Tobit - Chapter 12
Holy Bible

1 : ವಿವಾಹ ಮಹೋತ್ಸವ ಮುಗಿದ ಮೇಲೆ ತೊಬೀತನು ತನ್ನ ಮಗ ತೊಬಿಯಾಸನನ್ನು ಕರೆದು, “ಮಗನೇ, ನಿನ್ನ ಸಹಪ್ರಯಾಣಿಕನಿಗೆ ಸಲ್ಲಿಸಬೇಕಾದ ಹಣವನ್ನು ಗಮನಿಸು; ಒಪ್ಪಿಕೊಂಡದ್ದಕ್ಕೂ ಹೆಚ್ಚಾಗಿ ಕೊಡು,” ಎಂದು ಆಜ್ಞಾಪಿಸಿದನು.
2 : ಅದಕ್ಕೆ ತೊಬಿಯಾಸನು, “ಅಪ್ಪಾ, ಅವನಿಗೆ ಎಷ್ಟು ಕೊಡಲಿ? ನಾನು ತಂದ ಆಸ್ತಿಯಲ್ಲಿ ಅರ್ಧಭಾಗವನ್ನು ಕೊಟ್ಟರೂ ಅಧಿಕವಾಗದು.
3 : ಆತನು ನನ್ನನ್ನು ನಿಮ್ಮ ಬಳಿಗೆ ಸುರಕ್ಷಿತವಾಗಿ ಕರೆತಂದಿದ್ದಾನೆ; ನನ್ನ ಹೆಂಡತಿಯನ್ನು ಗುಣಪಡಿಸಿದ್ದಾನೆ; (ರಾಗುಯೇಲನಿಂದ) ಹಣವನ್ನು ಪಡೆದುತಂದಿದ್ದಾನೆ; ಅಷ್ಟೇ ಅಲ್ಲ, ಈಗ ನಿಮ್ಮನ್ನು ಸಹ ಸ್ವಸ್ಥಪಡಿಸಿದ್ದಾನೆ. ಎಷ್ಟು ಹೆಚ್ಚುವರಿ ಹಣ ಕೊಡಬೇಕು? ಹೇಳಿ,” ಎಂದು ಕೇಳಿದನು.
4 : ಅದಕ್ಕೆ ತೊಬೀತನು, “ಮಗನೇ, ಅವನು ಮರಳಿ ತಂದಿರುವ ಎಲ್ಲದರಲ್ಲೂ ಅರ್ಧಭಾಗ ಪಡೆಯಲು ಅರ್ಹನು,” ಎಂದನು.
5 : ಅಂತೆಯೇ ತೊಬಿಯಾಸನು ರಫಯೇಲನನ್ನು ಕರೆದು, “ಇಗೋ, ನೀನು ತಂದಿರುವ ಎಲ್ಲಾ ವಸ್ತುಗಳಲ್ಲಿ ಅರ್ಧಭಾಗವನ್ನು ಸಂಭಾವನೆಯಾಗಿ ತೆಗೆದುಕೊ, ಸಂತೋಷದಿಂದ ಹೋಗಿ ಬಾ,” ಎಂದನು. ದಾನವೇ ಧರ್ಮದ ಮೂಲ
6 : ಆಗ ರಫಯೇಲನು ತಂದೆ ಮಗ ಇಬ್ಬರನ್ನೂ ಪಕ್ಕಕ್ಕೆ ಕರೆದು, ಇಂತೆಂದನು: “ಎಲ್ಲಾ ಜೀವಿಗಳ ಮುಂದೆ ದೇವರು ನಿಮಗೆ ಮಾಡಿರುವ ಸಕಲ ಉಪಕಾರಗಳಿಗಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ. ಅವರ ನಾಮವನ್ನು ಭಜಿಸಿ ಹಾಡಿರಿ. ದೇವರ ಮಹತ್ಕಾರ್ಯಗಳನ್ನು ಎಲ್ಲಾ ಜನರಿಗೆ ಪ್ರಕಟಿಸಿರಿ. ಅವರಿಗೆ ವಂದನೆಯನ್ನು ಸಲ್ಲಿಸುವುದರಲ್ಲಿ ಹಿಂದಾಗಬೇಡಿ.
