Tobit - Chapter 3
Holy Bible

1 : ಆಗ ನಾನು ವ್ಯಸನಾಕ್ರಾಂತನಾದೆ. ನಿಟ್ಟುಸಿರಿಟ್ಟೆ. ಅತ್ತು ಪ್ರಲಾಪಿಸುತ್ತಾ ಹೀಗೆಂದು ಪ್ರಾರ್ಥನೆ ಮಾಡಿದೆ:
2 : ಹೇ ಸರ್ವೇಶ್ವರಾ, ನೀನು ನ್ಯಾಯಸ್ವರೂಪಿ: ಜಗತ್ತಿಗೆಲ್ಲ ನ್ಯಾಯಾಧಿಪತಿ: ನಿನ್ನ ಕಾರ್ಯಗಳೆಲ್ಲ ನ್ಯಾಯಸಮ್ಮತ ನಿನ್ನ ಮಾರ್ಗಗಳೆಲ್ಲ ಸತ್ಯ ಹಾಗೂ ದಯಾಪೂರಿತ.
3 : ಸರ್ವೇಶ್ವರಾ, ತಂದುಕೊ ನನ್ನನ್ನೀಗ ನೆನಪಿಗೆ ಕರುಣೆ ತೋರೆನಗೆ. ದಂಡಿಸಬೇಡ ನನ್ನ ಪಾಪಗಳಿಗಾಗಿ ಅರಿಯದೆ ಮಾಡಿದ ತಪ್ಪು ನೆಪ್ಪುಗಳಿಗಾಗಿ ನನ್ನ ಪೂರ್ವಜರ ಪಾಪದೋಷಗಳಿಗಾಗಿ.
4 : ನಿನ್ನ ಕಟ್ಟಳೆಗಳನ್ನು ಮೀರಿದೆವು ನಿನಗೆ ದ್ರೋಹವೆಸಗಿ ಪಾಪಮಾಡಿದೆವು; ಎಂದೇ ನಮ್ಮನ್ನೊಪ್ಪಿಸಿದೆ ಸೂರೆಗೆ, ಸೆರೆಗೆ, ಸಾವಿಗೆ ಚದರಿಸಿದೆ ಅನ್ಯಜನಾಂಗಗಳ ಈ ನಾಡಿಗೆ ಗುರಿಪಡಿಸಿದೆ ಇಲ್ಲಿನವರ ನಿಂದೆಪರಿಹಾಸ್ಯಕೆ.
5 : ನಿನ್ನ ನಿರ್ಣಯಗಳೆಲ್ಲ ನ್ಯಾಯಯುತ ನನಗೂ ಪೂರ್ವಜರಿಗೂ ನೀನಿತ್ತ ಶಿಕ್ಷೆ ಸೂಕ್ತ ಪಾಲಿಸಲಿಲ್ಲ ನಾವು ನಿನ್ನ ಆಜ್ಞೆಗಳನು ಕೈಗೊಳ್ಳಲಿಲ್ಲ ನಿನ್ನ ಸನ್ಮಾರ್ಗಗಳನು.
6 : ನಡೆಸೆನ್ನನೀಗ ನಿನ್ನ ಚಿತ್ತದ ಪ್ರಕಾರ ಬೇಕಾದರೆ ತೆಗೆದುಬಿಡು ಎನ್ನ ಪ್ರಾಣ. ಆಗ ತೆರಳುವೆ ನಾ ಜಗದಿಂದ ಮರೆಯಾಗಿ ಮರಳುವೆ ಧರೆಗೆ ಮಣ್ಣಾಗಿ. ಆಪಾದನೆಗಳನ್ನು ಕೇಳಿ ಸಾಕಾಗಿದೆ ದುಃಖಸಾಗರದಲ್ಲಿ ನಾ ಮುಳುಗಿರುವೆ. ನನಗೆ ಜೀವಕ್ಕಿಂತ ಸಾವೇ ಮೇಲಾಗಿದೆ. ಹೇ ಸರ್ವೇಶ್ವರಾ, ನೀಡೆನಗೆ ವಿಮೋಚನೆ ನಾನು ಸೇರಮಾಡು ಅಮರ ನಿವಾಸಕೆ. ಓ ಸರ್ವೇಶ್ವರಾ, ವಿಮುಖನಾಗಬೇಡ ನನಗೆ. ಈ ಜೀವನದ ಕಷ್ಟಸಂಕಟಗಳ ಸಹಿಸುವುದಕ್ಕಿಂತ ಕ್ರೂರನಿಂದೆ ದೂಷಣೆಗಳ ಕೇಳುವುದಕ್ಕಿಂತ ಸಾವೇ ಲೇಸು ನನಗೆ ಈ ಎಲ್ಲಕ್ಕಿಂತ.
