿಸಲಿ!” ಎಂದನು. ಬಳಿಕ ತನ್ನ ಮಗ ತೊಬಿಯಾಸನನ್ನು ಕರೆದು, “ಮಗನೇ, ಪ್ರಯಾಣಕ್ಕೆ ಸಿದ್ಧನಾಗು. ಅಗತ್ಯವಾದುದನ್ನೆಲ್ಲ ತೆಗೆದುಕೊ. ಈ ನಿನ್ನ ಸೋದರನೊಂದಿಗೆ ಹೊರಡು. ಪರಲೋಕದ ದೇವರು ನಿಮ್ಮನ್ನು ಸುರಕ್ಷಿತವಾಗಿ ಅಲ್ಲಿಗೆ ಕೊಂಡೊಯ್ದು, ಸುಕ್ಷೇಮದಿಂದ ಹಿಂದಿರುಗುವಂತೆ ಮಾಡಲಿ. ಸ್ವರ್ಗದೂತನು ನಿಮ್ಮೊಂದಿಗಿದ್ದು ನಿಮ್ಮನ್ನು ಕಾಪಾಡಲಿ!” ಎಂದನು. ತೊಬಿಯಾಸನು ತಂದೆತಾಯಿಗಳಿಗೆ ಮುತ್ತಿಟ್ಟು ಅವರನ್ನು ಬೀಳ್ಕೊಟ್ಟನು. ತೊಬೀತನು ಅವರಿಗೆ ಸುಖಕರವಾದ ಪ್ರಯಾಣವನ್ನು ಹಾರೈಸಿದನು.
17 : ತೊಬಿಯಾಸನ ತಾಯಿ ಕಣ್ಣೀರಿಡುತ್ತಾ ತೊಬೀತನಿಗೆ, “ನನ್ನ ಮಗನನ್ನು ಏತಕ್ಕೆ ಕಳುಹಿಸಿ ಬಿಟ್ಟಿರಿ? ಅವನು ನಮ್ಮ ಮಧ್ಯೆ ಓಡಾಡುತ್ತಾ, ನಮಗೆ ಊರುಗೋಲಾಗಿದ್ದನಲ್ಲವೆ?
18 : ಹಣ ಅಷ್ಟು ಮುಖ್ಯವಾಗಿಬಿಟ್ಟಿತೆ? ಹಣಕ್ಕಿಂತ ಮಗ ಅಮೂಲ್ಯನಲ್ಲವೆ?
19 : ದೇವರು ನಮಗೆ ದಯಪಾಲಿಸಿರುವ ಜೀವನೋಪಾಯವೇ ಸಾಕಾಗಿತ್ತು,” ಎಂದಳು.
20 : ತೊಬೀತನು ಆಕೆಗೆ, “ಚಿಂತಿಸಬೇಡ. ನಮ್ಮ ಮಗ ಸುಖಕರವಾಗಿ ಹೋಗಿಬರುವನು. ಅವನು ಹಿಂದಿರುಗಿ ಬಂದಾಗ ಸುರಕ್ಷಿತವಾಗಿರುವನು ಎಂದು ನೀನೇ ಕಣ್ಣಾರೆ ನೋಡುವಿಯಂತೆ.
21ಆದುದರಿಂದ ಪ್ರಿಯಳೇ, ನಿನ್ನ ವಾದವನ್ನು ನಿಲ್ಲಿಸು. ಅವನ ಬಗ್ಗೆ ಕಳವಳಪಡಬೇಡ. ಒಳ್ಳೇ ದೇವದೂತನೊಬ್ಬನು ಅವನ ಜೊತೆಯಲ್ಲಿ ಇದ್ದಾನೆ. ಅವನ ಪ್ರಯಾಣ ಯಶಸ್ವಿಯಾಗುವುದು ನಿಶ್ಚಯ. ಅವನು ಸುಖಕರವಾಗಿ ಹಿಂದಿರುಗುವನು,” ಎಂದು ಸಂತೈಸಿದನು. ಅನ್ನಳು ಸಮಾಧಾನಗೊಂಡು ಅಳುವುದನ್ನು ನಿಲ್ಲಿಸಿದಳು.

Holydivine