7 : “ರಾಜರುಗಳ ಗುಟ್ಟನ್ನು ಬಚ್ಚಿಡುವುದು ಸರಿಯಷ್ಟೆ. ಆದರೆ, ದೇವರ ಮಹತ್ಕಾರ್ಯಗಳನ್ನು ಒಪ್ಪಿಕೊಂಡು ತಕ್ಕ ಮರ್ಯಾದೆಯಿಂದ ಪ್ರಕಟಿಸುವುದು ಉಚಿತ. ಒಳಿತನ್ನು ಮಾಡುವವರ ಮೇಲೆ ಕೆಡುಕು ಜಯಗಳಿಸದು.
8 : “ಜಪತಪ, ಉಪವಾಸವ್ರತ ಇದೆಲ್ಲಾ ಒಳ್ಳೆಯದೇ. ಆದರೆ ನ್ಯಾಯನೀತಿ, ದಾನಧರ್ಮ ಅದಕ್ಕಿಂತಲೂ ಮೇಲಾದುದು! ಅನ್ಯಾಯದಿಂದ ಕೂಡಿದ ಅತುಳೈಶ್ವರ್ಯಕ್ಕಿಂತ ನೀತಿಯಿಂದ ಕೂಡಿದ ಕಿಂಚಿತ್ತು ಲೇಸು. ಬೆಳ್ಳಿಬಂಗಾರವನ್ನು ಕೂಡಿಸಿಡುವುದಕ್ಕಿಂತ ದಾನಧರ್ಮ ಮಾಡುವುದು ಲೇಸು.
9 : ಏಕೆಂದರೆ ದಾನಧರ್ಮವು ಮರಣದಿಂದ ರಕ್ಷಿಸುತ್ತದೆ, ಪಾಪದಿಂದ ಶುದ್ಧೀಕರಿಸುತ್ತದೆ. ದಾನಮಾಡುವವರ ಜೀವನ ಸೌಭಾಗ್ಯ ತುಂಬಿದ ಜೀವನ.
10 : ಪಾಪಮಾಡುವವರು, ಕೇಡುಮಾಡುವವರು ತಮಗೆ ತಾವೇ ಕಟು ವಿರೋಧಿಗಳು.
11 : “ನಾನೀಗ ನಿಮಗೆ ಮುಚ್ಚುಮರೆ ಇಲ್ಲದೆ ಸತ್ಯಾಂಶವನ್ನು ಬಯಲು ಮಾಡುತ್ತೇನೆ. ಈಗಾಗಲೇ ನಾನು ನಿಮಗೆ ಸ್ಪಷ್ಟಪಡಿಸಿರುವಂತೆ, ರಾಜನ ಗುಟ್ಟನ್ನು ಬಚ್ಚಿಡುವುದೇನೋ ಸರಿಯಷ್ಟೆ. ಆದರೆ ದೇವರ ಮಹತ್ಕಾರ್ಯಗಳನ್ನು ತಕ್ಕ ಮರ್ಯಾದೆಯಿಂದ ಪ್ರಕಟಿಸಬೇಕು.
12 : ಅಂತೆಯೇ, ನೀನೂ ಮತ್ತು ಸಾರಲೂ ಪ್ರಾರ್ಥನೆ ಮಾಡಿದಾಗ, ಸತ್ತವರನ್ನು ನೀನು ಸಮಾಧಿ ಮಾಡಿದಾಗ, ಮಹಿಮಾಭರಿತ ಸರ್ವೇಶ್ವರನ ಸಮ್ಮುಖದಲ್ಲಿ ಅದನ್ನು ವರದಿಮಾಡಿದವನು ನಾನೇ.
13 : ಅಂತೆಯೇ ನಿನ್ನ ಊಟವನ್ನು ಬಿಟ್ಟು, ಎದ್ದು ಹೋಗಿ ಸತ್ತವನನ್ನು ಸಮಾಧಿಮಾಡಿದಾಗ ನಿನ್ನನ್ನು ಪರೀಕ್ಷಿಸಲು ಕಳುಹಿಸಲಾದವನು ನಾನೇ.
14 : ಅದೇ ಪ್ರಕಾರ, ನಿನ್ನನ್ನೂ ನಿನ್ನ ಸೊಸೆ ಸಾರಳನ್ನೂ ಗುಣಪಡಿಸಲು ದೇವರೇ ನನ್ನನ್ನು ಕಳುಹಿಸಿದರು.