7 : ಮೇದ್ಯ ನಾಡಿನ ಎಕ್‍ಬತಾನ ಎಂಬ ನಗರದಲ್ಲಿ ರಾಗುಯೇಲನ ಮಗಳು ಸಾರಾ ಎಂಬಾಕೆ ಇದ್ದಳು. ಅದೇ ದಿನದಂದು ಸಾರಳಿಗೆ ತನ್ನ ತಂದೆಯ ಸೇವಕಿಯೊಬ್ಬಳಿಂದ ಅಕಸ್ಮಾತ್ತಾಗಿ ನಿಂದೆ ದೂಷಣೆಗಳನ್ನು ಕೇಳಿಸಿಕೊಂಡಳು.
8 : ಸಾರಳಿಗೆ ಏಳುಸಾರಿ ವಿವಾಹವಾಗಿತ್ತು. ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ಆಕೆಯ ಏಳು ಗಂಡಂದಿರನ್ನು ಒಬ್ಬರಾದ ಮೇಲೆ ಒಬ್ಬರನ್ನು ಆಕೆಯೊಂದಿಗೆ ಕೂಡಿ ಬಾಳುವುದಕ್ಕೆ ಮುಂಚೆಯೆ, ಕೊಂದುಹಾಕಿದ್ದನು. ಒಂದು ಬಾರಿ ಆ ಸೇವಕಿ ಸಾರಾಳಿಗೆ, “ಗಂಡಂದಿರ ಕೊಲೆಗಡುಕಿ ನೀನು; ಈಗಾಗಲೇ ಏಳು ಮಂದಿಯನ್ನು ಮದುವೆ ಆದೆ; ಒಬ್ಬನಿಂದಲೂ ಮಕ್ಕಳನ್ನು ಪಡೆಯದಷ್ಟು ನತದೃಷ್ಟಳು;
9 : ಗಂಡಂದಿರನ್ನು ಕಳೆದುಕೊಂಡ ಕೋಪವನ್ನು ನಮ್ಮ ಮೇಲೆ ಏಕೆ ಕಾರುತ್ತೀಯೆ? ಬೇಕಾದರೆ ಹೋಗಿ ಸತ್ತ ಗಂಡಂದಿರೊಂದಿಗೆ ಸೇರಿಕೊ. ನನ್ನ ಕಣ್ಣಿಗೆ ಎಂದೂ ನಿನ್ನ ಮಗ ಬೀಳದಿರಲಿ,” ಎಂದು ಶಪಿಸಿದಳು.
10 : ಇದನ್ನು ಕೇಳಿ, ಸಾರಳಿಗೆ ತೀವ್ರ ದುಃಖ ಉಂಟಾಯಿತು. ಆಕೆ ಅತ್ತು ಪ್ರಲಾಪಿಸಿದಳು. ಕುತ್ತಿಗೆಗೆ ನೇಣುಹಾಕಿಕೊಳ್ಳಲು ತಂದೆಯ ಕೊಠಡಿಗೆ ಹೋದಳು. ಆದರೆ ಆಕೆಗೆ ಒಂದು ಯೋಚನೆ ಹೊಳೆಯಿತು. ಬಹುಶಃ ಅವರು ನನ್ನ ತಂದೆಯನ್ನು ದೂಷಿಸಬಹುದು: “ನಿನ್ನ ಅಚ್ಚು ಮೆಚ್ಚಿನ ಮಗಳೊಬ್ಬಳೇ ದುಃಖದಿಂದ ನೇಣು ಹಾಕಿಕೊಂಡಳು” ಎಂದು ಜರೆಯಬಹುದು. ಇಂಥ ಚುಚ್ಚುಮಾತನ್ನು ಕೇಳಿದೊಡನೆ ನನ್ನ ವಯೋವೃದ್ಧ ತಂದೆ ಮೃತ್ಯುಲೋಕವನ್ನು ಸೇರಬಹುದು. ಆದುದರಿಂದ ನಾನೀಗ ನೇಣುಹಾಕಿಕೊಳ್ಳದಿರುವುದು ಲೇಸು. ಬದಲಿಗೆ ಸರ್ವೇಶ್ವರನೇ ಮರಣವನ್ನು ಕೊಡಲೆಂದು ಪ್ರಾರ್ಥಿಸುವೆ. ಆಗ ಇಂಥ ದೂಷಣೆಗಳನ್ನು ಕೇಳಲು ಅವಕಾಶ ಇರದು ಎಂದುಕೊಂಡಳು.
11 : ಅಂತೆಯೇ ಸಾರಳು ಕಿಟಕಿಯ ಬಳಿ ನಿಂತು ಕೈಗಳನ್ನು ಮೇಲಕ್ಕೆತ್ತಿ ಹೀಗೆಂದು ಪ್ರಾರ್ಥಿಸಿದಳು: ಕರುಣಾಳು ದೇವಾ, ನಿನಗೆ ಸ್ತುತಿಸ್ತೋತ್ರ ನಿನ್ನ ನಾಮ ಎಂದೆಂದಿಗೂ ಪೂಜಿತ ಸೃಷ್ಟಿಸಮಸ್ತವು ನಿನ್ನನು ಸ್ತುತಿಸಲಿ ಸತತ.
12 : ನಾನೀಗ ನಿನಗೆ ಅಭಿಮುಖಳಾಗಿರುವೆ ನನ್ನ ದೃಷ್ಟಿಯನು ನಿನ್ನಲೇ ನಾಟಿರುವೆ.
13 : ಧರೆಯಿಂದ ನಾ ಮರೆಯಾಗುವಂತೆ ಮಾಡಲಿ ನಿನ್ನ ನುಡಿ ಬೇಸತ್ತು ಹೋಗಿರುವೆ ನಿಂದೆದೂಷಣೆಗಳನು ಕೇಳಿ,
14 : ಸರ್ವೇಶ್ವರಾ, ನೀನರಿವೆ ನಾನಿನ್ನೂ ಅಬಲೆಯೆಂದು ಯಾವನೋರ್ವನ ಪುರುಷ ಸಂಪರ್ಕ ನನಗಿಲ್ಲವೆಂದು.
15 : ನಾ ಕೆಡಿಸಿಕೊಂಡಿಲ್ಲ ಈ ಹೊರನಾಡಲಿ ನಿನ್ನ ಶ್ರೀನಾಮವನ್ನಾಗಲೀ ನನ್ನ ತಂದೆಯ ಹೆಸರನ್ನಾಗಲೀ. ನನ್ನ ತಂದೆಗೆ ನಾನೊಬ್ಬಳೇ ಕುವರಿ ಆತನಿಗಿಲ್ಲ ಯಾರೊಬ್ಬ ಉತ್ತರಾಧಿಕಾರಿ. ಆತನಿಗೆ ಉಳಿದಿಲ್ಲ ನೆಂಟರಿಷ್ಟರಾರೂ ನಾನವನೊಡನೆ ವಿವಾಹ ಮಾಡಿಕೊಳ್ಳಲು. ಏಳು ಗಂಡಂದಿರನ್ನು ಕಳೆದುಕೊಂಡಿರುವೆ ಈಗಾಗಲೇ ನಾನೇಕೆ ಬದುಕಬೇಕು ಇನ್ನು ಮೇಲೆ? ನಾ ಸಾಯುವುದು ನಿನಗಿಷ್ಟವಿಲ್ಲವಾದರೆ ಹೇ ಸರ್ವೇಶ್ವರಾ, ತೋರೆನಗೆ ಕರುಣೆ ನಾನಿನ್ನು ಕೇಳಲಾರೆ ದೋಷಾರೋಪಣೆ.
16 : ತೊಬೀತನ ಮತ್ತು ಸಾರಳ ಪ್ರಾರ್ಥನೆ ಮಹಿಮಾನ್ವಿತ ದೇವರ ಸನ್ನಿಧಿಗೆ ಮುಟ್ಟಿತು.
17 : ಅವರಿಬ್ಬರನ್ನೂ ಗುಣಪಡಿಸಲು ದೇವರು ರಫಯೇಲ್ ಎಂಬವನನ್ನು ಕಳುಹಿಸಿದರು. ತೊಬೀತನು ತನ್ನ ಕಣ್ಣುಗಳಿಂದ ದೇವರ ಜ್ಯೋತಿಯನ್ನು ನೋಡಲು ಸಾಧ್ಯವಾಗುವಂತೆ ಅವನ ಕಣ್ಣುಗಳ ಮಚ್ಚೆಗಳನ್ನು ತೆಗೆಯಬೇಕಾಗಿತ್ತು. ರಾಗುಯೇಲನ ಮಗಳು ಸಾರಳನ್ನು ತೊಬೀತನ ಮಗ ತೊಬಿಯಾಸನಿಗೆ ವಿವಾಹ ಮಾಡಿಕೊಡಬೇಕಾಗಿತ್ತು. ಮಾತ್ರವಲ್ಲ, ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ದೆವ್ವವನ್ನು ಆಕೆಯಿಂದ ತೊಲಗಿಸಬೇಕಾಗಿತ್ತು. ಸಾರಳನ್ನು ಮದುವೆಯಾಗಲು ಬೇರೆಯವರಿಗಿಂತಲೂ ತೊಬಿಯಾಸನಿಗೆ ಹಕ್ಕುಬಾಧ್ಯತೆ ಇತ್ತು. ತೊಬೀತನು ಹೊರಾಂಗಣದಿಂದ ಮನೆಯೊಳಕ್ಕೆ ಹೋದನು. ಅದೇ ಸಮಯದಲ್ಲಿ ರಾಗುಯೇಲನ ಮಗಳಾದ ಸಾರಳು ಮಹಡಿಯ ಕೊಠಡಿಯಿಂದ ಇಳಿದು ಬಂದಳು.

Holydivine