15 : ನಾನೇ ರಫಯೇಲ್. ಮಹಿಮಾಭರಿತ ಸರ್ವೇಶ್ವರನ ಸಮ್ಮುಖದಲ್ಲಿ ಸೇವಾರ್ಥಿಗಳಾಗಿ ಸಿದ್ಧರಿರುವ ಏಳು ದೂತರಲ್ಲಿ ನಾನೂ ಒಬ್ಬನು,” ಎಂದನು.
16 : ತೊಬೀತನು ಮತ್ತು ತೊಬಿಯಾಸನು ಇದನ್ನು ಕೇಳಿ ಭಯಭ್ರಾಂತರಾದರು; ಅಧೋಮುಖರಾಗಿ ನೆಲಕ್ಕೆ ಬಿದ್ದರು.
17 : 17ಆದರೆ ರಫಯೇಲನು ಅವರಿಗೆ ಹೀಗೆಂದನು: “ಭಯಪಡಬೇಡಿ. ನಿಮಗೆ ಸಮಾಧಾನವಾಗಲಿ. ದೇವರನ್ನು ಸದಾಕಾಲ ಸ್ತುತಿಸಿರಿ.
18 : ನನ್ನ ವಿಷಯವಾಗಿ ಹೇಳುವುದಾದರೆ, ನಾನು ನಿಮ್ಮೊಡನೆ ಇದ್ದಾಗ, ನನ್ನ ಸ್ವಂತ ಇಚ್ಛೆಯಂತಲ್ಲ, ದೈವೇಚ್ಛೆಯಂತೆಯೇ ವರ್ತಿಸಿದೆ. ದಿನದಿನವೂ ಆ ದೇವರನ್ನು ಹೊಗಳಿರಿ. ಅವರ ಸ್ತುತಿಗೀತೆಗಳನ್ನು ಹಾಡಿರಿ.
19 : ನೀವು ನನ್ನನ್ನು ನೋಡುತ್ತಿದ್ದಂತೆ ನಾನು ನಿಜವಾಗಿಯೂ ಭುಜಿಸಲೂ ಇಲ್ಲ, ಪಾನ ಮಾಡಲೂ ಇಲ್ಲ. ನೀವು ನೋಡುತ್ತಿದ್ದುದ್ದು ಒಂದು ದೃಶ್ಯವಷ್ಟೆ.
20 : ಈಗ ನೀವು ಮೇಲಕ್ಕೆದ್ದು ದೇವರಲ್ಲಿ ನಂಬಿಕೆಯಿಡಿ; ವಿಶ್ವಾಸವಿಡಿ. ನೋಡಿ, ನನ್ನನ್ನು ಇಲ್ಲಿಗೆ ಕಳುಹಿಸಿದವರ ಬಳಿಗೆ ನಾನು ಏರಿ ಹೋಗುತ್ತಿದ್ದೇನೆ. ನಿಮಗೆ ಸಂಭವಿಸಿದ್ದ ಎಲ್ಲವನ್ನು ಬರೆದಿಡಿ.” ಇಷ್ಟನ್ನು ಹೇಳಿ ರಫಯೇಲನು ಮೇಲಕ್ಕೆ ಏರಿಹೋದನು.
21 : ಅನಂತರ ತೊಬೀತನು ಮತ್ತು ತೊಬಿಯಾಸನು ಮೇಲಕ್ಕೆದ್ದರು. ರಫಯೇಲನು ಅವರಿಗೆ ಮತ್ತೆ ಕಾಣಿಸಲಿಲ್ಲ.
22 : ಅವರು ದೇವರನ್ನು ಹೊಗಳುತ್ತಾ, ಅವರ ಸನ್ನುತಿಯನ್ನು ಹಾಡುತ್ತಾ ಅವರ ಮಹತ್ಕಾರ್ಯಗಳಲ್ಲಿ ತಮಗಿದ್ದ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಬಂದರು. ದೇವರ ದೂತನೇ ಅವರಿಗೆ ದರ್ಶನವಿತ್ತಿದ್ದನಲ್ಲವೆ!

Holydivine